ಜವಳಗೇರಾ: 80 ಭೂ ಹೋರಾಟಗಾರರ ಬಂಧನ

KannadaprabhaNewsNetwork |  
Published : Dec 15, 2023, 01:30 AM IST
14Kpsnd1 | Kannada Prabha

ಸಾರಾಂಶ

ಕಳೆದ ೭೦ ದಿನಗಳಿಂದ ಕರ್ನಾಟಕ ರೈತ ಸಂಘ ಮತ್ತು ಸಿಪಿಐಎಂಎಲ್ ರೆಡ್ ಸ್ಟಾರ್ ನೇತೃತ್ವದಲ್ಲಿ ಭೂ ರಹಿತ ರೈತರಿಗೆ ಘೋಷಿತ ಹೆಚ್ಚುವರಿ ಜಮೀನನ್ನು ವಿತರಿಸುವಂತೆ ಆಗ್ರಹಿಸಿ ಸಿಂಧನೂರು ಸೀಮಾದಲ್ಲಿರುವ ಸರ್ವೆ ನಂ.೪೧೯ರಲ್ಲಿ ಧರಣಿ ನಡೆದಿದ್ದು, ಸರ್ಕಾರ ಸಮರ್ಪಕವಾಗಿ ಸ್ಪಂದಿಸಿಲ್ಲ ಎಂದು ಆರೋಪಿಸಿ ಗುರುವಾರ ಪ್ರತಿಭಟನಾ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ 80 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸಿಂಧನೂರು

ತಾಲೂಕಿನ ಜವಳಗೇರಾ ಸಂಸ್ಥಾನದ ವೆಂಕಟರಾವ್ ನಾಡಗೌಡ, ಸಂಗಮೇಶ್ವರ ನಾಡಗೌಡ ಮತ್ತು ಇತರರು ಘೋಷಿತ ಹೆಚ್ಚುವರಿ ಭೂಮಿಯಲ್ಲಿ ಅಕ್ರಮವಾಗಿ ಕೃಷಿ ಮಾಡುತ್ತಿರುವುದನ್ನು ಖಂಡಿಸಿ ಗುರುವಾರ ಜಮೀನಿನಲ್ಲಿ ಕರ್ನಾಟಕ ರೈತ ಸಂಘ ಮತ್ತು ಸಿಪಿಐಎಂಎಲ್ ರೆಡ್ ಸ್ಟಾರ್ ನೇತೃತ್ವದಲ್ಲಿ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ೮೦ ಜನರನ್ನು ಬಂಧಿಸಿ ಗ್ರಾಮೀಣ ಪೊಲೀಸ್ ಠಾಣೆಗೆ ಕರೆತಂದಿದ್ದು, ಬಂಧಿತರು ಠಾಣೆಯಲ್ಲಿಯೇ ಧರಣಿ ಮುಂದುವರಿಸಿದ್ದಾರೆ.

