ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಮಹಾನಗರ ಪಾಲಿಕೆಯ 2024-25ನೇ ಸಾಲಿಗೆ ಒಟ್ಟು 157.43 ಕೋಟಿ ರು. ಉಳಿತಾಯ ಬಜೆಟ್ ಮಂಡಿಸಲಾಗಿದ್ದು, ಪಾಲಿಕೆಯ ವಿವಿಧ ಸೇವೆಗಳ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ತೆರಿಗೆ ನಿರ್ಧರಣೆ ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ವರುಣ್ ಚೌಟ ಬಜೆಟ್ ಮಂಡನೆ ಮಾಡಿದರು. 2024-25ನೇ ಸಾಲಿನ ಆರಂಭಿಕ ಶಿಲ್ಕು 292.57 ಕೋಟಿ ರು. ಹಾಗೂ ಈ ವರ್ಷದ ಅಂದಾಜು ಆದಾಯ 820.87 ಕೋಟಿ ರು. ಆಗಿದ್ದು, ಒಟ್ಟು ವ್ಯಯ (ಬಜೆಟ್ ಗಾತ್ರ) 956.01 ಕೋಟಿ ರು. ಅಂದಾಜಿಸಿದ್ದು, ಅಂತಿಮವಾಗಿ 157.43 ಕೋಟಿ ರು. ಉಳಿತಾಯದ ಬಜೆಟ್ ಇದಾಗಿದೆ. ಡಿಜಿಟಲೀಕರಣಕ್ಕೆ ಆದ್ಯತೆ: ಅಭಿಲೇಖಾಲಯ ವಿಭಾಗದ ಕಡತಗಳನ್ನು ಇ-ತಂತ್ರಾಂಶದ ಮೂಲಕ ಡಿಜಿಟಲೀಕರಣಗೊಳಿಸಲಾಗಿದ್ದು, ಕಡತಗಳ ಶೀಘ್ರ ಹುಡುಕುವಿಕೆ ಮತ್ತು ವೀಕ್ಷಣೆಗಾಗಿ ರೆಕಾರ್ಡ್ ರೂಮ್ ಮ್ಯಾನೇಜ್‌ಮೆಂಟ್ ಸಿಸ್ಟಂ ಅಳವಡಿಸಲಾಗುವುದು. ಪುರಭವನ, ಅಂಬೇಡ್ಕರ್ ಭವನ ಮತ್ತು ತೆರೆದ ಮೈದಾನಗಳ ಸ್ಥಳ ಬುಕ್ಕಿಂಗ್ ಮಾಡಲು ಮತ್ತು ಪಾವತಿಗಾಗಿ ಆನ್‌ಲೈನ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು. ಪಾಲಿಕೆಯ ಮಾಲೀಕತ್ವದ ಕಟ್ಟಡ ಬಾಡಿಗೆ ಪಾವತಿಸಲು ಮತ್ತು ಬಾಡಿಗೆ ಮಾಹಿತಿ ವೀಕ್ಷಿಸಲು ಅನುಕೂಲವಾಗುವ ತಂತ್ರಾಂಶ ಜಾರಿಗೆ ತರಲಾಗುವುದು. ನೀರಿನ ಬಿಲ್ ಪಾವತಿಸಲು ಬಿಬಿಪಿಎಸ್ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಿರುವುದರಿಂದ ಅತಿ ಶೀಘ್ರದಲ್ಲಿ ಜನರು ನೀರಿನ ಶುಲ್ಕವನ್ನು ಡಿಜಿಟಲ್ ಪೇಮೆಂಟ್ ಮೂಲಕ ಪಾವತಿಸಬಹುದು.
