ರಾಮನಗರ: 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ ಅನುಷ್ಠಾನದ ನಡುವೆಯೂ ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ 84 ಮಕ್ಕಳು ಶಾಲೆಯಿಂದ ಹೊರಗುಳಿದಿರುವುದನ್ನು ಗುರುತಿಸಲಾಗಿದೆ. ಈ ಎಲ್ಲ ಮಕ್ಕಳನ್ನು ಶಾಲೆಗೆ ಕರೆತರುವ ಪ್ರಯತ್ನ ಶಿಕ್ಷಣ ಇಲಾಖೆ ಕೈಗೊಂಡಿದೆ.
ಶಾಲೆಯ ಮುಖ್ಯ ಶಿಕ್ಷಕರ ಅನುಮತಿ ಇಲ್ಲದೆ ಸತತವಾಗಿ 7 ದಿನಗಳ ಕಾಲ ಗೈರು ಹಾಜರಾದ ಮಕ್ಕಳನ್ನು ಶಾಲೆಯಿಂದ ಹೊರಗುಳಿದ ಮಕ್ಕಳು ಎಂದು ಪರಿಗಣಿಸಲಾಗುತ್ತಿದೆ. ಕಳೆದ ವರ್ಷದ ಶೈಕ್ಷಣಿಕ ಸಾಲಿನಲ್ಲಿ ಕಲಿಯುತ್ತಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಈವರೆಗೆ ಶಾಲೆಗೆ ದಾಖಲಾಗದ ಹಾಗೂ ನಿರಂತರವಾಗಿ 7 ದಿನ ಗೈರಾದ ಮಕ್ಕಳ ಗುರುತಿಸುವ ಹಾಗೂ ಸಮೀಕ್ಷಾ ಕಾರ್ಯ ನಡೆಸಲಾಗಿತ್ತು. ಈ ವೇಳೆ 200 ಮಕ್ಕಳು ಶಾಲೆಯಿಂದ ಹೊರುಗಳಿದಿರುವುದು ದೃಢಪಟ್ಟಿತು. ಅದರಲ್ಲಿ 116 ಮಕ್ಕಳನ್ನು ಮತ್ತೆ ಶಾಲೆಗೆ ಕರೆತರಲಾಗಿದ್ದರೆ, ಉಳಿದ 84 ಮಕ್ಕಳಿಗಾಗಿ ಹುಡುಕಾಟ ಮುಂದುವರೆದಿದೆ.ಶಾಲೆಗೆ ತೆರಳಿ ಶಿಕ್ಷಣ ಕಲಿಯಬೇಕಾದ ಮಕ್ಕಳು ಶಾಲೆ ದೂರವಿರುವುದು, ಮನೆಗೆಲಸಕ್ಕೆ ಉಳಿಸಿಕೊಳ್ಳುವುದು, ಶಿಕ್ಷಕರ ಭಯ, ಶಾಲಾ ಪರಿಸರ, ಅಲೆಮಾರಿ ಜೀವನ, ಮಕ್ಕಳ, ಪೋಷಕರ ನಿರಾಸಕ್ತಿ, ಹೆಣ್ಣು ಮಗುವಾಗಿದ್ದರೆ ಋತುಮತಿಯಾಗಿರುವುದು, ತೀವ್ರ ಅಂಗವಿಕಲತೆ, ಕೌಟುಂಬಿಕ ಸಮಸ್ಯೆಗಳ ಕಾರಣಗಳಿಂದ ಶಾಲಾ ಹಂತದ ಕಲಿಕೆಯಿಂದ ವಂಚಿತರಾಗುತ್ತಿದ್ದಾರೆ.
ಅಲ್ಲದೆ, ಶಾಲೆಯಿಂದ ಹೊರ ಗುಳಿಯಲು ಕೆಲ ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆ ಇಲ್ಲದಿರುವುದು ಕಾರಣ ಎಂಬ ಸಂಗತಿಯೂ ಸಮೀಕ್ಷೆ ವೇಳೆ ಬೆಳಕಿಗೆ ಬಂದಿದೆ. ಹೀಗಾಗಿ ಅಂತಹ ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಲು ಶಿಕ್ಷಣ ಇಲಾಖೆ ಕ್ರಮ ವಹಿಸಿದೆ.ಶೈಕ್ಷಣಿಕ ವರ್ಷದ ಆರಂಭದಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆ ಆರಂಭಿಸಿದ ಶಿಕ್ಷಕರು , ಕಳೆದ ವರ್ಷ ಓದುತ್ತಿದ್ದು ಈ ವರ್ಷ ಮುಂದಿನ ತರಗತಿಗೆ ಪ್ರವೇಶ ಪಡೆಯದಿರುವ ಮಕ್ಕಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿದ್ದಾರೆ. ಮಕ್ಕಳ ಮನೆಗಳಿಗೆ ಭೇಟಿ ನೀಡಿ ಮರಳಿ ಶಾಲೆಗೆ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ. ಪೋಷಕರು ಮತ್ತು ಮಕ್ಕಳ ಮನವೊಲಿಸಿ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಮುಖ್ಯವಾಹಿನಿಗೆ ಕರೆತರಲು ಕ್ರಮ ವಹಿಸಿದ್ದಾರೆ.
