ನಕಲಿ ಔಷಧ ತಯಾರಿಕೆ ಮತ್ತು ಪೂರೈಕೆ ಜಾಲದ ವಿರುದ್ಧ ತನಿಖೆ ತೀವ್ರಗೊಂಡಿದ್ದು, ಈ ಪ್ರಕರಣ ಸಂಬಂಧ ಕರ್ತವ್ಯ ಲೋಪ ಎಸಗಿರುವ ಸಹಾಯಕ ಔಷಧ ನಿಯಂತ್ರಕ ಅಧಿಕಾರಿ ಓಂಕಾರೇಶ್ವರ್‌ರನ್ನು ಅಮಾನತುಗೊಳಿಸಲಾಗಿದೆ.

ಬೆಂಗಳೂರು : ನಕಲಿ ಔಷಧ ತಯಾರಿಕೆ ಮತ್ತು ಪೂರೈಕೆ ಜಾಲದ ವಿರುದ್ಧ ತನಿಖೆ ತೀವ್ರಗೊಂಡಿದ್ದು, ಈ ಪ್ರಕರಣ ಸಂಬಂಧ ಕರ್ತವ್ಯ ಲೋಪ ಎಸಗಿರುವ ಸಹಾಯಕ ಔಷಧ ನಿಯಂತ್ರಕ ಅಧಿಕಾರಿ ಓಂಕಾರೇಶ್ವರ್‌ರನ್ನು ಅಮಾನತುಗೊಳಿಸಲಾಗಿದೆ.

ಚಾಮರಾಜಪೇಟೆಯ ಕೃಪಾ ಹೆಲ್ತ್ ಕೇರ್ ಪ್ರಕರಣಕ್ಕೆ ಸಂಬಂಧಿಸಿ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಕಾರಣಕ್ಕೆ ಓಂಕಾರೇಶ್ವರ್ ಅಮಾನತು ಆಗಿರುವುದಾಗಿ ತಿಳಿದುಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮೊದಲ ಬಾರಿಗೆ ಅಧಿಕಾರಿಯೊಬ್ಬರ ಮೇಲೆ ಕ್ರಮ ಕೈಗೊಳ್ಳಲಾಗಿದೆ.

ನಕಲಿ ಔಷಧ ಜಾಲದಲ್ಲಿ ಪ್ರಮುಖವಾಗಿ ವೀರೇಶ್ ಜೈನ್ ಹೆಸರು ಕೇಳಿ ಬಂದಿದ್ದು, ಅಕ್ರಮ ಔಷಧ ಪತ್ತೆಯಾದ ಕೃಪಾ ಹೆಲ್ತ್ ಕೇರ್ ಏಜೆನ್ಸಿ ಇದೇ ವೀರೇಶ್‌ಗೆ ಸೇರಿದೆ. ಆದರೆ ಏಜೆನ್ಸಿ ಮೇಲೆ ಅಧಿಕಾರಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆ ಕಾರಣಕ್ಕಾಗಿ ಓಂಕಾರೇಶ್ವರ್ ಅವರನ್ನು ಅಮಾನತುಗೊಳಿಸಲಾಗಿದೆ. ಇದು ಔಷಧ ನಿಯಂತ್ರಣ ಇಲಾಖೆಯಲ್ಲಿ ಕರ್ತವ್ಯ ಲೋಪದ ಹಿನ್ನೆಲೆ ಕೈಗೊಂಡ ಕ್ರಮವಾಗಿದ್ದು, ನಕಲಿ ಔಷಧ ಜಾಲ ಸಂಬಂಧ ಮತ್ತಷ್ಟು ಅಧಿಕಾರಿಗಳ ಮೇಲೆ ಕ್ರಮ ಆಗುವ ಸಾಧ್ಯತೆಯಿದೆ.

