ತಮ್ಮ ತಮ್ಮ ಜಿಲ್ಲೆಗಳ ವ್ಯಾಪಾರ ಮತ್ತು ಕೈಗಾರಿಕಾ ಕ್ಷೇತ್ರಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಎಫ್‌.ಕೆಸಿಸಿಐ ಅಧ್ಯಕ್ಷರ ಗಮನಕ್ಕೆ

ಕನ್ನಡಪ್ರಭ ವಾರ್ತೆ ಮೈಸೂರುಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಸಹಯೋಗದಲ್ಲಿ ಹಾಗೂ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಆತಿಥ್ಯದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಗಳ ವಲಯ ಮಟ್ಟದ ಸಭೆಯು ಸಂಸ್ಥೆ ಆವರಣದಲ್ಲಿ ನಡೆಯಿತು.ಸಭೆಯಲ್ಲಿ ನಾಲ್ಕು ಜಿಲ್ಲೆಗಳ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಗಳ ಪದಾಧಿಕಾರಿಗಳು ಹಾಗೂ ಆಡಳಿತ ಮಂಡಳಿ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ, ತಮ್ಮ ತಮ್ಮ ಜಿಲ್ಲೆಗಳ ವ್ಯಾಪಾರ ಮತ್ತು ಕೈಗಾರಿಕಾ ಕ್ಷೇತ್ರಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಎಫ್‌.ಕೆಸಿಸಿಐ ಅಧ್ಯಕ್ಷರ ಗಮನಕ್ಕೆ ತಂದರು.ಮುಖ್ಯವಾಗಿ ಕೆಐಎಡಿಬಿ ವತಿಯಿಂದ ಹಂಚಿಕೆ ಮಾಡಲಾಗಿರುವ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯ ಕೊರತೆ, ವ್ಯಾಪಾರ ಪರವಾನಗಿ ಪಡೆಯುವಲ್ಲಿನ ಸಮಸ್ಯೆಗಳು, ಎಪಿಎಂಸಿ ವರ್ತಕರಿಗೆ ಇ-ಖಾತಾ ನೀಡುವಲ್ಲಿ ಎದುರಾಗುತ್ತಿರುವ ತೊಂದರೆ, ತ್ಯಾಜ್ಯ ನಿರ್ವಹಣೆ ಸೇರಿದಂತೆ ವ್ಯಾಪಾರ ಮತ್ತು ಕೈಗಾರಿಕಾ ವಲಯದ ಹಲವು ಸಮಸ್ಯೆ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.ಅಲ್ಲದೆ ಕೃಷಿ ತಂತ್ರಜ್ಞಾನ ಮತ್ತು ಕೃಷಿ ಆಧಾರಿತ ಉದ್ಯಮಗಳ ಅಭಿವೃದ್ಧಿ, ನವೀಕರಿಸಬಹುದಾದ ಇಂಧನ, ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ ಮುಂತಾದ ವಿಷಯಗಳ ಬಗ್ಗೆಯೂ ಚರ್ಚಿಸಲಾಯಿತು.ಮೈಸೂರು ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಯ ಹಿತದೃಷ್ಟಿಯಿಂದ, ಮೈಸೂರು ದಸರಾ ಮಹೋತ್ಸವವನ್ನು ಸುಗಮವಾಗಿ, ಅಚ್ಚುಕಟ್ಟಾಗಿ ಹಾಗೂ ಅತ್ಯಂತ ವೈಭವದಿಂದ ಆಚರಿಸುವ ಉದ್ದೇಶದಿಂದ ದಸರಾ ಮಂಡಳಿಯನ್ನು ರಚಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಸಭೆಯಲ್ಲಿ ಚರ್ಚಿಸಲಾಯಿತು.ಎಂಸಿಸಿಐ ಅಧ್ಯಕ್ಷ ಡಾ.ಕೆ.ಬಿ. ಲಿಂಗರಾಜು ಅವರು ಎಫ್‌.ಕೆ.ಸಿಸಿಐ ಮತ್ತು ಎಂಸಿಸಿಐ ನಡುವೆ ಪರಸ್ಪರ ಸಹಕಾರದ ಅವಕಾಶ ಗುರುತಿಸುವುದು, ಸಹಯೋಗದ ಕ್ಷೇತ್ರ ವಿಸ್ತರಿಸುವುದು ಹಾಗೂ ಉಭಯ ಸಂಸ್ಥೆಗಳ ನಡುವಿನ ಸಾಂಸ್ಥಿಕ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.ಎಫ್‌.ಕೆ.ಸಿಸಿಐ ಅಧ್ಯಕ್ಷ ಟಿ. ಸಾಯಿರಾಮ್ ಪ್ರಸಾದ್ ಅವರು, ಸದಸ್ಯರು ಪ್ರಸ್ತಾಪಿಸಿದ ಎಲ್ಲಾ ಸಮಸ್ಯೆಗಳನ್ನು ಆಲಿಸಿ, ಪ್ರತಿಯೊಂದು ಸಮಸ್ಯೆಯನ್ನು ಸಂಬಂಧಪಟ್ಟ ಸರ್ಕಾರಿ ಇಲಾಖೆಗಳ ಗಮನಕ್ಕೆ ತಂದು, ಆದಷ್ಟು ಶೀಘ್ರವಾಗಿ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಸಭೆಯಲ್ಲಿ ಎಫ್‌.ಕೆ.ಸಿಸಿಐ ಹಿರಿಯ ಉಪಾಧ್ಯಕ್ಷ ಬಿ.ಪಿ. ಶಶಿಧರ್, ಉಪಾಧ್ಯಕ್ಷ ಎನ್‌. ಸತೀಶ್, ಎಪಿಎಂಸಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರಾದ ಡಿ.ಎಂ. ಶಂಕರಪ್ಪ, ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷ ತ್ರಿವಿಕ್ರಮ್ ಜೋಷಿ, ಎಂಸಿಸಿಐ ಅಧ್ಯಕ್ಷ ಡಾ.ಕೆ.ಬಿ. ಲಿಂಗರಾಜು, ಗೌರವ ಕಾರ್ಯದರ್ಶಿ ಎ.ಕೆ. ಶಿವಾಜಿರಾವ್, ಉಪಾಧ್ಯಕ್ಷ ಆರ್. ಆನಂದ್, ಗೌರವ ಖಜಾಂಚಿ ಎಸ್‌.ಜೆ. ಅಶೋಕ್‌, ಜಂಟಿ ಕಾರ್ಯದರ್ಶಿ ವಿಓದ್‌ಜೈನ್‌ಮತ್ತು ಆಡಳಿತ ಮಂಡಳಿ ಸದಸ್ಯರು ಇದ್ದರು.