ಪ್ರಧಾನಿ ಮೋದಿಯವರು ಒಂದು ಮಾತನ್ನು ಯಾವಾಗಲೂ ಹೇಳುತ್ತಿರುತ್ತಾರೆ: ‘ನಾನು ಎಂದಿಗೂ ಉದ್ದೇಶಪೂರ್ವಕವಾಗಿ ತಪ್ಪು ನಿರ್ಣಯ ತೆಗೆದುಕೊಳ್ಳುವುದಿಲ್ಲ. ಕೆಲವೊಮ್ಮೆ ಸದಾಶಯದ ನಿರ್ಧಾರಗಳು ವ್ಯತಿರಿಕ್ತ ಪರಿಣಾಮ ಬೀರಬಹುದು. ಆಗ ಅವುಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಸರಿಪಡಿಸಿಕೊಂಡು ಮುಂದೆ ಸಾಗಬೇಕು.’

-ಅಜಿತ್‌ ಶೆಟ್ಟಿ ಹೆರಂಜೆ, ರಾಜ್ಯ ಸಹಸಂಯೋಜಕರು, ಬಿಜೆಪಿ ಪ್ರಕಾಶನ ಪ್ರಕೋಷ್ಟ

 ದೇಶದಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಹೊರಡಿಸಿದ ಹೊಸ ನಿಯಮ ವಿವಾದಕ್ಕೆ ಕಾರಣವಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟುವುದಕ್ಕಾಗಿ ಸಮಿತಿಯನ್ನು ರಚಿಸಬೇಕು, ಈ ಸಮಿತಿಗೆ ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳಿಗೆ ಸೇರಿದವರು ದೂರು ನೀಡಬಹುದು ಹಾಗೂ ಇದರಲ್ಲಿ ಇದೇ ಸಮುದಾಯಗಳ ಸದಸ್ಯರು ಇರಬೇಕು ಎಂಬ ನಿಯಮ ಜಾರಿಗೊಳಿಸಲಾಗಿದೆ. ಆದರೆ ಇದರಿಂದ ಸಾಮಾನ್ಯ ವರ್ಗದವರಿಗೆ ಅನ್ಯಾಯವಾಗುತ್ತದೆ ಎಂದು ಪ್ರತಿಭಟನೆಗಳು ಆರಂಭವಾಗಿವೆ. ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಸಾರಾಸಗಟಾಗಿ ದಾಳಿ ನಡೆಸುವುದು ಮತ್ತು ಅವರನ್ನು ವೈಯಕ್ತಿಕವಾಗಿ ನಿಂದಿಸುವುದು ನಡೆಯುತ್ತಿದೆ. ಈ ನಡೆ ಖಂಡಿತ ಸ್ವೀಕಾರಾರ್ಹವಲ್ಲ.

ತಪ್ಪು ಸಹಜ, ತಿದ್ದುವ ಬದ್ಧತೆ ಮುಖ್ಯ:

