ಆಧುನಿಕ ವಿಜ್ಞಾನದ ಆವಿಷ್ಕಾರಗಳು, ಪ್ರಗತಿ ನಮ್ಮ ಜೀವನ ಸುಧಾರಣೆಗೆ ನೆರವಾದರೆ ಶಂಕರರ ತತ್ವಗಳು ಜೀವನವನ್ನು ಸಾರ್ಥಕಪಡಿಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದು ಶೃಂಗೇರಿ ಶಾರದಾಪೀಠದ ವಿಧುಶೇಖರಭಾರತೀ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆಧುನಿಕ ವಿಜ್ಞಾನದ ಆವಿಷ್ಕಾರಗಳು, ಪ್ರಗತಿ ನಮ್ಮ ಜೀವನ ಸುಧಾರಣೆಗೆ ನೆರವಾದರೆ ಶಂಕರರ ತತ್ವಗಳು ಜೀವನವನ್ನು ಸಾರ್ಥಕಪಡಿಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದು ಶೃಂಗೇರಿ ಶಾರದಾಪೀಠದ ವಿಧುಶೇಖರಭಾರತೀ ಸ್ವಾಮೀಜಿ ಹೇಳಿದರು.

ನಗರದ ಅರಮನೆ ಮೈದಾನದ ಕೃಷ್ಣವಿಹಾರದಲ್ಲಿ ವೇದಾಂತ ಭಾರತಿಯಿಂದ ಆಯೋಜಿಸಿರುವ ನಾಲ್ಕು ದಿನಗಳ ‘ವಿವೇಕ ದೀಪ್ತಿ’ ಬೃಹತ್ ಸಮಾವೇಶದಲ್ಲಿ ‘ಶ್ರೀ ಶಂಕರಭಗವತ್ಪಾದ ವಿರಚಿತ ದಕ್ಷಿಣಾ ಮೂರ್ತಿ ಅಷ್ಟಕದ ಮಹಾ ಸಮರ್ಪಣೆ’ ಬಳಿಕ ಅವರು ಆಶೀರ್ವಚನ ನೀಡಿದರು.

ಇಂದ್ರಿಯಗಳನ್ನು ತಮ್ಮ ವಶದಲ್ಲಿರಿಸಿಕೊಳ್ಳಲು ಸಾಧ್ಯವಾಗುವ ಜ್ಞಾನವೇ ನೈಜ ಜ್ಞಾನ. ಅಂತಹ ಜ್ಞಾನ ಪಡೆಯುವುದೇ ನಮ್ಮ ಜೀವನ ಮಾರ್ಗವಾಗಬೇಕು. ಇಂದ್ರಿಯಗಳನ್ನು ವಶದಲ್ಲಿ ಇಟ್ಟುಕೊಳ್ಳದಿದ್ದರೆ ಸಹಜವಾಗಿಯೇ ದುಃಖ ಅನುಭವಿಸಬೇಕಾಗುತ್ತದೆ. ಆಧುನಿಕ ವಿಜ್ಞಾನದ ಆವಿಷ್ಕಾರಗಳು ಪ್ರಗತಿ ನಮ್ಮ ಜೀವನ ಸುಧಾರಣೆಗೆ ನೆರವಾಗಲಿವೆ. ಆದರೆ, ಶಂಕರರ ತತ್ವಗಳು ಜೀವನವನ್ನು ಸಾರ್ಥಕ ಪಡಿಸಿಕೊಳ್ಳಲು ಸಹಕಾರಿಯಾಗಲಿವೆ ಎಂದರು.

