ವಿವಿ ಹಾಗೂ ವಿವಿ ಸಂಯೋಜಿತ ಕಾಲೇಜುಗಳ ಕ್ಯಾಂಪಸ್‌ಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಘದವರ ವಿರುದ್ಧ ನಡೆಯುವ ಜಾತಿ ಆಧಾರಿತ ತಾರತಮ್ಯ ತಡೆಗಟ್ಟುವ ಕುರಿತು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ರೂಪಿಸಿದ್ದ ನಿಯಮಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ 

 ನವದೆಹಲಿ : ವಿವಿ ಹಾಗೂ ವಿವಿ ಸಂಯೋಜಿತ ಕಾಲೇಜುಗಳ ಕ್ಯಾಂಪಸ್‌ಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಘದವರ ವಿರುದ್ಧ ನಡೆಯುವ ಜಾತಿ ಆಧಾರಿತ ತಾರತಮ್ಯ ತಡೆಗಟ್ಟುವ ಕುರಿತು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ರೂಪಿಸಿದ್ದ ನಿಯಮಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ, ‘ಇವು ಮೇಲ್ನೋಟಕ್ಕೆ ‘ಅಸ್ಪಷ್ಟ’ವಾಗಿವೆ ಮತ್ತು ‘ದುರುಪಯೋಗ’ಕ್ಕೆ ಸಮರ್ಥವಾಗಿವೆ. ನಾವು ಹಿಂದಿನ ಕಾಲಕ್ಕೆ ಹೋಗುವ ಪ್ರತಿಗಾಮಿ ಸಮಾಜದಂತಾಗುತ್ತಿದ್ದೇವೆ ಎಂದು ಭಾಸವಾಗುತ್ತಿದೆ’ ಎಂದು ಕಿಡಿಕಾರಿದೆ.

ಅಲ್ಲದೆ, ‘ಈ ವಿಷಯದಲ್ಲಿ ಮಧ್ಯಪ್ರವೇಶಿಸದಿದ್ದರೆ, ಅದು ಅಪಾಯಕಾರಿ ಪರಿಣಾಮ ಬೀರುತ್ತದೆ ಮತ್ತು ಸಮಾಜವನ್ನು ವಿಭಜಿಸುತ್ತದೆ’ ಎಂದು ಕೋರ್ಟ್ ಕಿಡಿಕಾರಿದ್ದು, ಖ್ಯಾತ ನ್ಯಾಯಶಾಸ್ತ್ರಜ್ಞರನ್ನು ಒಳಗೊಂಡ ಸಮಿತಿಯು ನಿಯಮಗಳನ್ನು ಪುನರ್ ಪರಿಶೀಲಿಸಬೇಕು’ ಎಂದು ಸೂಚಿಸಿದೆ.‘ಜಾತಿ ತಾರತಮ್ಯ ನಿವಾರಣಾ ಸಮಿತಿ ರಚಿಸಲು ಯುಜಿಸಿ ರೂಪಿಸಿದ ನಿಯಮಗಳು ಎಸ್ಸಿಎಸ್ಟಿ ಹಾಗೂ ಒಬಿಸಿಗೆ ಮಾತ್ರ ನ್ಯಾಯ ಒದಗಿಸುವಂತಿವೆ. ಸಾಮಾನ್ಯ ವರ್ಗದ (ಜನರಲ್‌ ಕೆಟಗರಿ) ವಿದ್ಯಾರ್ಥಿಗಳ ದೂರನ್ನು ಜಾತಿ ತಾರತಮ್ಯ ನಿವಾರಣಾ ಸಮಿತಿಗಳು ಆಲಿಸುವುದಿಲ್ಲ. ಅಲ್ಲದೆ, ಸಮಿತಿಗಳಲ್ಲಿ ಸಾಮಾನ್ಯ ವರ್ಗದ ಸದಸ್ಯರಿಗೂ ಅವಕಾಶವಿಲ್ಲ. ಇದರಿಂದ ಸಾಮಾನ್ಯ ಅವರ್ಗಕ್ಕೆ ಅನ್ಯಾಯವಾಗುತ್ತದೆ ಹಾಗೂ ದುರ್ಬಳಕೆ ಭೀತಿಯೂ ಇದೆ’ ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾ। ಸೂರ್ಯ ಕಾಂತ್ ಮತ್ತು ನ್ಯಾ। ಜಯಮಾಲ್ಯ ಬಾಗ್ಚಿ ಅವರಿದ್ದ ಪೀಠವು, ಕೇಂದ್ರ ಸರ್ಕಾರ ಮತ್ತು ಯುಜಿಸಿಗೆ ನೋಟಿಸ್ ಜಾರಿ ಮಾಡಿದೆ.

ಯುಜಿಸಿ ನಿಯಮಗಳು ವಿವಿಧ ಸ್ಥಳಗಳಲ್ಲಿ ಪ್ರತಿಭಟನೆಗಳಿಗೆ ಕಾರಣವಾಗಿದ್ದವು, ವಿದ್ಯಾರ್ಥಿ ಗುಂಪುಗಳು ತಕ್ಷಣ ಹಿಂಪಡೆಯಬೇಕೆಂದು ಒತ್ತಾಯಿಸಿದ್ದವು.

