ಹೊಸ ವರ್ಷಕ್ಕೆ ಹೊಟೆಲ್‌, ಪಬ್‌, ರೆಸ್ಟೋರೆಂಟ್‌ಗಳ ಶೇ.80ರಷ್ಟು ಮುಂಗಡ ಬುಕ್ಕಿಂಗ್‌

KannadaprabhaNewsNetwork | Updated : Dec 29 2024, 04:51 AM IST

ಸಾರಾಂಶ

ಸಂಭ್ರಮಾಚರಣೆ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲು ಸಿಲಿಕಾನ್‌ ಸಿಟಿ ಸಜ್ಜಾಗಿದ್ದು, ಡಿ.31 ಹಾಗೂ ಜ.1 ಎರಡೂ ದಿನ ಸೇರಿ ಬರೋಬ್ಬರಿ 1 ಸಾವಿರ ಕೋಟಿ ರು. ವಹಿವಾಟನ್ನು ನಗರದ ಆತಿಥ್ಯ ಉದ್ಯಮ ನಿರೀಕ್ಷೆ ಮಾಡಿದೆ.

 ಬೆಂಗಳೂರು : ಸಂಭ್ರಮಾಚರಣೆ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲು ಸಿಲಿಕಾನ್‌ ಸಿಟಿ ಸಜ್ಜಾಗಿದ್ದು, ಡಿ.31 ಹಾಗೂ ಜ.1 ಎರಡೂ ದಿನ ಸೇರಿ ಬರೋಬ್ಬರಿ 1 ಸಾವಿರ ಕೋಟಿ ರು. ವಹಿವಾಟನ್ನು ನಗರದ ಆತಿಥ್ಯ ಉದ್ಯಮ ನಿರೀಕ್ಷೆ ಮಾಡಿದೆ. ಈಗಾಗಲೆ ನಗರದಲ್ಲಿ ಶೇ.80ರಷ್ಟು ಹೊಟೆಲ್‌, ಪಬ್‌, ರೆಸ್ಟೋರೆಂಟ್‌ಗಳ ಮುಂಗಡ ಬುಕ್ಕಿಂಗ್‌ ಹಾಗೂ ಟೇಬಲ್‌ ಬುಕ್ಕಿಂಗ್ ಆಗಿದೆ. ಹಾಗೆಯೇ ದರಗಳು ಕೂಡ ಶೇ.10-20 ರಷ್ಟು ಅಧಿಕವಾಗಿವೆ. ಅಂತಿಮ ಕ್ಷಣಗಳಲ್ಲಿ ಈ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಪಾರ್ಟಿ ಪ್ರಿಯರ ನೆಚ್ಚಿನ ನಗರಿ, ಪಬ್ ಕ್ಯಾಪಿಟಲ್ ಎಂದೂ ಹೆಸರಾಗಿರುವ ಬೆಂಗಳೂರು ಹೊಸ ವರ್ಷ ಆಚರಣೆಗೆ ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ವಿದೇಶ ಸೇರಿ ದೇಶದ ನಾನಾ ಭಾಗಗಳಿಂದ ಬರುವ ಜನರು ಇಲ್ಲಿ ಅದ್ಧೂರಿ ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ನಗರದ ವಿವಿಧ ದರ್ಜೆಯ ಸ್ಟಾರ್‌ ಹೋಟೆಲ್, ಐಷಾರಾಮಿ ಹೊಟೆಲ್‌ ಬಗೆ ಬಗೆಯ ಕಾರ್ಯಕ್ರಮ ಆಯೋಜಿಸಿವೆ.

