ತುಮಕೂರಿಗರಿಗೆ ಗುಡ್ ನ್ಯೂಸ್ : ನಿಮ್ಮೂರಿಗೂ ಬರುತ್ತಾ ಮೆಟ್ರೋ

KannadaprabhaNewsNetwork |  
Published : Apr 28, 2024, 01:19 AM ISTUpdated : Apr 28, 2024, 06:04 AM IST
ಮೆಟ್ರೋ | Kannada Prabha

ಸಾರಾಂಶ

ಮಾದವಾರದಿಂದ ತುಮಕೂರಿನವರೆಗೆ ಮೆಟ್ರೋ ಕಾರಿಡಾರ್ ವಿಸ್ತರಣೆಗೆ ಬೆಂಗಳೂರು ಮೆಟ್ರೋ ರೈಲು ನಿಗಮವು (ಬಿಎಂಆರ್‌ಸಿಎಲ್‌) ಕಾರ್ಯಸಾಧ್ಯತಾ ಅಧ್ಯಯನ ವರದಿ ಸಿದ್ಧಪಡಿಸಲು ಕರೆದಿದ್ದ ಟೆಂಡರ್‌ಗೆ ಎಂಟು ಸಂಸ್ಥೆಗಳು ಆಸಕ್ತಿ ತೋರಿವೆ.

 ಬೆಂಗಳೂರು :  ಮಾದವಾರದಿಂದ ತುಮಕೂರಿನವರೆಗೆ ಮೆಟ್ರೋ ಕಾರಿಡಾರ್ ವಿಸ್ತರಣೆಗೆ ಬೆಂಗಳೂರು ಮೆಟ್ರೋ ರೈಲು ನಿಗಮವು (ಬಿಎಂಆರ್‌ಸಿಎಲ್‌) ಕಾರ್ಯಸಾಧ್ಯತಾ ಅಧ್ಯಯನ ವರದಿ ಸಿದ್ಧಪಡಿಸಲು ಕರೆದಿದ್ದ ಟೆಂಡರ್‌ಗೆ ಎಂಟು ಸಂಸ್ಥೆಗಳು ಆಸಕ್ತಿ ತೋರಿವೆ.

ಫೆಬ್ರವರಿಯಲ್ಲಿ ಬಜೆಟ್‌ ಮಂಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ಮಾರ್ಗ ವಿಸ್ತರಣೆ ಬಗ್ಗೆ ಘೋಷಣೆ ಮಾಡಿದ್ದರು. ಅದರಂತೆ 52.41 ಕಿ.ಮೀ. ಉದ್ದದ ಈ ಮಾರ್ಗದ ರೂಪಿಸಲು ಬಿಎಂಆರ್‌ಸಿಎಲ್‌ ಮೊದಲ ಹೆಜ್ಜೆ ಇಟ್ಟಿತ್ತು. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಗೊಳಿಸಲು ನಿರ್ಧರಿಸಲಾಗಿದ್ದು, ಶೀಘ್ರವೇ ಕಾರ್ಯಸಾಧ್ಯತಾ ವರದಿ ರೂಪಿಸುವ ಕಾರ್ಯ ನಡೆಯಲಿದೆ.

ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲೇ ಮೆಟ್ರೋ ಮಾರ್ಗವನ್ನು ನಿರ್ಮಾಣ ಮಾಡಲು ಯೋಜಿಸಲಾಗಿದೆ. ಈ ಮಾರ್ಗದಲ್ಲಿ ಪ್ರಾಥಮಿಕ ಹಂತದಲ್ಲಿ ಮಾದಾವರ, ಮಾಕಳಿ, ದಾಸನಪುರ, ನೆಲಮಂಗಲ ಬಸ್‌ ನಿಲ್ದಾಣ, ಬೂದಿಹಾಳ, ದಾಬಸ್‌ಪೇಟೆ, ಕ್ಯಾತ್ಸಂದ್ರ, ತುಮಕೂರು ವಿಶ್ವ ವಿದ್ಯಾಲಯ, ತುಮಕೂರು ಬಸ್ ನಿಲ್ದಾಣ ಸೇರಿ ಇತರೆ 19 ಸ್ಥಳಗಳಲ್ಲಿ ಎತ್ತರಿಸಿದ ನಿಲ್ದಾಣ ನಿರ್ಮಿಸಲು ಯೋಜಿಸಲಾಗಿದೆ. ಅಂತಿಮ ನಿಲ್ದಾಣಗಳಲ್ಲಿ ಹೆಚ್ಚು ಅಥವಾ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಸಾಧ್ಯತಾ ಅಧ್ಯಯನ ವರದಿ ಸಿದ್ಧಪಡಿಸಲು ರೈಟ್ಸ್‌ ಲಿ., ಸ್ಯಸ್ತ್ರ ಎಂವಿಎ ಕನ್ಸಲ್ಟಿಂಗ್, ಆರ್‌ವೀ ಅಸೋಸಿಯೇಟ್ಸ್‌ ಸೇರಿ ಇತರೆ ಸಂಸ್ಥೆಗಳು ಮುಂದೆ ಬಂದಿವೆ. ಶೀಘ್ರ ಇವುಗಳಲ್ಲಿ ಒಂದು ಸಂಸ್ಥೆಯನ್ನು ಆಯ್ಕೆ ನಡೆಸಲಾಗುವುದು, ವರದಿಯ ಸಾಧಕಬಾಧಕ ಪರಿಶೀಲಿಸಿ ವಿಸ್ತೃತ ಯೋಜನಾ ವರದಿ ರೂಪಿಸಿ ಬಳಿಕ ಯೋಜನೆ ಅನುಷ್ಠಾನಕ್ಕೆ ಟೆಂಡರ್‌ ಕರೆಯಲಿದ್ದೇವೆ ಎಂದು ಅಧಿಕಾರಿಗಳು ಹೇಳಿದರು.

ಬಿಡದಿ, ಕಾಡುಗೋಡಿಗೆ ಮೆಟ್ರೋ: ವರದಿಗೆ ಟೆಂಡರ್‌

ಇದಲ್ಲದೆ, ಚಲ್ಲಘಟ್ಟದಿಂದ ಬಿಡದಿ, ಸಿಲ್ಕ್‌ ಇನ್‌ಸ್ಟಿಟ್ಯೂಟ್-ಹಾರೋಹಳ್ಳಿ, ಬೊಮ್ಮಸಂದ್ರ- ಅತ್ತಿಬೆಲೆ ಸೇರಿ ಕಾಳೇನ ಅಗ್ರಹಾರ-ಕಾಡುಗೋಡಿವರೆಗೆ ಸುಮಾರು 118 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ನಿರ್ಮಾಣಕ್ಕೂ ನಮ್ಮ ಮೆಟ್ರೋ ಮುಂದಾಗಿದ್ದು, ಇದಕ್ಕೂ ಕಾರ್ಯಸಾಧ್ಯತಾ ವರದಿ ರೂಪಿಸಲು ಟೆಂಡರ್‌ ಕರೆದಿದೆ.

ಇನ್ನು, ಸರ್ಜಾಪುರ-ಹೆಬ್ಬಾಳ ಮೆಟ್ರೋ ಮಾರ್ಗ ನಿರ್ಮಾಣ ಸಂಬಂಧ ಬಿಎಂಆರ್‌ಸಿಎಲ್‌ ಡಿಪಿಆರ್‌ ಸಿದ್ಧಪಡಿಸಿದೆ. ಲೋಕಸಭಾ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಲಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