ಆಡಳಿತವೆಂಬುದು ಅತ್ಯಂತ ಸಂಕೀರ್ಣ ಹಾಗೂ ಜಟಿಲ ವ್ಯವಸ್ಥೆ. ಅದರಲ್ಲೂ ಭಾರತದಂತಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಜವಾಗಿಯೂ ಅಧಿಕಾರ ಯಾರ ಬಳಿ ಇರುತ್ತದೆ, ಅಧಿಕಾರಶಾಹಿಯ ಬಳಿಯೋ ಅಥವಾ ಚುನಾಯಿತ ಜನಪ್ರತಿನಿಧಿಗಳ ಬಳಿಯೋ ಎನ್ನುವ ಅನುಮಾನ ಅನೇಕ ಸಂದರ್ಭದಲ್ಲಿ ಎದುರಾಗುತ್ತದೆ. ನಮ್ಮ ಆಡಳಿತ ವ್ಯವಸ್ಥೆ ಇವತ್ತಿಗೂ ಬಹುತೇಕ ವಸಾಹತುಶಾಹಿ ಸಂರಚನೆಯಲ್ಲಿ ಕೆಲಸ ಮಾಡುತ್ತಿದೆ. ಇದರಲ್ಲಿ ಬಹಳ ಸುಧಾರಣೆಗಳ ಅಗತ್ಯವಿದೆ. ಹಾಗೆಂದು ಚುನಾಯಿತ ಜನಪ್ರತಿನಿಧಿಗಳು ವ್ಯವಸ್ಥೆಯ ಜಟಿಲತೆಯ ಕಾರಣ ಕೊಟ್ಟು ತಮ್ಮ ಜವಾಬ್ದಾರಿಯಿಂದ ವಿಮುಖರಾಗಲು ಸಾಧ್ಯವಿಲ್ಲ. ಆದರೆ ಅಂತಹ ವ್ಯವಸ್ಥೆಯೊಳಗೆ ಕೆಲವೊಮ್ಮೆ ಸಂವೇದನಾಶೀಲ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಪ್ಪುಗಳು ಸಂಭವಿಸಬಹುದು. ಅಂತಹ ತಪ್ಪುಗಳಾದಾಗ ಅವುಗಳನ್ನು ಒಪ್ಪಿಕೊಂಡು, ತಿದ್ದುಪಡಿ ಮಾಡುವ ಬದ್ಧತೆಯನ್ನು ತೋರಿಸುವ ನಾಯಕತ್ವವನ್ನೇ ನಾವು ಗೌರವಿಸಬೇಕು ಮತ್ತು ಅವರಿಗೆ ಬೆಂಬಲವಾಗಿ ನಿಲ್ಲಬೇಕು.

ಯುಜಿಸಿ ನಿಯಮ ಕಾಲೇಜು ಮತ್ತು ಯುನಿವರ್ಸಿಟಿಗಳಲ್ಲಿ ದುರ್ಬಳಕೆಯಾಗುವ ಸಾಧ್ಯತೆ ಇರುವ ಕಾರಣ, ಸಮಾಜದ ಎಲ್ಲಾ ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾನೂನು ಜಾರಿಗೆ ತರಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಕಾನೂನಿನ ಮೇಲೆ ನಂಬಿಕೆಗಿಂತ ಅಪನಂಬಿಕೆಗಳೇ ಹೆಚ್ಚಾದಾಗ, ಆ ನಿಯಮದ ಫಲಾನುಭವಿಗಳು ಕೂಡ ಸಮಾಜದ ಉಳಿದ ವರ್ಗಗಳವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾರ್ವಜನಿಕ ಪ್ರತಿಕ್ರಿಯೆ ನೀಡಬೇಕು. ಹಾಗಾಗದಿದ್ದರೆ ದೊಡ್ಡ ಪ್ರಮಾಣದ ಅಪಾಯಗಳು ಎದುರಾಗುತ್ತವೆ ಮತ್ತು ಸಮಾಜವನ್ನು ಮತ್ತಷ್ಟು ವಿಚಲಿತಗೊಳಿಸುತ್ತವೆ. ಯುಜಿಸಿ ಕುರಿತಾಗಿ ಸರ್ಕಾರ ತೆಗೆದುಕೊಂಡ ನಿರ್ಧಾರ ಸಮಾಜದೊಳಗೆ ಚರ್ಚೆ ಹಾಗೂ ಅಸಮಾಧಾನವನ್ನು ಹುಟ್ಟುಹಾಕಿದೆ ಎಂಬುದು ನಿಜ. ಆದರೆ ಸರ್ಕಾರ ಇದನ್ನು ಗಮನಿಸಿಲ್ಲ ಎಂಬ ಆರೋಪ ಸಾಧುವಲ್ಲ. ಸಮಾಜದ ಹಿತದೃಷ್ಟಿಯಿಂದ ಸರ್ಕಾರ ಸದಾ ಸಮತೋಲನದ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತದೆ. ಹೊಸ ವ್ಯವಸ್ಥೆಗಳು ಜಾರಿಗೆ ಬಂದ ನಂತರ ಅವುಗಳ ಪರಿಣಾಮಗಳನ್ನು ಮೌಲ್ಯಮಾಪನ ಮಾಡಲು ಹಾಗೂ ಅಗತ್ಯವಿದ್ದರೆ ತಿದ್ದುಪಡಿ ಮಾಡಲು ಸಮಯ ಬೇಕಾಗುತ್ತದೆ.