ಜಾಹೀರಾತು ಫಲಕಗಳ ನವೀಕರಣ, ಹೊಸ ಫಲಕ ಅಳವಡಿಕೆಗೆ ಅರ್ಜಿ ಸಲ್ಲಿಸಲು, ಆನ್‌ಲೈನ್ ಪಾವತಿ ಮಾಡಲು ಇ ವೆಬ್ ಅಪ್ಲಿಕೇಶನ್ ಮತ್ತು ಮೊಬೈಲ್ ಅಪ್ಲಿಕೇಶನ್ ವಿನ್ಯಾಸಗೊಳಿಸಲಾಗಿದೆ. ಅದೇ ರೀತಿ ಕಟ್ಟಡ ಪ್ರವೇಶ ಪತ್ರವನ್ನು ನೀಡಲು ಆನ್‌ಲೈನ್ ತಂತ್ರಾಂಶ ವಿನ್ಯಾಸಗೊಳಿಸಲಾಗುತ್ತಿದೆ. ಪಾಲಿಕೆಗೆ ಭೂಮಿ ಬಿಟ್ಟುಕೊಡುವ ಭೂಮಾಲೀಕರಿಗೆ ವಿತರಿಸುತ್ತಿರುವ ಟಿಡಿಆರ್‌ನ್ನು ಮಾರಾಟ ಮಾಡುವವರಿಗೆ ಮತ್ತು ಖರೀದಿಸುವವರಿಗೆ ಅನುಕೂಲವಾಗುವಂತೆ ಪಾಲಿಕೆಯಲ್ಲಿ ಟಿಡಿಆರ್ ಬ್ಯಾಂಕ್ ಸ್ಥಾಪನೆ ಮಾಡುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವರುಣ್ ಚೌಟ ತಿಳಿಸಿದರು.ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪಮೇಯರ್, ಪಾಲಿಕೆ ಆಯುಕ್ತ ಆನಂದ್ ಇದ್ದರು.
ಬಜೆಟ್ ವಿಶೇಷ ಯೋಜನೆಗಳು 1. ಅಂತರ್ಜಲ ಸಂರಕ್ಷಣೆ: ಪಾಲಿಕೆ ಕಟ್ಟಡಗಳು, ಪುರಭವನ, ಅಂಬೇಡ್ಕರ್ ಭವನಗಳಲ್ಲಿ ಮಳೆ ನೀರು ಕೊಯ್ಲು ಘಟಕ ಅಳವಡಿಕೆ. ಹೂಳು ತುಂಬಿ ಉಪಯೋಗಕ್ಕೆ ಬಾರದ ಕೆರೆಗಳ ಸಮೀಕ್ಷೆ ನಡೆಸಿ ಅಭಿವೃದ್ಧಿಪಡಿಸಲು 25 ಲಕ್ಷ ರು. 2. ವಿದ್ಯಾರ್ಥಿಗಳಿಗೆ ಜ್ಞಾನಸಿರಿ: ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿತು 10ನೇ ತರಗತಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲು ಜ್ಞಾನಸಿರಿ ಯೋಜನೆಗೆ 5 ಲಕ್ಷ ರುಪಾಯಿ.3. ನಮ್ಮ ಯೋಧ: ಹುತಾತ್ಮ ಯೋಧರ ಕುಟುಂಬಕ್ಕೆ ಪಾಲಿಕೆ ವತಿಯಿಂದ ನೆರವಾಗಲು 25 ಲಕ್ಷ ರು. ಮೀಸಲಿರಿಸಲಾಗಿದೆ. ಅಲ್ಲದೆ, ಪಾಲಿಕೆ ವ್ಯಾಪ್ತಿಯ ಯುವಕ, ಯುವತಿಯರಿಗೆ ಅಗ್ನಿವೀರ ತರಬೇತಿ ಅವಧಿಯಲ್ಲಿ ಪ್ರೋತ್ಸಾಹಧನ ನೀಡಲು 5 ಲಕ್ಷ ರು.
