ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಸರ್ಕಾರ ಹಮ್ಮಿಕೊಂಡಿರುವ ಮೋಡ ಬಿತ್ತನೆ ಕಾರ್ಯದ ಮೇಲ್ವಿಚಾರಣೆ ಮತ್ತು ತಾಂತ್ರಿಕ ಮಾರ್ಗದರ್ಶನ ನೀಡಲು ಎರಡು ಸಮಿತಿಗಳನ್ನು ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಸರ್ಕಾರ ಹಮ್ಮಿಕೊಂಡಿರುವ ಮೋಡ ಬಿತ್ತನೆ ಕಾರ್ಯದ ಮೇಲ್ವಿಚಾರಣೆ ಮತ್ತು ತಾಂತ್ರಿಕ ಮಾರ್ಗದರ್ಶನ ನೀಡಲು ಎರಡು ಸಮಿತಿಗಳನ್ನು ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.ಪ್ರಸಕ್ತ ಸಾಲಿನಲ್ಲಿ ರಾಜ್ಯದ ಬಹುತೇಕ ಭಾಗಗಳಲ್ಲಿ ಮುಂಗಾರು ಮಳೆ ಕುಸಿತವಾಗಿದೆ. ಅದರಿಂದ ಬರದ ಪರಿಸ್ಥಿತಿ ಎದುರಾಗುತ್ತಿದ್ದು, ಅದನ್ನು ನಿವಾರಿಸಲು ರಾಜ್ಯ ಸರ್ಕಾರ ವಿವಿಧೆಡೆ ಮೋಡ ಬಿತ್ತನೆಗೆ ಮುಂದಾಗಿದೆ. 28.52 ಕೋಟಿ ರು. ಅಂದಾಜು ಮೊತ್ತದಲ್ಲಿ ಮೋಡ ಬಿತ್ತನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಖ್ಯಾತಿ ಕ್ಲೈಮೆಟ್ ಮಾಡಿಫಿಕೇನ್ ಕನ್ಸಲ್ಟೆಂಟ್ ಸಂಸ್ಥೆ ಮೋಡ ಬಿತ್ತನೆ ಮಾಡುತ್ತಿದೆ. ಈ ಕಾರ್ಯ ಸಮರ್ಪಕವಾಗಿ ಅನುಷ್ಠಾನಗೊಳ್ಳಲು, ಉಸ್ತುವಾರಿ ಹಾಗೂ ತಾಂತ್ರಿಕ ಮಾರ್ಗದರ್ಶನಕ್ಕಾಗಿ ಸರ್ಕಾರ ಎರಡು ಪ್ರತ್ಯೇಕ ಸಮಿತಿ ರಚಿಸಿದೆ. ಮೋಡ ಬಿತ್ತನೆ ಕಾರ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಮತ್ತು ಮಳೆ ಕೊರತೆ ಇರುವ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಈ ಸಮಿತಿಗಳು ಕಾರ್ಯ ನಿರ್ವಹಿಸಲಿವೆ.
ಮೇಲ್ವಿಚಾರಣಾ ಸಮಿತಿ ಕಾರ್ಯನಿರ್ವಹಣೆ:ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಮೇಲ್ವಿಚಾರಣಾ ಸಮಿತಿ ಕಾರ್ಯನಿರ್ವಹಿಸಲಿದೆ. ಅವರೊಂದಿಗೆ ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಕಾರ್ಯದರ್ಶಿ, ಕೃಷಿ ಇಲಾಖೆ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಹಾಗೂ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ)ದ ನಿರ್ದೇಶಕರು ಸದಸ್ಯರನ್ನಾಗಿ ನೇಮಿಸಲಾಗಿದ್ದು, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.ಮೋಡ ಬಿತ್ತನೆಯ ತಾಂತ್ರಿಕ ವಿಷಯಗಳಲ್ಲಿ ಕೆಎಸ್‌ಎನ್‌ಡಿಎಂಸಿ ಸಹಕಾರ, ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡಲಿದೆ. ಅದಕ್ಕಾಗಿ ಕೆಎಸ್‌ಎನ್‌ಡಿಎಂಸಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ತಾಂತ್ರಿಕ ಸಲಹಾ ಮತ್ತು ಮೌಲ್ಯಮಾಪನ ಸಮಿತಿ ರಚಿಸಲಾಗಿದೆ. ಅವರೊಂದಿಗೆ ಕೃಷಿ ಇಲಾಖೆ ನಿರ್ದೇಶಕ, ಐಎಂಡಿ ಹವಾಮಾನ ಕೇಂದ್ರದ ನಿರ್ದೇಶಕ, ಕರ್ನಾಟಕ ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರದ ನಿರ್ದೇಶಕ, ಐಐಎಸ್ಸಿ ಪ್ರಾಧ್ಯಾಪಕ ಪ್ರೊ.ನಾಗೇಶ್ ಕುಮಾರ್, ನಿವೃತ್ತ ಪ್ರಾಧ್ಯಾಪಕ ಪ್ರೊ.ಜಿ.ಎಸ್.ಭಟ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿವೃತ್ತ ಪ್ರಧಾನ ಮುಖ್ಯ ಎಂಜಿನಿಯರ್ ಎಚ್.ಎಸ್. ಪ್ರಕಾಶ್ ಕುಮಾರ್, ಪುಣೆ ಐಐಟಿಎಂನ ಜಂಟಿ ನಿರ್ದೇಶಕ ದರ್ಜೆಗಿಂತ ಕಡಿಮೆಯಿಲ್ಲದ ಪ್ರತಿನಿಧಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮುಖ್ಯ ಪರಿಸರ ಅಧಿಕಾರಿಗಳನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಅದರ ಜತೆಗೆ ಮಲಪ್ರಭಾ ಯೋಜನಾ ವಲಯದ (ಕೆಎನ್‌ಎನ್‌ಎಲ್) ಮುಖ್ಯ ಎಂಜಿನಿಯರ್ ಸದಸ್ಯ ಕಾರ್ಯದರ್ಶಿ ಹಾಗೂ ಬೆಳಗಾವಿಯ ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಸಂಜೀವ್ ಸಂಗಮಿ ಅವರನ್ನು ವಿಶೇಷ ಆಹ್ವಾನಿತರನ್ನಾಗಿ ಮಾಡಲಾಗಿದೆ.