ಮೂರೇ ವರ್ಷದಲ್ಲಿ ೮೫.೮೦ ಕೋಟಿ ರು. ದಂಡ: ಗೃಹ ಸಚಿವ ಡಾ.ಜಿ.ಪರಮೇಶ್ವರ್

KannadaprabhaNewsNetwork |  
Published : Dec 13, 2024, 12:49 AM IST
೧೨ಕೆಎಂಎನ್‌ಡಿ-೪ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಳವಡಿಸಲಾಗಿರುವ ಐಟಿಎಂಎಸ್ ಕ್ಯಾಮರಾ. | Kannada Prabha

ಸಾರಾಂಶ

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಆರಂಭವಾದ ಮೂರು ವರ್ಷಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಚಾಲಕರಿಗೆ ಐಟಿಎಂಎಸ್ (ಇಂಟೆಲಿಜೆನ್ಸ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್) ಮೂಲಕ ೮೫,೮೦,೬೭,೦೦೦ ರು. ದಂಡ ವಿಧಿಸಲಾಗಿದ್ದು, ಅದರಲ್ಲಿ ಸಂಗ್ರಹವಾಗಿರುವ ಮೊತ್ತ ಕೇವಲ ೪,೯೦,೭೮,೫೦೦ ರು. ಮಾತ್ರ.

ಕನ್ನಡಪ್ರಭ ವಾರ್ತೆ ಮಂಡ್ಯ

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಆರಂಭವಾದ ಮೂರು ವರ್ಷಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಚಾಲಕರಿಗೆ ಐಟಿಎಂಎಸ್ (ಇಂಟೆಲಿಜೆನ್ಸ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್) ಮೂಲಕ ೮೫,೮೦,೬೭,೦೦೦ ರು. ದಂಡ ವಿಧಿಸಲಾಗಿದ್ದು, ಅದರಲ್ಲಿ ಸಂಗ್ರಹವಾಗಿರುವ ಮೊತ್ತ ಕೇವಲ ೪,೯೦,೭೮,೫೦೦ ರು. ಮಾತ್ರ.

೨೦೨೨-೨೩ನೇ ಸಾಲಿನಲ್ಲಿ ೪,೭೪,೫೫೦ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಸೀಟ್‌ಬೆಲ್ಟ್ ಹಾಕದ ೨,೯೫,೪೧೩, ಓವರ್ ಸ್ಪೀಡ್‌ಗೆ ೪೯,೫೮೪, ಲೈನ್ ಶಿಸ್ತು ಉಲ್ಲಂಘನೆಗೆ ೪೯,೬೫೨, ಚಾಲಕ ಮೊಬೈಲ್ ಫೋನ್ ಬಳಸಿದ್ದಕ್ಕೆ ೮,೫೯೮ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ೩೧,೫೭,೯೬,೫೦೦ ರು. ದಂಡ ವಿಧಿಸಲಾಗಿದ್ದು, ಇದರಲ್ಲಿ ೧,೯೮,೭೮,೫೦೦ ರು. ದಂಡ ಸಂಗ್ರಹಿಸಿದ್ದು, ಇನ್ನೂ ೨೯,೫೯,೧೭,೦೦೦ ರು. ಬಾಕಿ ದಂಡ ಪಾವತಿಯಾಗಬೇಕಿದೆ.

೨೦೨೩-೨೪ನೇ ಸಾಲಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ೪,೫೫,೪೫೮ ಪ್ರಕರಣಗಳು ದಾಖಲಾಗಿವೆ. ಸೀಟ್‌ಬೆಲ್ಟ್ ಧರಿಸದ ೨,೧೨,೪೬೧, ಓವರ್ ಸ್ಪೀಡ್‌ಗೆ ೧,೯೬,೨೩೭, ಲೈನ್ ಶಿಸ್ತು ಉಲ್ಲಂಘನೆಗೆ ೩೬,೦೧೬ ಹಾಗೂ ಚಾಲಕ ಮೊಬೈಲ್ ಹಿಡಿದು ಚಾಲನೆ ಮಾಡಿದ್ದಕ್ಕೆ ೮,೭೭೭ಪ್ರಕರಣಗಳು ದಾಖಲಾಗಿವೆ. ಈ ನಿಯಮ ಉಲ್ಲಂಘನೆಗೆ ೩೪,೨೮,೬೫,೦೦೦ ದಂಡ ವಿಧಿಸಿದ್ದು, ೧,೯೮,೩೬,೫೦೦ ರು. ಮಾತ್ರ ಸಂಗ್ರಹಿಸಲಾಗಿದೆ. ಇನ್ನೂ ೩೨, ೩೧,೨೮,೫೦೦ ರು. ದಂಡ ಬಾಕಿ ವಸೂಲಾಗಬೇಕಿದೆ.