ಆಂತರಿಕ ಅಸ್ಥಿರತೆಯ ಅಪಾಯ:

ಸರ್ಕಾರದ ನೀತಿ ನಿಯಮಗಳು ಸಮಾಜದ ಹಿತಕ್ಕೆ ವ್ಯತಿರಿಕ್ತವಾಗಿದ್ದರೆ ಅದನ್ನು ಪ್ರತಿಭಟಿಸುವ ಅಧಿಕಾರವನ್ನು ಈ ದೇಶದ ಸಂವಿಧಾನ ನಮಗೆ ಕೊಟ್ಟಿದೆ. ಈ ನಿಯಮದ ವಿರುದ್ಧವೂ ಸಮಾಜ ಪ್ರತಿಭಟನೆ ಮಾಡುತ್ತಿದೆ. ಆದರೆ ಆ ಪ್ರತಿಭಟನೆಗಳು ಕ್ರಮೇಣ ಸರ್ಕಾರದ ವಿರುದ್ಧ ಪ್ರಾರಂಭವಾಗಿ ದೇಶದ ವಿರುದ್ಧ ಆಗಬಾರದು. ಇಂದಿನ ಭೂ-ರಾಜಕೀಯ ಪರಿಸ್ಥಿತಿಯಲ್ಲಿ ಭಾರತದ ಶತ್ರುರಾಷ್ಟ್ರಗಳಿಗೆ ನಮ್ಮ ದೇಶದ ಒಳಗಡೆ ಅಸ್ಥಿರತೆ ಉಂಟುಮಾಡುವ ಸ್ಪಷ್ಟ ಉದ್ದೇಶವಿದೆ. ಆದರೆ ಭಾರತದಂತಹ ದೊಡ್ಡ, ಬಲಿಷ್ಠ ದೇಶಗಳನ್ನು ಹೊರಗಿನಿಂದ ಅಸ್ಥಿರಗೊಳಿಸಲು ಸಾಧ್ಯವಿಲ್ಲ. ಹಾಗಾಗಿ ಭಾರತವನ್ನು ಒಳಗಿನಿಂದ ದುರ್ಬಲಗೊಳಿಸಲು ಅನೇಕ ಬಾರಿ ಪ್ರಯತ್ನಿಸಲಾಗಿದೆ. ಒಮ್ಮೆ ದೇಶದ ಸ್ಥಿರತೆ ಮತ್ತು ವಿಶ್ವಾಸಾರ್ಹತೆ ಕುಸಿದರೆ, ಜಗತ್ತಿನಲ್ಲಿ ನಮ್ಮ ಸ್ಥಾನವನ್ನು ಮರಳಿ ಪಡೆಯುವುದು ಅತ್ಯಂತ ಕಷ್ಟಕರ. ಇಂತಹ ಸಂದರ್ಭದಲ್ಲಿ ಜವಾಬ್ದಾರಿಯುತ ನಾಗರಿಕರಾಗಿರುವ ನಾವೆಲ್ಲರೂ ಬೀದಿಗಿಳಿಯುವಾಗ ಅತ್ಯಂತ ಎಚ್ಚರಿಕೆಯನ್ನು ತೋರಬೇಕಾಗುತ್ತದೆ. ಒಂದು ಕ್ಷಣದ ಆವೇಶ, ಒಂದು ತಪ್ಪಾದ ಹೇಳಿಕೆ ಅಥವಾ ಅಲಕ್ಷ್ಯಪೂರ್ಣ ನಿರ್ಧಾರ ದೇಶದ ಆಂತರಿಕ ಭದ್ರತೆಯ ವಿಚಾರದಲ್ಲಿ ದೊಡ್ಡ ಪ್ರಮಾಣದ ಹಾನಿಯನ್ನುಂಟುಮಾಡುವ ಶಕ್ತಿ ಹೊಂದಿದೆ.

