ಹಾಸ್ಟೆಲ್‌ನಲ್ಲಿ ಮೊಟ್ಟೆ ತಿಂದು 8 ವಿದ್ಯಾರ್ಥಿಗಳು ಅಸ್ವಸ್ಥ

KannadaprabhaNewsNetwork | Published : Jan 13, 2024 1:32 AM

ಸಾರಾಂಶ

ಹೊಸಕೋಟೆ: ತಾಲೂಕಿನ ನಂದಗುಡಿ ಹೋಬಳಿಯ ನೆಲವಾಗಿಲು ಗ್ರಾಮದಲ್ಲಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದಲ್ಲಿ ಗುರುವಾರ ರಾತ್ರಿ ನಡೆದಿದೆ.

ಹೊಸಕೋಟೆ: ತಾಲೂಕಿನ ನಂದಗುಡಿ ಹೋಬಳಿಯ ನೆಲವಾಗಿಲು ಗ್ರಾಮದಲ್ಲಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದಲ್ಲಿ ಗುರುವಾರ ರಾತ್ರಿ ನಡೆದಿದೆ.

ನೆಲವಾಗಿಲು ಗ್ರಾಮದ ದೇವರಾಜ ಅರಸು ಹಿಂದುಳಿದ ವರ್ಗಗಳ ವಸತಿ ಶಾಲೆಯಲ್ಲಿ ಸುಮಾರು 28 ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ನೆಲೆಸಿದ್ದು, 10ನೇ ತರಗತಿ ವಿದ್ಯಾರ್ಥಿಗಳು ಮೊಟ್ಟೆ ಸೇವಿಸಿದ ಕೂಡಲೇ ಅವರಿಗೆ ವಾಂತಿ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕೂಡಲೆ ವಸತಿ ನಿಲಯದ ಸಿಬ್ಬಂದಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿಸಿ ಚಿಕಿತ್ಸೆ ನೀಡಲಾಗಿದೆ.

ಅಸ್ವಸ್ಥ ಮಕ್ಕಳನ್ನು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತಿದೆ. ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ವಾಸನೆ ಎಂದ್ರೂ ತಿನ್ನಿಸಿದ್ರು:

ಪೌಷ್ಟಿಕ ಆಹಾರ ನೀಡುವ ನಿಟ್ಟಿನಲ್ಲಿ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡಲಾಗಿತ್ತು. ಆದರೆ ಮೊಟ್ಟೆ ತಿನ್ನುವ ಸಂದರ್ಭದಲ್ಲಿ ದುರ್ವಾಸನೆ ಬರುತ್ತಿದೆ ಎಂದು ಕೆಲ ಮಕ್ಕಳು ಹೇಳಿದರೂ ಮೊಟ್ಟೆ ಸರಬರಾಜು ಮಾಡಿದ ಹಾಸ್ಟೆಲ್‌ ಸಿಬ್ಬಂದಿ ಏನು ಆಗಿಲ್ಲ ತಿನ್ನಿರಿ ಎಂದು ಬಲವಂತ ಮಾಡಿದ್ದು, ಅವರ ಬಲವಂತಕ್ಕೆ ಅರ್ಧ ಮೊಟ್ಟೆ ತಿಂದು ಉಳಿದದ್ದು ಬಿಸಾಡಿದ್ದೇವೆ ಎಂದು ಮಕ್ಕಳು ತಿಳಿಸಿದ್ದಾರೆ.

ಪರೀಕ್ಷೆಗೆ ಕಳಿಸಿರುವ ಮೊಟ್ಟೆ:

ಹೊಸಕೋಟೆ ತಾಲೂಕಿನ ನೆಲವಾಗಿಲು ಗ್ರಾಮದ ದೇವರಾಜ ಅರಸು ಹಿಂದುಳಿದ ವರ್ಗಗಳ ವಸತಿ ಶಾಲೆಯಲ್ಲಿ ಮೊಟ್ಟೆ ಸೇವಿಸಿ ಅಸ್ವಸ್ಥರಾದ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆ ಉಪ ನಿರ್ದೇಶಕಿ ನಿರುಪಮ ಭೇಟಿ ನೀಡಿ ಪರಿಶೀಲಿಸಿದರು.

ಆರೋಗ್ಯ ಇಲಾಖೆ ಅಧಿಕಾರಿಗಳು ಮೊಟ್ಟೆ ಮಾದರಿಯನ್ನು ಪಡೆದಿದ್ದು ಲ್ಯಾಬ್ ಗೆ ಪರೀಕ್ಷೆಗೆ ಕಳುಹಿಸಲಾಗಿದೆ. ವೈದ್ಯರ ಸಲಹೆಯಂತೆ ಇನ್ನು ಒಂದು ವಾರ ಮಕ್ಕಳಿಗೆ ಮೊಸರನ್ನ ಹಾಗೂ ತಿಳಿ ಬೇಳೆ ಸಾರಿನ ಊಟ ನೀಡಲಾಗುವುದು. ಪ್ರತಿ ಮೂರು ತಿಂಗಳಿಗೊಮ್ಮೆ ವಸತಿ ನಿಲಯದ ಪ್ರತಿ ಮಗುವಿಗೂ ಆರೋಗ್ಯ ತಪಾಸಣೆ ಕಡ್ಡಾಯವಾಗಿ ಮಾಡಿಸಲಾಗುವುದು ಎಂದು ಹೇಳಿದರು.

ಗಾಬರಿಯಲ್ಲಿ ಕರೆ ಸ್ವೀಕರಿಸಿಲ್ಲ:

ಮಕ್ಕಳ ಆರೋಗ್ಯದ ಸಮಸ್ಯೆ ಬಗ್ಗೆ ಗಾಬರಿಗೊಂಡಿದ್ದು ಮಕ್ಕಳಿಗೆ ಚಿಕಿತ್ಸೆ ಕೊಡಿಸುವ ಆತುರದಲ್ಲಿ ಯಾರ ದೂರವಾಣಿಯನ್ನು ಸ್ವೀಕರಿಸಿರಲಿಲ್ಲ. ಕೇವಲ ಜಿಲ್ಲಾ ಉಪನಿರ್ದೇಶಕರಿಗೆ ಮಾತ್ರ ಮಾಹಿತಿ ನೀಡಿ ಮಕ್ಕಳ ಚಿಕಿತ್ಸೆಗೆ ಹೆಚ್ಚಿನ ಗಮನ ಹರಿಸಿದ ಕಾರಣ ಯಾರ ಕರೆಯನ್ನು ಸ್ವೀಕರಿಸಲಾಗಿಲ್ಲ ಎಂದು ತಾಲೂಕಿನ ಹಿಂದುಳಿದ ವರ್ಗಗಳ ಇಲಾಖೆ ಸಹಾಯಕ ನಿರ್ದೇಶಕಿ ಡಾ. ಪ್ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

Share this article