ಡಂಬಳ: ಧರ್ಮಸ್ಥಳ ಕ್ಷೇತ್ರದ ಅನೇಕ ಕಾರ್ಯಕ್ರಮಗಳಲ್ಲಿ ಕೆರೆ ಅಭಿವೃದ್ಧಿ ಅತ್ಯಂತ ಪ್ರಮುಖವಾದದ್ದು ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಮುಂಡರಗಿ ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ದೇವೀಂದ್ರಪ್ಪ ಗದಗ ಅವರ ಕೆರೆಗಾಗಿ ಭೂದಾನ ನೀಡಿರುವುದು ಪ್ರಶಂಸನೀಯ. ಕೆರೆಯನ್ನು ಸಂರಕ್ಷಿಸಿದಲ್ಲಿ ಗಂಗೆಯನ್ನು ರಕ್ಷಿಸಿದಂತೆ. ಹಾಗಾಗಿ ಪುನಃಶ್ವೇತನಗೊಳಿಸಿದ ಕೆರೆಯ ಹಾಗೂ ಶುಚಿತ್ವ ಕಾಯ್ದುಕೊಳ್ಳುವುದು ಗ್ರಾಮಸ್ಥರ ದೊಡ್ಡ ಹೊಣೆ ಎಂದು ಹೇಳಿದರು.
ಹಿರಿಯರಾದ ಗೋಣಿಬಸಪ್ಪ ಕೊರ್ಲಹಳ್ಳಿ, ಎ.ಕೆ. ಮುಲ್ಲಾನವರ ಮಾತನಾಡಿ, ಬೆಳ್ಳಿ, ಬಂಗಾರ ನೋಡಿ, ಹಾಕಿಕೊಂಡು ಆನಂದಪಡಬಹುದು. ಆದರೆ ಪ್ರತಿಯೊಬ್ಬರಿಗೆ ಆವಶ್ಯಕವಾಗಿರುವುದು ನೀರು, ಗಾಳಿ, ಆಹಾರ. ಈ ಮೂರರಲ್ಲಿ ಒಂದು ಇಲ್ಲದಿದ್ದರೂ ಬದುಕಲು ಸಾಧ್ಯವಿಲ್ಲ. ಸ್ವಚ್ಛವಾದ ಪ್ರಕೃತಿ ಉಳಿಸಿ ಬೆಳೆಸಬೇಕಾಗಿದೆ. ಆ ದೂರದೃಷ್ಟಿಯಿಂದ ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆ ಮತ್ತು ಡಾ. ಹೇಮಾವತಿ ವಿ. ಹೆಗ್ಗಡೆ ಅವರು ನಾಡಿನಾದ್ಯಂತ ಶ್ರಮಿಸುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು.ಪಿಡಿಒ ಫಕ್ರುದ್ದೀನ್ ನದಾಫ್ ಮಾತನಾಡಿ, ಗ್ರಾಮಸ್ಥರ ಬೇಡಿಕೆಯಂತೆ ಗ್ರಾಪಂ ಅಧ್ಯಕ್ಷರು, ಸದಸ್ಯರ ಸಹಕಾರ ಪಡೆದು, ಕೆರೆಯ ಸುತ್ತ ಕಲ್ಲು ಹೊಂದಿಸುವುದು ಮತ್ತು ತಂತಿ ಬೇಲಿ ಹಾಕಲಾಗುವುದು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗದಗ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಮಾತನಾಡಿ, ಧರ್ಮಸ್ಥಳ ಸಂಸ್ಥೆ ರಾಜ್ಯದ ಉದ್ದಗಲಕ್ಕೂ 152 ಯೋಜನೆಗಳ ಮೂಲಕ ಆರ್ಥಿಕ ಸಲಬಲತೆಗೆ ಶ್ರಮಿಸುತ್ತಿದೆ. ಕೆರೆಗಳ ಅಭಿವೃದ್ಧಿ ಮೂಲಕ ಗ್ರಾಮಗಳ ಶ್ರೇಯೋಭಿವೃದ್ಧಿಗೆ ಕೊಡುಗೆ ನೀಡುತ್ತಿದೆ. ಗಾಂಧೀಜಿ ಕಂಡ ಕನಸನ್ನು ಸಾಕಾರಗೊಳಿಸುತ್ತಿದೆ ಎಂದು ಹೇಳಿದರು.ಭೂದಾನಿಗಳಾದ ದೇವೀಂದ್ರಪ್ಪ ಗದಗ, ಚಂದ್ರಶೇಖರ ಜೆ., ಗ್ರಾಪಂ ಅಧ್ಯಕ್ಷೆ ದುರಗಮ್ಮ ತಳಗೇರಿ, ಉಪಾಧ್ಯಕ್ಷೆ ಮಲ್ಲವ್ವ ಹಾರೋಗೇರಿ, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ. ಪರ್ವತಗೌಡ ಹಿರೇಗೌಡ, ಸತೀಶ ಎಸ್.ಎಂ., ವಿಶಾಲಾ ಮಲ್ಲಾಪುರ, ಅಣ್ಣಪ್ಪ ಬಾರಕಿ ಇದ್ದರು.