ಕೊಪ್ಪಳದ ಗವಿಸಿದ್ದೇಶ್ವರ ಮಹಾದಾಸೋಹಕ್ಕೆ 8 ಲಕ್ಷ ಶೇಂಗಾ ಹೋಳಿಗೆ

KannadaprabhaNewsNetwork | Published : Jan 24, 2024 2:00 AM

ಸಾರಾಂಶ

ಕಳೆದೊಂದು ವಾರದಿಂದ ಸಿಂಧನೂರು, ಕಾರಟಗಿ, ಮಸ್ಕಿ, ಲಿಂಗಸಗೂರು ತಾಲೂಕಿನ 42 ಗ್ರಾಮಗಳ ಜನರಿಗೆ ಪ್ರತಿ ಮನೆಗೆ 2 ಕೆಜಿ ಶೇಂಗಾ, 2 ಕೆಜಿ ಬೆಲ್ಲ ಹಾಗೂ ಒಂದು ಪ್ಯಾಕೆಟ್ ಮೈದಾಹಿಟ್ಟು ವಿತರಣೆ ಮಾಡಿ, ವಾರದ ಸಮಯ ನೀಡಲಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಗವಿಸಿದ್ದೇಶ್ವರ ಜಾತ್ರಾ ಮಹೋತ್ವದಲ್ಲಿನ ಮಹಾ ದಾಸೋಹಕ್ಕಾಗಿ ಈ ವರ್ಷ 8 ಲಕ್ಷ ಶೇಂಗಾ ಹೋಳಿಗೆ ಸಿದ್ಧ ಮಾಡಲಾಗುತ್ತಿದ್ದು, ಇದರ ತೂಕವೇ ಬರೋಬ್ಬರಿ 26 ಟನ್.

ಸಿಂಧನೂರು ವಿಜಯಕುಮಾರ ಮತ್ತು ಗೆಳೆಯರು ಸೇರಿಕೊಂಡು ದಾಖಲೆಯ ಸಿಹಿ ಖಾದ್ಯ ತಯಾರು ಮಾಡಿಸುತ್ತಿದ್ದಾರೆ. 80 ಕ್ವಿಂಟಲ್ ಶೇಂಗಾ, 80 ಕ್ವಿಂಟಲ್ ಅಥವಾ ಅದಕ್ಕಿಂತಲೂ ಅಧಿಕ ಬೆಲ್ಲ ಹಾಗೂ 40 ಕ್ವಿಂಟಲ್ ಮೈದಾಹಿಟ್ಟು ಬಳಕೆ ಮಾಡಲಾಗುತ್ತದೆ. ಇದಕ್ಕಾಗಿ ಸುಮಾರು ₹20 ಲಕ್ಷಕ್ಕೂ ಅಧಿಕ ವೆಚ್ಚವಾಗಲಿದೆ.

ಕಳೆದೊಂದು ವಾರದಿಂದ ಸಿಂಧನೂರು, ಕಾರಟಗಿ, ಮಸ್ಕಿ, ಲಿಂಗಸಗೂರು ತಾಲೂಕಿನ 42 ಗ್ರಾಮಗಳ ಜನರಿಗೆ ಪ್ರತಿ ಮನೆಗೆ 2 ಕೆಜಿ ಶೇಂಗಾ, 2 ಕೆಜಿ ಬೆಲ್ಲ ಹಾಗೂ ಒಂದು ಪ್ಯಾಕೆಟ್ ಮೈದಾಹಿಟ್ಟು ವಿತರಣೆ ಮಾಡಿ, ವಾರದ ಸಮಯ ನೀಡಲಾಗಿದೆ.

ಜ. 25ರಂದು ಎಲ್ಲ ಭಕ್ತರು ಹೋಳಿಗೆ ಸಿದ್ಧ ಮಾಡಿಕೊಂಡು ಸಿಂಧನೂರು ಕನಕದಾಸ ಕಲ್ಯಾಣ ಮಂಟಪಕ್ಕೆ ತರುತ್ತಾರೆ. ಅಂದು ಟ್ರೇಗಳಲ್ಲಿ ಹೊಂದಿಸಿ, ಪ್ಯಾಕ್ ಮಾಡಿ, ಲಾರಿಯಲ್ಲಿ ಲೋಡ್ ಮಾಡಲಾಗುತ್ತದೆ. ಇದರ ತೂಕವೇ 26 ಟನ್ ಆಗಲಿದೆಯಂತೆ.

