ಮುಂಡಗೋಡ: ಫೇಸ್‌ಬುಕ್‌ನಲ್ಲಿ ಬಂದಿದ್ದ ಸಾಲದ ಜಾಹೀರಾತು ನಂಬಿ ವಂಚನೆಗೊಳಗಾದ ವ್ಯಕ್ತಿಯೋರ್ವ ಸುಮಾರು ₹೮೦ ಸಾವಿರ ಕಳೆದುಕೊಂಡ ಘಟನೆ ತಾಲೂಕಿನ ಬೆಡಸಗಾಂವ ಗ್ರಾಮದಲ್ಲಿ ನಡೆದಿದ್ದು, ಈ ಬಗ್ಗೆ ಸೈಬರ್ ಕ್ರೈಂನಲ್ಲಿ ದೂರು ದಾಖಲಾಗಿದೆ.
ಬೆಡಸಗಾಂವ ಗ್ರಾಮದ ಅಶೋಕ ರಾಮ ನಾಯ್ಕ ಎಂಬವರೇ ವಂಚನೆಗೊಳಗಾದ ವ್ಯಕ್ತಿ. ಕೆಲ ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಜೀವನ್ ಸಮೃದ್ಧಿ ಫೈನಾನ್ಸ್ ವೈಯಕ್ತಿಕ ಸಾಲ ಸೌಲಭ್ಯದ ಜಾಹಿರಾತು ನೋಡಿ, ಸಾಲ ಪಡೆಯಲು ಫೇಸ್‌ಬುಕ್‌ನಲ್ಲಿಯೇ ಮಾಹಿತಿ ಪಡೆದು ಅರ್ಜಿ ಭರ್ತಿ ಮಾಡಿದ್ದಾರೆ.ಅರ್ಜಿ ಸಲ್ಲಿಸಿದ ನಾಲ್ಕು ಗಂಟೆಗಳ ನಂತರ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ₹೧೫ ಲಕ್ಷ ಸಾಲ ಮಂಜೂರಿಯಾಗಿದೆ ಎಂದು ನಂಬಿಸಿ ಕೇಂದ್ರ ಸರ್ಕಾರದ ನಕಲಿ ಪ್ರತಿಗಳನ್ನು ಕಳುಹಿಸಿದ್ದಾರೆ. ಸಾಲ ಮಂಜೂರು ಮಾಡಲು ಮೊದಲಿಗೆ ₹5 ಸಾವಿರ ತುಂಬಲು ಹೇಳಿ ಫೋನ್ ಪೇ ಸ್ಕ್ಯಾನರ್ ಕಳುಹಿಸಿದ್ದಾರೆ. ಇದನ್ನು ನಂಬಿ ₹5 ಸಾವಿರ ಫೋನ್ ಪೇ ಮಾಡಿದ್ದಾರೆ. ಎರಡನೇ ಕಂತು ₹೨೦ ಸಾವಿರ ತುಂಬಲು ಹೇಳಿದ್ದಾರೆ. ಈ ಹಣ ತುಂಬದಿದ್ದರೆ ಮೊದಲು ತುಂಬಿದ ₹5 ಸಾವಿರ ಹಣ ಮರಳಿ ಬರುವುದಿಲ್ಲ ಎಂದು ತಿಳಿಸಿದಾಗ ಅಶೋಕ ಮತ್ತೆ ಮತ್ತೆ ಸಾವಿರಾರು ರುಪಾಯಿ ಫೋನ್ ಪೇ ಮಾಡಿದ್ದಾರೆ. ಇದೇ ರೀತಿ ಪುಸಲಾಯಿಸಿ ₹೮೦ ಸಾವಿರ ಭರಿಸಿಕೊಂಡ ವಂಚಕರು ಶುಕ್ರವಾರ ಸಂಜೆಯಿಂದ ಅಶೋಕನ ಫೋನ್ ಕರೆ ಸ್ವೀಕರಿಸುತ್ತಿಲ್ಲ. ಇದರಿಂದ ಆತಂಕಗೊಂಡ ಆಶೋಕ ನಾಯ್ಕ, ಮುಂಡಗೋಡ ಪೊಲೀಸ್ ಠಾಣೆಗೆ ಬಂದು ತಮಗಾಗಿರುವ ವಂಚನೆ ಬಗ್ಗೆ ತಿಳಿಸಿದ್ದಾರೆ. ಸಾಲಬಾಧೆ ತಾಳದೇ ಕೃಷಿಕ ಆತ್ಮಹತ್ಯೆಸಿದ್ದಾಪುರ: ಸಾಲಬಾಧೆ ತಾಳದೇ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಅವರಗುಪ್ಪ ಸಮೀಪದ ಬಳಗುಳಿಯಲ್ಲಿ ಭಾನುವಾರ ನಡೆದಿದೆ.ಬಾಲಚಂದ್ರ ರಾಮ ಭಟ್ಟ(೬೯) ಎಂಬವರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತ. ಅವರು ಕೃಷಿ ಅಭಿವೃದ್ಧಿ ಕೆಲಸಕ್ಕೆ ಬಿದ್ರಕಾನ ಸೇ.ಸ. ಸಂಘದಲ್ಲಿ ₹೪ ಲಕ್ಷ ಹಾಗೂ ವಿವಿಧೆಡೆ ಕೈಗಡ ಸಾಲವನ್ನು ಮಾಡಿದ್ದರು. ಅದನ್ನು ತೀರಿಸಲಾಗದೇ ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಜೂ. ೧೫ರ ಮಧ್ಯಾಹ್ನದ ವೇಳೆ ಮನೆಯ ಸಮೀಪ ಬಾಲಚಂದ್ರ ರಾಮ ಭಟ್ಟ ಅವರು ವಿಷ ಸೇವಿಸಿದ್ದರು. ಕೂಡಲೇ ಅವರನ್ನು ಸಿದ್ದಾಪುರದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಜೂನ್ ೧೬ರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ.