3 ವರ್ಷಗಳಲ್ಲಿ 855 ಕೋಟಿ ಟೋಲ್ ಕಲೆಕ್ಷನ್

KannadaprabhaNewsNetwork |  
Published : Jan 05, 2026, 01:15 AM IST
4ಕೆಆರ್ ಎಂಎನ್ 7.ಜೆಪಿಜಿ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿರುವ ಟೋಲ್  | Kannada Prabha

ಸಾರಾಂಶ

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ವಾಹನಗಳ ಸಂಚಾರಕ್ಕೆ ಮುಕ್ತವಾದ ದಿನದಿಂದ ಈವರೆಗೆ 855.79 ಕೋಟಿ ರುಪಾಯಿ ಟೋಲ್‌ ಶುಲ್ಕ ಸಂಗ್ರಹವಾಗಿದೆ.

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ವಾಹನಗಳ ಸಂಚಾರಕ್ಕೆ ಮುಕ್ತವಾದ ದಿನದಿಂದ ಈವರೆಗೆ 855.79 ಕೋಟಿ ರುಪಾಯಿ ಟೋಲ್‌ ಶುಲ್ಕ ಸಂಗ್ರಹವಾಗಿದೆ.

ಈ ಎಕ್ಸ್ ಪ್ರೆಸ್ ವೇನಲ್ಲಿ ಮೂರು ಟೋಲ್‌ ಕೇಂದ್ರಗಳಿದ್ದು, 2022-23 ರಿಂದ 2025-26ರ ಅವಧಿಯಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನ ಕಣಿಮಿಣಿಕೆ ಕೇಂದ್ರದಲ್ಲಿ 282.14 ಕೋಟಿ ರು., ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಕೇಂದ್ರದಲ್ಲಿ 248.42 ಕೋಟಿ ರು. ಹಾಗೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರಿನ ಟೋಲ್‌ ಪ್ಲಾಜಾದಲ್ಲಿ 325.23 ಕೋಟಿ ರು. ಟೋಲ್‌ ಸಂಗ್ರಹವಾಗಿದೆ.

ಲೋಕೋಪಯೋಗಿ ಸಚಿವರ ಉತ್ತರ :

ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವವರು ಕಣ್ಮಣಿಕೆ ಗ್ರಾಮದ ಬಳಿ ಇರುವ ಟೋಲ್ ಪ್ಲಾಜಾದಲ್ಲಿ ಟೋಲ್ ಶುಲ್ಕ ಪಾವತಿ ಮಾಡಬೇಕು. ಇನ್ನು ಮೈಸೂರು ಕಡೆಯಿಂದ ಬೆಂಗಳೂರಿಗೆ ಹೋಗವವರು ಬಿಡದಿಯ ಶೇಷಗಿರಿಹಳ್ಳಿಯ ಬಳಿ ಇರುವ ಟೋಲ್ ಪ್ಲಾಜಾದಲ್ಲಿ ಹಾಗೂ 2ನೇ ಹಂತದ ಎಕ್ಸ್ ಪ್ರೆಸ್ ವೇ ನಿಡಘಟ್ಟದಿಂದ-ಮೈಸೂರುವರೆಗೆ ಪ್ರಯಾಣಿಸುವ ವಾಹನಗಳು ಗಣಂಗೂರು ಟೋಲ್ ಪ್ಲಾಜಾದಲ್ಲಿ ಟೋಲ್‌ ಶುಲ್ಕ ಪಾವತಿಸಬೇಕಿದೆ.

ಬೆಂ - ಮೈ ರಾಷ್ಟ್ರೀಯ ಹೆದ್ದಾರಿ 275ರಲ್ಲಿಸಂಗ್ರಹವಾಗುತ್ತಿರುವ ಟೋಲ್‌ ಶುಲ್ಕ ಮತ್ತು ಅಪಘಾತಗಳು ಕುರಿತು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅವರು ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೀಡಿರುವ ಮಾಹಿತಿ ಆಧರಿಸಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಈ ಉತ್ತರ ನೀಡಿದ್ದಾರೆ.

