ಮುಸುಕುಧಾರಿಯು ಕಿಂದರಿ ಜೋಗಿ, ಎಸ್‌ಐಟಿ ಇಲಿ ಆಗದಿರಲಿ : ಸುರೇಶ್‌

| N/A | Published : Aug 19 2025, 10:17 AM IST

S Suresh Kumar
ಮುಸುಕುಧಾರಿಯು ಕಿಂದರಿ ಜೋಗಿ, ಎಸ್‌ಐಟಿ ಇಲಿ ಆಗದಿರಲಿ : ಸುರೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳ ಗ್ರಾಮ ಪ್ರಕರಣ ಕುರಿತು ಮುಸುಕುಧಾರಿ ವ್ಯಕ್ತಿ ಕಿಂದರಿಜೋಗಿಯಾಗಿ ಎಸ್‌ಐಟಿ ಇಲಿಯಂತಾಗಬಾರದು ಎಂದು ಬಿಜೆಪಿ ಸದಸ್ಯ ಎಸ್‌.ಸುರೇಶ್‌ಕುಮಾರ್ ತೀಕ್ಷ್ಣವಾಗಿ ಹೇಳಿದ್ದಾರೆ.

  ವಿಧಾನಸಭೆ :  ಧರ್ಮಸ್ಥಳ ಗ್ರಾಮ ಪ್ರಕರಣ ಕುರಿತು ಮುಸುಕುಧಾರಿ ವ್ಯಕ್ತಿ ಕಿಂದರಿಜೋಗಿಯಾಗಿ ಎಸ್‌ಐಟಿ ಇಲಿಯಂತಾಗಬಾರದು ಎಂದು ಬಿಜೆಪಿ ಸದಸ್ಯ ಎಸ್‌.ಸುರೇಶ್‌ಕುಮಾರ್ ತೀಕ್ಷ್ಣವಾಗಿ ಹೇಳಿದ್ದಾರೆ.

ಸೋಮವಾರ ಧರ್ಮಸ್ಥಳ ಗ್ರಾಮ ಪ್ರಕರಣ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಉತ್ತರ ನೀಡಿದ ಬಳಿಕ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣ ಕುರಿತು ಇಂದು ನೀವು ಹೇಳಿದ್ದಕ್ಕಿಂತ ಮುಚ್ಚಿಟ್ಟಿದ್ದೇ ಹೆಚ್ಚು. ನಾವು ಕಳೆದ 15 ದಿನಗಳಿಂದ ಸುಮ್ಮನೆ ಇರಲಿಲ್ಲ. ಸಂದರ್ಭ ಬಂದಾಗ ನಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದೇವೆ. ಎಸ್‌ಐಟಿ ಮಾಡಿದಾಗ ಸ್ವಾಗತಿಸಿದ್ದೇವೆ ಎಂದು ಹೇಳಿದರು.

ಸತ್ಯ ಹೊರಬರಬೇಕು ಎಂದು ಎಸ್ಐಟಿ ಮಾಡಿದ್ದೇವೆ ಎಂಬ ಮಾತನ್ನು ಗೃಹ ಸಚಿವರು ಮತ್ತು ಮುಖ್ಯಮಂತ್ರಿ ಹೇಳಿದ್ದಾರೆ. ಆರಂಭದಲ್ಲಿ ದಕ್ಷಿಣ ಕನ್ನಡ ಉಸ್ತುವಾರಿ ಸಚಿವರು ದಕ್ಷಿಣ ಕನ್ನಡ ಪೊಲೀಸರಿಗೆ ತನಿಖೆ ನಡೆಸುವ ಕ್ಷಮತೆ, ಸಾಮರ್ಥ್ಯವಿದೆ. ಎಸ್ಐಟಿ ಅಗತ್ಯವಿಲ್ಲ ಎಂದಿದ್ದರು. ಬಳಿಕ ಎಡಪಂಥೀಯ ಸಂಸ್ಥೆಗಳು, ಪ್ರತಿನಿಧಿಗಳ ಒತ್ತಡದಿಂದ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ ಎಂದೂ ಹೇಳಿದ್ದರು. ಇಲ್ಲಿ ಮುಸುಕುಧಾರಿ ಕಿಂದರಿಜೋಗಿಯಾಗಿ ಎಸ್‌ಐಟಿ ಇಲಿಗಳಾಗಬಾರದು. ಊಹಾಪೋಹಕ್ಕೆ ಇತಿಶ್ರೀ ಹಾಡಬೇಕು ಎಂದು ಒತ್ತಾಯಿಸಿದರು.