ಕಳೆದ ೭೦ ದಿನಗಳಿಂದ ಕರ್ನಾಟಕ ರೈತ ಸಂಘ ಮತ್ತು ಸಿಪಿಐಎಂಎಲ್ ರೆಡ್ ಸ್ಟಾರ್ ನೇತೃತ್ವದಲ್ಲಿ ಭೂ ರಹಿತ ರೈತರಿಗೆ ಘೋಷಿತ ಹೆಚ್ಚುವರಿ ಜಮೀನನ್ನು ವಿತರಿಸುವಂತೆ ಆಗ್ರಹಿಸಿ ಸಿಂಧನೂರು ಸೀಮಾದಲ್ಲಿರುವ ಸರ್ವೆ ನಂ.೪೧೯ರಲ್ಲಿ ಧರಣಿ ನಡೆದಿದ್ದು, ಸರ್ಕಾರ ಸಮರ್ಪಕವಾಗಿ ಸ್ಪಂದಿಸಿಲ್ಲ ಎಂದು ಆರೋಪಿಸಿ ಗುರುವಾರ ಪ್ರತಿಭಟನಾ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ 80 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿಐಎಂಎಲ್ ರೆಡ್‌ಸ್ಟಾರ್ ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ, ಅಧಿಕಾರಿ ವರ್ಗದವರು ಸಂಪೂರ್ಣ ಭೂ ಮಾಲೀಕರ ಪರವಾಗಿ ವಕಾಲತ್ತು ಮಾಡುತ್ತಿದ್ದಾರೆ. ೧೯೮೧ರಲ್ಲಿ ಸಿದ್ದಲಿಂಗಮ್ಮ ವೆಂಕಟರಾವ್ ಅವರು ಭೂ ಸ್ವಾಧೀನ ಕಾಯ್ದೆಯನ್ವಯ ತಮಗೆ ೩ ಎಕರೆಯನ್ನು ಮಾತ್ರ ಉಳಿಸಿಕೊಂಡು ಉಳಿದ ೧೦೬೪ ಎಕರೆ ಜಮೀನನ್ನು ಹೆಚ್ಚುವರಿ ಎಂದು ಘೋಷಣೆ ಮಾಡಿದ್ದಾರೆ. ತದನಂತರ ಸಿದ್ದಲಿಂಗಮ್ಮ ವೆಂಕಟರಾವ್ ಅವರು ಭೂ ನ್ಯಾಯ ಮಂಡಳಿಯು ತಮಗೆ ಅನ್ಯಾಯ ಮಾಡಿದೆ ಎಂದು ಉಚ್ಛನ್ಯಾಯಾಲಯದ ಮೊರೆ ಹೋಗಿದ್ದರು. ಅದಕ್ಕೆ ನ್ಯಾಯಾಲಯ ಭೂ ನ್ಯಾಯ ಮಂಡಳಿಯ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಆದೇಶ ನೀಡಿತ್ತು. ಈ ಸಂಗತಿಯನ್ನು ೩೯ ವರ್ಷಗಳ ಕಾಲ ಅಧಿಕಾರ ಶಾಹಿ ಮುಚ್ಚಿಟ್ಟು ಭೂ ರೈತರಿಗೆ ದ್ರೋಹ ಮಾಡಿದೆ ಎಂದು ಆರೋಪಿಸಿದರು.

ಭೂ ಹೀನರು ಎರಡು ತಿಂಗಳ ಹಿಂದೆಯೇ ಭೂಮಿಯಲ್ಲಿ ಧರಣಿ ನಡೆಸುತ್ತಾ ಅವರೆ ಭೂಮಿಯನ್ನು ಉಳುಮೆ ಮಾಡಿ ಕಡಲೆ ಮತ್ತು ಜೋಳ ಬಿತ್ತಿದ್ದಾರೆ. ಆದರೆ ವೆಂಕಟರಾವ್ ನಾಡಗೌಡ ಮತ್ತು ಸಂಬಂಧಿಕರು ತಾವು ಬಿತ್ತಿದ್ದಾಗಿ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ಬೆಳೆಗೆ ರಕ್ಷಣೆ ನೀಡುವಂತೆ ಆದೇಶ ತರುವ ಮೂಲಕ ತಾವೆ ಆ ಬೆಳೆಯ ಮಾಲೀಕರೆಂದು ಸಾಬೀತು ಪಡಿಸಲು ಪ್ರಯತ್ನಿಸಿರುವುದು ಬಡವರಿಗೆ ಮಾಡಿದ ಬಹುದೊಡ್ಡ ಮೋಸ ಎಂದು ಆರೋಪಿಸಿದರು.

ಈ ವೇಳೆ ಮುಖಂಡರಾದ ಮಾಬೂಸಾಬ ಬೆಳ್ಳಟ್ಟಿ, ಸಂತೋಷ ಹಿರೇದಿನ್ನಿ, ಎಚ್.ಆರ್.ಹೊಸಮನಿ, ಅಂಬಮ್ಮ ಬಸಾಪುರ, ಮರಿಯಪ್ಪ, ಹುಲುಗಪ್ಪ, ಪರಶುರಾಮ ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