ಕಾನೂನು ಕಠಿಣಗೊಳಿಸಲು ಚರ್ಚೆ:

ಈ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿರುವ ಆರೋಗ್ಯ ಸಚಿವ ಯು.ಟಿ.ಖಾದರ್, ನಕಲಿ ಔಷಧಗಳ ಮಾರಾಟಕ್ಕೆ ಕಡಿವಾಣ ಹಾಕಲು ಕಠಿಣ ಕಾನೂನು ರೂಪಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಔಷಧ ಗುಣಮಟ್ಟದಲ್ಲಿ ವಿಫಲವಾದ, ನಕಲಿ ಔಷಧ ಅಥವಾ ತಪ್ಪು ಲೇಬಲಿಂಗ್ ಕಂಡುಬಂದ ತಯಾರಿಕಾ ಕಂಪನಿಗಳನ್ನು ಶಾಶ್ವತವಾಗಿ ಕಪ್ಪುಪಟ್ಟಿಗೆ ಸೇರಿಸುವ ಹಾಗೂ ಸಿಆರ್‌ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಈ ಸಂಬಂಧ ಕಾನೂನು ಬದಲಾವಣೆಗಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿರುವುದಾಗಿ ಎಂದು ಮೂಲಗಳು ತಿಳಿಸಿವೆ.

ನಕಲಿ ಔಷಧ ಮಾರಾಟ ಸಂಬಂಧ ಈಗಾಗಲೇ 24 ಔಷಧ ಚಿಲ್ಲರೆ ಮಳಿಗೆಗಳು ಹಾಗೂ ಸಗಟು ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 16 ಔಷಧ ಮಳಿಗೆಗಳ ಪರವಾನಗಿ ರದ್ದುಗೊಳಿಸಲಾಗಿದ್ದು, ಉಳಿದ 8 ಔಷಧ ಮಳಿಗೆಗಳ ಲೆಸೆನ್ಸ್‌ ಅಮಾನತುಗೊಳಿಸಲಾಗಿದೆ.

ದಂಧೆಯಿಂದಾದ ಸಮಸ್ಯೆ ಬಗ್ಗೆ ಅಧ್ಯಯನ:ನಕಲಿ ಔಷಧಗಳು ಎಲ್ಲೆಲ್ಲಿ ಪೂರೈಕೆಯಾಗಿವೆ, ಯಾವ ಆಸ್ಪತ್ರೆಗಳಿಗೆ ಹೋಗಿವೆ ಎಂಬ ಮಾಹಿತಿಯನ್ನು ಕಲೆಹಾಕಲಾಗುತ್ತಿದ್ದು, ಇಂತಹ ಔಷಧ ಪಡೆದಿರುವ ರೋಗಿಗಳ ಮಾಹಿತಿ ಹಾಗೂ ಅದರಿಂದ ಅವರಿಗೆ ತೊಂದರೆ ಆಗಿದೆಯೇ ಎಂಬ ಅಂಶವನ್ನು ಸಂಗ್ರಹಿಸಿ ವಿಚಾರಣೆ ನಡೆಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಮಾದರಿ ಸಂಗ್ರಹಿಸಿ ಪರೀಕ್ಷೆ

ಔಷಧಗಳ ಗುಣಮಟ್ಟ ಪರಿಶೀಲನೆಗೆ ವ್ಯವಸ್ಥೆಯಿಲ್ಲ. ಹೀಗಾಗಿ ಖಾಸಗಿ ಪ್ರಯೋಗಾಲಯಗಳೊಂದಿಗೆ ಒಪ್ಪಂದ ಮಾಡಿಕೊಂಡು ಆಸ್ಪತ್ರೆಗಳು ಹಾಗೂ ಫಾರ್ಮಾ ಕಂಪನಿಗಳಿಂದ ನೇರವಾಗಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ.

-ಯು.ಟಿ. ಖಾದರ್, ಆರೋಗ್ಯ ಸಚಿವರು

ಇತ್ತೀಚೆಗೆ ಬಿಡದಿ ಸೇರಿ ಹಲವು ಕಡೆದ ನಕಲಿ ಡ್ರಗ್ಸ್‌ ಫ್ಯಾಕ್ಟ್ರಿ ಮೇಲೆ ದಾಳಿ

ಈ ವೇಳೆ ಅವಧಿ ಮೀರಿದ ಔಷಧಗಳಿಗೆ ಲೇಬಲ್‌ ಅಂಟಿಸುತ್ತಿರುವುದು ಪತ್ತೆ

ಪ್ರಕರಣದಲ್ಲಿ ಪ್ರಮುಖ ಆರೋಪಿ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳು

ಈ ಹಿನ್ನೆಲೆಯಲ್ಲಿ ಸಹಾಯಕ ಔಷಧ ನಿಯಂತ್ರಕ ಓಂಕಾರೇಶ್ವರ್‌ ಸಸ್ಪೆಂಡ್‌

ತನಿಖೆ ಮುಂದುವರೆದಂತೆ ಇನ್ನಷ್ಟು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಸಾಧ್ಯತೆ