ನಾವು ಮಾಧ್ಯಮ ಟ್ರಯಲ್‌ ಕೇಳಿದ್ದೆವು. ಧರ್ಮಸ್ಥಳದ ವಿಚಾರದಲ್ಲಿ ಸೋಶಿಯಲ್‌ ಮೀಡಿಯಾ ಟ್ರಯಲ್‌ ನಡೆಯುತ್ತಿದೆ. ಅವಾಚ್ಯ ಪದಗಳ ಬಳಕೆ ನೋಡಿದರೆ ನೋವಾಗುತ್ತಿದೆ. ಮೊದಲು ಈ ಮಾಧ್ಯಮ ಟ್ರಯಲ್‌ ನಿಲ್ಲಿಸುವಂತೆ ಸರ್ಕಾರ ಹೇಳಬೇಕು. ಈ ಪ್ರಕರಣದಲ್ಲಿ ನಾವು ಧರ್ಮ, ರಾಜಕೀಯ ಬೆರೆಸುತ್ತಿಲ್ಲ. ಸತ್ಯ ಹೊರಬರಬೇಕು. ಇದರ ಹಿಂದೆ ಗುಪ್ತ ಅಜೆಂಡಾ ಇದೆ. ಮಸುಕುಧಾರಿ ಹೇಳಿದ ಕಡೆಯೆಲ್ಲ ಅಗೆದರೆ ಜನ ಏನು ಹೇಳುತ್ತಾರೆ? ಸರ್ಕಾರದ ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಈ ಪ್ರಕರಣದಲ್ಲಿ ಮೊದಲು ತೀರ್ಪು ಬಂದಿದೆ. ಸಮಾಜದ ಸ್ವಾಥ್ಯದ ದೃಷ್ಟಿಯಿಂದ ಇದು ಒಳ್ಳೇಯದಲ್ಲ ಎಂದರು.

ಧರ್ಮಸ್ಥಳ ಗ್ರಾಮ ಕೇಸ್ಸಲ್ಲಿ ಸಿಎಂ

ಜನರ ಕ್ಷಮೆಯಾಚಿಸಲಿ: ಜೋಶಿ 

 ನವದೆಹಲಿ :  ಧರ್ಮಸ್ಥಳ ಗ್ರಾಮ ಕೇಸ್‌ನಲ್ಲಿ ಷಡ್ಯಂತರಿಗಳ ಹೆಸರು ಬಹಿರಂಗಪಡಿಸಬೇಕು ಮತ್ತು ಸರ್ಕಾರದ ನಡೆ ಬಗ್ಗೆ ಸಿಎಂ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್‌ ಜೋಶಿ ಆಗ್ರಹಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಕೆಲ ನಿರ್ದೇಶನಗಳ ಮೇಲೆ ಕಾರ್ಯ ನಿರ್ವಹಿಸಿದೆ ಎಂದು ಸ್ವತಃ ಮುಸುಕುಧಾರಿಯೇ ಈಗ ಹೇಳಿಕೆ ನೀಡಿದ್ದಾನೆ. ಆರಂಭದಲ್ಲೇ ಈ ಅನಾಮಿಕನ ಬಗ್ಗೆ ಸರಿಯಾಗಿ ವಿಚಾರಣೆ ನಡೆಸದೇ ಸರ್ಕಾರ ಬೇಜವಾಬ್ದಾರಿತನ ಪ್ರದರ್ಶಿಸಿದೆ. ಹಾಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

ಅನಾಮಿಕ ಮುಸುಕುಧಾರಿ ಕೊಲೆ-ಅತ್ಯಾಚಾರಕ್ಕೆ ಒಳಗಾದ ನೂರಾರು ಜನರ ಶವ ಹೂತಿದ್ದೇನೆ ಎಂದಾಗಲೇ ಸರಿಯಾಗಿ ಆತನ ವಿಚಾರಣೆ ನಡೆಸಬೇಕಿತ್ತು. ಆತನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ರಾಜ್ಯ ಸರ್ಕಾರ ಅದ್ಯಾವುದನ್ನೂ ಮಾಡದೇ ಆತನ ತಾಳಕ್ಕೆ ಕುಣಿದಿದೆ ಎಂದು ಅವರು ಆರೋಪಿಸಿದ್ದಾರೆ.

ಧರ್ಮಸ್ಥಳ ಗ್ರಾಮದಲ್ಲಿ ಮುಸುಕುಧಾರಿ ಬೆರಳು ತೋರಿದಲ್ಲೆಲ್ಲಾ ಅಗೆದು ಏನೂ ಸಿಗದಿದ್ದಾಗ ಸರ್ಕಾರ ಈಗ ‘ಷಡ್ಯಂತರʼ ರಾಗ ಎಳೆಯುತ್ತಿದೆ. ಜನರ ನಂಬಿಕೆಯ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಸೃಷ್ಟಿಸಿರುವಂತಹ ಅವ್ಯವಸ್ಥೆಗೆ ರಾಜ್ಯದ ಕಾಂಗ್ರೆಸ್‌ ಸರ್ಕಾರವೇ ನೇರ ಹೊಣೆ ಹೊರಬೇಕು ಎಂದು ಅವರು ಆಗ್ರಹಿಸಿದರು.