ಎಂ.ಜಿ.ರೋಡ್‌, ಬ್ರೀಗೇಡ್‌ ರೋಡ್‌, ಚರ್ಚ್ ಸ್ಟ್ರೀಟ್ ಸೇರಿ ಇಂದಿರಾನಗರ, ಕೋರಮಂಗಲ, ವೈಟ್‌ಫೀಲ್ಡ್‌, ಎಲೆಕ್ಟ್ರಾನಿಕ್‌ ಸಿಟಿ ಮತ್ತು ಇತರ ಟೆಕ್‌ ಕಾರಿಡಾರ್‌ಗಳು ಪಾರ್ಟಿ ಮೂಡ್‌ಗೆ ತೆರೆದುಕೊಂಡಿವೆ. ಇದಲ್ಲದೆ ಕನಕಪುರ ರಸ್ತೆ, ಔಟರ್‌ ರಿಂಗ್‌ ರೋಡ್ ಸೇರಿ ನಗರದ ಹೊರವಲಯದ ಹೊಟೆಲ್‌, ಗೆಸ್ಟ್ ಹೌಸ್‌, ಹೋಂ ಸ್ಟೇ ಸೇರಿ ಇತರೆಡೆ ಖಾಸಗಿ ಪಾರ್ಟಿಗಳು ಜೋರಾಗಿ ನಡೆಯಲಿವೆ.

ಪಾರ್ಟಿಲಿ ಬಗೆ ಬಗೆಯ ಸಂಭ್ರಮ:

ಸೆಲೆಬ್ರಿಟಿ ಡಿಜೆ, ಹಾಲಿವುಡ್‌, ಬಾಲಿವುಡ್‌, ಪಂಜಾಬಿ, ಇಂಡಿಯನ್‌ ಪಾಪ್‌ ಮ್ಯೂಸಿಕ್, ಬೆಲ್ಲಿ ಡ್ಯಾನ್ಸ್‌ ಲೈವ್‌ ಪರ್‌ಫಾರ್ಮೆನ್ಸ್‌ ಇದೆ. ಕ್ಯಾಂಪ್‌ ಫೈರ್‌ ಸೇರಿ ಓಪನ್ ಏರ್‌ ಪಾರ್ಟಿ, ಪೂಲ್‌ಸೈಡ್ ಪಾರ್ಟಿ, ರೈನ್ ಡ್ಯಾನ್ಸ್, ಫೈರ್‌ ಡ್ಯಾನ್ಸ್‌ ಆಯೋಜನೆ ಆಗಿದೆ. ಇದಕ್ಕಾಗಿ ಪ್ರಖ್ಯಾತ ತಾರೆಯರು, ಗಾಯಕರನ್ನು ಕರೆಸಿಕೊಳ್ಳಲಾಗುತ್ತಿದೆ. ವಿಐಪಿ, ವಿವಿಐಪಿ ಕೌಂಟರ್‌, ಸೆಲೆಬ್ರಿಟಿ ಕೌಂಟರ್‌, ಫ್ಯಾಮಿಲಿ ಕೌಂಟರ್‌, ಮಕ್ಕಳಿಗೆ ಪ್ರತ್ಯೇಕ ಝೋನ್‌ ಎಂದು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ತಕ್ಕಂತೆ ಪತ್ಯೇಕ ಮೆನು ಕೂಡ ಇದೆ. ಅನಿಯಮಿತ ಆಹಾರ ಹಾಗೂ ಪಾನೀಯ ಸೇರಿದಂತೆ ವಿವಿಧ ಆಕರ್ಷಕ ಕೊಡುಗೆಗಳನ್ನೂ ನೀಡುತ್ತಿವೆ.

ವಿವಿಧ ಥೀಮ್‌ಗಳು:

ಗ್ರಾಹಕರನ್ನು ಸೆಳೆಯಲೆಂದೇ ವಿವಿಧ ಹೊಟೆಲ್‌ಗಳು ಪಾರ್ಟಿಗಳನ್ನು ವಿಶಿಷ್ಟ ಥೀಮ್ ಅಡಿಯಲ್ಲಿ ಆಯೋಜಿಸಿ ಹೆಸರು ಕೊಟ್ಟಿವೆ. ಅನ್‌ಲಾಕ್‌ 2025, ದ ಡಾರ್ಕ್ ಅಫೇರ್‌, ದಿ ರಾಯಲ್‌ ಅಫೇರ್‌, ಲೈಟ್ಸ್-ಡ್ರಿಂಕ್ಸ್‌-ಆ್ಯಕ್ಷನ್ಸ್‌, ಸ್ಪಾರ್ಕ್ಲಿಂಗ್‌ ನ್ಯೂ ಇಯರ್‌, ನ್ಯೂ ಇಯರ್ ಬ್ಯಾಶ್‌, ಕಿಕ್‌ಸ್ಟಾರ್ಟ್‌ 2025, ಅಂಡರ್‌ ದಿ ಸ್ಟಾರ್ಸ್‌, ಹವಾಯಿ, ಬಾಲಿವುಡ್‌ ನೈಟ್‌ ಸೇರಿ ಬಗೆಬಗೆ ಹೆಸರಿಟ್ಟಿವೆ. ಬುಕ್‌ ಮೈ ಶೋ ಸೇರಿ ಹಲವು ಪ್ಲಾಟ್‌ಫಾರ್ಮ್‌ಗಳಲ್ಲಿ ಇವುಗಳ ಟಿಕೆಟ್‌ ಇದ್ದು, ಆನ್‌ಲೈನ್‌ ಬುಕ್ಕಿಂಗ್‌ ಜೋರಾಗಿದೆ.

ಕ್ಯಾಬ್‌ ವ್ಯವಸ್ಥೆಯೂ ಲಭ್ಯ:

ಭದ್ರತೆಗೆ ಮಹಿಳಾ ಹಾಗೂ ಪುರುಷ ಬೌನ್ಸ್‌ರ್‌ ನಿಯೋಜನೆ ಮಾಡಿಕೊಳ್ಳಲಾಗುತ್ತಿದೆ. ಪಾರ್ಟಿ ಬಳಿಕ ಸುರಕ್ಷಿತವಾಗಿ ಮನೆ ತಲುಪಿಸಲು ಕ್ಯಾಬ್‌ ವ್ಯವಸ್ಥೆಯೂ ಇದೆ. ಹೊಟೆಲ್‌ಗಳಲ್ಲಿ ತಂಗಲು ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಹಲವೆಡೆ 5ವರ್ಷದೊಳಗಿನ ಮಕ್ಕಳಿಗೆ ಪಾರ್ಟಿ ಪ್ರವೇಶ ನಿರ್ಬಂಧಿಸಲಾಗಿದ್ದು, ಟಿಕೆಟ್‌ ಬುಕ್ಕಿಂಗ್ ವೇಳೆಯೆ ಈ ಮಾಹಿತಿ ಒದಗಿಸಲಾಗುತ್ತಿದೆ.

ಪ್ರವಾಸ ಆಯೋಜನೆ:ಇದಲ್ಲದೆ ಹಲವು ಇವೆಂಟ್‌ ಆಯೋಜಕ ಕಂಪನಿಗಳು ಹೊಸ ವರ್ಷಕ್ಕೆ ವಿಶೇಷ ಪ್ರವಾಸವನ್ನೂ ಏರ್ಪಡಿಸಿವೆ. ಅಲ್ಲಿ ಕರೆದೊಯ್ದು ಪಾರ್ಟಿ ಆಯೋಜಿಸಿವೆ. ಗೋಕರ್ಣ ಬೀಚ್ ಪಾರ್ಟಿ , ನೈಟ್‌ ಕ್ಯಾಂಪ್‌ ಆಯೋಜಿಸಿವೆ. ಹೀಗೆ ಇತರೆಡೆಯೂ ಪ್ರವಾಸ, ಪಾರ್ಟಿ ನಡೆಯಲಿದೆ.

