ಕಾವೇರಿ ನದಿಗೆ 85 ಸಾವಿರ ಕ್ಯುಸೆಕ್ ನೀರು ಬಿಡುಗಡೆ

KannadaprabhaNewsNetwork |  
Published : Jul 28, 2025, 12:30 AM IST
27ಕೆಎಂಎನ್ ಡಿ17,18 | Kannada Prabha

ಸಾರಾಂಶ

ಕೃಷ್ಣರಾಜಸಾಗರದಿಂದ 85 ಸಾವಿರಕ್ಕಿಂತ ಹೆಚ್ಚಿನ ಕ್ಯುಸೆಕ್ ನೀರನ್ನು ಕಾವೇರಿ ನದಿಗೆ ಬಿಡುತ್ತಿರುವುದರಿಂದ ನದಿ ತೀರ ಪ್ರದೇಶಗಳಿಗೆ ಸಾರ್ವಜನಿಕರು, ಪ್ರವಾಸಿಗರು ತೆರಳದಂತೆ ಸೂಚಿಸಲಾಗಿದೆ. ಯಾವುದೇ ಕ್ಷಣದಲ್ಲಾದರೂ ಮತ್ತಷ್ಟು ಹೆಚ್ಚಿನ ನೀರನ್ನು ಕಾವೇರಿ ನದಿಗೆ ಬಿಡುವ ಸಾಧ್ಯತೆ ಇರುವುದರಿಂದ ಕಾವೇರಿ ನದಿ ತೀರದ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಕೂಡಲೇ ಸೂಕ್ತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕೃಷ್ಣರಾಜಸಾಗರದಿಂದ 85 ಸಾವಿರಕ್ಕಿಂತ ಹೆಚ್ಚಿನ ಕ್ಯುಸೆಕ್ ನೀರನ್ನು ಕಾವೇರಿ ನದಿಗೆ ಬಿಡುತ್ತಿರುವುದರಿಂದ ನದಿ ತೀರ ಪ್ರದೇಶಗಳಿಗೆ ಸಾರ್ವಜನಿಕರು, ಪ್ರವಾಸಿಗರು ತೆರಳದಂತೆ ಸೂಚಿಸಲಾಗಿದೆ.

ಯಾವುದೇ ಕ್ಷಣದಲ್ಲಾದರೂ ಮತ್ತಷ್ಟು ಹೆಚ್ಚಿನ ನೀರನ್ನು ಕಾವೇರಿ ನದಿಗೆ ಬಿಡುವ ಸಾಧ್ಯತೆ ಇರುವುದರಿಂದ ಕಾವೇರಿ ನದಿ ತೀರದ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಕೂಡಲೇ ಸೂಕ್ತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ ನೀಡಿದ್ದಾರೆ.

ಕಾವೇರಿ ನದಿ ಪ್ರವಾಹದಿಂದ ಪಟ್ಟಣದ ನದಿ ತೀರ ಪ್ರದೇಶಗಳಾದ ಪಶ್ಚಿಮವಾಹಿನಿ, ಪಟ್ಟಣದ ಸ್ನಾನಘಟ್ಟ, ಜಿಬಿ ಹೊಳೆ, ದೊಡ್ಡ ಗೋಸಾಯಿ ಘಾಟ್, ಕಾವೇರಿ ಸಂಗಮದಲ್ಲಿ ಅಸ್ಥಿ ವಿಸರ್ಜನೆ ಕಾರ್ಯ ನಡೆದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

ಕಾವೇರಿ ನದಿ ತೀರದಲ್ಲಿ ನೀರಿನ ರಭಸ ಹೆಚ್ಚಾಗುವ ಹಿನ್ನೆಲೆಯಲ್ಲಿ ನದಿಗಿಳಿದು ಅಸ್ಥಿ ವಿಸರ್ಜನೆ ಪೂಜೆಯನ್ನು ಸಲ್ಲಿಸಲು ನದಿ ತೀರ ಪ್ರದೇಶಕ್ಕೆ ತೆರಳದಂತೆ ಜಿಲ್ಲಾ ಮತ್ತು ತಾಲೂಕು ಆಡಳಿತ ಸೂಚನೆ ನೀಡಿದೆ.

ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಜಿಲ್ಲಾಧಿಕಾರಿಗಳು, ಮಡಿಕೇರಿ, ಭಾಗಮಂಡಲ ಸೇರಿದಂತೆ ಕಾವೇರಿ ಜಲಾಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಕೆಆರ್‌ಎಸ್ ಜಲಾಶಯ ಈಗಾಗಲೇ ಸಂಪೂರ್ಣ ಭರ್ತಿಯಾಗಿದೆ. ಅಣೆಕಟ್ಟೆಯ ಭದ್ರತೆಯ ದೃಷ್ಟಿಯಿಂದ ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣವನ್ನು ನೋಡಿಕೊಂಡು ಸುಮಾರು 56 ಸಾವಿರ ಕ್ಕೂ ಹೆಚ್ಚಿನ ಕ್ಯುಸೆಕ್ ನೀರನ್ನು ಕಾವೇರಿ ನದಿಗೆ ಹರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಯಾವುದೇ ಕ್ಷಣದಲ್ಲಾದರೂ ಮತ್ತಷ್ಟು ಅಧಿಕ ನೀರನ್ನು ಹೊರ ಬಿಡುವ ಸಾಧ್ಯತೆ ಇರುವುದರಿಂದ ನದಿಗೆ ತೆರಳುವ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳ ಅಳವಡಿಸಿ ಪೊಲೀಸರನ್ನು ನಿಯೋಜಿಸಲಾಗಿದೆ.

ಪಟ್ಟಣದ ಶ್ರೀನಿಮಿಷಾಂಬ ದೇವಾಲಯ ಇತರ ನದಿ ತೀರದ ಪ್ರವಾಸಿ ತಾಣಗಳ ಬಳಿ ಪ್ರವಾಸೋದ್ಯಮ ಇಲಾಖೆಯಿಂದ ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳನ್ನು ಆಯಾ ಪ್ರದೇಶಗಳಲ್ಲಿ ಹಾಕುವ ಮೂಲಕ ಪ್ರವಾಸಿಗರು, ಸಾರ್ವಜನಿಕರು ನದಿಗೆ ಇಳಿಯದಂತೆ ಎಚ್ಚರಿಕೆ ವಹಿಸಲಾಗಿದೆ.

ಗ್ರಾಮಗಳ ಬಳಿ ಇರುವ ಕಾವೇರಿ ತೀರದ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ನಾಗರೀಕರು ನದಿ ನೀರು ನೋಡಿಕೊಂಡು ಕೂಡಲೇ ಸೂಕ್ತ ಸ್ಥಳಗಳಿಗೆ ತೆರಳುವಂತೆ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಲು ತಾಲೂಕು ಆಡಳಿತ ಮುಂದಾಗಿದೆ.

ಕಾವೇರಿ ನದಿ ತೀರ ಪ್ರದೇಶದ ಪ್ರವಾಸಿ ತಾಣಗಳಾದ ಬಲಮುರಿ, ಎಡಮುರಿ, ಬೋರೇದೇವರ ದೇವಾಲಯ, ಪಟ್ಟಣದ ಪ್ರವಾಸಿ ಮಂದಿರ, ಚಂದ್ರವನ ಆಶ್ರಮದ ಬಳಿಯ ಬಂಗಾರದೊಡ್ಡಿ ನಾಲೆ, ಅಣೆಕಟ್ಟು, ಪಟ್ಟಣ ಪುರಸಭೆ, ತಾಲೂಕಿನ ವಿವಿಧ ಗ್ರಾಪಂ ಮೂಲಕ ಸಾರ್ವಜನಿಕರಿಗೆ ನದಿ ತೀರಕ್ಕೆ ತೆರಳದಂತೆ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸಿ ಅಲ್ಲಲ್ಲಿ ಪ್ರವಾಹದ ಮುನ್ಸೂಚನೆಯ ನಾಮಫಲಕ ಅಳವಡಿಸಿ ಮುಂಜಾಗ್ರತಾ ಕ್ರಮವಾಗಿ ಕಾವೇರಿ ನದಿ ತೀರದ ತಗ್ಗು ಪ್ರದೇಶಗಳಲ್ಲಿ ಬ್ಯಾರಿಗೇಡ್‌ ಅಳವಡಿಸಿ ಅನಾವಶ್ಯಕವಾಗಿ ನೀರಿಗಿಳಿಯದಂತೆ ಬೀಗಿ ಭದ್ರತೆ ಒದಗಿಸಲಾಗಿದೆ.

- ಚೇತನಾ ತಹಸೀಲ್ದಾರ್ಕೆಆರ್‌ಎಸ್ ಜಲಾಶಯ ನೀರಿನ ಮಟ್ಟದ

ಗರಿಷ್ಠ ಮಟ್ಟ 124.80 ಅಡಿ

ಇಂದಿನ ಮಟ್ಟ 123.80 ಅಡಿ

ಒಳಹರಿವು - 52,856 ಕ್ಯುಸೆಕ್

ಹೊರ ಹರಿವು - 56,474ಕ್ಯುಸೆಕ್

ಸಂಗ್ರಹ - 48.062 ಟಿಎಂಸಿ

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್