ಅಹಮದಾಬಾದ್‌: ಇತ್ತೀಚೆಗಷ್ಟೇ ಹೋರ್ಮಜ್‌ ಜಲಸಂಧಿ ದಾಟಿದ್ದ 46.5 ಸಾವಿರ ಮೆಟ್ರಿಕ್‌ ಟನ್‌ ಎಲ್‌ಪಿಜಿ ಹೊತ್ತ ನಂದಾದೇವಿ ನೌಕೆ ಮಂಗಳವಾರ ಗುಜರಾತ್‌ನ ದ್ವಾರಕೆಯ ವಡೀನಾರ್‌ ಬಂದರಿಗೆ ತಲುಪಿದೆ. ಇದರ ಬೆನ್ನಿಗೇ 81 ಸಾವಿರ ಟನ್‌ ಕಚ್ಚಾ ತೈಲ ತುಂಬಿದ ಜಗ್‌ ಲಾಡ್ಕಿ ಹಡಗು ಕೂಡ ಯುಎಇಯಿಂದ ಬಂದು ಲಂಗರು ಹಾಕಿದೆ.

ಬಂದರಿನಲ್ಲಿ ಲಂಗರು ಹಾಕಿದ ನೌಕೆಯಿಂದ ಒಂದಷ್ಟು ಗ್ಯಾಸ್‌ ಅನ್ನು ಸ್ಥಳೀಯ ಸಂಗ್ರಹಾಗಾರಕ್ಕೆ ವರ್ಗಾಯಿಸಲಾಗುವುದು. ಉಳಿದಿದ್ದನ್ನು ತಮಿಳುನಾಡಿನ ಎನ್ನೋರ್‌ ಮತ್ತು ಪಶ್ಚಿಮ ಬಂಗಾಳದ ಹಲ್ದಿಯಾಗೆ ರವಾನಿಸಲಾಗುವುದು. ಸೋಮವಾರ ತಲುಪಿದ ಶಿವಾಲಿಕ್‌ ಮತ್ತು ನಂದಾದೇವಿ ತಂದಿರುವ 92700 ಮೆಟ್ರಿಕ್‌ ಟನ್‌ ಅನಿಲದಿಂದ 14.2 ಕೆ.ಜಿ. ತೂಕದ 68 ಲಕ್ಷ ಸಿಲಿಂಡರ್‌ಗಳನ್ನು ತುಂಬಬಹುದು.

ಶಿವಾಲಿಕ್‌ ಮಂಗಳೂರಿನತ್ತ:

ಸೋಮವಾರ 46 ಸಾವಿರ ಟನ್‌ ಅನಿಲ ಹೊತ್ತು ಗುಜರಾತ್‌ನ ಮುಂದ್ರಾ ಬಂದರಿಗೆ ಬಂದಿದ್ದ ಶಿವಾಲಿಕ್‌ ನೌಕೆಯಿಂದ 20 ಸಾವಿರ ಟನ್‌ನಷ್ಟು ಎಲ್‌ಪಿಜಿಯನ್ನು ಅಲ್ಲಿ ಇಳಿಸಿ, ಉಳಿದದ್ದನ್ನು ಮಂಗಳೂರಿಗೆ ಹೊತ್ತೊಯ್ಯಲಿದೆ. ಇದು ಮಂಗಳೂರಿನ ಬಂದರನ್ನು ತಲುಪಲು 3-4 ದಿನ ತಗುಲಬಹುದು.


ಎಲ್ಲಾ 22 ನೌಕೆ 3 ದಿನದಲ್ಲಿ ಭಾರತಕ್ಕೆ

ಹೋರ್ಮುಜ್‌ ನಿರ್ಬಂಧದಿಂದ ಅಲ್ಲೇ ಸಿಲುಕಿರುವ ಭಾರತದ 22 ಹಡಗುಗಳು ಮುಂದಿನ 72 ತಾಸುಗಳಲ್ಲಿ(3 ದಿನ) ಭಾರತೀಯ ಬಂದರುಗಳನ್ನು ತಲುಪಲಿವೆ ಎಂದು ಮೂಲಗಳು ತಿಳಿಸಿವೆ. ಸದ್ಯ ಎಲ್‌ಪಿಜಿ ತುಂಬಿದ 6, ಎಲ್‌ಎನ್‌ಜಿ ಭರಿತ 1, ಕಚ್ಚಾತೈಲ ಹೊತ್ತ 4, ರಾಸಾಯನಿಕಗಳಿರುವ 1, 3 ಸರಕು ಸಾಗಣೆ ಮತ್ತು 2 ಬೃಹತ್‌ ಹಡಗುಗಳು ಹೋರ್ಮುಜ್‌ ಹೊಸ್ತಿಲಿನಲ್ಲಿವೆ.