ಯಲಬುರ್ಗಾ:
ಕೃಷ್ಣ ಭಾಗ್ಯಜಲ ನಿಗಮದ ಕೊಪ್ಪಳ ಏತ ಹನಿ ನೀರಾವರಿ ಮತ್ತು ಜಿಲ್ಲೆಯ 78 ಕೆರೆ ತುಂಬಿಸುವ ಯೋಜನೆ ಶೀಘ್ರ ಜಾರಿಗೊಳಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಜಿಲ್ಲಾ ಸಮಿತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಮಾತನಾಡಿ, ಒಣ ಬೇಸಾಯದಿಂದ ಕೂಡಿದ ಜಿಲ್ಲೆಯು ತುಂಗಭದ್ರಾ ಮತ್ತು ಕೃಷ್ಣ ನದಿ ಮಧ್ಯದಲ್ಲಿದೆ. ಈ ಭಾಗಕ್ಕೆ ಹೆಚ್ಚು ಬರಗಾಲ ಕಾಡುತ್ತಿದೆ. ಅಂತರ್ಜಲ ಕುಸಿತದಿಂದ ಜನ-ಜಾನುವಾರು ನೀರಿಲ್ಲದೆ ಪರದಾಡುವಂತಹ ಪರಿಸ್ಥಿತಿ ಇದೆ. ಡ್ಯಾಂನಿಂದ ವಾರ್ಷಿಕ 3ರಿಂದ 4 ಡ್ಯಾಂ ತುಂಬುವಷ್ಟು ನೀರು ನದಿ ಮೂಲಕ ಸಮುದ್ರ ಸೇರುತ್ತಿದೆ. ಈ ನೀರಿನಿಂದ ಕೊಪ್ಪಳ ತಾಲೂಕನ್ನು ಸಂಪೂರ್ಣ ನೀರಾವರಿ ಮಾಡಬಹುದು. ಆದರೆ, ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ಬರಗಾಲಕ್ಕೆ ತುತ್ತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷ್ಣ ಭಾಗ್ಯ ಜಲನಿಗಮ ಕೊಪ್ಪಳ ಏತ ನೀರಾವರಿ ಯೋಜನೆಯ ದಾಖಲೆ ಪ್ರಕಾರ ನೀರಾವರಿ ಕಲ್ಪಿಸಲು 2013ರಲ್ಲಿ ಆದೇಶ ಹೊರಡಿಸಿದರೂ ಸರ್ಕಾರ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಈ ವಿಚಾರವನ್ನ ಪ್ರಶ್ನಿಸಿದರೆ ನ್ಯಾಯಾಲಯದಲ್ಲಿ ವ್ಯಾಜ್ಯವಿದೆ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಸರ್ಕಾರ ತಕ್ಷಣ ಮುತುವರ್ಜಿ ವಹಿಸಿ ಪ್ರಕರಣ ಇತ್ಯರ್ಥಗೊಳಿಸಿ ಜಿಲ್ಲೆಯ ಏತ ಹನಿ ನೀರಾವರಿ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಕೃಷ್ಣಭಾಗ್ಯ ಜಲನಿಗಮದಿಂದ ಕೊಪ್ಪಳ ಏತ ನೀರಾವರಿಯಲ್ಲಿ ಬರುವ 78 ಕೆರೆ ತುಂಬಿಸುವ ಯೋಜನೆಯಲ್ಲಿ ಕುಷ್ಟಗಿ, ಯಲಬುರ್ಗಾದಲ್ಲಿ ಎರಡು ವರ್ಷಗಳಿಂದ ಕೆರೆಗಳಿಗೆ ನೀತು ತುಂಬಿಸಲಾಗುತ್ತಿದೆ. ಆದರೆ, ಕೊಪ್ಪಳ ತಾಲೂಕಿನ ಕೆರೆಗಳಿಗೆ ನೀರು ಬಿಡದಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಕೊಪ್ಪಳ ತಾಲೂಕಿನ ಕೆರೆಗಳಿಗೆ ಅಳವಡಿಸಿದ ಪೈಪ್‌ಲೈನ್ ಅಪೂರ್ಣಗೊಂಡು ತುಕ್ಕು ಹಿಡಿಯುತ್ತಿವೆ ಎಂದ ಅವರು, ಶೀಘ್ರವೇ ಕಾಮಗಾರಿ ಮುಗಿಸಿ ಮಳೆಗಾಲ ಮುಗಿಯುವ ಒಳಗೆ ಕೆರೆಗಳಿಗೆ ನೀರು ತುಂಬಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ಕಾರ್ಮಿಕ ಹೋರಾಟಗಾರ ಕೆ.ಬಿ. ಗೋನಾಳ, ರೈತ ಸಂಘದ ಪದಾಧಿಕಾರಿಗಳಾದ ಭೀಮಸೇನ ಕಲಕೇರಿ, ಅಪ್ಪಯ್ಯಸ್ವಾಮಿ ಹಿರೇಮಠ, ಕನಕಪ್ಪ ಪೂಜಾರ, ಹನುಮಂತಪ್ಪ ಇರಕಲ್ಲಗಡ, ಯಂಕಪ್ಪ ಕಾಸನಕಂಡಿ, ನಾಗಪ್ಪ ಕಿನ್ನಾಳ, ವೆಂಕಟೇಶ ಗುನ್ನಾಳ, ಬಸವರಾಜ ಹೂಗಾರ, ಶೇಖಪ್ಪ ಹಟ್ಟಿ, ದೇವಪ್ಪ ಮುದ್ಲಾಪುರ ಸೇರಿದಂತೆ ಇತರರು ಇದ್ದರು.