ಕಳೆದ ವರ್ಷಕ್ಕಿಂತ ದರ ಏರಿಕೆ:

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಾರ್ಟಿ ಪ್ರವೇಶ, ಊಟೋಪಚಾರ, ವಸತಿ ವ್ಯವಸ್ಥೆ ದರ ಹೆಚ್ಚಾಗಿದೆ. ಡಿಲಕ್ಸ್, ಪ್ರಿಮಿಯಂ ಪಾರ್ಟಿ ಪ್ಯಾಕೇಜ್‌ಗಳನ್ನು ಪಬ್‌ಗಳು, ಹೋಟೆಲ್‌ಗಳು ಘೋಷಿಸಿವೆ. ಒಬ್ಬರಿಗೆ ₹ 2ಸಾವಿರದಿಂದ ₹ 5 ಸಾವಿರ, ಜೋಡಿಗೆ ₹ 3 ಸಾವಿರದಿಂದ ₹ 8500 ದರ ನಿಗದಿ ಮಾಡಲಾಗಿದೆ. ಮುಂಗಡ ಬುಕ್ಕಿಂಗ್​​​ಗೆ ಶೇ.30ರ ವರೆಗೆ ರಿಯಾಯಿತಿ ನೀಡುತ್ತಿವೆ. ಮಕ್ಕಳಿಗೆ ₹ 1000 ದಿಂದ ಆರಂಭವಾಗುತ್ತಿದ್ದು, ವಿಐಪಿ ಜೋಡಿಗೆ ವಸತಿ ಹಾಗೂ ಜ.1ರಂದು ಬೆಳಗ್ಗೆ ಉಪಾಹಾರ ಸೇರಿ ₹ 22 ರಿಂದ ₹30 ಸಾವಿರ ವರೆಗೆ ದರ ನಿಗದಿಸಲಾಗಿದೆ. ರಿಯಾಯಿತಿ ಪ್ಯಾಕೇಜ್‌ನ್ನೂ ಘೋಷಿಸಿವೆ.

ಸರ್ಕಾರಕ್ಕೆ ₹400 ಕೋಟಿ ತೆರಿಗೆ:

ಹೋಟೆಲ್, ಪಬ್‌, ಬಾರ್‌ ಆ್ಯಂಡ್‌ ರೆಸ್ಟೊರೆಂಟ್‌ ಸೇರಿ ಸುಮಾರು ₹1000 ಕೋಟಿ ವಹಿವಾಟು ನಡೆಯುವ ನಿರೀಕ್ಷೆ ಇದೆ. ₹300 - ₹400 ಕೋಟಿ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಸಲ್ಲಿಕೆಯಾಗಲಿದೆ. ಕಳೆದ ವರ್ಷ ಸಮಾರು ₹ 800 ಕೋಟಿ ವಹಿವಾಟಾಗಿದೆ. ಈ ಬಾರಿ ಆತಿಥ್ಯ ಉದ್ಯಮಕ್ಕೆ ಉತ್ತಮ ಆದಾಯ ಹರಿದುಬರುವ ನಿರೀಕ್ಷೆಯಿದೆ ಎಂದು ಬೃಹತ್‌ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್‌ ತಿಳಿಸಿದ್ದಾರೆ.

ಹೊಸ ವರ್ಷಕ್ಕೆ ಈ ಬಾರಿ ₹ 1000 ಕೋಟಿ ವಹಿವಾಟಿನ ನಿರೀಕ್ಷೆಯಿದೆ. ಫುಡ್‌, ಕಾಂಪ್ಲಿಮೆಂಟ್ರಿ, ಆಯೋಜನೆ ವೆಚ್ಚವೂ ಅಧಿಕವಾಗಿರುವ ಕಾರಣ ದರ ಶೇ. 10ರಷ್ಟು ಹೆಚ್ಚಾಗಿದೆ.

- ಪಿ.ಸಿ.ರಾವ್‌, ಬೃಹತ್‌ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ

Share this article