ರೈತರ ಬೇಡಿಕೆಯನುಸಾರ ದರ ನೀಡಲು ನಷ್ಟದ ಸಬೂಬು ಹೇಳುವ ಸಕ್ಕರೆ ಕಾರ್ಖಾನೆ ಮಾಲೀಕರು, ಹೊಸದಾಗಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಅನುಮತಿ ಕೋರಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಅರ್ಜಿ ಸಲ್ಲಿಸುವುದರಲ್ಲಿ ಮಾತ್ರ ಬಹಳ ಮುಂದಿದ್ದಾರೆ.
ಬೆಂಗಳೂರು : ರೈತರ ಬೇಡಿಕೆಯನುಸಾರ ದರ ನೀಡಲು ನಷ್ಟದ ಸಬೂಬು ಹೇಳುವ ಸಕ್ಕರೆ ಕಾರ್ಖಾನೆ ಮಾಲೀಕರು, ಹೊಸದಾಗಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಅನುಮತಿ ಕೋರಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಅರ್ಜಿ ಸಲ್ಲಿಸುವುದರಲ್ಲಿ ಮಾತ್ರ ಬಹಳ ಮುಂದಿದ್ದಾರೆ. ರಾಜ್ಯದಲ್ಲಿ ಹೊಸದಾಗಿ ಒಟ್ಟು 39 ಸಕ್ಕರೆ ಕಾರ್ಖಾನೆ ಮಾಲೀಕರು ಕಾರ್ಖಾನೆ ತೆರೆಯುವ ಸಂಬಂಧ ಅರ್ಜಿ ಸಲ್ಲಿಸಿರುವುದು ಬೆಳಕಿಗೆ ಬಂದಿದೆ.
ರಾಜ್ಯಾದ್ಯಂತ ಕಬ್ಬು ಬೆಳೆಗಾರರು ಹೋರಾಟ
ಪ್ರತಿಟನ್ ಕಬ್ಬಿಗೆ 5500 ರು. ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ರಾಜ್ಯಾದ್ಯಂತ ಕಬ್ಬು ಬೆಳೆಗಾರರು ಹೋರಾಟ ನಡೆಸುತ್ತಿದ್ದಾರೆ. ರಸ್ತೆ, ಜೈಲ್ ಭರೋ ಸೇರಿ ಹಲವು ರೀತಿಯ ಹೋರಾಟಕ್ಕೂ ಮುಂದಾಗಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲೇ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯೂ ನಡೆದಿದೆ. ಕೇಂದ್ರ ಸರ್ಕಾರದಿಂದ ಬೆಂಬಲ ನಿಗದಿ ಕುರಿತಂತೆ ಸ್ಪಷ್ಟ ಆದೇಶ ಬರಬೇಕಿದೆ.
ಕಬ್ಬು ಬೆಳೆಗಾರರು ಕೇಳುತ್ತಿರುವ ಬೇಡಿಕೆಗೆ ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪದೇ, ರೈತರು ಕೇಳುತ್ತಿರುವಷ್ಟು ಬೆಂಬಲ ಬೆಲೆ ನಿಗದಿ ಮಾಡಿದರೆ ಸಕ್ಕರೆ ಕಾರ್ಖಾನೆಗಳು ನಷ್ಟಕ್ಕೆ ತಿರುಗುತ್ತವೆ. ಈಗಾಗಲೇ ನೂರಾರು ಕೋಟಿ ರು. ನಷ್ಟ ಅನುಭವಿಸುತ್ತಿರುವ ಸಕ್ಕರೆ ಕಾರ್ಖಾನೆಗಳು, ಪ್ರತಿ ಟನ್ ಕಬ್ಬಿಗೆ 5500 ರು. ನಿಗದಿ ಮಾಡಿದರೆ ನಷ್ಟ ಪ್ರಮಾಣ ಮತ್ತಷ್ಟು ಹೆಚ್ಚಲಿದೆ. ಹೀಗಾಗಿ 5500 ರು. ಬೆಂಬಲ ಬೆಲೆ ನಿಗದಿ ಮಾಡದಂತೆ ಒತ್ತಡವನ್ನೂ ಹೇರುತ್ತಿದ್ದಾರೆ.
ಹೀಗೆ ನಷ್ಟದ ನೆಪವೊಡ್ಡಿ ಕಬ್ಬು ಬೆಳೆಗಾರರಿಗೆ ಹಣ ನೀಡಲು ಹಿಂದೇಟು ಹಾಕುತ್ತಿರುವ 39 ಸಕ್ಕರೆ ಕಾರ್ಖಾನೆ ಮಾಲೀಕರು ಹೊಸ ಕಾರ್ಖಾನೆ ಸ್ಥಾಪನೆಗೆ ಅನುಮತಿ ಕೋರುತ್ತಿದ್ದಾರೆ. ಅಂಗಡಿ ಶುಗರ್ಸ್ ಆ್ಯಂಡ್ ಪವರ್, ಶ್ರೀ ದೇವಿ ಶುಗರ್ಸ್, ಯರಗಟ್ಟಿ ಶುಗರ್ಸ್, ಮೃಣಾಲ್ ಶುಗರ್ಸ್ ಹೀಗೆ 39 ಸಕ್ಕರೆ ಕಾರ್ಖಾನೆ ಮಾಲೀಕರು ಹೊಸದಾಗಿ ಕಾರ್ಖಾನೆ ತೆರೆಯಲು ಅನುಮತಿ ಕೋರುತ್ತಿದ್ದಾರೆ. ಈ ಕಾರ್ಖಾನೆಗಳಲ್ಲಿ ಬಹುತೇಕವು ರಾಜ್ಯದ ಪ್ರಭಾವಿ ರಾಜಕಾರಣಿಗಳು ನಿರ್ದೇಶಕರಾಗಿರುವ ಸಂಸ್ಥೆಗಳಾಗಿವೆ. ಅವರೇ ಇದೀಗ ನಷ್ಟ ಎನ್ನುತ್ತಲೇ ಹೊಸದಾಗಿ ಉದ್ಯಮ ಆರಂಭಿಸಲು ಮುಂದಾಗಿದ್ದಾರೆ.
ಪ್ರತಿ ಟನ್ ಕಬ್ಬಿಗೆ ₹5500 ದರ ಕೇಳುವ ರೈತರ ಬಳಿ ನಷ್ಟ ಎಂದು ನೆಪ
ಆದರೆ ಇದೀಗ ಕಾರ್ಖಾನೆ ಮಾಲೀಕರಿಂದಲೇ 39 ಹೊಸ ಅರ್ಜಿ ಸಲ್ಲಿಕೆ
ಅಂಗಡಿ, ಶ್ರೀ ದೇವಿ ಶುಗರ್ಸ್, ಯರಗಟ್ಟಿ ಶುಗರ್ಸ್ ಸೇರಿ ಹಲವು ಅರ್ಜಿ