ಕೋರ್ಟ್‌ ಹೇಳಿದ್ದೇನು?:

ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಸಮಾಜವು ಜಾತಿ ಆಧಾರಿತ ತಾರತಮ್ಯವನ್ನು ತೊಡೆದುಹಾಕಲು ಸಾಧ್ಯವಾಗಿಲ್ಲ. ಇಂದೂ ರ್‍ಯಾಗಿಂಗ್‌ ನಡೆಯುತ್ತಿದೆ. ಈಶಾನ್ಯ ವಿದ್ಯಾರ್ಥಿಗಳ ಬಗ್ಗೆ ತಾರತಮ್ಯ ನಡೆಸಲಾಗುತ್ತಿದೆ. ಸರ್ಕಾರ ಆಯಾ ಜಾತಿಗಳಿಗೆ ಪ್ರತ್ಯೇಕ ಹಾಸ್ಟೆಲ್ ಸ್ಥಾಪಿಸುವ ಮಾತಾಡುತ್ತಿದೆ. ಆದಾಗ್ಯೂ ಅಂತರ್ಜಾತಿ ವಿವಾಹ ನಡೆದಿವೆ. ಎಲ್ಲ ವರ್ಗದ ವಿದ್ಯಾರ್ಥಿಗಳು ಒಂದೆಡೆ ಇರುವ ಹಾಸ್ಟೆಲ್‌ಗಳಿವೆ’ ಎಂದು ನ್ಯಾ। ಕಾಂತ್‌ ಪರೋಕ್ಷವಾಗಿ ಸರ್ಕಾರಕ್ಕೆ ಚುಚ್ಚಿದರು.

‘ಮೊದಲ ನೋಟಕ್ಕೆ, ನಿಯಮಾವಳಿಗಳಲ್ಲಿ ಜಾತಿ ತಾರತಮ್ಯ ನಿಯಂತ್ರಣ ಕುರಿತ ಭಾಷೆ ಅಸ್ಪಷ್ಟವಾಗಿದೆ ಎಂದು ಕಂಡುಬರುತ್ತದೆ. ಹೀಗಾಗಿ ಭಾಷೆಯನ್ನು ಮಾರ್ಪಡಿಸುವ ಬಗ್ಗೆ ತಜ್ಞರು ಗಮನಹರಿಸಬೇಕು " ಎಂದು ಜಡ್ಜ್‌ ಹೇಳಿದರು. ಹೀಗಾಗಿ ‘ಹೊಸ ನಿಯಮಗಳ ಬದಲು 2012ರ ನಿಯಮಗಳೇ ಮುಂದುವರಿಯಲಿ’ ಎಂದು ತಾಕೀತು ಮಾಡಿರು.

ವಿಚಾರಣೆಯ ಸಮಯದಲ್ಲಿ, ಪೀಠವು, ‘15(4) ನೇ ವಿಧಿಯು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಕಾನೂನುಗಳನ್ನು ರಚಿಸಲು ಅಧಿಕಾರ ನೀಡುತ್ತದೆ .ಆದಾಗ್ಯೂ ಪ್ರಗತಿಪರ ಶಾಸನದಲ್ಲಿ ಯಾವುದೇ ಅಳುಕು ಇರಬಾರದು’ ಎಂದಿತು.

ಇದೇ ವೇಳೆ, ಅಮೆರಿಕದ ಉದಾಹರಣೆ ನೀಡಿದ ಪೀಠ, ‘ಅಮೆರಿಕದಲ್ಲಿ ಕರಿಯರು ಮತ್ತು ಬಿಳಿಯರು ಬೇರೆ ಬೇರೆ ಶಾಲೆಗಳಿಗೆ ಹೋಗುತ್ತಿದ್ದರು. ಇಲ್ಲಿ ಅಂಥ ಪರಿಸ್ಥಿತಿ ಉದ್ಭವಿಸುವುದಿಲ್ಲ ಎಂದು ನಾವು ಭಾವಿಸುತ್ತೇವೆ’ ಎಂದು ಸಿಜೆಐ ನುಡಿದರು.

ಕೋರ್ಟ್‌ ಹೇಳಿದ್ದೇನು?

ಯುಜಿಸಿ ಹೊಸ ನಿಯಮಗಳು ದುರುಪಯೋಗಕ್ಕೆ ಸಮರ್ಥವಾಗಿದೆ

ಈ ನಿಯಮಗಳು ಪ್ರತಿಗಾಮಿ ಸಮಾಜದತ್ತ ಹೆಜ್ಜೆ ಹಾಕುವಂತಿದೆ

ನಾವು ಮಧ್ಯಪ್ರವೇಶಿಸದಿದ್ದರೆ ಅಪಾಯಕಾರಿ ಪರಿಣಾಮ ಸಂಭವ

ಹೊರಡಿಸಲಾದ ನಿಯಮದ ಕುರಿತು ಮರುಪರಿಶೀಲನೆ ಅಗತ್ಯವಿದೆ

ಹೀಗಾಗಿ ಯುಜಿಸಿಯ ಹೊಸ ಆದೇಶಕ್ಕೆ ತಕ್ಷಣ ತಡೆ ನೀಡುತ್ತಿದ್ದೇವೆ

ಏನಿದು ಯುಜಿಸಿ ಆದೇಶ ವಿವಾದ?

ಜನರಲ್‌ ಕೆಟಗರಿ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣ ಏನು?