ಸಾರಾಂಶ
ಏನಿದು ಸಭಾಧ್ಯಕ್ಷರೇ?, ಸದನದಲ್ಲಿ ಎಲ್ಲದಕ್ಕೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಇಬ್ಬರೇ ಉತ್ತರಿಸುತ್ತಾರೆ. ಇದು ಒಂದು ರೀತಿ ‘ಊರಿಗೊಬ್ಬಳೇ ಪದ್ಮಾವತಿ’ ಕಥೆ ಆಗಿದೆ ಎಂದು ಅಬ್ಬರಿಸಿದರು.
ಹತ್ತಾರು ಶವ ಹೂತು ಹಾಕಿದ್ದೆ ಎಂದ ಅನಾಮಿಕನ ದೂರಿಗೆ ಇದೀಗ ಧರ್ಮಸ್ಥಳ ಗ್ರಾಮದಲ್ಲಿ ಎಲ್ಲಿ ನೋಡಿದರಲ್ಲಿ ಗುಂಡಿ ತೋಡುವ ಕೆಲಸದಲ್ಲಿ ಬ್ಯುಸಿಯಾಗಿರುವ ಎಸ್‌ಐಟಿಗೆ ಹೊಸದೊಂದು ಟಾಸ್ಕ್ ದೊರೆಯುವ ಸಾಧ್ಯತೆ ಹೆಚ್ಚಿದೆ!! ಆದರೆ, ಎಸ್‌ಐಟಿಗೆ ಈ ಟಾಸ್ಕ್ ಕೊಡಿಸಲು ಶ್ವಾನ ಪ್ರೇಮಿ ಸಂಘಗಳು ಮನಸ್ಸು ಮಾಡಬೇಕಷ್ಟೇ! ಮತ್ತು ಸುಪ್ರೀಂ ಕೋರ್ಟ್ ಬಿಡಬೇಕಷ್ಟೇ!!!
ಏನಾಯ್ತು ಅಂದ್ರೆ, ದೆಹಲಿಯಲ್ಲಿ ಶ್ವಾನ ಕಾಟ ಮಿತಿ ಮೀರಿ, ಅದು ಸುಪ್ರೀಂ ಕೋರ್ಟ್‌ನ ಜಡ್ಜ್‌ಗಳಿಗೂ ಗೊತ್ತಾಗಿ, ಶ್ವಾನಗಳನ್ನು ಶೆಡ್‌ಗೆ ಅಟ್ಟಿ ಎಂದು ಅವರು ಆರ್ಡರ್ ಮಾಡುತ್ತಿದ್ದಂತೆಯೇ ಕರ್ನಾಟಕದಲ್ಲೂ ನಾಯಿ ಕಾಟ ಕುರಿತು ತೀವ್ರ ಚರ್ಚೆ ಆರಂಭವಾಗಿದೆ. ಮೊನ್ನೆ ವಿಧಾನಪರಿಷತ್ತಿನಲ್ಲೂ ಇದೇ ವಿಚಾರ ಪ್ರಸ್ತಾಪಗೊಂಡಿತು. ಶಾಸಕ ಬೋಜೇಗೌಡರು ನಾಯಿ ಕಾಟ ಹೇಗೆಲ್ಲ ಇದೆ ಎಂಬುದನ್ನು ಪರಿಪರಿಯಾಗಿ ವಿವರಿಸಿ, ಸುಪ್ರೀಂಕೋರ್ಟ್ ನಿರ್ದೇಶನದಂತೆ ಶೆಡ್‌ಗೆ ಅವುಗಳನ್ನು ಅಟ್ಟಿ, ಬೇಡ ಅಂತ ಅಡ್ಡ ಬರುವವರ ಮನೆಗೆ ಈ ನಾಯಿಗಳನ್ನು ಬಿಟ್ಟು ಬನ್ನಿ ಎಂದು ಆಗ್ರಹಿಸಿದರು.
