ಕುಷ್ಟಗಿ: ತಾಲೂಕಿನ ನವಲಹಳ್ಳಿ ಗ್ರಾಮದ ಜಮೀನುಗಳಿಗೆ ಸಚಿವ ಶಿವರಾಜ ತಂಗಡಗಿ ಭೇಟಿ ನೀಡಿ ಬೆಳೆಗಳ ಸ್ಥಿತಿಗತಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಬರ ಪರಿಸ್ಥಿತಿಯ ವಾಸ್ತವ ವರದಿ ಆಧರಿಸಿ ಬರ ಘೋಷಣೆ ಕುರಿತು ಸರ್ಕಾರ ಕ್ರಮ ಕೈಗೊಳ್ಳಲಿದೆ. ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ತೊಗರಿ, ಹೆಸರು, ಮೆಕ್ಕೆಜೋಳ, ಸಜ್ಜೆ ಸೇರಿದಂತೆ ವಿವಿಧ ಬೆಳೆಗಳು ಹಾನಿಗೊಳಗಾಗಿರುವುದು ಕಂಡುಬಂದಿದ್ದು, ಅಧಿಕಾರಿಗಳಿಂದ ಬೆಳೆ ನಷ್ಟದ ಸಮಗ್ರ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು.ಹೆಸರು ಬೆಳೆಯ ಪರಿಸ್ಥಿತಿ ಗಂಭೀರವಾಗಿದ್ದು, ಸಾಮಾನ್ಯವಾಗಿ ಒಂದು ಎಕರೆಗೆ ನಾಲ್ಕರಿಂದ ಐದು ಕ್ವಿಂಟಲ್‌ವರೆಗೆ ಇಳುವರಿ ಬರಬೇಕಾದ ಕಡೆ ಕೆಲವೆಡೆ ಕೇವಲ 30ರಿಂದ 40 ಕೆಜಿ ಇಳುವರಿ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಬಿತ್ತನೆ ಹಾಗೂ ಕೃಷಿ ಚಟುವಟಿಕೆಗಳಿಗೆ ಮಾಡಿದ ಖರ್ಚು ಕೂಡ ವಾಪಸ್ ಬಾರದಂತಹ ಸ್ಥಿತಿ ಹಲವು ಕಡೆ ಇದೆ ಎಂದು ತಿಳಿಸಿದರು.
ಜೂನ್ ಮತ್ತು ಜುಲೈನಲ್ಲಿ ಮಳೆಯಾಗಿದ್ದರಿಂದ ರೈತರು ಬಿತ್ತನೆ ಮಾಡಿದ್ದರು. ಆದರೆ ನಂತರ ನೀರಿಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಬೆಳೆ ಒಣಗುವ ಹಂತಕ್ಕೆ ತಲುಪಿವೆ. ಹೀಗಾಗಿ ತಾಲೂಕುವಾರು ವಾಸ್ತವ ಪರಿಸ್ಥಿತಿ ಪರಿಶೀಲಿಸಿ ನಿಖರ ವರದಿ ಸಿದ್ಧಪಡಿಸಲಾಗುವುದು ಎಂದರು.ವಾರದೊಳಗೆ ಸಂಪುಟ ಚರ್ಚೆ:
ಜಿಲ್ಲೆಯ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳು,ಕೃಷಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಬೆಳೆ ನಷ್ಟದ ವಾಸ್ತವ ಮಾಹಿತಿ ಪಡೆಯಲಾಗುವುದು. ಒಂದು ಅಥವಾ ಎರಡು ದಿನಗಳಲ್ಲಿ ಸಂಪೂರ್ಣ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಬಳಿಕ ಸಚಿವ ಸಂಪುಟದಲ್ಲಿ ಚರ್ಚಿಸಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಅಗತ್ಯ ದಾಖಲೆ ಸಿದ್ಧಪಡಿಸಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಅವಸರವಾಗಿ ಬರ ಘೋಷಣೆ ಮಾಡಿದರೆ ಕೆಲವು ತಾಲೂಕುಗಳಿಗೆ ಅನ್ಯಾಯವಾಗುವ ಸಾಧ್ಯತೆ ಇದೆ. ಆದ್ದರಿಂದ ಮಾರ್ಗಸೂಚಿಗಳ ಪ್ರಕಾರ ಸಮಗ್ರ ಸಮೀಕ್ಷೆ ನಡೆಸಿ ವಾಸ್ತವಾಂಶದ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಬೆಳೆ ವಿಮೆ ಬಗ್ಗೆಯೂ ಮಾಹಿತಿ ಸಂಗ್ರಹ:ಜಿಲ್ಲೆಯಲ್ಲಿ ಎಷ್ಟು ಎಕರೆ ಪ್ರದೇಶಕ್ಕೆ ಬೆಳೆ ವಿಮೆ ಮಾಡಿಸಲಾಗಿದೆ, ಎಷ್ಟು ರೈತರು ವಿಮೆ ವ್ಯಾಪ್ತಿಗೆ ಒಳಪಟ್ಟಿದ್ದಾರೆ ಎಂಬ ಮಾಹಿತಿ ಅಧಿಕಾರಿಗಳಿಂದ ಪಡೆಯಲಾಗುತ್ತಿದೆ. ಜಿಲ್ಲಾಧಿಕಾರಿ ಹಾಗೂ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಲಾಗಿದೆ. ಬರ ಹಾಗೂ ಬೆಳೆ ವಿಮೆಗೆ ಸಂಬಂಧಿಸಿದ ಮಾರ್ಗಸೂಚಿಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಚಿವರು ಬರ ಹಾಗೂ ಅತಿವೃಷ್ಟಿ ಪರಿಸ್ಥಿತಿ ಪರಿಶೀಲಿಸುತ್ತಿದ್ದಾರೆ. ಎಲ್ಲೆಲ್ಲಿ ಮಳೆ ಕೊರತೆ ಹಾಗೂ ಅತಿವೃಷ್ಟಿಯಿಂದ ಹಾನಿಯಾಗಿದೆಯೋ ಅಲ್ಲಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಅರಿಯಲಾಗುವುದು. ರೈತರ ಜಮೀನುಗಳಲ್ಲಿ ಉತ್ತಮ ಮಳೆಯಾಗಿ ಬೆಳೆ ಸಮೃದ್ಧವಾಗಬೇಕು. ರೈತರ ಮುಖದಲ್ಲಿ ಸಂತಸ ಕಾಣಬೇಕು ಎಂಬುದೇ ನಮ್ಮ ಆಶಯವಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.ಈ ಸಂದರ್ಭದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ, ಗ್ಯಾರಂಟಿ ಸಮಿತಿಯ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ,ತಹಸೀಲ್ದಾರ್ ಅಶೋಕ ಶಿಗ್ಗಾಂವಿ, ತಾಪಂ ಇಒ ಅಮರೇಶ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಕಾತರಕಿ, ಮಾಜಿ ಜಿಪಂ ಸದಸ್ಯ ಕೆ.ಮಹೇಶ ಸೇರಿದಂತೆ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ರೈತರು ಅನೇಕರು ಇದ್ದರು.
ಇದೇ ಸಂದರ್ಭದಲ್ಲಿ ಸಚಿವ ಶಿವರಾಜ ತಂಗಡಗಿ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ ರೈತರು ಹಾಗೂ ಸಾರ್ವಜನಿಕರ ಸಮಸ್ಯೆ ಆಲಿಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.