ನಾಡಹಬ್ಬ ದಸರಾ ಸಂದರ್ಭದಲ್ಲಿ ಕಂಬಳ ಆಯೋಜಿಸಿರುವುದು ಸರಿಯಲ್ಲ. ಇದರಿಂದ ಕಂಬಳಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರೆಯದೆ ಇರಬಹುದು ಎಂದು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅಭಿಪ್ರಾಯಪಟ್ಟರು.
ಮೈಸೂರು : ನಾಡಹಬ್ಬ ದಸರಾ ಸಂದರ್ಭದಲ್ಲಿ ಕಂಬಳ ಆಯೋಜಿಸಿರುವುದು ಸರಿಯಲ್ಲ. ಇದರಿಂದ ಕಂಬಳಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರೆಯದೆ ಇರಬಹುದು ಎಂದು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅಭಿಪ್ರಾಯಪಟ್ಟರು.
ನಗರದ ಅರಮನೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ನನ್ನ ವೈಯಕ್ತಿಕ ಅಭಿಪ್ರಾಯ. ದಸರಾ ವೇಳೆ ಕಂಬಳ ಆಯೋಜಿಸುವ ಬದಲು ಅದಕ್ಕೆ ಪ್ರತ್ಯೇಕ ದಿನಾಂಕ ನಿಗದಿಪಡಿಸಿದ್ದರೆ ಒಳ್ಳೆಯದಿತ್ತು ಎಂದರು.
ಮಂಗಳೂರು ಭಾಗದಲ್ಲಿ ಕಂಬಳಕ್ಕೆ ವಿಶೇಷವಾದ ಪ್ರಾಮುಖ್ಯತೆ ಇದೆ. ಆದ್ದರಿಂದ ದಸರಾ ಸಂಭ್ರಮದ ಮಧ್ಯೆ ಕಂಬಳ ಆಯೋಜಿಸಬಾರದಿತ್ತು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ. ಈ ಬಗ್ಗೆ ಸರ್ಕಾರ ಸಲಹೆ ಕೇಳಿದ್ದರೆ ನೀಡುತ್ತಿದ್ದೆ ಎಂದು ಹೇಳಿದರು.
ಈ ಬಾರಿಯ ದಸರಾದಲ್ಲಿ ಏನೆಲ್ಲಾ ಬದಲಾವಣೆ ಮಾಡಬಹುದು ಎಂಬುದು ಸರ್ಕಾರಕ್ಕೆ ಬಿಟ್ಟದ್ದು, ಈಗಿನ ಪೀಳಿಗೆಯ ಜನರಿಗೆ ತಕ್ಕಂತೆ ಮಾಡುವುದಾದರೆ ಈಗಿನ ಪೀಳಿಗೆಯವರನ್ನೇ ಕೇಳಬೇಕು. ನಾವು ಸಂಪ್ರದಾಯದ ಪ್ರಕಾರ ದಸರಾ ಆಚರಿಸುತ್ತೇವೆ. ಸರ್ಕಾರದ ದಸರಾಗೂ ನಮಗೂ ಸಂಬಂಧವಿಲ್ಲ ಎಂದರು. ದಸರಾ ಮಹೋತ್ಸವವನ್ನು ಎಷ್ಟು ಸರಳವಾಗಿ ಮಾಡುತ್ತೇವೆ ಎಂದರೂ ಅದಕ್ಕೆ ತನ್ನದೇ ಆದ ಪ್ರಭಾವ ಇರುತ್ತದೆ. ಆದ್ದರಿಂದ ಅದ್ಧೂರಿ ಆಗುತ್ತದೆ ಎಂದು ಅವರು ಹೇಳಿದರು.
ಸರ್ಕಾರ ನ್ಯಾಯಾಲಯದ ಆದೇಶ ಪಾಲಿಸಿಲ್ಲ:
ನಮ್ಮ ಆಸ್ತಿಯ ವಿಚಾರದಲ್ಲಿ ಅನೇಕ ಆದೇಶಗಳು ನಮ್ಮ ಪರವಾಗಿ ಆಗಿದೆ. ಉದಾಹರಣೆಗೆ ವಸ್ತು ಪ್ರದರ್ಶನ ಆವರಣದ ಪಕ್ಕದ ಪ್ರದೇಶ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ನಮ್ಮ ಪರ ತೀರ್ಪು ಬಂದರೂ ಸರ್ಕಾರ ನ್ಯಾಯಾಲಯದ ಆದೇಶ ಪಾಲಿಸಿಲ್ಲ. ಕೆಲವರು ನಕಲಿ ದಾಖಲಾತಿ ಮಾಡಿಕೊಂಡಿದ್ದಾರೆ. ಚಾಮುಂಡಿಬೆಟ್ಟದ ತಪ್ಪಲಿನ ಬಿ ಕರಾಬಿನಲ್ಲಿ ಮಧ್ಯವರ್ತಿಗಳ ಹಾವಳಿ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಬೆಟ್ಟದ ಅಭಿವೃದ್ಧಿಯಿಂದ ತೊಂದರೆ
ಚಾಮುಂಡಿಬೆಟ್ಟದಲ್ಲಿನ ವಿವಿಧ ಅಭಿವೃದ್ಧಿಯಿಂದ ಸಾಕಷ್ಟು ತೊಂದರೆ ಆಗಿದೆ. ಬೆಟ್ಟದಲ್ಲಿ ನಿರ್ಮಿಸಿರುವ ಬಹುಮಹಡಿ ಪಾರ್ಕಿಂಗ್‌ಗೆ ತೊಡಲಾದ ಹಳ್ಳ ಮತ್ತು ಡ್ರಿಲ್‌ನಿಂದ ಬೆಟ್ಟದಲ್ಲಿನ ನಮ್ಮ ಅರಮನೆಗೂ ತೊಂದರೆಯಾಗಿದೆ. ಹಾಗೆ ನೋಡಿದರೆ ಪಾರ್ಕಿಂಗ್ ಪ್ರದೇಶವೂ ನಮಗೆ ಸೇರಿದ್ದು ಎಂದರು.
ಚಾಮುಂಡಿ ಬೆಟ್ಟ ಕೇವಲ ಬೆಟ್ಟವಾಗಿ ಉಳಿದಿಲ್ಲ. ಬದಲಿಗೆ ಊರಿನಂತೆ ಬೆಳೆಯುತ್ತಿದೆ. ದಸರಾ ಬಳಿಕ ಈ ಹಿಂದೆ ಬೆಟ್ಟ ಹೇಗಿತ್ತು ಎಂಬುದರ ಫೋಟೋ ತೋರಿಸುತ್ತೇನೆ ಎಂದು ಅವರು ಹೇಳಿದರು.

