ಉಡುಪಿ: ಇಲ್ಲಿನ ಕಟಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೆಳಿಗ್ಗೆ ಮಗುಚಿಬಿದ್ದ ಅಡುಗೆ ಅನಿಲ ತುಂಬಿದ್ದ ಟ್ಯಾಂಕರನ್ನು ಸುಮಾರು 16 ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಸೋಮವಾರ ಮಧ್ಯರಾತ್ರಿ ತೆರವುಗೊಳಿಸಲಾಗಿದೆ. ಸೋಮವಾರ ಬೆಳಿಗ್ಗೆ 9 ಗಂಟೆಗೆ ಚಾಲಕನ ನಿಯಂತ್ರಣ ತಪ್ಪಿ ಈ ಟ್ಯಾಂಕರು ಹೆದ್ದಾರಿ ಮಧ್ಯೆ ಅಡ್ಡಲಾಗಿ ಉರುಳಿಬಿದ್ದಿತ್ತು. ಇದರಿಂದ ಸಣ್ಣ ಪ್ರಮಾಣದಲ್ಲಿ ಅಡುಗೆ ಅನಿಲ ಸೋರಿಕಯಾಗತೊಡಗಿತ್ತು. ತಕ್ಷಣ ಅಗ್ನಿಶಾಮಕ ದಳದ 3 ವಾಹನಗಳನ್ನು ತರಿಸಿ ಟ್ಯಾಂಕರ್ ಮೇಲೆ ಸತತವಾಗಿ ನೀರು ಸಿಂಪರಣೆ ಮಾಡಿ ಸೋರಿಕೆಯನ್ನು ನಿಯಂತ್ರಿಸಲಾಯಿತು.

ನಂತರ ಮಂಗಳ‍ೂರಿನಿಂದ ಖಾಲಿ ಟ್ಯಾಂಕರ್‌ಗಳನ್ನು ತರಿಸಿ ಬಿದ್ದಿದ್ದ ಟ್ಯಾಂಕರಿನಿಂದ ಅಡುಗೆ ಅನಿಲವನ್ನು ವರ್ಗಾಯಿಸಲಾಯಿತು. ಅತ್ಯಂತ ಸೂಕ್ಷ್ಮವಾಗಿ ನಡೆಸಲಾದ ಈ ಕಾರ್ಯಾಚರಣೆ ಮುಗಿಯುವಾಗ ಮಧ್ಯರಾತ್ರಿ ಕಳೆದಿತ್ತು.

ಈ ಸಂದರ್ಭ ಪೊಲೀಸರು ಅತ್ಯಂತ ನಿಭಿಡವಾಗಿರುವ ಈ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಿ, ಅಕ್ಕ ಪಕ್ಕದ ಪರ್ಯಾಯ ಮಾರ್ಗಗಳ ಮೂಲಕ ಕಳುಹಿಸಿದರು. ಇದರಿಂದ ಈ ಪರ್ಯಾಯ ಮಾರ್ಗಗಳಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗಿ ಇನ್ನೊಂದು ಸಮಸ್ಯೆ ಉಂಟಾಗಿತ್ತು.