ಮೆರವಣಿಗೆಯಲ್ಲಿ ಗವಿಮಠಕ್ಕೆ: ಜ. 26ರಂದು ಟ್ರಕ್‌ನಲ್ಲಿ ಕೊಪ್ಪಳಕ್ಕೆ ತಂದು, ಕೊಪ್ಪಳ ನಗರದಲ್ಲಿ ವಿವಿಧ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಗವಿಮಠಕ್ಕೆ ಸಲ್ಲಿಸಲಾಗುತ್ತದೆ. ಮಠದಲ್ಲಿ ಇದನ್ನು ಮಹಾದಾಸೋಹದಲ್ಲಿ ಬಳಕೆ ಮಾಡಲಾಗುತ್ತದೆ.

ಸಿಂಧನೂರು ವಿಜಯಕುಮಾರ ಹಾಗೂ ಗೆಳೆಯರ ಬಳಗ ಕಳೆದ ಐದಾರು ವರ್ಷಗಳಿಂದ ಗವಿಮಠದ ಮಹಾದಾಸೋಹಕ್ಕೆ ಈ ರೀತಿಯ ಖಾದ್ಯವನ್ನು ತಯಾರಿಸಿ ನೀಡುತ್ತಿದ್ದಾರೆ. 100 ಕ್ವಿಂಟಲ್ ಉದುರಸಜ್ಜಕ ಮಾಡಿದ್ದು ದಾಖಲೆಯೇ ಸರಿ. ಇದಾದ ಮೇಲೆ ಹೀಗೆ ಒಂದಿಲ್ಲೊಂದು ವಿಶೇಷ ಖಾದ್ಯವನ್ನು ಮಹಾದಾಸೋಹಕ್ಕೆ ಸಮರ್ಪಣೆ ಮಾಡುತ್ತಿದ್ದಾರೆ. ಕಳೆದೆರಡು ವರ್ಷಗಳಿಂದ ಶೇಂಗಾ ಹೋಳಿಗೆಯನ್ನು ಸಮರ್ಪಣೆ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಇವರ ತಯಾರು ಮಾಡುವ ಖಾದ್ಯದ ಪ್ರಮಾಣವೂ ಹೆಚ್ಚಳವಾಗುತ್ತದೆ. ಕಳೆದ ವರ್ಷ 7 ಲಕ್ಷಕ್ಕೂ ಅಧಿಕ ಶೇಂಗಾ ಹೋಳಿಗೆಯನ್ನು ಸಮರ್ಪಣೆ ಮಾಡಿದ್ದ ಇವರು ಈ ವರ್ಷ 8 ಲಕ್ಷಕ್ಕೂ ಅಧಿಕ ಶೇಂಗಾ ಹೋಳಿಗೆ ತಯಾರು ಸಮರ್ಪಣೆ ಮಾಡಲು ಸಿದ್ಧರಾಗಿದ್ದಾರೆ.ಶೇಂಗಾ ಹೋಳಿಗೆಯನ್ನು ಮನೆಗೆ ಬೀಗರು ಬಂದಾಗ ಮಾಡುವುದು ಕಷ್ಟದ ಕೆಲಸ ಎನ್ನಲಾಗುತ್ತದೆ. ಅಂಥದ್ದರಲ್ಲಿ 8 ಲಕ್ಷ ಶೇಂಗಾ ಹೋಳಿಗೆಯನ್ನು ಗವಿಮಠದ ಮಹಾದಾಸೋಹಕ್ಕಾಗಿ ಸಿದ್ಧ ಮಾಡುತ್ತಿರುವುದು ದಾಖಲೆಯೇ ಸರಿ.ಗವಿಮಠದ ಮಹಾದಾಸೋಹಕ್ಕೆ ಪ್ರತಿ ವರ್ಷವೂ ಒಂದಿಲ್ಲೊಂದು ಸಿಹಿ ಖಾದ್ಯ ತಯಾರಿಸುವ ಸಂಪ್ರದಾಯ ಮಾಡಿಕೊಂಡಿದ್ದು, ಅದರಂತೆ ಈ ವರ್ಷ ಶೇಂಗಾ ಹೋಳಿಗೆ ಮಾಡಿಕೊಡಲಾಗುತ್ತದೆ ಎನ್ನುತ್ತಾರೆ ವಿಜಯಕುಮಾರ ಸಿಂಧನೂರು.42 ಗ್ರಾಮಗಳ ಜನರು ವಾರದ ಕಾಲ ಈ ಶೇಂಗಾ ಹೋಳಿಗೆ ಸಿದ್ಧಪಡಿಸುತ್ತಾರೆ. ಇದಕ್ಕಾಗಿ ಸುಮಾರು 1 ತಿಂಗಳ ಕಾಲ ನಾವೆಲ್ಲ ಸಿದ್ಧತೆ ಮಾಡಿಕೊಳ್ಳುತ್ತೇವೆ ಎನ್ನುತ್ತಾರೆ ಸಿಂಧನೂರು ವಕೀಲ ಈಶ್ವರ.

Share this article