ಗಂಗಾವತಿ: ನಗರದ ಪಬ್ಲಿಕ್ ಕ್ಲಬ್ ನಗರಸಭೆ ಆಸ್ತಿಯಾಗಿದ್ದು, ಇದರ ಮುಂಭಾಗದಲ್ಲಿ ನಿರ್ಮಿಸಲಾಗಿರುವ 11 ಮಳಿಗೆ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದರಿಂದ ಕೂಡಲೇ ನೋಟಿಸ್ ನೀಡಿದ 7 ದಿನಗಳ ಒಳಗಾಗಿ ತೆರವುಗೊಳಿಸಬೇಕು ಎಂದು ನಗರಸಭೆಯ ಪೌರಾಯುಕ್ತರು ಮಳಿಗೆ ಮಾಲೀಕರಿಗೆ ಗಡುವು ನೀಡಿದ್ದಾರೆ.

ಪ್ರಾದೇಶಿಕ ಆಯುಕ್ತರ ಆದೇಶದ ಮೇರೆಗೆ ಪೌರಾಯಕ್ತರು ಕ್ಲಬ್ ನ ಆವರಣದಲ್ಲಿರುವ ಸಂಗೀತ ಶಾಲೆ, ಪ್ರಾಥಮಿಕ ಶಾಲೆ, ರಂಗ ಮಂದಿರ ಸೇರಿದಂತೆ ಕ್ರೀಡೆ ಮತ್ತು 11 ವಾಣಿಜ್ಯ ಮಳಿಗೆಗಳಿದ್ದವು. ಈ ಜಾಗದ ಬಗ್ಗೆ ನಗರಸಭೆಯಿಂದ ಅನಧಿಕೃತವಾಗಿ ಫಾರಂ.3 ಪಡೆದಿದ್ದರು. ಈ ಪ್ರದೇಶ ನಗರಸಭೆಗೆ ಸಂಬಂಧಿಸಿದ್ದರಿಂದ ಕೂಡಲೆ ನಗರಸಭೆಯ ವ್ಯಾಪ್ತಿಗೆ ಪಡೆಯಬೇಕೆಂದು ಪ್ರಾದೇಶಿಕ ಆಯುಕ್ತರು ಆದೇಶ ನೀಡಿದ್ದರು. ಈ ಆದೇಶದ ಮೇರೆಗೆ ಕ್ಲಬ್ ಗೆ ಬೀಗ ಹಾಕಿದ ದಿನವೇ ಇದರ ವ್ಯಾಪ್ತಿಯಲ್ಲಿರುವ 11 ಮಳಿಗೆ ಮಾಲೀಕರಿಗೆ ತೆರವುಗೊಳಿಸುವಂತೆ ಪೌರಾಯುಕ್ತರು ನೋಟಿಸ್ ನೀಡಿದ್ದಾರೆ.

7 ದಿನಗಳಲ್ಲಿ ತೆರವು:

ನಗರಸಭೆಗೆ ಸಂಬಂಧಿಸಿದ ಪಬ್ಲಿಕ್ ಕ್ಲಬ್ ಸೀಜ್ ಮಾಡಿದ ದಿನವೇ ಪೌರಾಯುಕ್ತರು ಮಳಿಗೆಗಳ ಮಾಲೀಕರಿಗೆ ನೋಟಿಸ್ ನೀಡಿ 7 ದಿನಗಳಲ್ಲಿ ತೆರವುಗೊಳಿಸ ಬೇಕೆಂದು ಸೂಚನೆ ನೀಡಿದ್ದಾರೆ. ನಗರದ 19ನೇ ವಾರ್ಡ್‌ನಲ್ಲಿ ಪಬ್ಲಿಕ್ ಕ್ಲಬ್ (ವಿಸ್ತೀರ್ಣ 54411.7855 ಚದುರ ಮೀಟರ್) ಆಸ್ತಿ ಇದ್ದು, ಇದು ನಗರಸಭೆಗೆ ಸಂಬಂಧಿಸಿದ್ದಾಗಿದೆ. ಈಗಾಗಲೇ ಕಲ್ಬುರ್ಗಿ ಪ್ರಾದೇಶಿಕ ಆಯುಕ್ತರು ಆದೇಶ ನೀಡಿ ಪಬ್ಲಿಕ್ ಕ್ಲಬ್ ನವರು ಇರುವ ಆಸ್ತಿ ನಗರಸಭೆಗೆ ಸಂಬಂಧಿಸಿದ್ದು, ಕೂಡಲೆ ನಗರಸಭೆಗೆ ಸ್ವಾಧೀನ ಪಡಿಸಿಕೊಳ್ಳುವಂತೆ ಆದೇಶ ನೀಡಿದ್ದಾರೆ.

ಈ ಆಸ್ತಿಯಲ್ಲಿ ಅಕ್ರಮವಾಗಿ ಮಳಿಗೆ ನಿರ್ಮಿಸಿಕೊಂಡಿದ್ದೀರಿ. ಕಾರಣ ನೋಟಿಸ್ ನೀಡಿದ 7 ದಿನದೊಳಗೆ ತೆರವುಗೊಳಿಸಿಕೊಳ್ಳಬೇಕು. ತಪ್ಪಿದ್ದಲ್ಲ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೌರಾಯುಕ್ತ ವಿರೂಪಾಕ್ಷಮೂರ್ತಿ ನೀಡಿದ ನೋಟಿಸ್ ನಲ್ಲಿ ಪ್ರಸ್ತಾಪಿಸಿದ್ದಾರೆ.


ಮುಂಗಡ ಹಣ ಪಾವತಿಸಿದವರ ಪರದಾಟ:

ಮಳಿಗೆ ನಿರ್ಮಿಸಿಕೊಂಡು ಲಕ್ಷಾಂತರ ಮುಂಗಡ ನೀಡಿದ ಅಂಗಡಿಗಳ ಮಾಲೀಕರು ಈಗ ಪರದಾಡುತ್ತಿದ್ದಾರೆ. ಮಳಿಗೆ ನಿರ್ಮಿಸಿಕೊಂಡವರು ಕ್ಲಬ್ ಗೆ ಮುಂಗಡ ಹಣ ಪಾವತಿಸಿದ್ದರು. ಈಗ ಮಳಿಗೆ ಖಾಲಿ ಮಾಡಿದರೆ ನಾವು ಪಾವತಿಸಿದ ಹಣಕ್ಕೆ ಯಾರು ಜವಾಬ್ದಾರಿ ಎಂದು ತಮ್ಮ ಅಳಲು ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪೌರಾಯುಕ್ತ ವಿರೂಪಾಕ್ಷಮೂರ್ತಿ ಪ್ರತಿಕ್ರಿಯಿಸಿ ಮುಂಗಡ ಹಣಕ್ಕೆ ನಗರಸಭೆ ಜವಾಬ್ದಾರಿ ಅಲ್ಲ. ನಾವು ನೀಡಿದ 7 ದಿನಗಳೊಳಗಾಗಿ ಮಳಿಗೆ ಖಾಲಿ ಮಾಡಬೇಕೆಂದು ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.