ಕನ್ನಡಪ್ರಭ ವಾರ್ತೆ ಶಿರಾ ಎತ್ತಿನಹೊಳೆ ನೀರಾವರಿ ಯೋಜನೆಯಲ್ಲಿ ಶಿರಾ ಭಾಗಕ್ಕೆ ಲಭ್ಯವಾಗುವ ನೀರಿನಲ್ಲಿ, ಎಲ್ಲಾ ಗ್ರಾಮಗಳಿಗೂ ಶೋಧಿಸಿದ ಶುದ್ಧ ನೀರು ಪೂರೈಕೆ ಮಾಡಬೇಕೆಂಬ ಉದ್ದೇಶದಿಂದ ೯೦೦ ಕೋಟಿ ರುಪಾಯಿ ವೆಚ್ಚದ ಕ್ರಿಯಾಯೋಜನೆಯನ್ನು ರೂಪಿಸಿ, ಯೋಜನೆಗೆ ಆರ್ಥಿಕ ನೆರವು ನೀಡುವಂತೆ ಕೇಂದ್ರ ಸರಕಾರಕ್ಕೆ ಮನವಿ ನೀಡಲಾಗಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.ಅವರು ಬುಧವಾರ ತಾಲೂಕಿನ ಗೌಡಗೆರೆ ಹೋಬಳಿಯಲ್ಲಿ ೨೫ ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ನಾಡಕಚೇರಿ ನೂತನ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಜನಸಂಖ್ಯೆ ಹೆಚ್ಚಾಗುತ್ತಿದ್ದು, ಭೂ ದಾಖಲೆಗಳ ಸುರಕ್ಷತೆ ಕೂಡ ಕಂದಾಯ ಇಲಾಖೆಯ ಜವಾಬ್ದಾರಿಯಾಗಿದೆ. ನೂತನ ನಾಡಕಚೇರಿ ನಿರ್ಮಾಣ ಮಾಡಿದರೆ ಕಂದಾಯ ದಾಖಲೆಗಳ ಸುರಕ್ಷತೆ ಸಾಧ್ಯವಾಗಲಿದೆ. ನಾಡಕಚೇರಿಯಲ್ಲಿ ಉಪ ತಹಶೀಲ್ದಾರ್ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಒಂದೆಡೆ ರೈತರಿಗೆ ಸಿಕ್ಕಾಗ ರೈತರ ಸಮಸ್ಯೆಗಳು ಸ್ಥಳದಲ್ಲಿಯೇ ಪರಿಹಾರ ಗೊಳ್ಳಲಿವೆ. ಈ ಭಾಗದ ರೈತರು ಹಾಗೂ ಸಾರ್ವಜನಿಕರು ಗೌಡಗೆರೆ ಕೆರೆಗೆ ನೀರು ಹರಿಸುವಂತೆ ಮನವಿ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಈ ಭಾಗಕ್ಕೂ ನೀನು ಹರಿಸಲಾಗುವುದು ಎಂದರು. ನಾರು ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಬಿ.ಕೆ. ಮಂಜುನಾಥ್ ಮಾತನಾಡಿ ಅಪ್ಪರ ಭದ್ರ ನೀರಾವರಿ ಯೋಜನೆಯಲ್ಲಿ ಗೌಡಗೆರೆ ಗ್ರಾಮದ ೨ ಕೆರೆಗಳನ್ನು ಕೈ ಬಿಡಲಾಗಿದ್ದು, ಶಾಸಕ ಟಿ.ಬಿ. ಜಯಚಂದ್ರ ರವರು ತಕ್ಷಣ ಈ ಕೆರೆಗಳನ್ನು ಅಪ್ಪರ ಭದ್ರ ನೀರಾವರಿ ಯೋಜನೆಯಲ್ಲಿ ಸೇರ್ಪಡೆ ಮಾಡಿ ರೈತರ ನೀರಿನ ಬವಣೆ ನೀಗಿಸಬೇಕು ಎಂದರು.ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಆರ್. ಶಶಿಧರ ಗೌಡ, ಗೌಡಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷ ಈಶ್ವರ್ , ಉಪಾಧ್ಯಕ್ಷೆ ಮಂಜುಳಾ, ಮಾಜಿ ಅಧ್ಯಕ್ಷೆ ಮಂಜುಳಾ ಗೌಡಪ್ಪ, ಸದಸ್ಯರಾದ ವೆಂಕಟೇಶ್ ರಮಾಮಣಿ , ಗುಂಡಪ್ಪ ವಿವೇಕಾನಂದ, ಹನುಮಂತರಾಯ, ತಿಪ್ಪಣ್ಣ, ಪಾರ್ವತಮ್ಮ, ನಿವೇಶನ ದಾನಿಗಳಾದ ಸಣ್ಣಮ್ಮ ಚಿತ್ತಪ್ಪ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಹನುಮಂತರಾಯಪ್ಪ, ಮುಖಂಡ ಮದ್ದಕ್ಕನಹಳ್ಳಿ ಗೊಲ್ಲರಹಟ್ಟಿ ಗೌಡಪ್ಪ, ವಸಂತಕುಮಾರ, ರಮೇಶ್ , ಗ್ರೇಡ್ ೨ ತಹಸಿಲ್ದಾರ್ ನಾಗರಾಜು, ಉಪತಹಸೀಲ್ದಾರ್ ಯಶೋಧಮ್ಮ, ಕಂದಾಯ ವೃತ್ತ ನಿರೀಕ್ಷಕ ಉಮೇಶ್, ಗ್ರಾಮ ಲೆಕ್ಕಾಧಿಕಾರಿಗಳಾದ ಗುರುಪ್ರಸಾದ್, ಕಿರಣ್, ಐಶ್ವರ್ಯ, ಶಾಂತಮ್ಮ, ಬಗರಹುಕುಂ ಸಮಿತಿ ಸದಸ್ಯ ಮದ್ದಕ್ಕನಹಳ್ಳಿ ತಿಪ್ಪೇಸ್ವಾಮಿ, ತಾವರೆಕೆರೆ ಬಲರಾಮ್, ಪಿಡಿಒ ವೆಂಕಟೇಶಮೂರ್ತಿ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.