ಮುಂಗಾರು ಮಳೆ ಕೊರತೆ ಮತ್ತು ಬರ ಪರಿಸ್ಥಿತಿ ನಿವಾರಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಡೆಸುತ್ತಿರುವ ಮೋಡ ಬಿತ್ತನೆಗೆ ಶುಕ್ರವಾರ ಚಾಲನೆ ನೀಡಲಾಗಿದೆ.ಎಚ್‌ಎಎಲ್‌ ವಿಮಾನನಿಲ್ದಾಣದಲ್ಲಿ ಶುಕ್ರವಾರ ಜಲಸಂಪನ್ಮೂಲ ಸಚಿವ ಎನ್‌.ಚಲುವರಾಯಸ್ವಾಮಿ ಚಾಲನೆ ನೀಡಿದರು.

ಬೆಂಗಳೂರು : ಮುಂಗಾರು ಮಳೆ ಕೊರತೆ ಮತ್ತು ಬರ ಪರಿಸ್ಥಿತಿ ನಿವಾರಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಡೆಸುತ್ತಿರುವ ಮೋಡ ಬಿತ್ತನೆಗೆ ಶುಕ್ರವಾರ ಚಾಲನೆ ನೀಡಲಾಗಿದೆ.

ಎಚ್‌ಎಎಲ್‌ ವಿಮಾನನಿಲ್ದಾಣದಲ್ಲಿ ಶುಕ್ರವಾರ ಜಲಸಂಪನ್ಮೂಲ ಸಚಿವ ಎನ್‌.ಚಲುವರಾಯಸ್ವಾಮಿ ಅವರು ವಿಶೇಷ ಲಘು ವಿಮಾನಕ್ಕೆ ರಾಷ್ಟ್ರಧ್ವಜ ಮತ್ತು ನಾಡ ಧ್ವಜ ತೋರಿಸುವ ಮೂಲಕ ಮೋಡ ಬಿತ್ತನೆಗೆ ಚಾಲನೆ ನೀಡಿದರು.

ಯೋಜನೆಗೆ ಒಟ್ಟು 28.52 ಕೋಟಿ ರು. ವ್ಯಯಿಸಲಾಗುತ್ತಿದ್ದು, ಕರ್ನಾಟಕ ನೀರಾವರಿ ನಿಗಮ ಮತ್ತು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಜಂಟಿಯಾಗಿ ಮೋಡ ಬಿತ್ತನೆ ಅನುಷ್ಠಾನಗೊಳಿಸುತ್ತಿದೆ. ಅಲ್ಲದೆ ಮೋಡ ಬಿತ್ತನೆ ಕಾರ್ಯದ ವೈಜ್ಞಾನಿಕ ಮತ್ತು ಪರಿಣಾಮಕಾರಿ ನಿರ್ವಹಣೆ, ತಾಂತ್ರಿಕ ಸಲಹೆ ಮತ್ತು ಮೌಲ್ಯಮಾಪನಕ್ಕಾಗಿ ಪ್ರತ್ಯೇಕ ಎರಡು ಮೇಲ್ವಿಚಾರಣಾ ಸಮಿತಿ ರಚಿಸಲಾಗಿದೆ.

ಈ ವೇಳೆ ಮಾತನಾಡಿದ ಚಲುವರಾಯಸ್ವಾಮಿ, ರಾಜ್ಯದಲ್ಲಿ ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ತೀವ್ರ ಬರ ಎದುರಾಗುವ ಸಾಧ್ಯತೆಗಳಿವೆ. ಈ ತಿಂಗಳ ಅಂತ್ಯಕ್ಕೆ ಮುಂಗಾರು ಮುಕ್ತಾಯವಾಗಲಿದೆ. ಈ ತಿಂಗಳ ಅಂತ್ಯದೊಳಗೆ ಮಳೆ ಬಂದು ಕುಡಿಯುವ ನೀರು ಶೇಖರಣೆಯಾಗದಿದ್ದರೆ, ಮುಂದಿನ ಮುಂಗಾರಿನವರೆಗೆ ನೀರಿಗೆ ತೀವ್ರ ಅಭಾವ ಎದುರಾಗಲದೆ. ಹೀಗಾಗಿ ಕುಡಿಯುವ ನೀರು ಪೂರೈಕೆ ಮತ್ತು ರೈತರ ಹಿತದೃಷ್ಟಿಯಿಂದ ಮೋಡ ಬಿತ್ತನೆ ಮಾಡಲಾಗುತ್ತಿದೆ. ಈ ಹಿಂದೆ ಮಾಡಲಾಗಿದ್ದ ಮೋಡ ಬಿತ್ತನೆ ಶೇ.35ರಷ್ಟು ಯಶಸ್ವಿಯಾಗಿತ್ತು. ಏನೇ ನಷ್ಟ ಅಥವಾ ಲಾಭವಾದರೂ ಜನರಿಗೆ ಒಳ್ಳೆಯದಾಗಬೇಕೆಂಬುದು ನಮ್ಮ ಆಶಯ. ಇದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುವ ಬಗ್ಗೆ ಚಿಂತೆಯಿಲ್ಲ. ನಾಡಿನ ಹಿತ ಕಾಯುವುದಷ್ಟೇ ನಮ್ಮ ಆದ್ಯತೆ ಎಂದರು.

ಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಜಿ.ಸಿ. ಚಂದ್ರಶೇಖರ್‌, ಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಶಾಸಕ ಕೋನರೆಡ್ಡಿ, ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ ಇತರರಿದ್ದರು.

ಮೋಡ ಬಿತ್ತನೆ ಹೇಗಾಗಲಿದೆ?

ವಾತಾವರಣದಲ್ಲಿನ ಮೋಡಗಳಲ್ಲಿನ ತೇವಾಂಶವು ಮಳೆಯಾಗಿ ಸುರಿಯುವಂತೆ ಮಾಡಲು ಕೃತಕವಾಗಿ ಸಿಲ್ವರ್‌ ಅಯೋಡೈಡ್‌ ರಾಸಾಯನಿಕ ಸಿಂಪಡಿಸಿ ವೈಜ್ಞಾನಿಕ ರೂಪದಲ್ಲಿ ಮಳೆಯಾಗುವಂತೆ ಮಾಡಲಾಗುತ್ತದೆ. ಮೋಡಗಳ ಸ್ವರೂಪವನ್ನಾಧರಿಸಿ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಸಿಲ್ವರ್‌ ಅಯೋಡೈಡ್‌ ರಾಸಾಯನಿಕವು ಮೋಡದಲ್ಲಿನ ಹನಿಗಳನ್ನು ಒಟ್ಟುಗೂಡಿಸಿ ಮಂಜುಗಡ್ಡೆಯ ಹರಳುಗಳಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಅದರೊಂದಿಗೆ ಪೊಟ್ಯಾಸಿಯಮ್‌ ಆಯೋಡೈಡ್‌, ಸೋಡಿಯಂ ಕ್ಲೋರೈಡ್‌ಗಳನ್ನೂ ಬಳಸಲಾಗುತ್ತದೆ.

ಮೋಡ ಬಿತ್ತನೆ ಸಂದರ್ಭದಲ್ಲಿ ವಾತಾವರಣದಲ್ಲಿ ಬಿಸಲು, ಗಾಳಿ ವೇಗ ಮತ್ತು ಮೋಡಗಳ ಸಾಂದ್ರತೆಯನ್ನು ಹವಾಮಾನ ಇಲಾಖೆಯ ಡಾಪ್ಲರ್‌ ರಾಡಾರ್‌ ಮೂಲಕ ತಾಂತ್ರಿಕ ತಂಡ ಪರಿಶೀಲಿಸುತ್ತದೆ. ಮಳೆ ಸುರಿಸುವ ಸಾಮರ್ಥ್ಯವಿರುವ ಮೋಡಗಳನ್ನು ಗುರುತಿಸಿ ವಿಶೇಷ ವಿಮಾನವು ರಾಸಾಯನಿಕಗಳನ್ನು ಸಿಂಪಡಿಸುತ್ತದೆ. ರಾಸಾಯನಿಕ ಸಿಂಪಡಿಸಿದ 30 ನಿಮಿಷಗಳಿಂದ 1 ಗಂಟೆಯೊಳಗೆ ಮಳೆಯಾಗುವ ಸಾಧ್ಯತೆ ಇರುತ್ತದೆ.

ಎಲ್ಲೆಲ್ಲಿ ಮೋಡ ಬಿತ್ತನೆ?

ಸದ್ಯ ರಾಜ್ಯ ಸರ್ಕಾರವು ಯಾವ ಜಿಲ್ಲೆ ಅಥವಾ ಭಾಗದಲ್ಲಿ ಮೋಡ ಬಿತ್ತನೆ ಮಾಡಬೇಕು ಎಂಬುದನ್ನು ನಿರ್ಧರಿಸಿಲ್ಲ. ತಾಂತ್ರಿಕ ತಂಡವು ನಿರಂತರವಾಗಿ ನೀಡುವ ವರದಿಗಳನ್ನಾಧರಿಸಿ ಮಳೆ ಕೊರತೆ ಇರುವ ಪ್ರದೇಶಗಳು, ಪ್ರಮುಖ ಜಲಾಶಯಗಳ ಜಲಾನಯನ ಪ್ರದೇಶಗಳು ಹಾಗೂ ಕೃಷಿ ಚಟುವಟಿಕೆಗೆ ನೀರಿನ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ಮೋಡ ಬಿತ್ತನೆ ಮಾಡಲಾಗುತ್ತದೆ.