ಕನ್ನಡಪ್ರಭ ವಾರ್ತೆ ಮಡಿಕೇರಿ 17 ವರ್ಷದೊಳಗಿನ ಬಾಲಕರ ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ತಂಡದ ಎಲ್ಲಾ ವಿದ್ಯಾರ್ಥಿಗಳು ಕೊಡಗಿನಿಂದ ಆಯ್ಕೆಗೊಂಡಿರುವುದು ಸುದ್ದಿಯಾಗಿತ್ತು. ಇದೀಗ, ರಾಷ್ಟ್ರಮಟ್ಟದ ಪಂದ್ಯಾವಳಿಗೆ ಆಯ್ಕೆಗೊಂಡಿರುವ 14 ವರ್ಷದೊಳಗಿನ ಬಾಲಕರ ಕರ್ನಾಟಕ ರಾಜ್ಯ ಹಾಕಿ ತಂಡದಲ್ಲೂ ಕೊಡಗಿನ 9 ವಿದ್ಯಾರ್ಥಿಗಳು ಸ್ಥಾನ ಪಡೆದುಕೊಂಡಿದ್ದಾರೆ.
ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಡಿ.28ರಿಂದ ಜ.1ರವರೆಗೆ ನಡೆಯಲಿರುವ 14 ವರ್ಷದೊಳಗಿನ ಬಾಲಕರ ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಈ ತಂಡ ಕರ್ನಾಟಕವನ್ನು ಪ್ರತಿನಿಧಿಸಲಿದೆ.ಕರ್ನಾಟಕವನ್ನು ಪ್ರತಿನಿಧಿಸಲಿರುವ ರಾಜ್ಯ ತಂಡ ಗೋಣಿಕೊಪ್ಪ ಲಯನ್ಸ್ ಶಾಲೆಯ 6 ವಿದ್ಯಾರ್ಥಿಗಳು ಸೇರಿದಂತೆ ಕೊಡಗಿನ ಒಟ್ಟು 9 ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಈ ತಂಡ ಈಗಾಗಲೇ ಗ್ವಾಲಿಯರ್ ನಗರಕ್ಕೆ ಪ್ರಯಾಣ ಬೆಳೆಸಿದೆ. ಮೈಸೂರು ವಿಭಾಗ ಮಟ್ಟದ 14 ವರ್ಷದೊಳಗಿನ ಬಾಲಕರ ಹಾಕಿ ಪಂದ್ಯಾವಳಿಯಲ್ಲಿ ಹಾಸನ ತಂಡವನ್ನು ಮಣಿಸುವ ಮೂಲಕ ಪ್ರಥಮ ಸ್ಥಾನ ಪಡೆದ ಕೊಡಗು ತಂಡ, ಕಳೆದ ಅ.9ರಿಂದ 11ರವರೆಗೆ ಕೂಡಿಗೆಯಲ್ಲಿ ನಡೆದ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿಯೂ ಬಳ್ಳಾರಿ ತಂಡವನ್ನು ಪರಾಭವಗೊಳಿಸುವ ಮೂಲಕ ವಿಜಯಿಯಾಗಿ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಅರ್ಹತೆ ಪಡೆದುಕೊಂಡಿತ್ತು. ಗೋಣಿಕೊಪ್ಪ ಲಯನ್ಸ್ ಶಾಲೆಯ ವಿದ್ಯಾರ್ಥಿಗಳಾದ ಬಿ.ಪಿ.ಸಂಚಯ್ ತಮ್ಮಯ್ಯ, ಸಿ.ಟಿ.ಉತ್ಸವ್ ಉತ್ತಪ್ಪ, ಸಿ.ಟಿ. ಉತ್ಕರ್ಷ್ ಉತ್ತಯ್ಯ, ಸಾರ್ಥಕ್ ಬೆಳ್ಳಿಯಪ್ಪ (ಗೋಲ್ ಕೀಪರ್), ಎ.ಜೆ. ಪ್ರಕುಲ್ ಗಣಪತಿ, ಮತ್ತು ಸಿ.ಬಿ. ಅಯಾನ್ ಅಯ್ಯಪ್ಪ, ಪೊನ್ನಂಪೇಟೆ ಸಂತ ಅಂತೋಣಿ ಶಾಲೆಯ ವಿದ್ಯಾರ್ಥಿಗಳಾದ ನಾಚಪ್ಪ, ಬೋಪಣ್ಣ ಹಾಗೂ ಮಡಿಕೇರಿಯ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಪ್ರೀತಮ್ ಕರ್ನಾಟಕವನ್ನು ಪ್ರತಿನಿಧಿಸಲಿರುವ ಈ ತಂಡದಲ್ಲಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿರುವ ಗೋಣಿಕೊಪ್ಪ ಲಯನ್ಸ್ ಶಾಲೆಯ ದೈಹಿಕ ಶಿಕ್ಷಕ ಗಾನ್ ಗಣಪತಿ, ಇಡೀ ರಾಜ್ಯ ತಂಡದಲ್ಲಿರುವ ವಿದ್ಯಾರ್ಥಿಗಳ ಪೈಕಿ 9 ವಿದ್ಯಾರ್ಥಿಗಳು ಕೊಡಗಿನವರು ಎಂಬುದು ಹೆಚ್ಚು ಅಭಿಮಾನ ಮೂಡಿಸುತ್ತದೆ. ವಿಭಾಗ ಮಟ್ಟದಲ್ಲಿ ಮತ್ತು ರಾಜ್ಯಮಟ್ಟದಲ್ಲಿ ಉತ್ತಮ ಪ್ರದರ್ಶನ ತೋರಿರುವ ಈ ತಂಡ ರಾಷ್ಟ್ರಮಟ್ಟದಲ್ಲೂ ಸಾಧನೆ ತೋರಿಸುವ ನಂಬಿಕೆಯಿದೆ. ಕಳೆದ ಹಲವು ತಿಂಗಳಿಂದ ನಿರಂತರ ಅಭ್ಯಾಸದಲ್ಲಿ ತೊಡಗಿರುವ ಈ ವಿದ್ಯಾರ್ಥಿಗಳು ಪ್ರಸಕ್ತ ವರ್ಷ ಕರ್ನಾಟಕಕ್ಕೆ ಪ್ರಶಸ್ತಿ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.