ಭಾನುವಾರವಾದರೂ ಈ ಸಲ ಬಜೆಟ್ ಫೆ.1ರಂದು ಮಂಡನೆ ಆಗುತ್ತಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಯುದ್ಧದ ಕಾರ್ಮೋಡ, ಟ್ರಂಪ್ ಉಪಟಳದ ನಡುವೆ ಬಜೆಟ್‌ಗೆ ದೇಶ ಸಾಕ್ಷಿಯಾಗುತ್ತಿದೆ. ಜನರ ಚಿತ್ತ ಆಯವ್ಯಯ ಮಂಡನೆಯತ್ತ ನೆಟ್ಟಿದೆ
ವಿಜಯ್ ರಾಜೇಶ್
ವಕೀಲರು ಹಾಗೂ ತೆರಿಗೆ ಸಲಹೆಗಾರರು
2026ನೇ ಸಾಲಿನ ಬಜೆಟ್ ಎಂದಿನಂತೆ ಫೆ.1ರಂದು ಮಂಡನೆಯಾಗುತ್ತಿದೆ. ಹಿಂದಿನ ಮಂಡನೆಗಳಿಗೆ ಹೋಲಿಸಿದರೆ ಈ ಬಾರಿಯ ಬಜೆಟ್ ಬಹಳಷ್ಟು ಅನಿಶ್ಚಿತತೆ ಹೊಂದಿದೆ. ಆದರೆ ಆಶಾದಾಯಕವಾಗಿದೆ. ದೇಶದ ಒಳಗಡೆಯ ಪರಿಸ್ಥಿತಿಗಳು ಸಮಾಧಾನಕರವಾಗಿದ್ದರೂ, ಜಾಗತಿಕ ಅಸ್ಥಿರತೆ ಆತಂಕ ಮೂಡಿಸುತ್ತದೆ.
ಸಂಕಷ್ಟದ ನಡುವೆ ಪೂರಕ:
ಮೊದಲನೆಯದಾಗಿ ಟ್ರಂಪ್ ಹುಚ್ಚಾಟ ಎನ್ನಬಹುದು. ಅಮೆರಿಕ ದೇಶದ ನಡೆ ಜಾಗತಿಕವಾಗಿ ಅಲ್ಲೋಲ, ಕಲ್ಲೋಲ ಸೃಷ್ಟಿಸಿದೆ. ಅದು ಎಲ್ಲ ದೇಶಗಳ ಮೇಲೆ ವಿಧಿಸುತ್ತಿರುವ ಸುಂಕ, ಯುದ್ಧ ಭೀತಿ, ದಿನಕ್ಕೊಂದು ನಡೆ ನಮ್ಮ ದೇಶದ ಆರ್ಥಿಕತೆಗೆ ಸಮಸ್ಯೆಯನ್ನು ತಂದಿದೆ. ಹಾಗೆ ನೋಡಿದರೆ ಅಮೆರಿಕದ ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳುವ ಪ್ರಯತ್ನ, ಇರಾನ್ ಮೇಲೆ ಯುದ್ಧ ಸಂಭವ. ಸೌದಿ ಮತ್ತು ಯುಎಇ ನಡುವೆ ಅಸಮಾಧಾನ, ಇಸ್ರೇಲ್ ಸುತ್ತಲಿನ ದೇಶಗಳ ಜತೆ ಯುದ್ಧ, ಪಾಕಿಸ್ತಾನ ಮತ್ತು ಆಪ್ಘಾನಿಸ್ತಾನದ ಮಧ್ಯೆ ಸಮಸ್ಯೆ, ಭಾರತ, ಪಾಕಿಸ್ತಾನ , ಬಾಂಗ್ಲಾ ನಡುವಿನ ಸಮಸ್ಯೆ, ಶ್ರೀಲಂಕಾದಲ್ಲಿ ಅಸ್ಥಿರತೆ, ಚೀನಾ, ಜಪಾನ್ ನಡುವೆ ಅಸಮಾಧಾನ, ಥಾಯ್ಲೆಂಡ್- ಕಾಂಬೋಡಿಯಾ ನಡುವಿನ ಕದನ ಮತ್ತು ಉಕ್ರೇನ್ - ರಷ್ಯಾ ಯುದ್ಧ. ಇದಲ್ಲದೆ ಆಫ್ರಿಕಾದಲ್ಲಿ, ದಕ್ಷಿಣ ಅಮೆರಿಕದಲ್ಲಿರುವ ಸಮಸ್ಯೆಗಳು, ಇಷ್ಟು ದೀರ್ಘವಾಗಿ ಸಮಸ್ಯೆಗಳನ್ನು ಉದಾಹರಿಸುವ ಉದ್ದೇಶ, ನಾವು ಎಂತಹ ಅನಿಶ್ಚಿತತೆಯ ಕಾಲಘಟ್ಟದಲ್ಲಿ ಇದ್ದೇವೆ ಮತ್ತು ಇದರ ಪ್ರಭಾವ ಭಾರತದ ಮೇಲಿನ ಪರಿಣಾಮದ ಬಗ್ಗೆ ವಿವರಿಸುವುದಾಗಿದೆ.
ಈ ಪರಿಸ್ಥಿತಿ ಮತ್ತು ಪರಿಣಾಮಗಳ ನಡುವೆ ಈ ಬಾರಿಯ ಬಜೆಟ್ ಸರ್ಕಾರಕ್ಕೆ ಸವಾಲೇ ಸರಿ. ಆದರೆ ದೇಶದ ಒಳಗಿನ ಆರ್ಥಿಕತೆ ಆಶಾದಾಯಕವಾಗಿದೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನಮ್ಮ ದೇಶ ಜಾಗತಿಕ ಆರ್ಥಿಕತೆ ಉತ್ತೇಜನಕ್ಕೆ ಎಂಜಿನ್ ಎಂದು ಹೇಳುವ ಮೂಲಕ ನಮ್ಮ ಆರ್ಥಿಕತೆ ಬಗ್ಗೆ ನಿರಾಳತೆ ನೀಡಿದ್ದಾರೆ.
ನಮ್ಮ ದೇಶದಲ್ಲಿ ಕೈಗಾರಿಕಾ ವಲಯ ಉತ್ತೇಜನವಿದೆ. ಮಳೆ, ಬೆಳೆಗಳು, ಕೃಷಿ ಉತ್ಪಾದನೆ, ಸಮಾಧಾನಕರವಾಗಿದೆ. ತೆರಿಗೆಯು ನಿರೀಕ್ಷೆಯ ಮಟ್ಟಕ್ಕೆ ಸಂಗ್ರಹವಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಆರ್ಥಿಕ ಸಮೀಕ್ಷೆ ಸಮಾಧಾನಕರವಾಗಿದೆ. ತೆರಿಗೆ ಸಂಗ್ರಹದಿಂದಾಗಿ, ಸರ್ಕಾರ ಹೆಚ್ಚು ವೆಚ್ಚವನ್ನು ಮಾಡಬಹುದು. ಇದರಿಂದ ಹಣದ ಹರಿವು ಹೆಚ್ಚಾಗಿ ಎಲ್ಲರ ಬಳಿ ಹಣದ ಲಭ್ಯತೆ ಬೆಳವಣಿಗೆಯಾಗಿದೆ. ಇದು ಆರ್ಥಿಕತೆಗೆ ಪೂರಕವಾಗಿದೆ.
ಕಳೆದ ವಾರ ಯುರೋಪಿಯನ್ ಒಕ್ಕೂಟದ ಜತೆಗಿನ ಮುಕ್ತ ವ್ಯಾಪಾರ ಒಪ್ಪಂದ ಹಲವಾರು ವರ್ಷಗಳ ನಂತರದ ಅನಿಶ್ಚಿತತೆ ಮತ್ತು ಅಸ್ಥಿರತೆ ನಡುವೆ ಆಶಾಕಿರಣ ಎನ್ನಬಹುದು. ಈ ಒಪ್ಪಂದ ರಫ್ತು ಹೆಚ್ಚಳಕ್ಕೆ ಪೂರಕವಾಗಿದೆ.
ಐಟಿ ಕಾನೂನಿನ ಮೇಲೆ ನಿರೀಕ್ಷೆ:
ಕಳೆದ ಬಾರಿ ಆದಾಯ ತೆರಿಗೆ ಕಾನೂನಿನ ಅಡಿಯಲ್ಲಿ ಸಮಾಧಾನಕರವಾಗಿ ಹೆಚ್ಚಿನ ಬದಲಾವಣೆ ತಂದರೂ , ಈ ಬಾರಿ ಇನ್ನೂ ಹೆಚ್ಚಿನ ಬದಲಾವಣೆ ನಿರೀಕ್ಷೆಯಿದೆ. ಸರ್ಕಾರ ಕೂಡ ಹೆಚ್ಚು ಹಣ ಜನರ ಬಳಿ ಬರುವಂತೆ ಮತ್ತು ಹೆಚ್ಚು ಖರ್ಚು ಮಾಡುವುದರಿಂದ ಆರ್ಥಿಕತೆ ಉತ್ತೇಜನಕ್ಕೆ ಪ್ರಯತ್ನಿಸುತ್ತದೆ. ನಮ್ಮ ದೇಶದ ಡಿಜಿಟಲ್ ಕ್ರಾಂತಿ ಕೂಡ ಆರ್ಥಿಕತೆಗೆ ಪೂರಕವಾಗಿದೆ.
ಒಟ್ಟಾರೆಯಾಗಿ ಜಾಗತಿಕವಾಗಿ ಅನಿಶ್ಚಿತತೆಯಿಂದ ಕೂಡಿರುವ ಈ ಸಮಯದಲ್ಲಿ ಈ ಬಾರಿಯ ಬಜೆಟ್ ನಿಗದಿಯಂತೆ ಫೆಬ್ರವರಿ 1 ರಂದು ಭಾನುವಾರವಾದರೂ ಮಂಡನೆಯಾಗುತ್ತಿದೆ. ಈ ಬಾರಿಯ ಬಜೆಟ್ ಸರ್ಕಾರಕ್ಕೆ ಸವಾಲೇ ಸರಿ. ಜಾಗತಿಕ ಸಮಸ್ಯೆಗಳಿಂದಾಗಿ ಈ ಬಾರಿ ರಕ್ಷಣಾ ವೆಚ್ಚ ಏರುವ ಸಾಧ್ಯತೆ ಇದೆ. ಪರಿಸ್ಥಿತಿ ಹೀಗಿದ್ದರೂ ಆಂತರಿಕವಾಗಿ ಇರುವ ಅನುಕೂಲಗಳ ನಡುವೆ ಜನರ ಬಳಿ ಹಣ ಬರುವಂತೆ ಮತ್ತು ಜೀವನ ದುಸ್ತರವಾಗದಂತೆ ಸರ್ಕಾರ ಕ್ರಮಕೈಗೊಳ್ಳಬೇಕಾಗಿದೆ.
ಕಿವಿಮಾತು-
ಬಜೆಟ್ ಎಂದರೆ ನಮಗಾಗುವ ಲಾಭದ ನಿರೀಕ್ಷೆಯಿಂದ ಎದುರು ನೋಡುವ ಮನೋಭಾವದಿಂದ ಹೊರಬರಬೇಕು. ದೇಶ ಅನಿಶ್ಚಿತತೆಯ ಸವಾಲಿನಿಂದ ಹೊರಬರುವಂತೆ ಕೈಗೊಳ್ಳುವ ಕ್ರಮಗಳ ಬಗ್ಗೆ ಹೆಚ್ಚು ಒತ್ತು ನೀಡಬೇಕಾಗಿದೆ.