ಜಡ್ಜ್‌ ನೇತೃತ್ವದಲ್ಲಿ ಧರ್ಮಸ್ಥಳ

ಕೇಸ್‌ ತನಿಖೆ ಆಗಲಿ: ಸಿ.ಟಿ.ರವಿ 

ಬೆಂಗಳೂರು :  ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿದ್ದೇವೆ ಎಂದು ಹೇಳಿ ಇಡೀ ಸಮಾಜದ ದಾರಿ ತಪ್ಪಿಸಿದ, ಕ್ಷೇತ್ರಕ್ಕೆ ಅವಹೇಳನ ಮಾಡಿದ ಅನಾಮಿಕನನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಸಂಪೂರ್ಣ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಡಬೇಕು ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಒತ್ತಾಯಿಸಿದರು.

ನಗರದ ಟೌನ್‌ಹಾಲ್‌ನಲ್ಲಿ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಸೋಮವಾರ ಏರ್ಪಡಿಸಿದ್ದ ‘ಧರ್ಮಸ್ಥಳದ ಮೇಲಿನ ಷಡ್ಯಂತ್ರ ಸತ್ಯಮಿಥ್ಯಗಳ ಅನಾವರಣ’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ನ್ಯಾಯ ಸಿಗಬೇಕಿದೆ. ಆದರೆ, ಸೌಜನ್ಯ ಹತ್ಯೆ ನೆಪದಲ್ಲಿ ಧರ್ಮಶ್ರದ್ಧೆಯನ್ನು ಹಾಳು ಮಾಡುವ ಹುನ್ನಾರ ನಡೆಯುತ್ತಿದೆ. ಕೋಟ್ಯಂತರ ಭಕ್ತರ ಶ್ರದ್ಧೆಯನ್ನು ಭಂಗ ಮಾಡಿ ಮರ್ಮಾಘಾತ ಕೊಡಲು ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಅದಕ್ಕಾಗೇ ಈ ವಿಷಯವನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನಾಮಿಕ ದೂರುದಾರನ ಹೇಳಿಕೆಯಂತೆ ಗುಂಡಿ ಅಗೆಯಲಾಗಿದೆ. ಈಗ ಆತನ ಮಂಪರು ಪರೀಕ್ಷೆ ಮಾಡಬೇಕು. ಈಗಲೂ ಅದಕ್ಕೆ ಮುಂದಾಗದಿದ್ದರೆ ಸರ್ಕಾರವೇ ತಪ್ಪು ಮಾಡುತ್ತಿದೆ ಎಂಬ ಭಾವನೆ ಬರಲಿದೆ. ನಟಿಯೊಬ್ಬರ ಬಗ್ಗೆ ಅವಹೇಳನ ಮಾಡಿದ್ದಕ್ಕೆ ಕೆಲವರನ್ನು ಬಂಧಿಸಲಾಗಿದೆ. ಆದರೆ, ಧರ್ಮಸ್ಥಳ ಕೋಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆ ತಂದ ಧರ್ಮಸ್ಥಳ ಬಗ್ಗೆ ಅವಹೇಳನ, ಅಪಪ್ರಚಾರ ಮಾಡಿದವರ ಮೇಲೆ ಯಾಕೆ ಪ್ರಕರಣ ದಾಖಲಿಸಿಲ್ಲ ಎಂದು ಪ್ರಶ್ನಿಸಿದರು.

ಸ್ವತಃ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಧರ್ಮಸ್ಥಳ ವಿಚಾರದಲ್ಲಿ ಷಡ್ಯಂತ್ರ ಆಗಿದೆ ಎಂದಿದ್ದಾರೆ. ಷಡ್ಯಂತ್ರ ಮಾಡಿದ್ದು ಯಾರೆಂದು ಮನವರಿಕೆ ಆಗಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಿ. ಪಾರದರ್ಶಕವಾಗಿ ವಿಚಾರಣೆ ಆಗಲು ಎಸ್‌ಐಟಿ ಮಾತ್ರವಲ್ಲ, ಯಾವುದೇ ತನಿಖೆ ಮಾಡಲಿ, ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಬೇಕಾದರೂ ತನಿಖೆಯಾಗಲಿ ಎಂದು ಆಗ್ರಹಿಸಿದರು.

Read more Articles on