4. ಹಸಿರೇ ಉಸಿರು: ಪಾಲಿಕೆ ವ್ಯಾಪ್ತಿಯ ಸಿಎ ನಿವೇಶನ ಮತ್ತು ಲಭ್ಯ ಇರುವ ಖಾಲಿ ಜಮೀನುಗಳಲ್ಲಿ ಮಾದರಿ ಪಾರ್ಕ್ ಅಭಿವೃದ್ಧಿ ಮಾಡಿ, ಬಿದಿರು ಮತ್ತು ಮಿಯೋವಕಿ ಗಿಡ ನೆಡಲು ಕಾರ್ಯಯೋಜನೆ. ಖಾಲಿ ಜಾಗಗಳಲ್ಲಿ ಸಾಲು ಮರದ ತಿಮ್ಮಕ್ಕ ವನ ನಿರ್ಮಿಸಲು 50 ಲಕ್ಷ ರುಪಾಯಿ. 5. ಕೊಳೆಗೇರಿ ಅಭಿವೃದ್ಧಿ: ಪಾಲಿಕೆ ವ್ಯಾಪ್ತಿಯಲ್ಲಿ 8 ಕೊಳೆಗೇರಿಗಳನ್ನು ಗುರುತಿಸಲಾಗಿದ್ದು, ಆದ್ಯತೆ ಮೇರೆಗೆ ಚರಂಡಿ ನಿರ್ಮಾಣ, ನೀರು ಸರಬರಾಜು, ಬೀದಿದೀಪ, ಒಳಚರಂಡಿ ವ್ಯವಸ್ಥೆ ಮೂಲಸೌಕರ್ಯ ಅಭಿವೃದ್ಧಿ.6. ನಗರ ಸೌಂದರ್ಯ: ಎಲ್ಲ ದ್ವಿಪಥ ರಸ್ತೆ ವಿಭಾಜಕಗಳು, ವೃತ್ತಗಳಲ್ಲಿ ಅಲಂಕಾರಿಕ ಗಿಡ ಬೆಳೆಸುವುದು, ಅಗತ್ಯ ಇರುವೆಡೆ ಪಾದಚಾರಿ ಪಥ ನಿರ್ಮಿಸುವುದು.
7. ತರಬೇತಿ ಶಿಬಿರ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯುವ ಪೀಳಿಗೆಯನ್ನು ರೆಡಿ ಮಾಡಲು ನಿವೃತ್ತ ಐಎಎಸ್ ಅಧಿಕಾರಿಗಳಿಂದ ತರಬೇತಿ ನೀಡುವುದು ಹಾಗೂ ತರಬೇತಿ ಪಡೆಯುವವರಿಗೆ ಸಹಾಯಧನಕ್ಕಾಗಿ 10 ಲಕ್ಷ ರು.8. ವಿಕೋಪ ಸಹಾಯ: ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭ ಮೃತ ಕುಟುಂಬದವರಿಗೆ ಸಹಾಯಹಸ್ತಕ್ಕಾಗಿ 10 ಲಕ್ಷ ರುಪಾಯಿ. ಪಾಲಿಕೆ ವ್ಯಾಪ್ತಿಯ ಎಲ್ಲ ನಾರಾಯಣ ಗುರು ಮಂದಿರಗಳಿಗೆ ತಲಾ 15 ಸಾವಿರ ರು.
9. ತೃತೀಯ ಲಿಂಗಿಗಳಿಗೆ ವಸತಿ: ಪಾಲಿಕೆ ವ್ಯಾಪ್ತಿಯಲ್ಲಿರುವ 73 ತೃತೀಯ ಲಿಂಗಿಗಳಿಗೆ ತಾತ್ಕಾಲಿಕ ರಾತ್ರಿ ವಸತಿ ಕೇಂದ್ರ ತೆರೆಯಲು ಉದ್ದೇಶಿಸಲಾಗಿದ್ದು, 10 ಲಕ್ಷ ರು. ಕಾಯ್ದಿರಿಸಲಾಗಿದೆ. 