ಇಷ್ಟಾಗಿದ್ದರೆ ಸಮಸ್ಯೆಯಿರಲಿಲ್ಲ. ಎಸ್‌ಐಟಿ ವಿಚಾರವೂ ಇಲ್ಲಿ ಪ್ರಸ್ತಾಪವಾಗುತ್ತಿರಲಿಲ್ಲ. ಆದರೆ, ಬೋಜೇಗೌಡರು ನಾಯಿ ಕಾಟ ಪರಿಹಾರಕ್ಕೆ ತಾವೇ ಕಂಡು ಹಿಡಿದು ಪ್ರಯೋಗಿಸಿದ ಜವಾರಿ ತಂತ್ರವೊಂದನ್ನು ಬಹಿರಂಗಪಡಿಸಿದರು. ಅದು- ರಾತ್ರೋ ರಾತ್ರಿ ಬೀದಿ ನಾಯಿಗಳಿಗೆ ‘ಅದು’ ಹಾಕಿ ತೆಂಗಿನ ಮರಗಳ ಬುಡದಲ್ಲಿ ಹೂತು ಹಾಕುವುದು.
ಆದರೆ, ನಾಯಿಗಳಿಗೆ ಹಾಕಿದ ಆ ‘ಅದು’ ಏನು ಎಂಬುದು ಹಾಗೂ ಯಾವ ತೆಂಗಿನ ಮರಗಳ ಬುಡದಲ್ಲಿ ಎಂಬುದನ್ನು ಬಹಿರಂಗಪಡಿಸಲಿಲ್ಲ. ಪರಂತು, ತಾವು ಈ ಜವಾರಿ ತಂತ್ರ ಬಳಸಿ ಸಾವಿರಾರು ಶ್ವಾನಗಳಿಗೆ ಮುಕ್ತಿ ಹಾಗೂ ತೆಂಗಿನ ಮರಗಳಿಗೆ ಗೊಬ್ಬರ ದೊರಕಿಸಿಕೊಟ್ಟ ವಿಚಾರ ಮಾತ್ರ ಬಹಿರಂಗಪಡಿಸಿದರು.
ಇದನ್ನು ಕೇಳಿ ಶ್ವಾನಪ್ರೇಮಿಗಳು ಗುರ್ ಅನ್ನತೊಡಗಿದ್ದು, ಅನಾಮಿಕನ ಮಾತಿಗೆ ಧರ್ಮಸ್ಥಳದಲ್ಲಿ ಗುಂಡಿ ಅಗೆದಂತೆ ಬೋಜೇಗೌಡರು ಅಡ್ಡಾಡಿದ ಕಡೆಗಳಲ್ಲಿ ಎಲ್ಲೆಲ್ಲಿ ತೆಂಗಿನ ಮರ ಇದಾವೋ ಅಲ್ಲೆಲ್ಲ ಗುಂಡಿ ಅಗೆಯಬೇಕು. ಈ ಹೊಣೆಯನ್ನು ಎಸ್‌ಐಟಿಗೆ ನೀಡಬೇಕು ಎಂದು ಇನ್ನೂ ಹೇಳುತ್ತಿಲ್ಲವಂತೆ. ಹಾಗೇನಾದರೂ ಆದರೆ ಪಾಪ ಎಸ್‌ಐಟಿಗೆ ಹೊಸ ಟಾಸ್ಕ್ ಗ್ಯಾರಂಟಿ!
ಪಕ್ಷಪಾತಿ ಪೊಲೀಸರು!
ನೀವೇನೇ ಹೇಳಿ, ಈ ಪೊಲೀಸರು ಇದ್ದಾರಲ್ಲ. ಅವರು ಪಕ್ಕಾ ಪಕ್ಷಪಾತಿಗಳು!!! ರಾಹುಲ್ ಗಾಂಧಿ ಅವರು ಮತಗಳ್ಳತನ ಕುರಿತು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡಿದರಲ್ಲ, ಅಲ್ಲಿ ಈ ಪೊಲೀಸರ ಪಕ್ಷಪಾತಿ ಧೋರಣೆ ಬಟಾಬಯಲಾಯ್ತು!
