ಅಕ್ಟೋಬರ್‌ನಲ್ಲಿ 800 ಕೆಪಿಎಸ್ ಶಾಲೆಗಳು ಆರಂಭ

KannadaprabhaNewsNetwork |  
Published : Sep 03, 2025, 01:00 AM IST
-----ಪೋಟೋ: 2ಎಸ್ಎಂಜಿಕೆಪಿ06ಶಿವಮೊಗ್ಗದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿದರು. | Kannada Prabha

ಸಾರಾಂಶ

ಅಕ್ಟೋಬರ್‌ನಲ್ಲಿ 800 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುವುದು. ಈ ಯೋಜನೆಗೆ ಶಿವಮೊಗ್ಗದಲ್ಲಿಯೇ ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಶಿವಮೊಗ್ಗ: ಅಕ್ಟೋಬರ್‌ನಲ್ಲಿ 800 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುವುದು. ಈ ಯೋಜನೆಗೆ ಶಿವಮೊಗ್ಗದಲ್ಲಿಯೇ ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ 800 ಕೆಪಿಎಸ್ ಶಾಲೆಗಳನ್ನು ತೆರೆಯಲಾಗುವುದು. ಇದರಲ್ಲಿ 500 ಶಾಲೆಗಳನ್ನು ಏಷ್ಯಾ ಡೆವಲಪ್‌ಮೆಂಟ್ ನೆರವಿನಿಂದ ಪ್ರಾರಂಭಿಸಲಾಗುತ್ತಿದೆ. ಕೆಕೆಆರ್‌ಎಲ್‌ನಿಂದ 200 ಶಾಲೆಗಳು, ಉಳಿದ 100 ಶಾಲೆಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.800 ಕೆಪಿಎಸ್ ಶಾಲೆಯಲ್ಲಿ ಉತ್ತರ ಕರ್ನಾಟಕಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಸರ್ಕಾರದ ಜೊತೆಗೆ ಎಸ್‌ಜಿಓಗಳು ಕೈ ಜೋಡಿಸಲಿವೆ. ಈ ಶಾಲೆಗಳನ್ನು ಮುಂಬರುವ ಅಕ್ಟೋಬರ್‌ನಲ್ಲಿ ಶಿವಮೊಗ್ಗದಿಂದಲೇ ಪ್ರಾರಂಭಿಸಲು ಸಿಎಂ ಅವರನ್ನು ಕರೆಸಲಾಗುತ್ತದೆ. ಇದರ ಜೊತೆಗೆ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗೂ ಚಾಲನೆ ನೀಡಲಾಗುತ್ತದೆ. ಶರಾವತಿ ಪಂಪ್ಡ್ ಸ್ಟೋರೇಜ್ ವಿಚಾರವನ್ನೂ ಸಿಎಂ ಮಾತನಾಡಲಿದ್ದಾರೆ ಎಂದರು.ಪ್ರಗತಿಪಥದ ಹೆಸರಿನಲ್ಲಿ ರಸ್ತೆ ಅಭಿವೃದ್ಧಿ:ಪ್ರಗತಿಪಥ ಯೋಜನೆಯಡಿ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ೫೦ ಕೋಟಿ ರು. ಪ್ರತಿ ಶಾಸಕರಿಗೆ ನೀಡಲಾಗಿದೆ. ಕಾಂಗ್ರೆಸ್ ಶಾಸಕರಿಗಷ್ಟೇ ಅಲ್ಲ, ಬಿಜೆಪಿ, ಜೆಡಿಎಸ್ ಶಾಸಕರುಗಳಿಗೂ ಅನುದಾನ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ. ಪ್ರಗತಿಪಥದಡಿ ೫೦ ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗುವುದು. ನಮ್ಮ ಜಿಲ್ಲೆಯಲ್ಲಿ ಮಳೆಯಿಂದ ರಸ್ತೆಗಳು ಹಾಳಾಗಿರುವ ಕಾರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.ಮಳೆ ಹಾನಿ ಕುರಿತ ವರದಿಗೆ ಸೂಚನೆ:ಜಿಲ್ಲೆಯಲ್ಲಿ ಮಳೆಯಿಂದ ಪ್ರವಾಹ ಬಾರದೇ ಇದ್ದರೂ ಅನೇಕ ಸಮಸ್ಯೆ ಸೃಷ್ಟಿಸಿದೆ. ಅಡಕೆ ಹಾಗೂ ಮೆಕ್ಕೆಜೋಳ ಬೆಳೆಗೆ ಹಾನಿಯಾಗಿದೆ. ೪೫ ಸಾವಿರ ಹೆಕ್ಟೇರ್ ಅಡಕೆಗೆ ಕೊಳೆ ರೋಗ ಬಂದಿದೆ. ಅಡಕೆ ಸಂಶೋಧನಾ ಕೇಂದ್ರವನ್ನು ಕೇಂದ್ರ ಸರ್ಕಾರ ಸ್ಥಾಪಿಸಬೇಕಿತ್ತು. ಕೊಳೆ ರೋಗದ ಕುರಿತು ತೋಟಗಾರಿಕಾ ಇಲಾಖೆ ಹಾಗೂ ಕೃಷಿ ವಿವಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಕೇಂದ್ರದವರು 1500 ಕೋಟಿ ರು. ಘೋಷಣೆ ಮಾಡಿರುವುದು ಯಾವುದಕ್ಕೂ ಸಾಕಾಗುವುದಿಲ್ಲ. ರೈತರ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶ್ರಮಿಸಬೇಕಿದೆ. ಹಿಂದೆ ಬರ ಬಂದಾಗ ನಾವು ಸುಪ್ರೀಂ ಕೋರ್ಟ್‌ಗೆ ಹೋಗಿ ಹಣ ಪಡೆಯಬೇಕಾಗಿತ್ತು. ಮುಂದೆ ಅದೇ ದಾರಿ ಹಿಡಿಯಬೇಕೇನೋ ಗೊತ್ತಿಲ್ಲ ಎಂದು ಹೇಳಿದರು.ಸಂಸದ ರಾಘವೇಂದ್ರ ವಿರುದ್ಧ ಕಿಡಿ:ಸಂಸದರು ಖೇಲೂ ಇಂಡಿಯಾ ಅಂತ ಹಾಕಿಕೊಂಡಿದ್ದಾರೆ. ಕೇಂದ್ರ ಸರ್ಕಾರದವರು ಬೇಟಿ ಬಚಾವೋ ಬೇಟಿ ಪಡಾವೋ ಎಂಬ ಯೋಜನೆ ಮಾಡಿದ್ದಾರೆ. ಅವರು ಜನರನ್ನು ಮಂಗ ಮಾಡುತ್ತಿದ್ದಾರೆ. ಭಾವನಾತ್ಮಕವಾಗಿ ಮಾತನಾಡುತ್ತಿದ್ದಾರೆ. ಇವರು ಕೊಳೆ ರೋಗದ ಬಗ್ಗೆ ಸಂಸತ್‌ನಲ್ಲಿ ಮಾತನಾಡುತ್ತಾರೆಯೇ ಎಂದು ಪ್ರಶ್ನೆ ಮಾಡಿದರು.