10. ಆಂಬ್ಯುಲೆನ್ಸ್ ಸೇವೆ: ಸಿಎಸ್‌ಆರ್ ನಿಧಿ ಅನ್ವಯಿಸುವ ಸಂಸ್ಥೆಗಳ ಸಹಕಾರದಿಂದ 3 ಆಂಬ್ಯುಲೆನ್ಸ್‌ಗಳನ್ನು ಪಡೆದು ರೋಗಿಗಳಿಗೆ ಸೇವೆ.11. ಸ್ಮಶಾನ: ತಿರುವೈಲು ಗ್ರಾಮದಲ್ಲಿ 1 ಎಕರೆ ಜಮೀನಿನಲ್ಲಿ ರುದ್ರಭೂಮಿ ನಿರ್ಮಿಸಿ ಅಲ್ಲಿ ಅನಾಥ ಪ್ರಾಣಿ, ಪಕ್ಷಿಗಳ ಸಂಸ್ಕಾರಕ್ಕೂ ಪ್ರತ್ಯೇಕ ವ್ಯವಸ್ಥೆ. ಇದಕ್ಕಾಗಿ 1.50 ಕೋಟಿ ರು. 12. ಸ್ಮಾರ್ಟ್ ಬಸ್ ನಿಲ್ದಾಣ: ಪೊಲೀಸ್ ಠಾಣೆಗೆ ನೇರ ಸಂಪರ್ಕ ಹೊಂದಿರುವ ಸಿಸಿ ಕ್ಯಾಮರಾ ವ್ಯವಸ್ಥೆ, ಉಚಿತ ಅನ್‌ಲಿಮಿಟೆಡ್ ವೈಫೈ, ಶುದ್ಧ ಕುಡಿಯುವ ನೀರು, ಎಫ್‌ಎಂ ರೇಡಿಯೊ, ಇನ್ವರ್ಟರ್ ಮತ್ತು ಪ್ರಥಮ ಚಿಕಿತ್ಸೆಗಳನ್ನೊಳಗೊಂಡ ಡಿಜಿಟಲ್ ಬಸ್ ನಿಲ್ದಾಣಗಳನ್ನು ಕನಿಷ್ಠ 2 ಕಡೆ ನಿರ್ಮಾಣಕ್ಕೆ 50 ಲಕ್ಷ ರುಪಾಯಿ.
ತುಳು, ಕಂಬಳ, ಯಕ್ಷಗಾನಕ್ಕೆ ಪ್ರೋತ್ಸಾಹತುಳು ಭಾಷೆ, ಸಂಸ್ಕೃತಿ ಉಳಿವು ಮತ್ತು ಬೆಳವಣಿಗೆಗೆ ಪೂರಕವಾಗಿ ಮತ್ತು ತುಳು ಭಾಷೆ ಏಳಿಗೆಗಾಗಿ ಶ್ರಮಿಸುವವರನ್ನು ಗುರುತಿಸಿ ಮಹಾನಗರ ಪಾಲಿಕೆ ವತಿಯಿಂದ ಪ್ರೋತ್ಸಾಹಧನ ನೀಡುವ ಉದ್ದೇಶಕ್ಕೆ 10 ಲಕ್ಷ ರು ಕಾಯ್ದಿರಿಸಲಾಗಿದೆ. ಕಂಬಳ ಕ್ರೀಡೆ ಉತ್ತೇಜಿಸುವ ಸಲುವಾಗಿ ಮೊದಲ ಬಾರಿಗೆ ಈ ಆಯವ್ಯಯದಲ್ಲಿ 5 ಲಕ್ಷ ರು. ಕಾಯ್ದಿರಿಸಲಾಗಿದೆ. ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿಗಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಸಹಾಯಧನ ನೀಡುವ ಉದ್ದೇಶದಿಂದ 10 ಲಕ್ಷ ರು. ಕಾಯ್ದಿರಿಸಲಾಗಿದೆ. ಮಹಿಳೆಯರಿಗಾಗಿ ಪಿಂಕ್ ಟಾಯ್ಲೆಟ್
ನಗರದಲ್ಲಿ ಎರಡು ಕಡೆ ವಿಶೇಷವಾಗಿ ಮಹಿಳೆಯರಿಗಾಗಿಯೇ ಪಿಂಕ್ ಟಾಯ್ಲೆಟ್‌ಗಳನ್ನು ನಿರ್ಮಾಣ ಮಾಡುವ ಯೋಜನೆಯನ್ನು ಈ ಬಜೆಟ್‌ನಲ್ಲಿ ಅಳವಡಿಸಲಾಗಿದ್ದು, ಅದಕ್ಕಾಗಿ 1 ಕೋಟಿ ರು. ಕಾಯ್ದಿರಿಸಲಾಗಿದೆ. ಮಂಗಳೂರು ಉತ್ತರ ಮತ್ತು ದಕ್ಷಿಣದಲ್ಲಿ ಆಯ್ದ ಪ್ರದೇಶಗಳಲ್ಲಿ ತಲಾ ಒಂದರಂತೆ ಪಿಂಕ್ ಟಾಯ್ಲೆಟ್ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.ಹೊಸ ಯೋಜನೆಗಳು ಜಾರಿ: ಮೇಯರ್