ಭಾರತೀಯ ಗುರು ಪರಂಪರೆ ಅತ್ಯಂತ ಶ್ರೀಮಂತವಾದದ್ದು. ಇದೇ ಪರಂಪರೆಯಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದು ನಮ್ಮ ವಿವೇಕವನ್ನು ಉದ್ದೀಪನಗೊಳಿಸಬೇಕು. ಉಪನಿಷತ್ತುಗಳಲ್ಲಿ ಪರಬ್ರಹ್ಮ ತತ್ವ ಅಡಗಿದೆ. ಲೌಕಿಕ ಪ್ರಪಂಚ ತಿಳಿದುಕೊಂಡಷ್ಟೂ ಅವೆಲ್ಲವೂ ಕೇವಲ ಜೀವನ ನಡೆಸಲು ಮಾತ್ರ ಸಾಧ್ಯ. ಶಂಕರರ ತತ್ವ, ಉಪದೇಶಗಳು ಜಗತ್ತಿಗೆ ಅತ್ಯಂತ ಅಗತ್ಯವಾಗಿದೆ. ಪ್ರತಿ ದಿನ ಇದನ್ನು ಮನನ ಮಾಡಿಕೊಳ್ಳಬೇಕು. ಶಂಕರರು ಅವತಾರ ಮಾಡಿದ್ದರಿಂದ ಹಿಂದೂ ಧರ್ಮ ಉಳಿದಿದೆ. ಧರ್ಮ ನಾಶ ಮಾಡಲು ನಿರಂತರ ಪ್ರಯತ್ನದ ನಡುವೆಯೂ ಧರ್ಮ ಸ್ಥಿರವಾಗಿಯೇ ಇದೆ. ಈ ತತ್ವವನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಇಂತಹ ಜ್ಞಾನ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ ಎಂದರು.

ಮಕ್ಕಳಿಗೆ ಧಾರ್ಮಿಕ ಪರಂಪರೆ, ಚಿಂತನೆಗಳ ಬಗ್ಗೆ ತಿಳಿಸಬೇಕು. ಭಾರತ ನಿಜವಾಗಿಯೂ ವಿಶ್ವಗುರು ಆಗಲು ಶಂಕರರ ತತ್ವಗಳ ಮೂಲಕ ಸಾಗಬೇಕು. ಆಧುನಿಕ ವಿಜ್ಞಾನದ ಜೊತೆ ಬೇರ್ಪಡಿಸಲಾಗದ ಬಾಂಧವ್ಯ ಹೊಂದಿರುವುದು ಸನಾತನ ಧರ್ಮವಾಗಿದೆ. ವೇದಾಂತ ಭಾರತಿ ಜೊತೆಗೂಡಿ ಶೃಂಗೇರಿ ಮಠ ರಚನಾತ್ಮಕ ಕಾರ್ಯಕ್ರಮ ನಡೆಸುತ್ತಿದೆ. ಧಾರ್ಮಿಕ ಜಾಗೃತಿ ಬಿತ್ತುವ ಕೆಲಸ ಮುಂದುವರಿಯಬೇಕು ಎಂದರು.

ವಿಜ್ಞಾನ ಪ್ರದರ್ಶನ ಮಾದರಿ:

ಕೆ.ಆರ್. ನಗರದ ಯಡತೊರೆ ಶ್ರೀ ಯೋಗಾನಂದ ಸರಸ್ವತಿ ಮಠಾಧೀಶ ಶಂಕರ ಭಾರತಿ ಸ್ವಾಮೀಜಿ ಮಾತನಾಡಿ, ಪರಂ ಫೌಂಡೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ವಿಜ್ಞಾನ ಪ್ರದರ್ಶನದ ಮಾದರಿ ಪ್ರತಿಯೊಬ್ಬ ವಿದ್ಯಾರ್ಥಿ ಸಮೂಹಕ್ಕೆ ತಲುಪಿಸಲು ಪ್ರಯತ್ನಿಸಲಾಗುವುದು. ಯುವ ಸಮೂಹಕ್ಕೆ ದಕ್ಷಿಣಾಮೂರ್ತ್ಯಷ್ಟಕವನ್ನು ವಿಜ್ಞಾನದ ಸಾಧನಗಳ ಮೂಲಕ ತಲುಪಿಸಲು ವಿನೂತನ ಪ್ರಯತ್ನ ನಡೆಸಲಾಗಿದೆ ಎಂದರು.

