ಕನ್ನಡಪ್ರಭ ವಾರ್ತೆ ರಾಯಚೂರು
ಸ್ಥಳೀಯ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ 78 ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿ ಬುಧವಾರ ಮಾತನಾಡಿದ ಅವರು, ಸಂವಿಧಾನದ 371(ಜೆ) ಸ್ಥಾನಮಾನ ಸಿಕ್ಕ ಬಳಿಕ ಈ ಭಾಗದ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿಶೇಷ ಮೀಸಲು ದೊರೆಯಲು ಸಾಧ್ಯವಾಗಿದ್ದು, ವೃತ್ತಿಪರ ಕೋರ್ಸ್‌ಗಳಲ್ಲಿ ಮೀಸಲು ದೊರೆತು 9 ಸಾವಿರ ಮಕ್ಕಳು ಡಾಕ್ಟರ್, 25 ಸಾವಿರ ಎಂಜಿನಿಯರ್ ಆಗಲು ಸಾಧ್ಯವಾಗಿದೆ. ಕಳೆದ 10 ವರ್ಷದಲ್ಲಿ 80 ಸಾವಿರ ಸರ್ಕಾರಿ ನೌಕರಿಗಿಟ್ಟಿಸಲಾಗಿದೆ. ಈ ಭಾಗಕ್ಕೆ 18,000 ಕೋಟಿ ರು. ಮಂಜೂರಾಗಿ 371 ಜೆ ಕಾನೂನಿನಿಂದ ಪ್ರತಿ ಮಗುವಿಗು ಸಹಾಯವಾಗಿದ್ದು, ಈ ಭಾಗದ ಜನರಿಗೆ ಕಾಯಕಲ್ಪ, ಕಾಮಧೇನುವಾಗಿ ಶ್ರೀರಕ್ಷೆಯಾಗಿದೆ. ಸಂವಿಧಾನ ಇರುವವರೆಗೆ 371(ಜೆ) ಕಾಯಿದೆ ಇರಲಿದೆ ಎಂದು ತಿಳಿಸಿದರು.
ಅಖಂಡ ಭಾರತ ನಿರ್ಮಾಣದ ಪ್ರಯತ್ನ, ಹೋರಾಟಗಾಥೆ ಸಾಮಾನ್ಯವಾದ ಸಂಗತಿಯಲ್ಲ. ಅಹಿಂಸಾ ಮಾರ್ಗದಲ್ಲಿ ಪ್ರೀತಿಯಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿ ಸಿದ್ದು, ಇಡೀ ಜಗತ್ತಿಗೆ ಮಾದರಿಯಾಗಿದೆ. ಸಂವಿಧಾನದ ಭದ್ರಬುನಾದಿಯ ಮೇಲೆ ದೇಶ ನಡೆಯುತ್ತಿದೆ. ಸಾಮಾಜಿಕ ಕಳಕಳಿ ಹೊಂದಿದ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರಂತಹ ಮಹನೀಯರ ಸತತ ಪ್ರಯತ್ನದಿಂದ 2012ರಲ್ಲಿ ಸಂಸತ್ತನಲ್ಲಿ ಪಾಸಾಗಿ 371(ಜೆ) ಕಾಯಿದೆಯಿಂದಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿಯ ಹೊಸ ಪರ್ವ ಆರಂಭವಾಯಿತು ಎಂದರು.ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ ರಾಜ್ಯ ಸರ್ಕಾರವು ಬದ್ಧವಾಗಿದೆ. ರಾಯಚೂರ ಜಿಲ್ಲೆಯಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಅಭಿವೃದ್ಧಿಯ ವಿಷಯದಲ್ಲಿ ಪಕ್ಷಬೇಧ ಮರೆತು ಎಲ್ಲರೂ ಸೇರಿ ಕಾರ್ಯ ಪ್ರವೃತ್ತರಾಗಬೇಕಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ದಕ್ಷತೆಯಿಂದ ಕೆಲಸ ಮಾಡಬೇಕು. ರಾಯಚೂರ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಎಲ್ಲರೂ ಕಂಕಣಬದ್ಧರಾಗಿ ದುಡಿಯೋಣ ಎಂದು ಸಚಿವರು ಸಲಹೆ ಮಾಡಿದರು.