ಸಿದ್ದರಾಮಯ್ಯರಂತಹ ಹಿರಿಯ ನಾಯಕರಿಗೆ ಸಂಬಂಧಿಸಿದಂತೆ ಕೇಳಿಬಂದಿರುವ ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಸತ್ಯ ಹೊರಬರಬೇಕು ಎಂದು ಕುಮಾರಸ್ವಾಮಿ ಅವರು ಧ್ವನಿ ಎತ್ತಿದ್ದು ತಪ್ಪೇ?. ರಾಜಕೀಯ ಎದುರಾಳಿಯ ಗೌರವದ ಪರವಾಗಿ ನಿಲ್ಲುವುದೂ ಅಪರಾಧವೇ...?
ಕನ್ನಡಪ್ರಭ ವಾರ್ತೆ ಮಂಡ್ಯ
ಸ್ಟಿಂಗ್ ಆಪರೇಷನ್ ಕುರಿತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಎತ್ತಿರುವ ಧ್ವನಿಯನ್ನು ಅವಹೇಳನದಿಂದ ಅಡಗಿಸಲಾಗದು. ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ಹಿರಿಯ ನಾಯಕರ ಗೌರವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಪರವಾಗಿ ನಿಲ್ಲುವುದನ್ನು ತಪ್ಪೆಂದು ಬಿಂಬಿಸುವುದು ಸರಿಯಲ್ಲ. ಕೂಡಲೇ ಆರೋಪಿಸುವ ವ್ಯಕ್ತಿ ಬಹಿರಂಗ ಕ್ಷಮೆಯಾಚಿಸದಿದ್ದರೆ ದೊಡ್ಡಮಟ್ಟದ ಹೋರಾಟ ನಡೆಸಬೇಕಾಗುತ್ತದೆ ಎಂದು ಜೆಡಿಎಸ್ ಮುಖಂಡ ಮುದ್ದನಘಟ್ಟ ಮಹಾಲಿಂಗೇಗೌಡ ಎಚ್ಚರಿಕೆ ನೀಡಿದ್ದಾರೆ.ಸಿದ್ದರಾಮಯ್ಯರಂತಹ ಹಿರಿಯ ನಾಯಕರಿಗೆ ಸಂಬಂಧಿಸಿದಂತೆ ಕೇಳಿಬಂದಿರುವ ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಸತ್ಯ ಹೊರಬರಬೇಕು ಎಂದು ಕುಮಾರಸ್ವಾಮಿ ಅವರು ಧ್ವನಿ ಎತ್ತಿದ್ದು ತಪ್ಪೇ?. ರಾಜಕೀಯ ಎದುರಾಳಿಯ ಗೌರವದ ಪರವಾಗಿ ನಿಲ್ಲುವುದೂ ಅಪರಾಧವೇ ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರ ನಡುವೆ ರಾಜಕೀಯ ಭಿನ್ನಾಭಿಪ್ರಾಯಗಳಿರಬಹುದು. ಪರಸ್ಪರ ಕಠಿಣ ಟೀಕೆಗಳೂ ನಡೆದಿರಬಹುದು. ಆದರೆ, ರಾಜಕೀಯ ಸ್ಪರ್ಧೆಯ ಕಾರಣಕ್ಕೆ ಯಾರ ವಿರುದ್ಧವಾದರೂ ಅನ್ಯಾಯ ನಡೆದರೆ ಮೌನವಾಗಿರಬೇಕೆಂಬ ನಿಯಮವಿಲ್ಲ. ಎದುರಾಳಿಗೂ ನ್ಯಾಯ ಸಿಗಬೇಕು ಎನ್ನುವ ನಿಲುವು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ ಎಂದು ಹೇಳಿದ್ದಾರೆ.ಇಂದು ಒಬ್ಬ ನಾಯಕನ ಗೌರವದ ಪ್ರಶ್ನೆಯನ್ನು ಕಡೆಗಣಿಸಿದರೆ, ನಾಳೆ ಇದೇ ಪರಿಸ್ಥಿತಿ ಮತ್ತೊಬ್ಬರಿಗೆ ಎದುರಾಗಬಹುದು. ಆದ್ದರಿಂದ ಸ್ಟಿಂಗ್ ಆಪರೇಷನ್ಗೆ ಸಂಬಂಧಿಸಿದ ಆರೋಪಗಳ ಸತ್ಯಾಸತ್ಯತೆ ನಿಷ್ಪಕ್ಷಪಾತ ಪರಿಶೀಲನೆಯಿಂದ ಹೊರಬರಲಿ. ಯಾವುದೇ ವ್ಯಕ್ತಿಯನ್ನು ಸಾಕ್ಷ್ಯವಿಲ್ಲದೆ ತಪ್ಪಿತಸ್ಥನೆಂದು ನಿರ್ಧರಿಸಬಾರದು. ಯಾವುದೇ ಪ್ರಭಾವದ ಕಾರಣಕ್ಕೂ ಸತ್ಯವನ್ನು ಮುಚ್ಚಿಡಬಾರದು.
