ಬೆಂಗಳೂರು ಟೆಕ್‌ ಶೃಂಗಸಭೆ (ಬಿಟಿಎಸ್‌)ಯ 29ನೇ ಆವೃತ್ತಿ ಮಂಗಳವಾರದಿಂದ ಮೂರು ದಿನಗಳ ಕಾಲ ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ನಡೆಯಲಿದೆ.ಈ ಬಾರಿ ‘ಕೃತಕ ಬುದ್ಧಿಮತ್ತೆ ಮತ್ತು ಅದರಾಚೆಗೆ’ ಎಂಬ ಪರಿಕಲ್ಪನೆಯೊಂದಿಗೆ ಸಮಾವೇಶ

ಬೆಂಗಳೂರು : ಬೆಂಗಳೂರು ಟೆಕ್‌ ಶೃಂಗಸಭೆ (ಬಿಟಿಎಸ್‌)ಯ 29ನೇ ಆವೃತ್ತಿ ಮಂಗಳವಾರದಿಂದ ಮೂರು ದಿನಗಳ ಕಾಲ ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ನಡೆಯಲಿದ್ದು, ಏಷ್ಯಾದ ಅತಿ ದೊಡ್ಡ ತಂತ್ರಜ್ಞಾನ ಸಮಾವೇಶಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮಂಗಳವಾರ ಬೆಳಗ್ಗೆ ಚಾಲನೆ ನೀಡಲಿದ್ದಾರೆ.

ಈ ಬಗ್ಗೆ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಈ ಬಾರಿ ‘ಕೃತಕ ಬುದ್ಧಿಮತ್ತೆ ಮತ್ತು ಅದರಾಚೆಗೆ’ ಎಂಬ ಪರಿಕಲ್ಪನೆಯೊಂದಿಗೆ ಸಮಾವೇಶ ಆಯೋಜಿಸಲಾಗುತ್ತಿದೆ. ಸ್ವೀಡನ್‌ ಪಾಲುದಾರ ಹಾಗೂ ಆಸ್ಟ್ರೇಲಿಯಾ, ಪೋಲೆಂಡ್ ಮತ್ತು ಇಟಲಿ ಬೆಂಬಲ ನೀಡುವ ದೇಶಗಳಾಗಿವೆ ಎಂದು ಹೇಳಿದರು.

65ಕ್ಕೂ ಹೆಚ್ಚು ದೇಶಗಳ 10,000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. 700ಕ್ಕೂ ಹೆಚ್ಚು ಭಾಷಣಕಾರರು, 1,500ಕ್ಕೂ ಹೆಚ್ಚು ಪ್ರದರ್ಶಕರು, 50,000ಕ್ಕೂ ಹೆಚ್ಚು ಜನರ ಭೇಟಿ ನಿರೀಕ್ಷೆಯಿದೆ ಎಂದರು.

ಮೂರು ದಿನಗಳ ಕಾಲ ಚರ್ಚೆ:

ನ.17 ರಿಂದ ಮೂರು ದಿನಗಳ ಕಾಲ ಕೃತಕ ಬುದ್ಧಿಮತ್ತೆ, ಡೀಪ್‌ಟೆಕ್, ಸೆಮಿಕಂಡಕ್ಟರ್‌, ಜೈವಿಕ ತಂತ್ರಜ್ಞಾನ, ರೊಬೊಟಿಕ್ಸ್, ಸಾರಿಗೆ ಮತ್ತಿತ್ತರ ಅತ್ಯಾಧುನಿಕ ತಂತ್ರಜ್ಞಾನ ಕುರಿತ ಚರ್ಚೆ, ಪ್ರದರ್ಶನ, ಸಹಯೋಗ ನಡೆಯಲಿದೆ.

ವಿಶೇಷ ಎಐ ಮತ್ತು ರೊಬೋಟಿಕ್ಸ್ ಪೆವಿಲಿಯನ್, ಭಾರತದ ನವೋದ್ಯಮಗಳ ನಾವೀನ್ಯತೆಗಳ ಪರಿಚಯ, ವಿವಿಧ ದೇಶಗಳ ಪೆವಿಲಿಯನ್‌ಗಳು, ಹೂಡಿಕೆದಾರರ ಜೊತೆಗಿನ ಸಂವಾದ, ಉತ್ಪನ್ನಗಳ ಬಿಡುಗಡೆ, ವಿಶೇಷ ತರಬೇತಿ ಗೋಷ್ಠಿಗಳು ಹಾಗೂ ನಿರ್ದಿಷ್ಟ ಉದ್ಯಮ ವಲಯಗಳ ಚರ್ಚೆ ಸೇರಿ ಪ್ರತಿಯೊಂದು ವಿಭಾಗಕ್ಕೂ ಈ ಸಮಾವೇಶದಲ್ಲಿ ಅವಕಾಶಗಳಿವೆ ಎಂದು ವಿವರಿಸಿದರು.

ಡೀಪ್‌ಟೆಕ್‌ ಹೂಡಿಕೆ, ಎಲೆವೇಟ್‌ ಮೈಲಿಗಲ್ಲು:

ಕರ್ನಾಟಕದ ‘ಎಲೆವೇಟ್’ ಉಪಕ್ರಮದ 10 ವರ್ಷಗಳ ಸಾಧನೆ ಗುರುತಿಸುವುದರ ಜೊತೆಗೆ ಯೂನಿಕಾರ್ನ್ ಕಂಪನಿಗಳು ಮತ್ತು ಷೇರುಪೇಟೆಯಲ್ಲಿ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಯಶಸ್ಸು ಸಾಧಿಸಿದ ಸಂಸ್ಥೆಗಳಿಗೆ ಸನ್ಮಾನ ನಡೆಯಲಿದೆ.

ಡೀಪ್‌ಟೆಕ್ ಹೂಡಿಕೆಗಳ ಘೋಷಣೆ ಮತ್ತು ನಮ್ಮ ‘ಎಲೆವೇಟ್’ ಉಪಕ್ರಮದ ಹತ್ತು ವರ್ಷಗಳ ಸಾಧನೆ ಸಂಭ್ರಮ ಈ ವರ್ಷದ ಪ್ರಮುಖ ಮೈಲಿಗಲ್ಲುಗಳಾಗಲಿವೆ ಎಂದು ಸಚಿವರು ಹೇಳಿದರು.

ಎಐ, ರೊಬೊಟಿಕ್ಸ್ ಪೆವಿಲಿಯನ್ ಆಕರ್ಷಣೆ:

ಭಾರತ್1.ಎಐ ಸಹಯೋಗದಲ್ಲಿ 50,000 ಚದರ ಅಡಿ ವಿಸ್ತೀರ್ಣದ ಎಐ ಮತ್ತು ರೊಬೊಟಿಕ್ಸ್ ಪೆವಿಲಿಯನ್ ರೂಪುಗೊಳ್ಳಲಿದ್ದು, ಇದರಲ್ಲಿ ಮಾನವರಂತೆ ಕಾಣುವ ರೋಬೋಟ್‌ಗಳು, ಡ್ರೋನ್‌ಗಳು, ಆಟೊನೊಮಸ್‌ ಸಿಸ್ಟಮ್ಸ್‌ ಮತ್ತು ಕೈಗಾರಿಕಾ ರೊಬೋಟ್‌ಗಳ ಪ್ರದರ್ಶನ ಇರಲಿದೆ.

ಜನರಲ್ ಆಟೊನಮಿ, ಎಕ್ಸ್‌ಟೆರಾ ರೊಬೊಟಿಕ್ಸ್‌, ಸೂಯಿಂಡ್, ಮೊವಿಟೊ, ವಿಸರ್ಜ್ ಮತ್ತು ವಾಣಿ ಎಐ ರಿಸರ್ಚ್ ಸೇರಿ 101ಕ್ಕೂ ಹೆಚ್ಚು ನವೋದ್ಯಮಗಳು ತಮ್ಮ ತಂತ್ರಜ್ಞಾನಗಳನ್ನು ಪ್ರದರ್ಶಿಸಲಿವೆ. ಭಾರತದ ಮೊದಲ ನಾಲ್ಕು ಕಾಲುಗಳ ರೋಬೋಟ್‌ಗಳ ಕ್ರೀಡಾ ಪ್ರದರ್ಶನ, ದೇಶೀಯವಾಗಿ ಅಭಿವೃದ್ಧಿಪಡಿಸಿದ ಮಾನವನ ಹೋಲುವ ರೋಬೋಟ್‌ಗಳ ಅತಿದೊಡ್ಡ ಸಮಾವೇಶ, ರೋಬೋಟ್‌ಗಳ ಮೂಲಕ ಅಡುಗೆ ಪ್ರದರ್ಶನ ಮತ್ತು ಡ್ರೋನ್‌ಗಳ ಪ್ರಾತ್ಯಕ್ಷಿಕೆಗಳು ಪ್ರಮುಖ ಆಕರ್ಷಣೆಗಳಾಗಿವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಇಂದು ಬೆಳಗ್ಗೆ 9ಕ್ಕೆ ಚಾಲನೆ:

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬೆಳಗ್ಗೆ 9 ಗಂಟೆಗೆ ಬೆಂಗಳೂರು ತಂತ್ರಜ್ಞಾನ ಶೃಂಗ ಸಭೆಗೆ (ಬಿಟಿಎಸ್) ಚಾಲನೆ ನೀಡಲಿದ್ದಾರೆ. ಈ ವೇಳೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ವಿವಿಧ ದೇಶದ ಗಣ್ಯರು ಭಾಗವಹಿಸಲಿದ್ದಾರೆ.

3,000 ಕಿಯೋ ಕಂಪ್ಯೂಟರ್‌ ಸರ್ಕಾರಿ ಶಾಲೆಗೆ ಅಳವಡಿಕೆ: ಪ್ರಿಯಾಂಕ್ ಖರ್ಗೆ

ಕಿಯೋನಿಕ್ಸ್‌ ಸಂಸ್ಥೆ ಅಭಿವೃದ್ಧಿಪಡಿಸಿರುವ ಅಗ್ಗದ ಬೆಲೆಯ ಎಐ ಆಧಾರಿತ 3000 ‘ಕಿಯೋ ಕಂಪ್ಯೂಟರ್‌’ಗಳನ್ನು ಸರ್ಕಾರಿ ಶಾಲೆ ಸೇರಿ ಇತರೆಡೆ ಅಳವಡಿಸಲಾಗಿದೆ. ಸರ್ಕಾರಿ ಶಾಲೆ ಸೇರಿದಂತೆ ಇತರೆಡೆ 20 ಸಾವಿರಕ್ಕೂ ಹೆಚ್ಚು ‘ಕಿಯೋ ಕಂಪ್ಯೂಟರ್‌’ ವಿತರಿಸುವ ಗುರಿ ಇದೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಕಲ್ಯಾಣ ಹಾಗೂ ಕಿತ್ತೂರು ಕರ್ನಾಟಕ ಭಾಗದಲ್ಲಿಕ್ರೈಸ್‌ ಶಾಲೆಗಳು ಸೇರಿ ಸರ್ಕಾರಿ ಶಾಲೆಗಳಲ್ಲಿ 3000 ಕಿಯೊ ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದೆ. ಬಳಕೆ ವಿಧಾನ, ಉಪಯುಕ್ತತೆ ಇತರೆ ಅಂಶ ಆಧಾರಿಸಿ ಬಳಸಲು ಒತ್ತು ನೀಡಲಾಗುವುದು ಎಂದರು.

ಯುವಕರು ಶಾಖೆಗಳಲ್ಲಿ ಅಲೆಯುವುದು ಬೇಡ:

ಬಿಟಿಎಸ್ ಒಂದು ಶೋ ಆಫ್‌ ಎಂಬ ಬಿಜೆಪಿ ಟೀಕೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಬಿಜೆಪಿಯವರು ಏನಾದರೂ ಮಾತನಾಡಲಿ. ಇದು ಪ್ರಚಾರಕ್ಕಾಗಿ ಮಾಡುತ್ತಿರುವುದಾದರೆ ಬಿಜೆಪಿ ಅವಧಿಯಲ್ಲಿ ಯಾಕೆ ನಿಲ್ಲಿಸಲಿಲ್ಲ? ಅವರು ಯಾಕೆ ಮುಂದುವರೆಸಿದರು ಎಂದು ಪ್ರಶ್ನಿಸಿದರು.

ನಾವು ಉದ್ಯೋಗ ಸೃಷ್ಟಿಗಾಗಿ ಈ ಶೃಂಗ ಮಾಡುತ್ತಿದ್ದೇವೆ. ಯುವಕರು ನಿರುದ್ಯೋಗಿಗಳಾಗಿ ಶಾಖೆಗಳಲ್ಲಿ ಅಲೆಯುವುದು ಬೇಡ ಎಂದು ತಿರುಗೇಟು ನೀಡಿದರು.