ಗಂಡು ಮಕ್ಕಳೇ ಹೆಚ್ಚು :ಶಾಲೆಯಿಂದ ಹೊರಗುಳಿದ 84 ಮಕ್ಕಳಲ್ಲಿ 57 ಗಂಡು ಮಕ್ಕಳು, 27 ಮಂದಿ ಹೆಣ್ಣು ಮಕ್ಕಳು ಇದ್ದಾರೆ. ಹೆಣ್ಣು ಮಕ್ಕಳಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸುತ್ತಿರುವ ಹಿನ್ನೆಲೆಯಲ್ಲಿ ಶಾಲೆಗೆ ಅನಧಿಕೃತವಾಗಿ ಗೈರಾಗುವ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ. ಆದರೆ, ಗಂಡು ಮಕ್ಕಳು ಶಿಕ್ಷಣದ ಬಗೆಗಿನ ನಿರಾಸಕ್ತಿ ಕೆಟ್ಟವರ ಸಹವಾಸ, ಜಮೀನಿನ ಕೆಲಸಕ್ಕೆ ಹೋಗುವುದು... ಹೀಗೆ ನಾನಾ ಕಾರಣಗಳಿಂದ ಶಾಲೆಯಿಂದ ದೂರವಾಗುತ್ತಿದ್ದಾರೆ.
ಮಕ್ಕಳ ಸಮೀಕ್ಷೆ ಹೇಗೆ? :ಪ್ರತಿ ಶಾಲೆಯಲ್ಲಿರುವ ಹಾಜರಾತಿ ಪುಸ್ತಕದ ಆಧಾರದ ಮೇಲೆ ಕಳೆದ ವರ್ಷ ಒಂದನೇ ತರಗತಿಯಲ್ಲಿರುವ ಎಲ್ಲ ಮಕ್ಕಳು ಪ್ರಸಕ್ತ ವರ್ಷದ ಎರಡನೇ ತರಗತಿಯಲ್ಲಿರಬೇಕು. ಹೀಗೆ ಎಲ್ಲ ತರಗತಿಗಳಿಂದ ಮುಂದಿನ ತರಗತಿಗೆ ಹಾಜರಾಗದಿದ್ದಲ್ಲಿ ಅಂತಹ ವಿದ್ಯಾರ್ಥಿ ಶಾಲೆ ಬಿಟ್ಟ ಮಗುವಾಗಿರುತ್ತದೆ. ವರ್ಗಾವಣೆ ಯಾಗಿದ್ದಲ್ಲಿ ಯಾವ ಶಾಲೆಯಲ್ಲಿ ಮಗು ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಮೊದಲ ಹಂತದಲ್ಲಿ ಶಾಲೆ ಬಿಟ್ಟಿದ್ದನ್ನು ಗುರುತಿಸಲಾಗುವುದು. ಎರಡನೆಯ ಹಂತದಲ್ಲಿ ಶಾಲೆಯಿಂದ ಹೊರಗುಳಿದ ವರು ಎಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚುವುದು. ಅಂತಿಮ ಹಂತದಲ್ಲಿ ಹೊರಗುಳಿದ ಮಕ್ಕಳ ಪಟ್ಟಿ ಪ್ರಕಟಿಸುವುದಾಗಿದೆ. ಇದೇ ಸಂದರ್ಭದಲ್ಲಿ ಈ ಎಲ್ಲ ಮಕ್ಕಳನ್ನು ಶಾಲೆಗೆ ಕರೆತರುವ ಪ್ರಯತ್ನ ಏಕ ಕಾಲದಲ್ಲಿ ಆರಂಭಗೊಳ್ಳುತ್ತದೆ.ಸಮೀಕ್ಷಾ ಕಾರ್ಯಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ, ಕಾರ್ಮಿಕ, ಪೊಲೀಸ್, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಗಳು ಸಹಕಾರ ನೀಡಿವೆ. ಕೊಳಗೇರಿಗಳು, ರೈಲು ನಿಲ್ದಾಣ, ಪೂಜಾ ಸ್ಥಳಗಳು, ಹೋಟೆಲ್, ಚಿತ್ರಮಂದಿರಗಳು, ಬೃಹತ್ ರಸ್ತೆ ಕಾಮಗಾರಿ ನಡೆಯುವ ಸ್ಥಳಗಳು, ಗುಡ್ಡಗಾಡು ಪ್ರದೇಶ, ಅಲೆಮಾರಿ ಕ್ಯಾಂಪ್‌ಗಳು, ಗ್ಯಾರೇಜ್‌ಗಳಲ್ಲಿ ಇಂತಹ ಮಕ್ಕಳು ಇರುವ ಸಾಧ್ಯತೆಗಳು ಹೆಚ್ಚಾಗಿದ್ದು , ಈ ಪ್ರದೇಶಗಳಲ್ಲಿ ಸಮೀಕ್ಷಾ ಕಾರ್ಯ ನಡೆಸಲಾಗಿದೆ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.ಕೋಟ್...........
ಈ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ 84 ಮಕ್ಕಳನ್ನು ಗುರುತಿಸಲಾಗಿದೆ. ಅವರನ್ನು ಮತ್ತೆ ಶಾಲೆಗೆ ಕರೆತರುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಕಳೆದ ವರ್ಷ ಶಾಲೆ ಬಿಟ್ಟಿದ್ದ ... ಮಕ್ಕಳನ್ನು ಮರಳಿ ಶಾಲೆಗೆ ಕರೆತರಲಾಗಿದೆ.- ಬಸವರಾಜೇಗೌಡ, ಉಪನಿರ್ದೇಶಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಾಮನಗರ(ಮಕ್ಕಳದ್ದು ಯಾವುದಾದರೂ ಸಾಂದರ್ಭಿಕ ಚಿತ್ರ ಬಳಸಿ)