ಒತ್ತುವರಿ ತೆರವುಗೊಳಿಸಿದ ಪಾದಚಾರಿ ಮಾರ್ಗದ ಮರು ಒತ್ತುವರಿಯಾಗುವುದನ್ನು ತಡೆಗಟ್ಟಲು ಟಾಸ್ಕ್‌ಫೋರ್ಸ್ ರಚಿಸಲಾಗುತ್ತದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

-ನಿರಂತರ ಮೇಲ್ವಿಚಾರಣೆಗೆ ಅಧಿಕಾರಿಗಳಿಗೆ ಸೂಚನೆ ಕನ್ನಡಪ್ರಭ ವಾರ್ತೆ ಬೆಂಗಳೂರು

ಒತ್ತುವರಿ ತೆರವುಗೊಳಿಸಿದ ಪಾದಚಾರಿ ಮಾರ್ಗದ ಮರು ಒತ್ತುವರಿಯಾಗುವುದನ್ನು ತಡೆಗಟ್ಟಲು ಟಾಸ್ಕ್‌ಫೋರ್ಸ್ ರಚಿಸಲಾಗುತ್ತದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಶುಕ್ರವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಪ್ರತಿ ನಗರಪಾಲಿಕೆ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ ಹಾಗೂ ಪಾಲಿಕೆ ಅಧಿಕಾರಿಗಳನ್ನು ಒಳಗೊಂಡ ಜಂಟಿ ಟಾಸ್ಕ್‌ಫೋರ್ಸ್ ರಚಿಸಿ, ನಿರಂತರ ಮೇಲ್ವಿಚಾರಣೆ, ಅನಿರೀಕ್ಷಿತ ಭೇಟಿ ನೀಡಬೇಕು. ಒತ್ತುವರಿಯಾಗಿದ್ದರೆ ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಮರು ಒತ್ತುವರಿ ಪ್ರಕರಣಗಳನ್ನು ತಕ್ಷಣ ಗುರುತಿಸಿ, ಫೋಟೋ ಹಾಗೂ ಜಿಯೋ-ಟ್ಯಾಗ್ ಮಾಹಿತಿಯೊಂದಿಗೆ ವರದಿ ಮಾಡುವ ವ್ಯವಸ್ಥೆ ಮಾಡಬೇಕು. ಮಾರ್ಷಲ್‌ಗಳು ಹಾಗೂ ಬೀಟ್ ಪೊಲೀಸ್ ಸಿಬ್ಬಂದಿ ಜಂಟಿಯಾಗಿ ನಿಯಮಿತವಾಗಿ ಪರಿಶೀಲನೆ ನಡೆಸಬೇಕು. ಮರು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಎಫ್‌ಐಆರ್ ದಾಖಲಿಸಿ, ವಸ್ತುಗಳನ್ನು ವಶಪಡಿಸಿಕೊಂಡು, ನಿಯಮಾನುಸಾರ ಹೆಚ್ಚಿನ ದಂಡ ವಿಧಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.

ಬೀದಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ನಿರ್ಬಂಧಿತ ರಸ್ತೆಗಳು ಹಾಗೂ ವ್ಯಾಪಾರ ಮಾಡಬಹುದಾದ ರಸ್ತೆಗಳ ಕುರಿತು ವ್ಯಾಪಾರಿಗಳಿಗೆ ಸ್ಪಷ್ಟತೆ ನೀಡಬೇಕು. ಪೊಲೀಸ್ ಮತ್ತು ಪಾಲಿಕೆ ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಬೇಕು. ಮುಖ್ಯ ಹಾಗೂ ಹೆಚ್ಚಿನ ಸಂಚಾರವಿರುವ ರಸ್ತೆಗಳಲ್ಲಿ ಪಾದಚಾರಿ ಮತ್ತು ವಾಹನ ಸಂಚಾರಕ್ಕೆ ಯಾವುದೇ ರೀತಿಯ ಅಡಚಣೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು.

ಬೀದಿ ವ್ಯಾಪಾರಿಗಳ ಹೊಸ ಸಮಗ್ರ ಸಮೀಕ್ಷೆ: ಬೀದಿ ಬದಿ ವ್ಯಾಪಾರಿಗಳ ಕುರಿತು ಹೊಸ ಸಮಗ್ರ ಸಮೀಕ್ಷೆಯನ್ನು ತ್ವರಿತವಾಗಿ ನಡೆಸಬೇಕು. ಸಮೀಕ್ಷೆಯ ಬಳಿಕ ಅರ್ಹತೆ ಹಾಗೂ ಕಾನೂನುಬದ್ಧ ಮಾನದಂಡಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.