ಮತಗಳ್ಳತನಕ್ಕೆ ಕುಮ್ಮಕ್ಕು ನೀಡಿದ ಹಾಗೂ ಅರ್ಜಿ ನಮೂನೆ ಏಳನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ಪೊಲೀಸ್ ತನಿಖೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಂಗಳೂರು : ಮತಗಳ್ಳತನಕ್ಕೆ ಕುಮ್ಮಕ್ಕು ನೀಡಿದ ಹಾಗೂ ಅರ್ಜಿ ನಮೂನೆ ಏಳನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ಪೊಲೀಸ್ ತನಿಖೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸ್ವಾತಂತ್ರ್ಯ ಉದ್ಯಾನದಲ್ಲಿ ರಾಜ್ಯ ಕಾಂಗ್ರೆಸ್ ನೇತೃತ್ವದಲ್ಲಿ ಐಎನ್ಡಿಐಎ ಒಕ್ಕೂಟದಿಂದ ಗುರುವಾರ ಹಮ್ಮಿಕೊಂಡಿದ್ದ ಮತಗಳ್ಳತನ ನಿಲ್ಲಿಸಿ, ದೇಶ ಉಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಡಿ.ಕೆ.ಶಿವಕುಮಾರ್, ನಾವು ಕೇವಲ ಚುನಾವಣಾ ಆಯೋಗದ ವಿರುದ್ಧ ಹೋರಾಟ ಮಾಡುತ್ತಿಲ್ಲ. ಚುನಾವಣಾ ಆಯೋಗದ ಹಿಂದೆ ಇರುವ ಬಿಜೆಪಿಯ ಹುನ್ನಾರದ ವಿರುದ್ಧವೂ ಹೋರಾಟ ಮಾಡಲಾಗುತ್ತಿದೆ. ಮತಗಳ್ಳತನಕ್ಕೆ ಯಾರು ಕುಮ್ಮಕ್ಕು ನೀಡಿದ್ದಾರೆ, ಯಾರು ನಮೂನೆ 7 ಅರ್ಜಿ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದನ್ನು ಸಿಸಿಟಿವಿ ದಾಖಲೆಗಳಿವೆ. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು ಎಂದರು.
ಬಿಜೆಪಿ ಕಚೇರಿಯಿಂದಲೇ ಅರ್ಜಿ ನಮೂನೆ 7 ಅನ್ನು ಮುದ್ರಿಸಿ, ಮತದಾರರ ಹೆಸರು, ಮತದಾರರ ಗುರುತಿನ ಚೀಟಿ ಸಂಖ್ಯೆ ಮತ್ತು ದೂರವಾಣಿ ಸಂಖ್ಯೆಗಳೊಂದಿಗೆ ಕ್ಷೇತ್ರಗಳ ನಾಯಕರಿಗೆ ಕಳುಹಿಸಲಾಗಿತ್ತು. ಈ ಅರ್ಜಿ ನಮೂನೆ 7 ಅನ್ನು ದುರುಪಯೋಗಪಡಿಸಿಕೊಂಡು ರಾಜ್ಯ ಪ್ರತಿ ಕ್ಷೇತ್ರದಲ್ಲಿ 10ರಿಂದ 20 ಸಾವಿರ ಅಹಿಂದ ಮತಗಳನ್ನು ಅಳಿಸಲು ಸಂಚು ರೂಪಿಸಲಾಗಿತ್ತು. ನಮ್ಮ ಕಾರ್ಯಕರ್ತರು, ನಾಯಕರು ಎಚ್ಚೆತ್ತುಕೊಂಡಿದ್ದರಿಂದ ದೊಡ್ಡ ಅನಾಹುತ ತಪ್ಪಿತು ಎಂದು ಹೇಳಿದರು.