ಇವರು ಅರಣ್ಯ ಇಲಾಖೆಯ ಬಗ್ಗೆ ಮಾತನಾಡಲ್ಲ. ರಾಜ್ಯದ ತೆರಿಗೆ ಬಗ್ಗೆ ಮಾತನಾಡುವುದಿಲ್ಲ. ಸಂಸದರು ದೆಹಲಿಗೆ ಹೋಗಿ ಮಂತ್ರಿಗಳ ಬಳಿ ಹೋಗಿ ಫೋಟೋ ತೆಗೆಸಿಕೊಂಡು ಬರುತ್ತಿದ್ದಾರೆ. ರಾಹುಲ್ ಗಾಂಧಿ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಪಾದಯಾತ್ರೆ ನಡೆಸಿದ್ದರು. ರಾಹುಲ್ ಗಾಂಧಿ ಪರ ಈಗ ಜನಸಾಮಾನ್ಯರು ಇದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯೆ ಬಲ್ಕಿಷ್ ಬಾನು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಕಲಗೋಡು ರತ್ನಾಕರ್, ಜಿ.ಡಿ ಮಂಜುನಾಥ್, ರಮೇಶ್ ಶಂಕರಘಟ್ಟ ಮತ್ತಿತರರು ಇದ್ದರು.