3 ವರ್ಷಗಳಲ್ಲಿ 215 ಮಂದಿ ಅಪಘಾತದಲ್ಲಿ ಸಾವು :

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಲೋಕಾರ್ಪಣೆಯಾದ ಮೇಲೆ ಸಾಕಷ್ಟು ಅವಾಂತರಗಳಿಂದಲೇ ಸದ್ದು ಮಾಡಿತ್ತು. ಸಾಲು ಸಾಲು ಅಪಘಾತಗಳ ಹಿನ್ನೆಲೆಯಲ್ಲಿ ಇದನ್ನು ಡೆತ್‌ ವೇ ಎಂದೇ ಕರೆಯಲಾಗುತಿತ್ತು. ಇದಕ್ಕೆ ಸಾಕ್ಷಿ ಎಂಬಂತೆ 3 ವರ್ಷಗಳಲ್ಲಿ 215 ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಹೆದ್ದಾರಿಯಲ್ಲಿ ಕಳೆದ 3 ವರ್ಷಗಳ ಅವಧಿಯಲ್ಲಿ 1674 ಅಪಘಾತಗಳು ಸಂಭವಿಸಿವೆ. ಈ ಅಪಘಾತಗಳಲ್ಲಿ 215 ಮಂದಿ ಸಾವಿಗೀಡಾಗಿದ್ದು, 311 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಸಣ್ಣಪುಟ್ಟ ಗಾಯಾಳುಗಳ ಸಂಖ್ಯೆ ಸಾವಿರಕ್ಕೂ ಹೆಚ್ಚಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಅನ್ನು 2 ಹಂತದಲ್ಲಿ ನಿರ್ಮಿಸಲಾಗಿದೆ. ಮೊದಲ ಹಂತ ಬೆಂಗಳೂರಿನಿಂದ ನಿಡಘಟ್ಟ ವರೆಗೆ, 2ನೇ ಹಂತ ನಿಡಘಟ್ಟದಿಂದ ಮೈಸೂರುವರೆಗೆ ಇದ್ದು, ಅತಿಹೆಚ್ಚು ಸಾವು ಮತ್ತು ಅಪಘಾತಗಳು ಒಂದನೇ ಹಂತಕ್ಕಿಂತ ಎರಡನೇ ಹಂತದಲ್ಲೇ ಸಂಭವಿಸಿವೆ.

ಮೊದಲನೇ ಹಂತದ ಎಕ್ಸ್‌ಪ್ರೆಸ್‌ ವೇನಲ್ಲಿ 3 ವರ್ಷಗಳಲ್ಲಿ 76 ಮಂದಿ ಸಾವಿಗೀಡಾಗಿದ್ದರೆ, 2ನೇ ಹಂತದಲ್ಲಿ 145 ಮಂದಿ ಮೃತಪಟ್ಟಿದ್ದಾರೆ. ಮಂಡ್ಯ ಜಿಲ್ಲೆ ಎಕ್ಸ್ ಪ್ರಸ್ ವೇನಲ್ಲಿ ಅತಿ ಹೆಚ್ಚು ಅಪಘಾತ ಸಂಭವಿಸುತ್ತಿರುವುದು ಗಮನಾರ್ಹ.

ಹೆದ್ದಾರಿ ನಿರ್ಮಾಣ ಗೊಂಡ ಮೊದಲ ವರ್ಷ 2023ರಲ್ಲಿ ಬೆಂಗಳೂರಿನಿಂದ ನಿಡಘಟ್ಟ ವರೆಗಿನ ಹೆದ್ದಾರಿಯಲ್ಲಿ 33 ಮಂದಿ ಸಾವನ್ನಪ್ಪಿದರೆ, ನಿಡಘಟ್ಟದಿಂದ ಮೈಸೂರುವರೆಗಿನ ಹೆದ್ದಾರಿಯಲ್ಲಿ 77 ಮಂದಿ ಮೃತಪಟ್ಟಿದ್ದಾರೆ.

2023ನೇ ಸಾಲಿನಲ್ಲಿ 110 ಮಂದಿ ಅಪಘಾತದಲ್ಲಿ ಸಾವಿಗೀಡಾಗಿದ್ದರು. ಇದಾದ ಬಳಿಕ ಪೊಲೀಸ್ ಇಲಾಖೆ ಕೆಲವೊಂದು ಸುಧಾರಣಾ ಕ್ರಮಗಳನ್ನು ಕೈಗೊಂಡಿತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಹ ಎಕ್ಸ್‌ಪ್ರೆಸ್ ವೇ ನಲ್ಲಿ ಅಪಘಾತ ನಿಯಂತ್ರಣ ಮಾಡುವ ಸಂಬಂಧ ತಜ್ಞರ ತಂಡವನ್ನು ಕಳುಹಿಸಿ ಬ್ಲಾಕ್‌ ಸ್ಪಾಟ್‌ಗಳನ್ನು ಗುರುತಿಸಿ ಸುಧಾರಣಾ ಕ್ರಮವನ್ನು ಕೈಗೊಳ್ಳಲು ಸಲಹೆ ನೀಡಿತ್ತು.

