ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಬಗ್ಗೆ ‘ಹಳ್ಳಿ ಗುಗ್ಗು’ ಪದ ಬಳಕೆಗೆ ಕೌಂಟರ್‌ ಆಗಿ ಜೆಡಿಎಸ್ ಸಾಮಾಜಿಕ ಜಾಲತಾಣಗಳಲ್ಲಿ ‘ಗೃಹ ಸಚಿವರೇ, ನಾವು ಹಳ್ಳಿಯವರು ಏನಿವಾಗ?’ ಎಂಬ ಪೋಸ್ಟರ್‌ ಅಭಿಯಾನ

ಬೆಂಗಳೂರು/ನವದೆಹಲಿ : ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಬಗ್ಗೆ ‘ಹಳ್ಳಿ ಗುಗ್ಗು’ ಪದ ಬಳಕೆಗೆ ಕೌಂಟರ್‌ ಆಗಿ ಜೆಡಿಎಸ್ ಸಾಮಾಜಿಕ ಜಾಲತಾಣಗಳಲ್ಲಿ ‘ಗೃಹ ಸಚಿವರೇ, ನಾವು ಹಳ್ಳಿಯವರು ಏನಿವಾಗ?’ ಎಂಬ ಪೋಸ್ಟರ್‌ ಅಭಿಯಾನ ಆರಂಭಿಸಿದೆ.

ಈ ನಡುವೆ, ಇಂಥ ಹೇಳಿಕೆ ಗೃಹ ಸಚಿವರ ವ್ಯಕ್ತಿತ್ವ ಪ್ರತಿಬಿಂಬಿಸುತ್ತದೆ. ನಮ್ಮ ತಂದೆಯವರು ಹಳ್ಳಿಯಿಂದಲೇ ಬಂದು ಪ್ರಧಾನಿಯಾದವರು. ನಾನೂ ಹಳ್ಳಿಯಿಂದಲೇ ಬಂದು 2 ಬಾರಿ ರಾಜ್ಯದ ಸಿಎಂ ಆಗಿದ್ದೇನೆ. ಹಳ್ಳಿಯವನು ಎಂಬ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಇದಕ್ಕೂ ಮುನ್ನ ಜೆಡಿಎಸ್ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ‘ಗೃಹ ಸಚಿವರೇ, ನಾವು ಹಳ್ಳಿಯವರು ಏನಿವಾಗ?’ , ‘ನಮ್ಮದು ಹಳ್ಳಿ ಗುಗ್ಗುಗಳ ಪಕ್ಷ ಏನಿವಾಗ?’, ‘ನಾವು ರೈತರ ಪರ ನಿಲ್ಲುವ ಹೆಮ್ಮೆಯ ಹಳ್ಳಿ ಗುಗ್ಗುಗಳೇ ಏನಿವಾಗ?’ ಎಂಬಂತಹ ಪೋಸ್ಟರ್‌ ಹಾಕಿಕೊಳ್ಳುವ ಮುಖಾಂತರ ಪ್ರಿಯಾಂಕ್‌ ಖರ್ಗೆ ಅವರಿಗೆ ತಿರುಗೇಟು ನೀಡಿದ್ದಾರೆ.

ಮಿಸ್ಟರ್ ಯೂಸ್‌ಲೆಸ್‌ ಫೆಲೋ ‘ಇಟಲಿ’ ಪ್ರಿಯಾಂಕ್‌ ಖರ್ಗೆ ಅವರೇ, ಎಚ್.ಡಿ.ಕುಮಾರಸ್ವಾಮಿ ಅವರನ್ನು ‘ಹಳ್ಳಿ ಗುಗ್ಗು’ ಹಾಗೂ ‘ಈಡಿಯಟ್’ ಎಂದು ಜರಿದು ನಿಮ್ಮ ‘ಹೈಟೆಕ್’ ಅಹಂಕಾರ ಹಾಗೂ ನಿಮ್ಮ ಸಂಸ್ಕಾರ ಪ್ರದರ್ಶಿಸಿದ್ದೀರಿ ಎಂದು ಜೆಡಿಎಸ್‌ ಎಕ್ಸ್‌ ಖಾತೆಯಲ್ಲಿ ಟೀಕಿಸಲಾಗಿದೆ.

ಇದು ಕೇವಲ ಕುಮಾರಸ್ವಾಮಿ ಅವರಿಗಷ್ಟೇ ಅಲ್ಲ, ದೇಶದ ಹಳ್ಳಿಗಳ ಮಣ್ಣಿನ ಮಕ್ಕಳಿಗೆ ಹಾಗೂ ಕಷ್ಟಪಟ್ಟು ದುಡಿಯುವ ರೈತರಿಗೆ ಮಾಡಿದ ಘೋರ ಅಪಮಾನ. ದೆಹಲಿ, ಇಟಲಿ ನಾಯಕರ ಎದುರು ಜೀ ಹುಜೂರ್ ಎನ್ನುವ‌ ‘ನಿಮ್ಮಂತಹ ಗುಲಾಮರಿಗೆ’ ಹಳ್ಳಿಗರ ಸ್ವಾಭಿಮಾನ ಅರ್ಥವಾಗುವುದಿಲ್ಲ.