ಈ ಪ್ರತಿಭಟನಾ ಆಂದೋಲನದಲ್ಲಿ ಸಾವಿರಾರು ಜನರೂ ಭಾಗವಹಿಸಿದ್ದರು. ಅದರ ಸುದ್ದಿ ಮಾಡಲು ರಾಜ್ಯ, ರಾಷ್ಟ್ರಮಟ್ಟದ ಮಾಧ್ಯಮ ಪ್ರತಿನಿಧಿಗಳು ಠಿಕಾಣಿ ಹೂಡಿದ್ದರು. ಈ ವೇಳೆ ಮಾಧ್ಯಮ ಪ್ರತಿನಿಧಿಯೊಬ್ಬರು ಕಪ್ಪು ಬಣ್ಣದ ಶರ್ಟ್ ಧರಿಸಿ ಬಂದಿದ್ದರು. ಕಪ್ಪನೇ ಶರ್ಟ್ ಕಂಡಿದ್ದೆ ತಡ ಸಮಾವೇಶ ಸ್ಥಳಕ್ಕೆ ಪ್ರವೇಶಿಸದಂತೆ ಪೊಲೀಸರು ತಡೆದರು.
ಏಕಪ್ಪಾ ಅಂದ್ರೆ ಕಪ್ಪು ಪ್ರತಿಭಟನೆಯ ಸಂಕೇತ. ಮತಗಳ್ಳತನ ಪ್ರತಿಭಟನೆಗೆ ಕಪ್ಪು ತೋರಿಸಿ ನೀವು ಪ್ರತಿಭಟನೆ ಮಾಡಿಬಿಟ್ಟರೇ ಅಂದ್ರು. ಸ್ವಾಮಿ, ನಾನು ಪತ್ರಕರ್ತ ಅಂದ್ರು ಕೇಳದೇ ‘ಕಪ್ಪು ಬಟ್ಟೆ ಧರಿಸಿದವರಿಗೆ ಇಲ್ಲಿ ಪ್ರವೇಶವಿಲ್ಲ ರೂಲ್ಸು ಸರ್ ಎಂದು ಬಿಟ್ಟರು. ಓಕೆ. ಮುಂದಕ್ಕೆ ಹೋಗೋಣ ಅಂದುಕೊಂಡ ಪತ್ರಕರ್ತ ಅಲ್ಲೇ ಇದ್ದ ಸ್ನೇಹಿತರ ಬಳಿ ಜಾಕೆಟ್ ಪಡೆದು ಅದನ್ನು ಧರಿಸಿ ಒಳ ಹೋಗಲು ಮುಂದಾದರು. ಆದರೆ, ಮುಂದಕ್ಕೆ ಹೋಗಲು ಬಿಡದ ಪೊಲೀಸರು ಒಳ ಹೋದ ನಂತರ ನೀವು ಜಾಕೆಟ್ ತೆಗೆದು ನಿಂತರೇ... ಎಂದು ಲಾ ಪಾಯಿಂಟ್ ಹಾಕಿಬಿಟ್ಟರು. ಬೇರೆ ವಿಧಿಯಿಲ್ಲದೆ ಅಲ್ಲೇ ಸಮೀಪದಲ್ಲಿದ್ದ ಬಟ್ಟೆ ಅಂಗಡಿಗೆ ತೆರಳಿ ಹೊಸ ಬಟ್ಟೆ ಖರೀದಿಸಿ, ಅದನ್ನು ಧರಿಸಿ ವಾಪಸು ಪ್ರತಿಭಟನಾ ಸಮಾವೇಶಕ್ಕೆ ಬಂದಾಗಲಷ್ಟೇ ಪೊಲೀಸರು ಮುಂದಕ್ಕೆ ಹೋಗಲು ಬಿಟ್ಟದ್ದು. ಇಷ್ಟೆಲ್ಲ ಹರಸಾಹಸಪಟ್ಟು ಸಮಾವೇಶದ ವೇದಿಕೆ ಮುಂಭಾಗಕ್ಕೆ ಬಂದರೆ, ವೇದಿಕೆಯಲ್ಲಿದ್ದ ಕಾಂಗ್ರೆಸ್ ನಾಯಕ ಎಚ್.ಎಂ.ರೇವಣ್ಣ ಸೇರಿ ಇನ್ನೂ ಕೆಲವರು ಕಪ್ಪು ಬಣ್ಣದ ಶರ್ಟ್ ಧರಿಸಿ ಠೀವಿಯಿಂದ ರಾರಾಜಿಸೋದೆ!