ಅದರಂತೆ ವೇಗ ನಿಯಂತ್ರಣಕ್ಕೆ ಎಐ ಕ್ಯಾಮೆರಾಗಳ ಅಳವಡಿಕೆ ಸೇರಿದಂತೆ ಸಾಕಷ್ಟು ಕ್ರಮಗಳನ್ನು ಕೈಗೊಂಡ ಬಳಿಕ ಎಕ್ಸ್ ಪ್ರಸ್ ವೇನಲ್ಲಿ ಅಪಘಾತಗಳು ನಿಯಂತ್ರಣಕ್ಕೆ ಬಂದಿದೆ.

ಬಾಕ್ಸ್ ..................

ಬೆಂ - ಮೈ ಎಕ್ಸ್ ಪ್ರೆಸ್ ವೇ 118 ಕಿ.ಮೀ. ಉದ್ದ:

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ಮಿಸಿದ್ದ 118 ಕಿ.ಮೀ. ಉದ್ದದ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2023ರ ಮಾರ್ಚ್ ನಲ್ಲಿ ಲೋಕಾರ್ಪಣೆ ಮಾಡಿದ್ದರು. ಬೆಂಗಳೂರಿನ ಕುಂಬಳಗೋಡಿನಿಂದ ಆರಂಭವಾಗುವ ಹೆದ್ದಾರಿಯು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 55 ಕಿ.ಮೀ., ಮಂಡ್ಯ ಜಿಲ್ಲೆಯಲ್ಲಿ 58 ಕಿ.ಮೀ. ಹಾಗೂ ಮೈಸೂರು ಜಿಲ್ಲೆಯಲ್ಲಿ 5 ಕಿ.ಮೀ. ವ್ಯಾಪಿಸಿದೆ.

ಕೋಟ್ .................

ಬೆಂ - ಮೈ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗದ ಮಿತಿಯನ್ನು ಪ್ರತಿ ಗಂಟೆಗೆ 120 ಕಿ.ಮೀ.ಗೆ ಇಳಿಸಿ, ವೇಗದ ಮೇಲೆ ನಿಗಾ ಇಡಲು ಅಲ್ಲಲ್ಲಿ ಕ್ಯಾಮೆರಾ ಅಳವಡಿಸಿ ಮಿತಿ ಮೀರಿದವರಿಂದ ದಂಡ ಸಂಗ್ರಹಿಸಲಾಗುತ್ತಿದೆ. ಆದಾಗ್ಯೂ, ಅಪಘಾತಗಳ ಸಂಖ್ಯೆಯಲ್ಲಿ ಇಳಿಮುಖ ಆಗದಿರುವುದನ್ನು ಗಮನಿಸಬಹುದಾಗಿದೆ. ಹೆದ್ದಾರಿಯಲ್ಲಿವಾಹನಗಳ ಸಂಚಾರ, ಪ್ರಯಾಣಿಕರಿಗೆ ಸೌಲಭ್ಯ ಹಾಗೂ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಹಾಗೇಯೆ ಸರ್ವಿಸ್ ರಸ್ತೆಗಳಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.

- ಮಧು ಜಿ.ಮಾದೇಗೌಡ, ಸದಸ್ಯರು, ವಿಧಾನ ಪರಿಷತ್

ಬಾಕ್ಸ್‌.........

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೀಡಿರುವ ರಾಷ್ಟ್ರೀಯ ಹೆದ್ದಾರಿ-275ರಲ್ಲಿ ನಿರ್ಮಿಸಿರುವ ಟೋಲ್ ಸಂಗ್ರಹ ಕೇಂದ್ರಗಳಲ್ಲಿ ಸಂಗ್ರಹವಾದ ಟೋಲ್ ಮೊತ್ತದ ಮಾಹಿತಿ (ಕೋಟಿ ರು.ಗಳಲ್ಲಿ).

ಟೋಲ್ ಪ್ಲಾಜಾ2022-232023-242024-252025-26ಒಟ್ಟು

ಕಣ್ಮಿಣಿಕೆ4.0892.35100.1785.54282.14

(ಎಲ್‌ಎಚ್‌ಎಸ್‌)

23+900 ಕಿ.ಮೀ

ಶೇಷಗಿರಿಹಳ್ಳಿ3.6578.2688.4778.04248.42

(ಆರ್‌ಎಚ್‌ಎಸ್‌)

28+600 ಕಿ.ಮೀ.

ಗಣಂಗೂರು83.24132.85109.14325.23

116+500 ಕಿ.ಮೀ.

(ಎರಡೂ ಬದಿ ಪ್ಲಾಜಾ)

7.73253.85321.49272.72855.79

4ಕೆಆರ್ ಎಂಎನ್ 7.ಜೆಪಿಜಿ

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿರುವ ಟೋಲ್ .

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