ಸಿ.ಎಫ್.ಟಿ.ಆರ್.ಐ ದೇಶದ ಆಹಾರ ಸಂಸ್ಕೃತಿ ಉಳಿಸುತ್ತಿದೆ

KannadaprabhaNewsNetwork |  
Published : Oct 23, 2024, 12:37 AM IST
19 | Kannada Prabha

ಸಾರಾಂಶ

ದೇಶದ ಆಹಾರ ಭದ್ರತೆ ಹಾಗೂ ಸ್ವಾವಲಂಬನೆಯಲ್ಲಿ ಸಿ.ಎಫ್.ಟಿ.ಆರ್.ಐ ಕೊಡುಗೆ ಅನನ್ಯ ಹಾಗೂ ಜಾಗತಿಕ ಮಾದರಿ ಸಂಸ್ಥೆ

ಕನ್ನಡಪ್ರಭ ವಾರ್ತೆ ಮೈಸೂರು

ಸಿ.ಎಫ್.ಟಿ.ಆರ್.ಐ ದೇಶದ ಆಹಾರ ಸಂಸ್ಕೃತಿಯನ್ನು ಉಳಿಸುತ್ತಿದೆ ಎಂದು ಕೇಂದ್ರೀಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್ಐಆರ್) ಮಹಾ ನಿರ್ದೇಶಕಿ ಡಾ.ಎನ್. ಕಲೈಸೆಲ್ವಿ ತಿಳಿಸಿದರು.

ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯದ (ಸಿ.ಎಫ್.ಟಿ.ಆರ್.ಐ) 75ನೇ ಸಂಸ್ಥಾಪನಾ ದಿನಾಚರಣೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ, ದೇಶದ ಆಹಾರ ಭದ್ರತೆ ಹಾಗೂ ಸ್ವಾವಲಂಬನೆಯಲ್ಲಿ ಸಿ.ಎಫ್.ಟಿ.ಆರ್.ಐ ಕೊಡುಗೆ ಅನನ್ಯ ಹಾಗೂ ಜಾಗತಿಕ ಮಾದರಿ ಸಂಸ್ಥೆಯಾಗಿದೆ ಎಂದರು.

ಸಿ.ಎಫ್.ಟಿ.ಆರ್.ಐ ಕೇವಲ ಆಹಾರ ಕ್ಷೇತ್ರದಲ್ಲಿ ಇತಿಹಾಸವನ್ನು ಸೃಷ್ಟಿಸಿಲ್ಲ. ಜನರ ಜೀವನವು ಆಹಾರ ಸಂಸ್ಕೃತಿಯೊಂದಿಗೆ ಬೆಸೆದಿದೆ. ಗುಣಮಟ್ಟದ ಆಹಾರ ಪ್ರತಿಯೊಬ್ಬರಿಗೂ ಸಿಗುವಂತೆ ಮಾಡುವುದು ಸಿ.ಎಫ್.ಟಿ.ಆರ್.ಐ ಗುರಿಯಾಗಿದೆ ಎಂದು ಅವರು ಹೇಳಿದರು.

ಸವಾಲುಗಳನ್ನು ಎದುರಿಸಿ ಸಿ.ಎಫ್.ಟಿ.ಆರ್.ಐ ನೀಡಿದ ಪರಿಹಾರಗಳು ಜಗತ್ತಿಗೆ ಮಾದರಿಯಾಗಿದೆ. ವಿಜ್ಞಾನಿಗಳು, ನಿರ್ದೇಶಕರು ಹಾಗೂ ಸಿಬ್ಬಂದಿ ಸಂಸ್ಥೆಯನ್ನು ಕಟ್ಟಿದ್ದಾರೆ. ಆಹಾರ ಕ್ಷೇತ್ರದಲ್ಲಿ ಗಮನಾರ್ಹ ಸಂಶೋಧನೆಗಳು ಇಲ್ಲಿಂದ ಬಂದಿವೆ. 75 ವರ್ಷದ ಸಂಭ್ರಮವು ಪ್ರತಿಯೊಬ್ಬರದ್ದಾಗಿದೆ ಎಂದರು.