ನೋಡಿ, ಮಾಧ್ಯಮದವರು ಧರಿಸಿದರೆ ಮಾತ್ರ ಕಪ್ಪೇ, ರಾಜಕಾರಣಿಗಳು ಧರಿಸಿದರೇ ಕಪ್ಪು, ಕಪ್ಪಲ್ಲವೇ? ಎಂತಹ ಪಕ್ಷಪಾತಿಗಳು ಈ ಪೊಲೀಸರು! ಎಂದು ಸದರಿ ಪತ್ರಕರ್ತ ಗೊಣಗಿದ್ದಷ್ಟೇ ಲಾಭ!
ಪಗಾರ ಇದ್ದಾಗ ಭ್ರಷ್ಟಾಚಾರ ಯಾಕ್ರೀ?
ನಿಮ್ಮ ಪಗಾರ ಜಗ್ ಹೆಚ್ಚಾಗೈತಿ, ಜನರ್ರಿಗೆ ಭ್ರಷ್ಟಾಚಾರ ಮುಕ್ತ ಆಡಳಿತ ಕೊಡ್ರಿ.
ಹೀಗಂತ ಹುಕುಂ ಕೊಟ್ರು ಸಚಿವ ಎಚ್.ಕೆ.ಪಾಟೀಲ. ಈ ಹುಕುಂ ಯಾಕಂದ್ರ- ನಾವು ಸಣ್ಣವರಿದ್ದಾಗ ಸರ್ಕಾರಿ ನೌಕರದಾರ ಪಗಾರ ಅತೀ ಕಡ್ಮಿ ಇತ್ತು, ಈಗ 7ನೇ ವೇತನ ಆಯೋಗ ಜಾರಿ ಮಾಡಿಂದ್ ಸರ್ಕಾರಿ ನೌಕರರ ಪಗಾರ ಜಗ್ ಹೆಚ್ಚಾಗೈತಿ, ನೀವೆಲ್ಲಾ ಜನ್ರಿಗೆ ಭ್ರಷ್ಟಾಚಾರ ಮುಕ್ತ ಆಡಳಿತ ಕೊಡೋ ದೊಡ್ಡ ಮನಸ್ಸು ಮಾಡಬೇಕ್, ಹೌದಲ್ಲರೀ.... ಅಂತ ವಿವರಣೆನೂ ಕೊಟ್ರು.
ಜತೆಗೆ, ನಮ್ಮ ಗ್ಯಾಂರಟಿ ಯೋಜನೆಗಳಿಗೆ ಕೊಡುವ ಒಟ್ಟು ಹಣದ ಶೇ.50ರಷ್ಟನ್ನು ನಾವು ಸರ್ಕಾರಿ ನೌಕರರ ಸಂಬಳಕ್ಕ ಕೊಡ್ತೀವಿ, ನೀವ್ ನೋಡ್ಕೋರಿ, ಈಗ ನಿಮ್ಮ ಪಗಾರ ಎಷ್ಟು ಪಟ್ಟು ಹೆಚ್ಚಾಗೈತಿ ಅಂತಾ.. ಹಾಗಾಗಿ ಜನ್ರ ಕಡೆಯಿಂದ ಏನೂ ನಿರೀಕ್ಷೆ ಮಾಡ್ದ ಕೆಲ್ಸಾ ಮಾಡ್ರೀ... ಎಂದರು. ಆದ್ರ ಇಂತಹ ಆದೇಶ ಕೇಳ್ತಾರೇನ್ರಿ ನಮ್ ಸರ್ಕಾರಿ ನೌಕರರು! ಛೇ ಚಾನ್ಸ್ ಏ ಇಲ್ಲ... ಬಿಡ್ರಿ.