ರೈತರ ಕಷ್ಟಗಳ ಬಗ್ಗೆ, ಹಳ್ಳಿ ಜನರ ಬವಣೆಗಳ ಬಗ್ಗೆ ನಿಮ್ಮಂಥ ‘ಟ್ವಿಟ್ಟರ್ ರಾಜಕಾರಣಿ’ಗಳಿಗೆ ವಿವರಿಸುವುದು ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ. ಅಪ್ಪನ ಹೆಸರಿನಲ್ಲಿ ಬೆಳೆದು, ದೆಹಲಿ ನಾಯಕರ ಕೃಪೆಯಿಂದ ಅಧಿಕಾರ ಪಡೆದಿರುವ ನಿಮಗೆ, ಗ್ರಾಮ ವಾಸ್ತವ್ಯ ಮಾಡಿ ಜನರ ಕಣ್ಣೀರು ಒರೆಸಿದ, ಸಿಎಂ ಆಗಿ ಎರಡು ಬಾರಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿದ ಮಣ್ಣಿನ ಮಗನ ನೈಜತೆ ‘ಗುಗ್ಗು’ ಮತ್ತು ‘ಈಡಿಯಟ್’ ತರಹವೇ ಕಾಣುತ್ತದೆ.

ಪ್ರಿಯಾಂಕ್‌ ಖರ್ಗೆಯವರೇ, ಎಲೆಕ್ಷನ್ ಬಂದಾಗ ಇದೇ ‘ಹಳ್ಳಿ ಗುಗ್ಗು’ಗಳ ಮನೆ ಬಾಗಿಲಿಗೆ ನೀವು ವೋಟು ಭಿಕ್ಷೆ ಬೇಡಿಕೊಂಡು ಬರಲೇಬೇಕು. ಹಳ್ಳಿಯವರು ಮುಗ್ಧರಿರಬಹುದು, ದಡ್ಡರಲ್ಲ. ಇದೇ ಹಳ್ಳಿಗರು 2028ಕ್ಕೆ ನಿಮ್ಮನ್ನು ಮತ್ತು ನಿಮ್ಮ ಕಾಂಗ್ರೆಸ್ ಪಕ್ಷವನ್ನು ತಿಪ್ಪೆಗುಂಡಿಗೆ ಎಸೆಯುತ್ತಾರೆ ಎಂದು ಎಚ್ಚರಿಸಲಾಗಿದೆ.

ಎಚ್‌ಡಿಕೆ ಟಾಂಗ್‌:

ಪ್ರಿಯಾಂಕ್‌ ಖರ್ಗೆ ನನ್ನನ್ನು ಹಳ್ಳಿ ಗುಗ್ಗು ಎಂದು ಕರೆದಿದ್ದಾರೆ. ಅವರಿಗೆ ಸಂತೋಷ ಆಗುವುದಾದರೆ ಹಾಗೆಯೇ ಕರೆದುಕೊಳ್ಳಲಿ. ಅವರಿಗೆ ಜನರೇ ಉತ್ತರಿಸುತ್ತಾರೆ ಎಂದು ಎಚ್‌.ಡಿ.ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ ತಿರುಗೇಟು ನೀಡಿದ್ದಾರೆ.

ನಾನು ಯಾವುದೇ ರೀತಿಯ ಮೂಲಸೌಕರ್ಯವೂ ಇಲ್ಲದ ಕುಗ್ರಾಮದ ಶಾಲೆಯಲ್ಲಿ ವಿದ್ಯೆ ಕಲಿತವನು. ಆಕ್ಸ್‌ಫರ್ಡ್, ಬೋಸ್ಟನ್ ಅಥವಾ ಕೇಂಬ್ರಿಡ್ಜ್‌ ನಂಥ ವಿವಿಗಳಲ್ಲಿ ಓದಿದವನಲ್ಲ. ಸಾಮಾನ್ಯ ರೈತನ ಮಗ ಎಂಬುದಕ್ಕೆ ಅಪಾರ ಹೆಮ್ಮೆಯಿದೆ. ನನ್ನನ್ನು ಹಳ್ಳಿ ಗುಗ್ಗು ಎಂದು ಕರೆದಿರುವುದು ಕೇವಲ ನನಗಲ್ಲ, ನಾಡಿಗೆ ಸಮಸ್ತ ರೈತಕುಲಕ್ಕೆ, ಗ್ರಾಮೀಣ ಜನತೆಗೆ ಮಾಡಿದ ಘೋರ ಅವಮಾನ ಎಂದು ನೋವು ವ್ಯಕ್ತಪಡಿಸಿದ್ದಾರೆ.

ಹೇಳಿಕೆ, ಸಚಿವರ ವ್ಯಕ್ತಿತ್ವ ತೋರ್ಸತ್ತೆ

ಇಂಥ ಹೇಳಿಕೆ ಗೃಹ ಸಚಿವರ ವ್ಯಕ್ತಿತ್ವ ಪ್ರತಿಬಿಂಬಿಸುತ್ತದೆ. ನಮ್ಮ ತಂದೆಯವರು ಹಳ್ಳಿಯಿಂದಲೇ ಬಂದು ಪ್ರಧಾನಿಯಾದವರು. ನಾನೂ ಹಳ್ಳಿಯಿಂದಲೇ ಬಂದು 2 ಬಾರಿ ರಾಜ್ಯದ ಸಿಎಂ ಆಗಿದ್ದೇನೆ. ಹಳ್ಳಿಯವನು ಎಂಬ ಬಗ್ಗೆ ನನಗೆ ಹೆಮ್ಮೆ ಇದೆ. ನಾನೇನು ಆಕ್ಸ್‌ಫರ್ಡ್, ಬೋಸ್ಟನ್ ಅಥವಾ ಕೇಂಬ್ರಿಡ್ಜ್‌ ನಂಥ ವಿವಿಗಳಲ್ಲಿ ಓದಿದವನಲ್ಲ.

ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ ತಿರುಗೇಟು ನೀಡಿದ್ದಾರೆ.