ಅಮೂಲ್ ಸ್ಪ್ರೇ ಶಿಶು ಆಹಾರ, ತ್ರಿಡಿ ಪ್ರಿಂಟೆಡ್ ದೋಸಾ, ಸಿರಿಧಾನ್ಯದ ಬ್ರೆಡ್ ಸೇರಿದಂತೆ ನೂರಾರು ಉತ್ಪನ್ನ ಸಂಶೋಧನೆಗಳು ಜನರಿಗೆ ತಲುಪುತ್ತಿವೆ. ನವೋದ್ಯಮಿಗಳಿಗೆ ಸಂಸ್ಥೆಯು ನೆರವಾಗಿದೆ ಎಂದು ಅವರು ತಿಳಿಸಿದರು.

1 ಗ್ರಾಂ ಆಹಾರವೂ ನಷ್ಟ ಆಗಬಾರದು

ಸಿ.ಎಫ್.ಟಿ.ಆರ್.ಐ ನಿವೃತ್ತ ನಿರ್ದೇಶಕ ಡಾ.ವಿ. ಪ್ರಕಾಶ್ ಮಾತನಾಡಿ, ಶಿಶು ಆಹಾರ ಉತ್ಪಾದನೆಯ ವಿಶ್ವದ ಮೊದಲ ತಂತ್ರಜ್ಞಾನ ಭಾರತದ್ದು, ಸಿ.ಎಫ್.ಟಿ.ಆರ್.ಐನ ಆವಿಷ್ಕಾರಗಳು ವಿಶ್ವವ್ಯಾಪಿಯಾಗಿವೆ. ನೈಜೀರಿಯಾದ 1 ಕೋಟಿ ಮಕ್ಕಳಿಗೆ ನಿತ್ಯ ಬಾಲ ಆಹಾರ ಪೂರೈಸಲು ನೆರವಾಗಿದೆ ಎಂದರು.ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಆಹಾರ ನಷ್ಟ ಪ್ರಮಾಣ ಹೆಚ್ಚಿದೆ. ಈ ನಷ್ಟವನ್ನು ತಪ್ಪಿಸಲು ಪ್ರತಿಯೊಬ್ಬರು ಮುಂದಾಗಬೇಕು. ಒಂದು ಗ್ರಾಂ ಆಹಾರವೂ ನಷ್ಟವಾಗಬಾರದು. ಸುಸ್ಥಿರ ಕೃಷಿ ಎಷ್ಟು ಮುಖ್ಯವೂ ಸುಸ್ಥಿರ ಕೊಳ್ಳುವಿಕೆಯೂ ಅಷ್ಟೇ ಮುಖ್ಯ. ಅಗತ್ಯಕ್ಕಿಂತ ಹೆಚ್ಚು ಖರೀದಿಸುವ, ಸೇವಿಸುವ ಕೆಲಸ ಮಾಡಬಾರದು. ಆರೋಗ್ಯ ಹಾಗೂ ಆರ್ಥಿಕತೆ ಎರಡೂ ಉಳಿಯಲು ಸುಸ್ಥಿರ ಜೀವನಶೈಲಿ ರೂಪಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಇದೇ ವೇಳೆ ಹೊಸ ಪುಸ್ತಕಗಳು, ಹೊಸ ಉತ್ಪನ್ನಗಳ ಅನಾವರಣ ಹಾಗೂ ಎಂಒಯು ಹಸ್ತಾಂತರ, ಹೊಸ ಸೌಲಭ್ಯಗಳ ಉದ್ಘಾಟನೆ, ಸಿ.ಎಫ್.ಟಿ.ಆರ್.ಐ ಗೀತೆಯ ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಲಾಯಿತು.

ಸಿ.ಎಫ್.ಟಿ.ಆರ್.ಐ ನಿರ್ದೇಶಕಿ ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್, ಮಾಜಿ ನಿರ್ದೇಶಕರಾದ ಪ್ರೊ. ರಾಮ ರಾಜಶೇಖರನ್, ಡಾ.ಕೆ.ಎಸ್.ಎಂ.ಎಸ್. ರಾಘವರಾವ್ ಮೊದಲಾದವರು ಇದ್ದರು.

----

ಕೋಟ್...

ಸಿ.ಎಫ್.ಟಿ.ಆರ್.ಐ ಸಂಶೋಧನೆಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸಲಾಗುತ್ತಿದೆ. ಆಹಾರ ಕೈಗಾರಿಕೆ,

ಪೌಷ್ಟಿಕಾಂಶ, ಆಯುರ್ ಆಹಾರದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಎಐ ನೆರವು ಪಡೆಯಲಾಗಿದೆ.

- ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್, ನಿರ್ದೇಶಕಿ, ಸಿ.ಎಫ್.ಟಿ.ಆರ್.ಐ

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