ಜೀವನದಲ್ಲಿ ಒತ್ತಡ, ಸವಾಲು, ಬೇರೆ ಬೇರೆ ಸಮಸ್ಯೆಗಳಿರಬಹುದು. ಇದೆಲ್ಲವನ್ನೂ ಮೆಟ್ಟಿ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಲು ಈ ಸ್ತ್ರೋತ್ರಗಳು ಅತಿ ಮುಖ್ಯ. ಬೆಂಗಳೂರು ನಗರದ 350ಕ್ಕೂ ಹೆಚ್ಚು ಕಾಲೇಜುಗಳು ಈ ಬಾರಿ ಸಮಾವೇಶದಲ್ಲಿ ಭಾಗಿಯಾಗಿವೆ. ಸಮಾಜದಲ್ಲಿ ರಚನಾತ್ಮಕ ಕೆಲಸವನ್ನು ನಿರಂತರವಾಗಿ ಮುಂದುವರಿಸುತ್ತೇವೆ ಎಂದರು.ಯಡತೊರೆ ಮಠದ ಪರಮಪೂಜ್ಯ ಬ್ರಹ್ಞಾನಂದ ಭಾರತಿ ಸ್ವಾಮೀಜಿ, ವೇದಾಂತ ಭಾರತಿ ಟ್ರಸ್ಟಿ ಹಾಗೂ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಎಸ್.ಎಸ್. ನಾಗಾನಂದ ಮತ್ತಿತರ ಗಣ್ಯರು ಇದ್ದರು.

ಮಹಾ ಸಮರ್ಪಣೆ

ನಾಲ್ಕು ದಿನಗಳ ‘ವಿವೇಕ ದೀಪ್ತಿ’ ಬೃಹತ್ ಸಮಾವೇಶದ ಮೂರನೇ ದಿನವಾದ ಶುಕ್ರವಾರ 50-60 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡು ಶ್ರೀ ಶಂಕರಭಗವತ್ಪಾದ ವಿರಚಿತ ದಕ್ಷಿಣಾ ಮೂರ್ತಿ ಅಷ್ಟಕದ ಮಹಾ ಸಮರ್ಪಣೆಗೆ ಸಾಕ್ಷಿಯಾದರು. ವೇದಮೂತಿ ದಿನೇಶ್‌ ಹೆಗಡೆ ಅವರು ಈ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಾಂಗಣದಲ್ಲಿ ಸೇರಿದ್ದ ಸಾವಿರಾರು ಏಕಕಂಠದಲ್ಲಿ ದಕ್ಷಿಣಾಮೂರ್ತಿ ಸ್ತೋತ್ರವನ್ನು ಪಠಿಸಿ ಗುರುಗಳಿಗೆ ಅರ್ಪಿಸಿದರು.

ವಸ್ತುಪ್ರದರ್ಶನ:

ವಿಜ್ಞಾನ - ಸ್ತ್ರೋತ್ರಗಳ ಸಮ್ಮಿಳಿತಗೊಂಡ ವೈಜ್ಞಾನಿಕ ಪ್ರಯೋಗಗಳ ವಸ್ತುಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ವಿವಿಧ ಶಾಲಾ ವಿದ್ಯಾರ್ಥಿಗಳು ಆಗಮಿಸಿ ಕುತೂಹಲದಿಂದ ವೀಕ್ಷಿಸಿ ಮಾಹಿತಿ ಪಡೆದರು. ಇಂದು ಕಾರ್ಯಕ್ರಮದ ಸಮಾರೋಪ ನಡೆಯಲಿದ್ದು, ಇಸ್ರೋ ಮಾಜಿ ಅಧ್ಯಕ್ಷ ಎಸ್‌. ಸೋಮನಾಥನ್‌ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಮಕ್ಕಳಿಗೆ ಧಾರ್ಮಿಕ ಪರಂಪರೆ, ಚಿಂತನೆಗಳ ಬಗ್ಗೆ ತಿಳಿಸಬೇಕು. ಭಾರತ ನಿಜವಾಗಿಯೂ ವಿಶ್ವಗುರು ಆಗಲು ಶಂಕರರ ತತ್ವಗಳ ಮೂಲಕ ಸಾಗಬೇಕು. ಆಧುನಿಕ ವಿಜ್ಞಾನದ ಜೊತೆ ಬೇರ್ಪಡಿಸಲಾಗದ ಬಾಂಧವ್ಯ ಹೊಂದಿರುವುದು ಸನಾತನ ಧರ್ಮವಾಗಿದೆ.

- ವಿಧುಶೇಖರಭಾರತೀ ಸ್ವಾಮೀಜಿ, ಶೃಂಗೇರಿ ಶಾರದಾಪೀಠ