೨೦೨೪-೨೫ನೇ ಸಾಲಿನ ನವೆಂಬರ್ ಅಂತ್ಯದವರೆಗೆ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ವಿರುದ್ಧ ೪,೧೧,೯೩೨ ಪ್ರಕರಣ ದಾಖಲಿಸಲಾಗಿದೆ. ಸೀಟ್ ಲ್ಟ್ ಧರಿಸದಿರುವುದಕ್ಕೆ ೧,೯೧,೪೩೭, ಓವರ್ ಸ್ಪೀಡ್‌ಗೆ ೨೯,೦೦೬, ಲೈನ್ ಶಿಸ್ತು ಕಾಪಾಡದಿರುವುದಕ್ಕೆ ೪೨,೬೭೦, ವಾಹನ ಚಾಲನೆ ಮಾಡುವಾಗ ಚಾಲಕ ಮೊಬೈಲ್‌ನಲ್ಲಿ ಮಾತನಾಡಿದ್ದಕ್ಕೆ ಸಂಬಂಧಿಸಿದಂತೆ ೪,೧೧,೯೩೨ ಪ್ರಕರಣಗಳು ದಾಖಲಾಗಿವೆ. ಈ ನಿಯಮ ಉಲ್ಲಂಘನೆಗೆ ೨೪,೮೩,೮೪,೦೦೦ ರು. ದಂಡ ವಿಧಿಸಿದ್ದು, ಅದರಿಂದ ಬಂದ ಹಣ ೯೩,೬೨,೫೦೦ ರು. ಇನ್ನೂ ೨೩,೯೦,೨೧,೫೦೦ ರು. ಬಾಕಿ ದಂಡ ವಸೂಲಿಯಾಗಬೇಕಿದೆ.

ಐಟಿಎಂಎಸ್ ಕ್ಯಾಮೆರಾಗಳಿಂದ ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸಿದಲ್ಲಿ ಅಂತಹ ವಾಹನಗಳನ್ನು ಪತ್ತೆಹಚ್ಚಿ ಸ್ವಯಂಚಾಲಿತ ಭಾವಚಿತ್ರಗಳನ್ನು ತೆಗೆದು ವಾಹನಗಳ ನೋಂದಣಿ ಸಂಖ್ಯೆಯನ್ನು ಆಧರಿಸಿ ವಾಹನ ಮಾಲೀಕರ ಮೊಬೈಲ್‌ಗೆ ಕೂಡಲೇ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದ ಬಗ್ಗೆ ಮತ್ತು ಪ್ರಕರಣಕ್ಕೆ ಪಾವತಿಸಬೇಕಾದ ದಂಡದ ಬಗ್ಗೆ ಕೂಡಲೇ ಎಸ್‌ಎಂಎಸ್ ಸಂದೇಶ ರವಾನಿಸುವ ವಿಶೇಷತೆಯನ್ನು ಈ ಕ್ಯಾಮೆರಾಗಳು ಒಳಗೊಂಡಿವೆ.

