ನಿರ್ಗಮನದ ಹಂತದಲ್ಲಿರುವ ಮುಂಗಾರು ರಾಜ್ಯದಲ್ಲಿ ಚುರುಕು ಪಡೆದಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ರಾಜ್ಯದ ಹಲವೆಡೆ ಮಳೆ ಆಗುತ್ತಿದ್ದು, ಸಿಡಿಲಬ್ಬರದ ಮಳೆಗೆ ಮೂವರು ಬಲಿಯಾಗಿದ್ದಾರೆ.

ಬೆಂಗಳೂರು: ನಿರ್ಗಮನದ ಹಂತದಲ್ಲಿರುವ ಮುಂಗಾರು ರಾಜ್ಯದಲ್ಲಿ ಚುರುಕು ಪಡೆದಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ರಾಜ್ಯದ ಹಲವೆಡೆ ಮಳೆ ಆಗುತ್ತಿದ್ದು, ಸಿಡಿಲಬ್ಬರದ ಮಳೆಗೆ ಮೂವರು ಬಲಿಯಾಗಿದ್ದಾರೆ. ರಾಜಧಾನಿ ಬೆಂಗಳೂರು, ಚಾಮರಾಜನಗರ ಸೇರಿ ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸೋಮವಾರ ಮಳೆಯಾಗಿದೆ.

ಕಲುಬರಗಿ ಜಿಲ್ಲೆ ಕಮಲಾಪುರ ತಾಲೂಕಿನ ನಾಗೂರ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಮಹಿಳೆಯರಿಬ್ಬರು ಮೃತಪಟ್ಟಿದ್ದಾರೆ. ವಿಜಯಲಕ್ಷ್ಮಿ ಬಸಯ್ಯ (48) ಹಾಗೂ ಶೈಜಾದ್ ಬಿ ಪಾತರು ಸಾಬ್ (58) ಮೃತರು. ಮಧ್ಯಾಹ್ನದ ವೇಳೆ ಹೊಲದ ಬಳಿಯ ಮರದ ಕೆಳಗೆ ಕುಳಿತು ಊಟ ಮಾಡುತ್ತಿದ್ದಾಗ ಸಿಡಿಲು ಬಡಿದಿದ್ದು, ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಇದೇ ವೇಳೆ, ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ಮದ್ಲೂರ ಗ್ರಾಮದ ಬಳಿ ಹೊಲಕ್ಕೆ ತೆರಳಿದ್ದ ವೇಳೆ ಸಿಡಿಲು ಬಡಿದು ಕೇದಾರಪ್ಪ ಬಸಪ್ಪ ಗುರ್ಲಹೊಸೂರ (47) ಎಂಬುವರು ಮೃತಪಟ್ಟಿದ್ದಾರೆ. ಭೀಮಪ್ಪ ಎಂಬುವರು ಗಾಯಗೊಂಡಿದ್ದು, ಅವರನ್ನು ಧಾರವಾಡದ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಮಳೆ

ರಾಜಧಾನಿ ಬೆಂಗಳೂರಿನಲ್ಲಿ ಮಳೆಯಿಂದಾಗಿ ಹಲವು ರಸ್ತೆಗಳು, ಫ್ಲೈಓವರ್‌ಗಳು, ಅಂಡರ್‌ಪಾಸ್‌ಗಳು ಜಲಾವೃತಗೊಂಡು ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿತ್ತು. ಹಲವೆಡೆ ಮರಗಳು ಧರೆಗುರುಳಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.

ಚಾಮರಾಜನಗರ ಜಿಲ್ಲೆಯಾದ್ಯಂತ ಮಳೆ

ಚಾಮರಾಜನಗರ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ಸುಮಾರು 50ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ವೈಶಂಪಾಳ್ಯ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಬಿದ್ದು, ವೃದ್ಧೆಯೊಬ್ಬಳು ಸ್ವಲ್ಪದರಲ್ಲೇ ಪಾರಾಗಿದ್ದಾಳೆ. ರಾಮಾಪುರ ಗ್ರಾಮದ ಹಲವೆಡೆ ಬೃಹತ್ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ. ಚಂಗವಾಡಿ ಗ್ರಾಮದಲ್ಲಿ ತಾತ್ಕಾಲಿಕ ಸೇತುವೆಯೊಂದು ಕೊಚ್ಚಿಹೋಗಿದೆ. ಬಂಡಳ್ಳಿ ಗ್ರಾಮದಲ್ಲಿ ಕೊಟ್ಟಿಗೆ ಕುಸಿದು ಬಿದ್ದು, ಹಸುವೊಂದು ಸ್ಥಳದಲ್ಲೇ ಮೃತಪಟ್ಟಿದೆ. ಹಲವು ಹಸುಗಳು ಗಂಭೀರವಾಗಿ ಗಾಯಗೊಂಡಿವೆ.

ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ವಂದಲಿ ಗ್ರಾಮದಲ್ಲಿ ಸಿಡಿಲಿನ ಹೊಡೆತಕ್ಕೆ ಆಂಜನೇಯ ದೇವಸ್ಥಾನದ ಗೋಪುರಕ್ಕೆ ಹಾನಿಯಾಗಿದೆ. ಇದೇ ವೇಳೆ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಗದಗ ಜಿಲ್ಲೆಗಳಲ್ಲೂ ಮಳೆಯಾದ ವರದಿಯಾಗಿದೆ.