ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ನೀರಿನ ಒಳಹರಿವು ದಿನೇದಿನೇ ಏರಿಕೆಯಾಗುತ್ತಿದೆ. ಜಲಾಶಯದಲ್ಲೀಗ 79.566 ಟಿಎಂಸಿ ನೀರು ಸಂಗ್ರಹವಾಗಿದೆ.
ಜಲಾಶಯದಿಂದ ಈಗಾಗಲೇ ಕಾಲುವೆ ಮೂಲಕ ಕೃಷಿ ಜಮೀನುಗಳಿಗೂ ನೀರು ಕೂಡ ಹರಿಸಲಾಗುತ್ತಿದೆ. ಈ ಜಲಾಶಯದಿಂದ ರಾಜ್ಯದ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ 10 ಲಕ್ಷ ಎಕರೆ ಕೃಷಿ ಪ್ರದೇಶಕ್ಕೆ ನೀರು ಒದಗಿಸಲಾಗುತ್ತಿದೆ. ಇನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಮೂರು ಲಕ್ಷ ಎಕರೆ ಕೃಷಿ ಪ್ರದೇಶಕ್ಕೂ ನೀರು ಒದಗಿಸಲಾಗುತ್ತಿದೆ. ಈ ಜಲಾಶಯದಿಂದ ರಾಜ್ಯದಲ್ಲಿ ಏಳು ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಈ ಭಾಗದಲ್ಲಿ ಸೋನಾ ಮಸೂರಿ ಅಕ್ಕಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ.
ಜಲಾಶಯದ ಕ್ರಸ್ಟ್ ಗೇಟ್ ನಂ.19 ಆಗಸ್ಟ್ 10ರಂದು ಕಳಚಿ ಬಿದ್ದಿದ್ದರಿಂದ ಜಲಾಶಯದಿಂದ ದಿನಕ್ಕೆ ಒಂದು ಲಕ್ಷ ಕ್ಯುಸೆಕ್ ನೀರು ನದಿ ಪಾಲಾಗಿತ್ತು. ಆ.17ರಂದು ಸ್ಟಾಪ್ ಲಾಗ್ ಗೇಟ್ ಯಶಸ್ವಿಯಾಗಿ ಅಳವಡಿಕೆ ಮಾಡಿದ ಬಳಿಕ ಜಲಾಶಯದಿಂದ ನದಿಗೆ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರಿಗೆ ತಡೆ ಒಡ್ಡಲಾಗಿದೆ. ಎಲ್ಲ ಗೇಟ್‌ಗಳನ್ನು ಬಂದ್ ಮಾಡಲಾಗಿದೆ. ಸ್ಟಾಪ್ ಲಾಗ್ ಗೇಟ್‌ನಿಂದಲೂ ಸೋರಿಕೆಯಾಗುತ್ತಿದ್ದ ನೀರು ಕೂಡ ಬಂದ್ ಆಗಿದೆ.ಜಲಾಶಯ ಭರ್ತಿಯಾದರೆ ಜಲಾಶಯ ನೆಚ್ಚಿರುವ ರೈತರಿಗೆ ಎರಡನೇ ಬೆಳೆ ಕೂಡ ಖಾತರಿ ಆಗಲಿದೆ. ಕೈಗಾರಿಕೆ ಹಾಗೂ ಕುಡಿಯುವ ನೀರಿಗೂ ಸಮಸ್ಯೆ ತಲೆದೋರುವುದಿಲ್ಲ.