ಎಸ್‌ಐಟಿ ವರದಿ ಬಂದಿಲ್ಲ,

ಆಗ್ಲೇ ಬಿಜೆಪಿಯಿಂದ ಯಾತ್ರೆ

ಬಿಜೆಪಿಯವರು ಧರ್ಮಸ್ಥಳದ ವಿಚಾರದಲ್ಲಿ ಆತುರವಾಗಿ ಮಾತನಾಡುತ್ತಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿಯವರು ಪ್ರಜ್ವಲ್ ವಿಚಾರದಲ್ಲಿ ಯಾಕೆ ಸಂತ್ರಸ್ತರ ಮನೆಗೆ ಹೋಗುತ್ತಿಲ್ಲ? ಎಂದು ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದರು.

ಇಂದು ಧರ್ಮ ಧರ್ಮ ಎಂದವರು, ನಾಳೆ ಧರ್ಮವನ್ನೇ ಹಾಳು ಮಾಡುತ್ತಾರೆ. ಹಿಂದೆ ಟ್ರಂಪ್ ಅಂತ ಹೋದವರು ಈಗ ಚೀನಾದ ಪರವಾಗಿ ಹೋಗುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿಯವರು ಮತ ಕಳವು ಮೂಲಕ ಪ್ರಜಾಪ್ರಭುತ್ವವನ್ನು ಕೊಲೆ ಮಾಡುತ್ತಿದ್ದಾರೆ. ಮತ ಕಳವು ಕುರಿತು ನಾವು ಗ್ರಾಮ ಪಂಚಾಯತ್ ಮಟ್ಟಕ್ಕೂ ಕರೆದುಕೊಂಡು ಹೋಗುತ್ತೇವೆ ಎಂದರು.

ನನ್ನ ಇಲಾಖೆಯಲ್ಲಿ ಇಂದಿನ ಶಿಕ್ಷಕರ ಕೊರತೆಗೆ ಕಾರಣ ನಿಮ್ಮದೇ ಬಿಜೆಪಿ ಸರ್ಕಾರ. ನಿಮ್ಮ ಬಿಜೆಪಿಯಲ್ಲಿ ಎಷ್ಟು ಜನರನ್ನು ನೇಮಕ ಮಾಡಿಕೊಂಡಿದ್ದೀರಿ ಎಂಬುದನ್ನು ತಿಳಿಸಿ. ಬಿಜೆಪಿಯಲ್ಲಿ ೪,೫೦೦ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದಾರಷ್ಟೇ ಎಂದು ಹೇಳಿದರು.

ಕೇಂದ್ರದ ಪಠ್ಯಕ್ರಮದಲ್ಲಿ ಆಪರೇಷನ್ ಸಿಂದೂರ್ ಬಗ್ಗೆ ಪಾಠ ಇಟ್ಟಿದ್ದಾರೆ. ಅದನ್ನು ಬಿಟ್ಟು ಸಿಂದೂರ ಘಟನೆ ಯಾಕೆ ನಡೆಯಿತು ಎಂದು ತಿಳಿಸಬೇಕಿದೆ ಎಂದರು.

ಶಿಕ್ಷಕರು ರಜೆ ದಿನದಲ್ಲಿ ಜನಗಣತಿಯ ಸರ್ವೆಗೆ ಹೋಗುತ್ತಾರೆ. ತರಗತಿ ನಡೆಯುವಾಗ ಅವರು ಸರ್ವೆಗೆ ಹೋಗಲ್ಲ ಎಂದು ಅವರು, ಭೋವಿ ನಿಗಮದ ಅಧ್ಯಕ್ಷರು ರಾಜೀನಾಮೆ ನೀಡುವ ಕುರಿತು ಸಿಎಂ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಾನು ಅಧ್ಯಕ್ಷ ರವಿ ಅವರ ಜೊತೆ ಮಾತನಾಡಿಲ್ಲ ಎಂದು ಹೇಳಿದರು.

PREV

Recommended Stories

ಉತ್ಪನ್ನ ಗುಣಮಟ್ಟ ಹೆಚ್ಚಿಸಿ ರಫ್ತು ಏರಿಸಿ: ರೆಡ್ಡಿ
ಪ್ಯಾರಾ ಥ್ರೋ ಬಾಲ್: ರಾಜ್ಯ ಮಹಿಳಾ ತಂಡಕ್ಕೆ ಟ್ರೋಫಿ