ವಿವೇಕದ ನಡೆ ಅಗತ್ಯ:

ಕಳೆದ 12 ವರ್ಷಗಳಲ್ಲಿ ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಬಂದಮೇಲೆ ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟಿ ಆಂತರಿಕ ದಂಗೆ ನಡೆಸುವ ಎಷ್ಟೋ ಪ್ರಯತ್ನಗಳಾಗಿವೆ. ರೈತರ ಹೆಸರಿನ ಹೋರಾಟ, ಸಿಎಎ ವಿರೋಧಿ ಹೋರಾಟ, ಕೋವಿಡ್ ಸಂದರ್ಭದಲ್ಲಿ ಸುಳ್ಳು ಪ್ರಚಾರಗಳ ಮೂಲಕ ಜನರನ್ನು ವಿಚಲಿತಗೊಳಿಸುವ ಪ್ರಯತ್ನ, ಮತಪಟ್ಟಿ ವಿಶೇಷ ಪರಿಷ್ಕರಣೆ ವಿಚಾರದಲ್ಲಿ ಜನರನ್ನು ಹಾದಿ ತಪ್ಪಿಸುವ ಪ್ರಯತ್ನ ನಡೆಯಿತು. ದೇಶದ ಅರ್ಥವ್ಯವಸ್ಥೆಯನ್ನು ಹಾಳು ಮಾಡಲು ಭಾರತದ ವಿರುದ್ಧ ಕೃತಕ ವರದಿಗಳನ್ನು ಸಿದ್ಧಪಡಿಸಲಾಯಿತು.

ಭಾರತದ ನೆರೆಯ ದೇಶಗಳಾದ ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ನೇಪಾಳದಂತೆಯೇ ಭಾರತದೊಳಗೂ ಜನರು ದಂಗೆ ಎದ್ದು ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ದೇಶದ ಒಂದು ಸಣ್ಣ ವರ್ಗ ಪ್ರಬಲವಾಗಿ ಪ್ರತಿಪಾದಿಸಿತು. ಇವೆಲ್ಲದರ ನಡುವೆಯೂ ಭಾರತದ ಪ್ರಜ್ಞಾವಂತ ಸಮಾಜ ಯಾವುದೇ ಕುತಂತ್ರಕ್ಕೆ ಮಣಿಯದೇ ಅತ್ಯಂತ ಪ್ರಜ್ಞಾವಂತಿಕೆಯಿಂದ ವರ್ತಿಸಿತು. ಇವತ್ತು ಯುಜಿಸಿ ವಿಚಾರದಲ್ಲಿಯೂ ಸಮಾಜ ಅದೇ ವಿವೇಕ ಮತ್ತು ಪ್ರಜ್ಞಾವಂತಿಕೆಯನ್ನು ತೋರಬೇಕಿದೆ.

ದೇಶಹಿತವೇ ಮೋದಿ ಬದ್ಧತೆ:

ಇವತ್ತಿನ ವಿಶ್ವ ರಾಜಕಾರಣದಲ್ಲಿ ಭಾರತ ಯಾವುದೇ ವಿದೇಶಿ ಶಕ್ತಿಗಳ ಮರ್ಜಿಗೆ ಬಲಿಯಾಗದೆ ತನ್ನ ಸ್ವತಂತ್ರ ನೀತಿಯನ್ನು ಪಾಲಿಸುತ್ತಿದೆ. ಕೋವಿಡ್ ಲಸಿಕೆ, ರಷ್ಯಾ-ಉಕ್ರೇನ್ ಯುದ್ಧ, ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷಗಳಿಂದ ಹಿಡಿದು ಮೊನ್ನೆ ಯುರೋಪ್ ಒಕ್ಕೂಟದ ಜೊತೆ ನಡೆದ ಮುಕ್ತ ವಾಣಿಜ್ಯ ಒಪ್ಪಂದದ ತನಕ ಭಾರತ ಪ್ರತಿ ಸಂದರ್ಭದಲ್ಲಿ ತನ್ನ ದೇಶದ ಹಿತಾಸಕ್ತಿಯನ್ನು ಎಲ್ಲಿಯೂ ಬಲಿ ಕೊಡದೆ ವ್ಯವಹರಿಸಿದೆ. ಈ ಕಾರಣ ಪ್ರಧಾನಿ ಮೋದಿಯವರು ವಿಶ್ವದ ದೊಡ್ಡ ಶಕ್ತಿಗಳ ಕಣ್ಣು ಕುಕ್ಕುತ್ತಿದ್ದಾರೆ. ದೇಶದ ರೈತರ ಹಿತಾಸಕ್ತಿಯನ್ನು ಬಲಿಕೊಟ್ಟು ಅಮೆರಿಕದ ಜೊತೆಗೆ ಮುಕ್ತ ವಾಣಿಜ್ಯ ಒಪ್ಪಂದ ಮಾಡಿಕೊಳ್ಳಬೇಕು ಎಂಬ ಒತ್ತಡ ಬಂದಾಗ ಮೋದಿ ಅದನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು. ‘ನಾವು ಈ ದೇಶದ ರೈತರ ಹಿತಾಸಕ್ತಿಯನ್ನು ಬಲಿಕೊಟ್ಟು ಯಾವುದೇ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ. ಇದಕ್ಕಾಗಿ ನಾನು ವೈಯಕ್ತಿಕವಾಗಿ ದೊಡ್ಡ ಮಟ್ಟದ ಬೆಲೆ ತೆರಬೇಕಾಗುವ ಸಾಧ್ಯತೆಯೂ ಇದೆ’ ಎಂದಿದ್ದರು.