ಕಳೆದ ವರ್ಷಕ್ಕಿಂತ ಕಡಿಮೆ ಗಾತ್ರದ ಬಜೆಟ್ ಮಂಡಿಸಲಾಗಿದೆ ಎಂದು ವಿರೋಧ ಪಕ್ಷ ನಾಯಕರು ಹೇಳಿದ್ದು ಸರಿಯಲ್ಲ. ಕಳೆದ ವರ್ಷ 927.57 ಕೋಟಿ ರು. ಗಾತ್ರದ ಬಜೆಟ್ ಮಂಡಿಸಿದ್ದರೆ, ಈ ಬಾರಿ 956.71 ಕೋಟಿ ರು. ಬಜೆಟ್ ಗಾತ್ರ ಇದೆ. ಈ ಬಾರಿ ಸ್ವೀಕೃತಿಯಲ್ಲಿ ಅನುದಾನ ಕೊರತೆ ಆಗಿದೆಯೇ ಹೊರತು ಬಜೆಟ್ ಗಾತ್ರ ಜಾಸ್ತಿಯೇ ಆಗಿದೆ. ಈ ಬಜೆಟ್‌ನಲ್ಲಿ ಹಲವಾರು ಹೊಸ ಯೋಜನೆಗಳನ್ನು ಅಳವಡಿಕೆ ಮಾಡಲಾಗಿದೆ. ಅನೇಕ ಸೇವೆಗಳು ಆನ್‌ಲೈನ್, ತುಳುಭಾಷೆ, ಕಂಬಳಕ್ಕೆ ಅನುದಾನ ಮೀಸಲು ಇತ್ಯಾದಿ ಹಲವು ನೂತನ ಯೋಜನೆಗಳನ್ನು ಜನರಿಗೆ ನೀಡಲಾಗಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು.ಹಿಮ್ಮುಖ, ಕಾಟಾಚಾರದ ಬಜೆಟ್: ಪ್ರತಿಪಕ್ಷ ನಾಯಕಕಾಟಾಚಾರದ ಬಜೆಟ್ ಮಂಡಿಸಿದ್ದಾರೆ. ಇದೇ ಮೊದಲ ಬಾರಿಗೆ ಬಜೆಟ್ ಸ್ವೀಕೃತಿ ಕಡಿಮೆಯಾಗಿ ಹಿಮ್ಮುಖವಾಗಿದೆ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರಕ್ಕೆ ಹಿಮ್ಮುಖ ಬಜೆಟ್ ಶೋಭೆಯಲ್ಲ. ಮಾರುಕಟ್ಟೆಗಳು, ಅಂಡರ್‌ಗ್ರೌಂಡ್ ಕೇಬಲ್ ಇತ್ಯಾದಿಗಳಿಂದ ಆದಾಯ ಸೃಷ್ಟಿ ಮಾಡಲು ಸಲಹೆ ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಒಟ್ಟಾರೆಯಾಗಿ ಈ ಬಜೆಟ್ ಪ್ರಾಯೋಗಿಕವೇ ಅಲ್ಲ. ಪೊಟೆನ್ಶಿಯಲ್ ಸಿಟಿಯ ಬಜೆಟ್ ಈ ರೀತಿ ಮಾಡಬಾರದಿತ್ತು ಎಂದು ಪಾಲಿಕೆ ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಪ್ರತಿಕ್ರಿಯಿಸಿದ್ದಾರೆ.