ಈ ವಿಚಾರದಲ್ಲಿ ಕುಮಾರಸ್ವಾಮಿ ಅವರು ಎತ್ತಿರುವ ಪ್ರಶ್ನೆಗಳಿಗೆ ದಾಖಲೆ ಮತ್ತು ಸ್ಪಷ್ಟೀಕರಣದ ಮೂಲಕ ಉತ್ತರಿಸಲಿ. ಅವರ ಮಾತುಗಳಲ್ಲಿ ತಪ್ಪಿದ್ದರೆ ಸಾಕ್ಷ್ಯಗಳೊಂದಿಗೆ ತೋರಿಸಲಿ. ಅದನ್ನು ಬಿಟ್ಟು ಅವರನ್ನು ಏಕವಚನದಲ್ಲಿ ನಿಂದಿಸುವುದು ಅಥವಾ ವೈಯಕ್ತಿಕ ಅವಹೇಳನಕ್ಕೆ ಮುಂದಾಗುವುದು ಸರಿಯಲ್ಲ ಎಂದು ಕುಟುಕಿದ್ದಾರೆ.ಯಾರೇ ಆಗಲಿ ಭಿನ್ನ ಧ್ವನಿಗಳನ್ನು ಹತ್ತಿಕ್ಕುವ ಹಾಗೂ ಪ್ರಜಾಪ್ರಭುತ್ವದ ಆಶಯಗಳ ಕಗ್ಗೊಲೆ ಮಾಡುವಂತಹ ಮಾತುಗಳನ್ನು ಆಡಬಾರದು. ಪ್ರಶ್ನಿಸುವ ಸ್ವಾತಂತ್ರ್ಯದೊಂದಿಗೆ ಉತ್ತರ ಕೇಳುವ ತಾಳ್ಮೆ ಮತ್ತು ಸತ್ಯವನ್ನು ಸಂಪೂರ್ಣವಾಗಿ ತೋರಿಸುವ ಹೊಣೆಗಾರಿಕೆಯೂ ಇರಬೇಕು ಎಂದಿದ್ದಾರೆ.
ವ್ಯಕ್ತಿಯೊಬ್ಬರು ಮಾಡಿರುವ ಆರೋಪಗಳಿಗೆ ದಾಖಲೆಗಳಿದ್ದರೆ ಬಹಿರಂಗಪಡಿಸಲಿ. ಸಂಬಂಧಪಟ್ಟವರ ಪ್ರತಿಕ್ರಿಯೆಗೆ ಸಮಾನ ಅವಕಾಶ ನೀಡಲಿ. ಅವರ ನಿಲುವಿನ ಮೇಲೆ ಯಾವುದೇ ರಾಜಕೀಯ ಪ್ರಭಾವ ಅಥವಾ ಹಿತಾಸಕ್ತಿ ಇದ್ದರೆ ಅದನ್ನೂ ಪಾರದರ್ಶಕವಾಗಿ ತಿಳಿಸಿ. ಸಾರ್ವಜನಿಕರು ಸತ್ಯ ತಿಳಿದುಕೊಳ್ಳಬೇಕು. ಊಹಾಪೋಹ ಮತ್ತು ಅವಮಾನಗಳ ನಡುವೆ ಸಿಲುಕಬಾರದು ಎಂದು ಹೇಳಿದ್ದಾರೆ.ಈ ಬೆಳವಣಿಗೆಗಳ ಹಿಂದೆ ರಾಜಕೀಯ ಲಾಭದ ಲೆಕ್ಕಾಚಾರ ಹಾಕುತ್ತಿರುವ ಯಾವುದೇ ಕಾಣದ ಕೈಗಳು ಇದ್ದರೆ, ೨೦೨೮ರ ವಿಧಾನಸಭಾ ಚುನಾವಣೆಯಲ್ಲಿ ಜನತೆ ತಮ್ಮ ಮತದ ಮೂಲಕ ತಕ್ಕ ರಾಜಕೀಯ ಉತ್ತರ ನೀಡಲಿದ್ದಾರೆ ಎಂಬ ವಿಶ್ವಾಸ ನಮಗಿದೆ. ಜನರ ವಿವೇಕಕ್ಕಿಂತ ದೊಡ್ಡ ಪ್ರಭಾವವಿಲ್ಲ. ಜನಾದೇಶಕ್ಕಿಂತ ದೊಡ್ಡ ಅಧಿಕಾರವಿಲ್ಲ. ಆ ವ್ಯಕ್ತಿ ಆಡಿರುವ ಮಾತುಗಳು ನಾಗರೀಕತೆಯ ಎಲ್ಲೆಯನ್ನು ಮೀರಿರುವುದರಿಂದ ತಕ್ಷಣವೇ ಬಹಿರಂಗ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.