ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುರಾಜ್ಯಾದ್ಯಂತ ರಸಗೊಬ್ಬರ ಕೃತಕ ಕೊರತೆಯ ಸಮಸ್ಯೆ ತೀವ್ರವಾಗಿರುವ ಸಮಯದಲ್ಲಿಯೇ ಜಿಲ್ಲೆಯಲ್ಲಿ ಸುಮಾರು 79 ಟನ್ ಯೂರಿಯಾ ಕಾಳ ಸಂತೆಯಲ್ಲಿ ಮಾರಾಟ ಮಾಡಿರುವ ಪ್ರಕರಣ ಬಯಲಿಗೆ ಬಂದಿದ್ದು, ರಸಗೊಬ್ಬರ ಅಭಾವದ ಪರಿಸ್ಥಿತಿಗೆ ಕಾರಣವಾಗಿರುವ ಹಲವಾರು ಅಂಶಗಳಲ್ಲಿ ಇದೊಂದು ಎನ್ನುವ ಸಂಗತಿಯನ್ನು ಪ್ರತಿಬಿಂಬಿಸುವಂತೆ ಮಾಡಿದೆ.
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ವಿಎಸ್‌ಎಸ್‌ಎನ್)ವು ರೈತರಿಗೆ ವಿತರಿಸಬೇಕಾಗಿದ್ದ 79 ಟನ್ ಯೂರಿಯಾ ರಸಗೊಬ್ಬರವನ್ನು ಎತ್ತುವಳಿ ಮಾಡಿ ಖಾಸಗಿಯಾಗಿ ಮಾರಾಟ ಮಾಡಿದೆ ಎನ್ನುವ ಆರೋಪ ಗಂಭೀರವಾಗಿ ಕೇಳಿಬಂದಿದ್ದು, ಇದರೊಟ್ಟಿಗೆ ಕೃಷಿ ಇಲಾಖೆಯ ಅಧಿಕಾರಿಗಳು ವಿಎಸ್‌ಎಸ್‌ಎನ್ ಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿರುವುದು ರೈತರ ಆರೋಪಕ್ಕೆ ದಟ್ಟವಾದ ಸಾಕ್ಷಿಯನ್ನು ಕೊಟ್ಟಿದೆ.ಕಲ್ಲೂರು ವಿಎಸ್‌ಎಸ್‌ಎನ್ ವ್ಯಾಪ್ತಿಗೆ ಅಗತ್ಯವಾದ ರಸಗೊಬ್ಬರವನ್ನು ಕಾಲ ಕಾಲಕ್ಕೆ ಬೇಡಿಕೆಗೆ ತಕ್ಕಂತೆ ಜಂಟಿ ಕೃಷಿ ನಿರ್ದೇಶಕರಿಂದ ಭಪರ್ ದಾಸ್ತಾನಿನಿಂದ ಸರಬರಾಜು ಮಾಡಲಾಗಿದೆ. ಆದರೆ, ಆ ರಸಗೊಬ್ಬರವನ್ನು ರೈತರಿಗೆ ವಿತರಿಸಿಲ್ಲ, ಹಾಗಿದ್ದರೆ ರಸಗೊಬ್ಬರ ಎಲ್ಲಿಗೆ ಹೋಯಿತು ಎಂಬುವ ಅನುಮಾನ ಶುರುವಾಗಿದ್ದು, ಬಡ, ಮಧ್ಯಮ ವರ್ಗದ ಅನ್ನದಾತರಿಗೆ ಸೇರಬೇಕಾಗಿದ್ದ ರಸಗೊಬ್ಬರ ಕಾಳಸಂತೆಯಲ್ಲಿ ಧನಿಕರ ಪಾಲಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಶೋಕಾಸ್ ನೋಟಿಸ್ : ಜಿಲ್ಲೆ ಮಾನ್ವಿಯ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಇತರೆ ಅಧಿಕಾರಿಗಳ ತಂಡವು ಕಳೆದ ಜು.24 ರಂದು ಕಲ್ಲೂರಿನ ವಿಎಸ್‌ಎಸ್‌ಎನ್‌ಗೆ ಭೇಟಿ ನೀಡಿದಾಗ ಗೋದಾಮಿನಲ್ಲಿ ರಸಗೊಬ್ಬರ ದಾಸ್ತಾನು ಕಂಡುಬಂದಿಲ್ಲ. ಇಷ್ಟೇ ಅಲ್ಲದೇ ಭಪರ್ ದಾಸ್ತಾನಿನಿಂದ ಪಡೆದ 79 ಟನ್ ಯೂರಿಯಾ ಎಲ್ಲಿದೆ? ಯಾವ ರೈತರಿಗೆ ಹಂಚಿಕೆ ಮಾಡಲಾಗಿದೆ ಎಂಬುವುದರ ಬಗ್ಗೆ ಸರಿಯಾದ ದಾಖಲೆಗಳಿಲ್ಲ. ಈ ಎಲ್ಲ ಸಂಗತಿಗಳನ್ನು ಗಮನಿಸಿದ ಕೃಷಿ ಅಧಿಕಾರಿಗಳು ಈ ಸೊಸೈಟಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಮೂರು ದಿನದೊಳಗಾಗಿ ಸೂಕ್ತ ಮಾಹಿತಿ ನೀಡದೇ ಇದ್ದರೆ, ಸಂಘದ ಪರವಾನಿಗೆಯನ್ನು ರದ್ದುಪಡಿಸಲಾಗುವುದು ಎಂದು ಶೋಕಾಸ್ ನೋಟಿಸ್ ನಲ್ಲಿ ಎಚ್ಚರಿಕೆಯನ್ನು ನೀಡಿದ್ದಾರೆ.--------------
ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಅದೇ ರೀತಿ ರೈತರಿಗೆ ಹಚ್ಚಿನ ದರದಲ್ಲಿ ರಸಗೊಬ್ಬರ ಮಾರಾಟ ಮಾಡುವುದು, ಕಾಳ ಸಂತೆ ದಂಧೆ ಕಂಡು ಬಂದಲ್ಲಿ ಅಂತವರ ವಿರುದ್ಧ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.-ಡಾ.ಶರಣ ಪ್ರಕಾಶ ಪಾಟೀಲ್, ಉಸ್ತುವಾರಿ ಸಚಿವ