ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಗೆದ್ದಿರುವುದು ಖುಷಿ ತಂದಿದೆ. ನನ್ನ ಸಂಕಷ್ಟದ ಸಮಯದಲ್ಲಿ ಧೈರ್ಯ ತುಂಬಿ ಆರ್ಥಿಕ ಸಹಾಯ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಸರ್ ಅವರಿಗೆ ನಾನು ಚಿರಋಣಿ. ಅವರ ಬೆಂಬಲವಿಲ್ಲದಿದ್ದರೆ ಈ ಮಟ್ಟದ ಸಾಧನೆ ಅಸಾಧ್ಯವಾಗಿತ್ತು.
ಕನ್ನಡಪ್ರಭ ವಾರ್ತೆ ಮಂಡ್ಯ
ಕೇರಳದ ತ್ರಿವೇಂಡ್ರಮ್‌ನಲ್ಲಿ ನಡೆದ 7ನೇ ಇಂಡಿಯನ್ ಓಪನ್ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿಜಯಕುಮಾರಿ ಅವರು 2ನೇ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕ ಮುಡಿಗೇರಿಸಿಕೊಂಡು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಗೌಡೇನಹಳ್ಳಿ ಮೂಲದ ವಿಜಯಕುಮಾರಿ, ಆರ್ಥಿಕ ಮುಗ್ಗಟ್ಟು ಮತ್ತು ಗಾಯದ ಸಮಸ್ಯೆಯಿಂದ ಕ್ರೀಡಾಲೋಕದಿಂದಲೇ ದೂರ ಸರಿಯುವ ನಿರ್ಧಾರಕ್ಕೆ ಬಂದಿದ್ದರು. ಈ ವೇಳೆ ಅವರ ನೆರವಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಿಂತು ಸರ್ಕಾರದಿಂದ ₹10 ಲಕ್ಷ ಪ್ರೋತ್ಸಾಹಧನ ಘೋಷಿಸಿದ್ದರು.
ಆ ಪೈಕಿ ಮೊದಲ ಕಂತಿನ ₹5 ಲಕ್ಷ ಗಳನ್ನು ಬಿಬಿಎಂಪಿ ಮೂಲಕ ಈಗಾಗಲೇ ಹಸ್ತಾಂತರಿಸಿದ್ದು, ಇದು ಅವರ ತರಬೇತಿ ಮತ್ತು ಚಿಕಿತ್ಸೆಗೆ ಸಂಜೀವಿನಿಯಾಯಿತು. ಛಲವೊಂದಿದ್ದರೆ ಎಂತಹ ಕಷ್ಟಗಳನ್ನೂ ಮೆಟ್ಟಿ ನಿಲ್ಲಬಹುದು ಎಂಬುದಕ್ಕೆ ಮಂಡ್ಯದ ಕ್ರೀಡಾಪಟು ಜಿ.ಕೆ.ವಿಜಯಕುಮಾರಿ ಅವರ ಸಾಧನೆಯೇ ಸಾಕ್ಷಿ.
ಪದಕ ಗೆದ್ದ ನಂತರ ಮಾತನಾಡಿದ ವಿಜಯಕುಮಾರಿ, ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಗೆದ್ದಿರುವುದು ಖುಷಿ ತಂದಿದೆ. ನನ್ನ ಸಂಕಷ್ಟದ ಸಮಯದಲ್ಲಿ ಧೈರ್ಯ ತುಂಬಿ ಆರ್ಥಿಕ ಸಹಾಯ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಸರ್ ಅವರಿಗೆ ನಾನು ಚಿರಋಣಿ. ಅವರ ಬೆಂಬಲವಿಲ್ಲದಿದ್ದರೆ ಈ ಮಟ್ಟದ ಸಾಧನೆ ಅಸಾಧ್ಯವಾಗಿತ್ತು ಎಂದು ಭಾವುಕರಾಗಿ ನುಡಿದಿದ್ದಾರೆ.
ಈಗಾಗಲೇ ಏಕಲವ್ಯ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳಿಗೆ ಭಾಜನರಾಗಿರುವ ಇವರು ಮುಂದಿನ ದಿನಗಳಲ್ಲಿ ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್‌ಗಳಲ್ಲಿ ಭಾಗವಹಿಸಿ ದೇಶಕ್ಕೆ ಪದಕ ತರುವ ಗುರಿ ಹೊಂದಿದ್ದಾರೆ.
-----------
ವಿಜಯಕುಮಾರಿ ಅವರ ಈ ಸಾಧನೆ ಮಂಡ್ಯ ಜಿಲ್ಲೆ ಮತ್ತು ಇಡೀ ಕರ್ನಾಟಕ ರಾಜ್ಯಕ್ಕೆ ಹೆಮ್ಮೆಯ ವಿಷಯ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನೆರವು ನಿಜಕ್ಕೂ ಒಬ್ಬ ಕ್ರೀಡಾಪಟುವಿನ ಬೆಳವಣಿಗೆಗೆ ಪೂರಕವಾಗಿದೆ. ಮುಂದಿನ ಕ್ರೀಡೆಗಳಿಗೆ ಅಗತ್ಯ ಸಹಕಾರ ನೀಡುವುದಾಗಿಯೂ ಡಿಸಿಎಂ ಹೇಳಿದ್ದಾರೆ. ಇನ್ನು ₹5 ಲಕ್ಷ ಶೀಘ್ರ ಅವರಿಗೆ ನೀಡಲಾಗುವುದು. ವಿಜಯಕುಮಾರಿ ಅವರನ್ನು ಕರೆಸಿ ಸನ್ಮಾನಿಸುವುದಾಗಿಯೂ ಡಿಸಿಎಂ ಹೇಳಿದ್ದಾರೆ.
-ದಿನೇಶ್ ಗೂಳಿಗೌಡ, ಶಾಸಕರು ಹಾಗೂ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.