ಇವತ್ತಿನ ಯುಜಿಸಿ ವಿವಾದವನ್ನು ಒಮ್ಮೆ ಈ ಹಿನ್ನೆಲೆಯಲ್ಲೂ ದೇಶ ಅವಲೋಕಿಸಬೇಕು. ಸರ್ಕಾರದಲ್ಲಿ ಕೆಲವೊಮ್ಮೆ ಒಳ್ಳೆಯ ಉದ್ದೇಶದಿಂದ ತೆಗೆದುಕೊಂಡ ನಿರ್ಧಾರಗಳೂ ಅನಿರೀಕ್ಷಿತವಾಗಿ ದುಷ್ಪರಿಣಾಮಗಳನ್ನು ಉಂಟುಮಾಡಬಹುದು. ಇದಕ್ಕೆ ಕೃಷಿ ಸುಧಾರಣಾ ನೀತಿಗಿಂತ ಉತ್ತಮ ಉದಾಹರಣೆ ಬೇಕಿಲ್ಲ. ಅಂತಹ ಸಂದರ್ಭಗಳಲ್ಲಿ ಅದನ್ನು ಸರಿಪಡಿಸುವ ಸಾಮರ್ಥ್ಯವಿರುವ ಸರ್ಕಾರವೇ ನಿಜವಾದ ಜವಾಬ್ದಾರಿಯುತ ಸರ್ಕಾರ. ಮೋದಿ ಸರ್ಕಾರವೂ ಅಂತಹ ಜವಾಬ್ದಾರಿಯಿಂದ ವಿಮುಖವಾಗುವುದಿಲ್ಲ. ಪ್ರಧಾನಿ ಮೋದಿಯವರು ಒಂದು ಮಾತನ್ನು ಯಾವಾಗಲೂ ಹೇಳುತ್ತಿರುತ್ತಾರೆ: ‘ನಾನು ಎಂದಿಗೂ ಉದ್ದೇಶಪೂರ್ವಕವಾಗಿ ತಪ್ಪು ನಿರ್ಣಯ ತೆಗೆದುಕೊಳ್ಳುವುದಿಲ್ಲ. ಕೆಲವೊಮ್ಮೆ ಸದಾಶಯದ ನಿರ್ಧಾರಗಳು ವ್ಯತಿರಿಕ್ತ ಪರಿಣಾಮ ಬೀರಬಹುದು. ಆಗ ಅವುಗಳನ್ನು ಸರಿಪಡಿಸಿಕೊಂಡು ಮುಂದೆ ಸಾಗಬೇಕು.’ ಯುಜಿಸಿ ವಿಚಾರದಲ್ಲಿಯೂ ಮೋದಿ ಸರ್ಕಾರವು ಸಮಾಜ ಒಪ್ಪುವಂತಹ ನಿರ್ಧಾರವನ್ನೇ ತೆಗೆದುಕೊಳ್ಳಲಿದೆ ಎಂಬ ಪೂರ್ಣ ವಿಶ್ವಾಸವಿದೆ. ಹಾಗಾಗಿ ಪ್ರಜೆಗಳು ಸಂಯಮ ಮತ್ತು ತಾಳ್ಮೆಯಿಂದ ವರ್ತಿಸಿ, ನಿಯಮದಲ್ಲಿ ಅಗತ್ಯ ಮಾರ್ಪಾಡನ್ನು ನಿರೀಕ್ಷಿಸುವುದು ಸೂಕ್ತ.