ಊರಿಗೊಬ್ಬಳೇ ಪದ್ಮಾವತಿ!
ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣ ಅವರು ಸದನದಲ್ಲಿ ಊರಿಗೊಬ್ಬಳೇ ಪದ್ಮಾವತಿ ಎಂದು ಕೂಗಾಡಿದಾಗ ಸದನ ಸಿಟ್ಟಾಗುವ ಬದಲು ನಗೆಗಡಲಲ್ಲಿ ತೇಲಿತು.
ಕಾರಣ ಎಂ.ಟಿ.ಕೃಷ್ಣಪ್ಪ ಅವರು ಮೊನ್ನೆ ಗಮನ ಸೆಳೆಯುವ ಸೂಚನೆಯಡಿ ತುಮಕೂರು ವಿಶ್ವವಿದ್ಯಾಲಯದಲ್ಲಿ 15 ವರ್ಷಗಳಿಂದ ಗುತ್ತಿಗೆ ಆಧಾರದಡಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರನ್ನು ಕಾಯಂಗೊಳಿಸುವ ಬಗ್ಗೆ ಉನ್ನತ ಶಿಕ್ಷಣ ಸಚಿವರ ಗಮನ ಸೆಳೆದರು.
ಇದಕ್ಕೆ ನ್ಯಾಯವಾಗಿ ಉನ್ನತ ಶಿಕ್ಷಣ ಸಚಿವರು ಉತ್ತರ ನೀಡಬೇಕಿತ್ತು. ಆದರೆ, ಉತ್ತರ ನೀಡಲು ಎದ್ದು ನಿಂತವರು ಕಂದಾಯ ಸಚಿವ ಕೃಷ್ಣ ಬೈರೇಗೌಡ. ಇದನ್ನು ಕಂಡ ಕೃಷ್ಣಪ್ಪ ಅರೇ ಏನಿದು ಸಭಾಧ್ಯಕ್ಷರೇ?, ಸದನದಲ್ಲಿ ಎಲ್ಲದಕ್ಕೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಇಬ್ಬರೇ ಉತ್ತರಿಸುತ್ತಾರೆ. ಇದು ಒಂದು ರೀತಿ ‘ಊರಿಗೊಬ್ಬಳೇ ಪದ್ಮಾವತಿ’ ಕಥೆ ಆಗಿದೆ ಎಂದು ಅಬ್ಬರಿಸಿದರು. ಇದಕ್ಕೆ ಸದನ ಕೆಲ ಕಾಲ ನಗೆಗಡಲಲ್ಲಿ ತೇಲಿತು. ಬಳಿಕ ಸಭಾಧ್ಯಕ್ಷ ಯು.ಟಿ.ಖಾದರ್, ಮಾನ್ಯ ಶಾಸಕರಿಗೆ ಸಂಬಂಧಿತ ಸಚಿವರಿಂದ ಉತ್ತರ ಕೊಡಿಸಿ ಎಂದು ಆದೇಶಿದರು.
-ಚಂದ್ರಮೌಳಿ ಎಂ.ಆರ್.
-ಗಿರೀಶ್ ಗರಗ
-ಶಿವಕುಮಾರ ಕುಷ್ಟಗಿ
-ಮೋಹನ ಹಂಡ್ರಂಗಿ