ಕಾನೂನು ಚೌಕಟ್ಟಿನಲ್ಲಿ ಕ್ರಮ ಆಗಲಿ:
ಬಿಜೆಪಿ ಮತಗಳ್ಳತನ ಮಾಡಿದ್ದು, ಅದರ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ಕ್ರಮವಾಗಬೇಕು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಮತ-ನಮ್ಮ ಹಕ್ಕು, ನಮ್ಮ ಮತ, ನಮ್ಮ ಬದುಕಾಗಿದೆ. ಅದಕ್ಕಾಗಿ ನಾವೆಲ್ಲ ಹೋರಾಟ ಮಾಡಬೇಕಿದೆ. ಈ ಹಿಂದೆ ಚಿಲುಮೆ ಸಂಸ್ಥೆಯು ಬಿಜೆಪಿ ಸರ್ಕಾರ ತನ್ನ ಕಾರ್ಯಕರ್ತರಿಗೆ ಬಿಎಲ್ಒ ಅಧಿಕಾರ ನೀಡಿ ಲಕ್ಷಾಂತರ ಮತಗಳನ್ನು ತೆಗೆದುಹಾಕುವ ಮತ್ತು ಹೊಸ ಮತದಾರರನ್ನು ಸೇರ್ಪಡೆಗೊಳಿಸುವ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಲು ಸಂಚು ರೂಪಿಸಿತ್ತು. ಆಗ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗವನ್ನು ಭೇಟಿ ಮಾಡಿ ರಾಜ್ಯದ ಮತದಾರರ ಹಕ್ಕು ರಕ್ಷಿಸಲು ಹೊರಾಟ ಮಾಡಿದ್ದರು. ಈಗಲೂ ಹೋರಾಟ ಮಾಡಬೇಕಿದೆ. ಚುನಾವಣಾ ಆಯೋಗವು ಸಂವಿಧಾನದ ಆಶಯದಂತೆ ಕಾರ್ಯನಿರ್ವಹಿಸುವ ಬದಲು ಒಂದು ಪಕ್ಷದ ಸಂಸ್ಥೆಯಂತೆ ವರ್ತಿಸುತ್ತಿದೆ ಎಂದು ಟೀಕಿಸಿದರು.
ಮತಗಳ್ಳತನ ವಿರುದ್ಧ ಹೋರಾಡುವ ಶಕ್ತಿ ದೇಶದ ಯುವಜನರಿಗಿದೆ
ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಯುವಜನತೆ ನಡೆಸಿದ ಹೋರಾಟದ ಸಂದರ್ಭದಲ್ಲಿ ಅವರ ವಿರುದ್ಧ ನಡೆದುಕೊಂಡ ರೀತಿ ನಾಚಿಕೆಗೇಡಿನ ಸಂಗತಿ. ಮತಗಳ್ಳತನ ವಿರುದ್ಧ ಹೋರಾಡುವ ಶಕ್ತಿ ದೇಶದ ಯುವಜನರಿಗಿದೆ. ವಿರೋಧ ಪಕ್ಷದ ನಾಯಕರಿಗೂ ಚುನಾವಣಾ ಆಯೋಗಕ್ಕೆ ಭೇಟಿ ನೀಡಲು ಅವಕಾಶ ನೀಡಲಿಲ್ಲ. ಇದು ದೇಶದ ಪ್ರಜಾಪ್ರಭುತ್ವದ ದುಸ್ಥಿತಿಯನ್ನು ತೋರಿಸುತ್ತದೆ ಎಂದು ಆರೋಪಿಸಿದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ (ಎಸ್ಐಆರ್) ನಡೆಯುತ್ತಿರುವ ರೀತಿಯನ್ನು ನಾವು ಒಪ್ಪುವುದಿಲ್ಲ. ಈ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟ ಮತ್ತು ದೃಢವಾಗಿದೆ. ಮತದಾರರ ಪಟ್ಟಿಯಿಂದ ಕೈ ಬಿಟ್ಟಿರುವ ಮತದಾರರ ಹೆಸರನ್ನು ಮತ್ತೆ ಸೇರ್ಪಡೆ ಮಾಡಬೇಕು. ಪ್ರತಿ ಅರ್ಹ ಮತದಾರನಿಗೂ ನ್ಯಾಯ ಸಿಗಬೇಕು ಎಂಬುದು ನಮ್ಮ ಆಗ್ರಹ. ಅಲ್ಲಿಯವರೆಗೆ ಹೋರಾಟ ಮಾಡಲಾಗುವುದು ಎಂದರು. ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸೇರಿ ವಿವಿಧ ಪಕ್ಷಗಳ ನಾಯಕರು ಉಪಸ್ಥಿತರಿದ್ದರು.