ಹೆದ್ದಾರಿಯ ೧೨ ಕಡೆಗಳಲ್ಲಿ ಐಟಿಎಂಎಸ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ರಾಮನಗರ-೫, ಮಂಡ್ಯ-೫, ಮೈಸೂರಿನಲ್ಲಿ ೨ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದರೆ, ಐಟಿಎಂಎಸ್ ಕ್ಯಾಮೆರಾಗಳ ಕಾರ್ಯನಿರ್ವಹಣೆಯ ಬಗ್ಗೆಯೂ ಚಾಲಕರಿಂದ ದೂರುಗಳು ಕೇಳಿಬರುತ್ತಿವೆ. ಸೀಟ್‌ಬೆಲ್ಟ್ ಧರಿಸಿದ್ದರೂ ಹಾಗೂ ವಾಹನ ಚಾಲನೆ ಸಮಯದಲ್ಲಿ ಮೊಬೈಲ್ ಬಳಸದಿದ್ದರೂ ದಂಡ ವಿಧಿಸಲಾಗುತ್ತಿರುವ ಬಗ್ಗೆ ದೂರುಗಳು ವ್ಯಕ್ತವಾಗಿದ್ದು, ಆ ದೂರುಗಳನ್ನು ಪರಿಗಣಿಸಿ ಸಂಬಂಧಪಟ್ಟ ವಾಹನ ಚಾಲಕರಿಂದ ದೂರುಗಳನ್ನು ಪರಿಶೀಲಿಸಿ ಕ್ರಮ ಜರುಗಿಸಲಾಗುತ್ತಿದೆ ಎಂದು ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡರ ಪ್ರಶ್ನೆಗೆ ಉತ್ತರಿಸಿದ್ದಾರೆ.ಹೆದ್ದಾರಿ ದರೋಡೆ: ೨೦ ಪ್ರಕರಣ ಬೇಧಿಸಿದ ಪೊಲೀಸರು

ಕನ್ನಡಪ್ರಭ ವಾರ್ತೆ ಮಂಡ್ಯ

ಬೆಂಗಳೂರು-ಮೈಸೂರು ನಡುವಿನ ರಾಷ್ಟ್ರೀಯ ಹೆದ್ದಾರಿ-೨೭೫ ಮತ್ತು ಸರ್ವೀಸ್ ರಸ್ತೆಗಳಲ್ಲಿ ಪ್ರಯಾಣಿಕರನ್ನು ತಡೆದು ಸುಲಿಗೆ, ದರೋಡೆ ನಡೆಸಿರುವ ಒಟ್ಟು ೨೬ ಪ್ರಕರಣಗಳ ಪೈಕಿ ೨೦ ಪ್ರಕರಣಗಳನ್ನು ಬೇಧಿಸಲಾಗಿದ್ದು, ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡಲಾಗಿದೆ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.

ಕಾಂಗ್ರೆಸ್ ಶಾಸಕ ಮಧು ಜಿ.ಮಾದೇಗೌಡರು, ರಾಷ್ಟ್ರೀಯ ಹೆದ್ದಾರಿ-೨೭೫ರಲ್ಲಿ ಪ್ರಯಾಣಿಕರನ್ನು ತಡೆದು ಸುಲಿಗೆ, ದರೋಡೆ ನಡೆಸುತ್ತಿರುವುದರಿಂದ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ಆಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ವಿಧಾನ ಪರಿಷತ್ತಿನಲ್ಲಿ ಗುರುವಾರ ಲಿಖಿತ ಉತ್ತರವನ್ನು ಸಚಿವರು ನೀಡಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ೧೪ ಮತ್ತು ರಾಮನಗರ ಜಿಲ್ಲೆಯಲ್ಲಿ ೧೨ ಸೇರಿದಂತೆ ಒಟ್ಟು ೨೬ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಮಂಡ್ಯ ಜಿಲ್ಲೆಯಲ್ಲಿ ೯ ಹಾಗೂ ರಾಮನಗರದಲ್ಲಿ ೧೧ ಪ್ರಕರಣಗಳನ್ನು ಬೇಧಿಸಲಾಗಿದೆ ಎಂದು ಉತ್ತರಿಸಿದ್ದಾರೆ.

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾರಿಕೇಡ್‌ಗಳನ್ನಿರಿಸಿ ವಾಹನಗಳನ್ನು ತಪಾಸಣೆ ನಡೆಸಿ ದಂಡ ವಿಧಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿಲಲ್ಲ. ದಂಡವನ್ನೂ ವಿಧಿಸುತ್ತಿಲ್ಲ ಎಂದು ಲಿಖಿತ ಮಾಹಿತಿ ನೀಡಿರುವುದಾಗಿ ಮಧು ಜಿ.ಮಾದೇಗೌಡ ಅವರು ತಿಳಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