ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿಟ್ಟೆ ಮಾಧವ ವಿಠ್ಠಲರಾವ್‌ ಅವರು ಹುಲಸೂರು ತಾಲೂಕಿನ ವಿವಿಧ ಗ್ರಾಮಗಳಿಗೆ ಬೆಳ್ಳಂಬೆಳಿಗ್ಗೆ ದಿಢೀರ್‌ ಭೇಟಿ ನೀಡಿ, ಅಭಿವೃದ್ಧಿ ಕಾಮಗಾರಿಗಳು ಹಾಗೂ ಸಾರ್ವಜನಿಕ ಸೇವಾ ಸಂಸ್ಥೆಗಳ ಕಾರ್ಯವೈಖರಿಯನ್ನು ಸಮಗ್ರವಾಗಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಹುಲಸೂರು

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿಟ್ಟೆ ಮಾಧವ ವಿಠ್ಠಲರಾವ್‌ ಅವರು ಹುಲಸೂರು ತಾಲೂಕಿನ ವಿವಿಧ ಗ್ರಾಮಗಳಿಗೆ ಬೆಳ್ಳಂಬೆಳಿಗ್ಗೆ ದಿಢೀರ್‌ ಭೇಟಿ ನೀಡಿ, ಅಭಿವೃದ್ಧಿ ಕಾಮಗಾರಿಗಳು ಹಾಗೂ ಸಾರ್ವಜನಿಕ ಸೇವಾ ಸಂಸ್ಥೆಗಳ ಕಾರ್ಯವೈಖರಿಯನ್ನು ಸಮಗ್ರವಾಗಿ ಪರಿಶೀಲಿಸಿದರು.

ಜಲ ಜೀವನ್‌ ಮಿಷನ್‌ (JJM) ಕಾಮಗಾರಿಗಳ ಗುಣಮಟ್ಟವನ್ನು ಹತ್ತಿರದಿಂದ ವೀಕ್ಷಿಸಿದ ಅವರು, ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರು ತಲುಪುವಂತೆ ಯೋಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.

ನಂತರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ಆರೋಗ್ಯ ಸೇವೆಗಳು, ಮೂಲಸೌಕರ್ಯ, ಔಷಧೋಪಚಾರ ವ್ಯವಸ್ಥೆ ಹಾಗೂ ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ಆರೋಗ್ಯ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು. ಅಲ್ಲದೆ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಮಕ್ಕಳಿಗೆ ಒದಗಿಸಲಾಗುತ್ತಿರುವ ಪೌಷ್ಟಿಕ ಆಹಾರ, ಶಿಕ್ಷಣ ಚಟುವಟಿಕೆಗಳು ಹಾಗೂ ಕೇಂದ್ರದ ಮೂಲಸೌಕರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಮಕ್ಕಳ ಆರೋಗ್ಯ ಮತ್ತು ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ವಸತಿ ನಿಲಯ, ಮೆಟ್ರಿಕ್‌ ಪೂರ್ವ ಬಾಲಕಿಯರ ವಸತಿ ನಿಲಯ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಶೈಕ್ಷಣಿಕ ವಾತಾವರಣ ಮತ್ತು ನೈರ್ಮಲ್ಯವನ್ನು ವೀಕ್ಷಿಸಿದರು. ಈ ವೇಳೆ ಬಾಲಕಿಯರ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರೊಂದಿಗೆ ಸ್ವತಃ ಉಪಹಾರ ಸೇವಿಸಿ, ಅವರಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ನಿರ್ದೇಶನ ನೀಡಿದರು.

ತೊಗಲೂರು ಗ್ರಾಮ ಪಂಚಾಯತಿಯಲ್ಲಿ ‘ವಿಬಿ-ಜಿ ರಾಮ್‌ ಜಿ’ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿ, ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಸಮಗ್ರ ಅಭಿವೃದ್ಧಿಗೆ ವೇಗ ನೀಡಲು ತಿಳಿಸಿದರು. ಅಂತರ ಭಾರತಿ ತಾಂಡಾಕ್ಕೆ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ ಆಲಿಸಿದ ಅವರು, ಸರ್ಕಾರದ ಸೌಲಭ್ಯಗಳು ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂದರು.

ಜಿಪಂ ಸಿಇಒ ಅವರ ಜೊತೆಗೆ ಪರಿಶೀಲನೆಯ ವೇಳೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ, ಸಿಡಿಪಿಒ, ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ಹಾಗೂ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.