ಜಗತ್ತಿನ ಪ್ರಮುಖ ನಗರಗಳಲ್ಲಿ ಒಂದಾಗಿರುವ ಐಟಿ-ಬಿಟಿ ಸಿಟಿ ಬೆಂಗಳೂರಿಗೆ ಉದ್ಯೋಗ ಅರಸಿಕೊಂಡು ಹೊರ ದೇಶದ ಅಥವಾ ಹೊರ ರಾಜ್ಯದ ವಲಸಿಗರು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದಾರೆ .ಹೀಗೆ ಬಂದ ವಲಸಿಗರು ಅಪರಾಧ ಕೃತ್ಯಗಳಲ್ಲಿಯೂ ಭಾಗಿಯಾಗುತ್ತಿದ್ದು, ಇವರಿಂದಲೇ ರಾಜಧಾನಿಯಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ

 ಮಂಜುನಾಥ್ ಕೆ.

 ಬೆಂಗಳೂರು : ಜಗತ್ತಿನ ಪ್ರಮುಖ ನಗರಗಳಲ್ಲಿ ಒಂದಾಗಿರುವ ಐಟಿ-ಬಿಟಿ ಸಿಟಿ ಬೆಂಗಳೂರಿಗೆ ಉದ್ಯೋಗ ಅರಸಿಕೊಂಡು ಹೊರ ದೇಶದ ಅಥವಾ ಹೊರ ರಾಜ್ಯದ ವಲಸಿಗರು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದಾರೆ. ಹೀಗೆ ಬಂದ ವಲಸಿಗರು ಅಪರಾಧ ಕೃತ್ಯಗಳಲ್ಲಿಯೂ ಭಾಗಿಯಾಗುತ್ತಿದ್ದು, ಇವರಿಂದಲೇ ರಾಜಧಾನಿಯಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ.

ಉದ್ಯಾನಗರಿ ಬೆಂಗಳೂರಿಗೆ ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿವರೆಗೂ ಹಾಗೂ ಅನ್ಯದೇಶಗಳಾದ ನೇಪಾಳ, ನೈಜೀರಿಯಾ, ದಕ್ಷಿಣ ಆಫ್ರಿಕಾ ಸೇರಿ ಇತರೆ ರಾಷ್ಟ್ರಗಳಿಂದಲೂ ವಲಸಿಗರು ಬರುತ್ತಿದ್ದಾರೆ. ಅನ್ಯ ದೇಶ ಅಥವಾ ರಾಜ್ಯದಿಂದ ಬಂದ ವಲಸಿಗರು ಡ್ರಗ್ಸ್‌ ದಂಧೆ, ಕೊಲೆ, ಮನೆಗಳ್ಳತನ ಕೌಟುಂಬಿಕ ದೌರ್ಜನ್ಯದಂಥ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿರುವುದು ಇಲ್ಲಿನ ಮೂಲ ನಿವಾಸಿಗಳಿಗೆ ಕಳಂಕ ತರುವಂತಾಗಿದ್ದು, ಅದರಲ್ಲೂ ಕನ್ನಡಿಗರ ಘನತೆಗೆ ಧಕ್ಕೆ ಆಗುತ್ತಿದೆ.

ಡ್ರಗ್‌ ಪೆಡ್ಲಿಂಗ್‌ನಲ್ಲೂ ವಲಸಿಗರು ಭಾಗಿ:

ಉತ್ತರ ಭಾರತ ಮೂಲದ ಬಿಹಾರ, ಒಡಿಶಾ, ಉತ್ತರ ಪ್ರದೇಶ, ಮಧ್ಯಪ್ರದೇಶ, ಹರ್ಯಾಣ ಸೇರಿ ವಿವಿಧ ರಾಜ್ಯಗಳ ಯುವಕರು ನಗರದಲ್ಲಿ ಆನ್‌ಲೈನ್‌ ಫುಡ್‌ ಡೆಲಿವರಿ ಬಾಯ್‌ ಕೆಲಸ ಮಾಡಿಕೊಂಡಿದ್ದಾರೆ. ಈ ಪೈಕಿ ಕೆಲವರು ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಸಂಪಾದಿಸುವ ದುರಾಸೆಯಿಂದ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಫುಡ್‌ ಡೆಲಿವರಿ ಬಾಯ್‌ಗಳ ಸೋಗಿನಲ್ಲಿ ಡ್ರಗ್‌ ವ್ಯಸನಿಗಳಿಗೆ ಗಾಂಜಾ, ಅಫೀಮು, ಕೋಕೆನ್‌, ಎಂಡಿಎಂಎ ಸೇರಿ ಇತರೆ ಮಾದಕವಸ್ತು ಮಾರಾಟ ಮಾಡಿ ಅಕ್ರಮವಾಗಿ ಹಣಗಳಿಸುತ್ತಿದ್ದಾರೆ.

ಇನ್ನು ವೀಸಾ ಅವಧಿ ಮುಗಿದಿದ್ದರೂ ನಗರದಲ್ಲಿ ಅಕ್ರಮವಾಗಿ ಉಳಿದಿರುವ ಕೆಲ ವಿದೇಶಿಗರು ಡ್ರಗ್‌ ಪೆಡ್ಲಿಂಗ್‌ ದಂಧೆಯಲ್ಲಿ ತೊಡಗಿದ್ದಾರೆ. ಇನ್ನು ಇರಾನಿ ಗ್ಯಾಂಗ್‌ ಸದಸ್ಯರು ಸರಗಳ್ಳತನ ಮನೆಗಳ್ಳತನ ಮತ್ತು ದರೋಡೆಯಂಥ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಮಾಲೀಕರ ಮನೆಗೆ ಕನ್ನ:

ನೇಪಾಳದಿಂದ ವಲಸೆ ಬಂದು ಬೆಂಗಳೂರು ಸೇರಿ ಇತರೆಡೆ ಮನೆ ಕೆಲಸಕ್ಕೆ ಹಾಗೂ ಸೆಕ್ಯುರಿಟಿ ಗಾರ್ಡ್‌ಗಳಾಗಿ ಸೇರಿಕೊಳ್ಳುವ ನೇಪಾಳಿ ಮೂಲದವರಿಂದಲೂ ನಗರದಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದೆ. ಮನೆ ಕೆಲಸಕ್ಕೆ ಹಾಗೂ ಭದ್ರತಾ ಸಿಬ್ಬಂದಿಯಾಗಿ ಕೆಲಸಕ್ಕೆ ಸೇರಿಕೊಂಡು ಆರಂಭದಲ್ಲಿ ಮನೆ ಮಾಲೀಕರ ವಿಶ್ವಾಸ ಗಳಿಸಿ ನಂತರದ ದಿನಗಳಲ್ಲಿ ಮಾಲೀಕರು ಹೊರ ಹೋದಾಗ ಅವರ ಮನೆಗಳಿಗೆ ಕನ್ನ ಹಾಕಿ ಚಿನ್ನಾಭರಣ, ನಗದು ದೋಚಿ ತಮ್ಮ ತಮ್ಮ ಊರುಗಳಿಗೆ ಪರಾರಿಯಾಗಿ ತಲೆಮರೆಸಿಕೊಳ್ಳುತ್ತಿದ್ದಾರೆ.

ಅಪರಾಧಕ್ಕೆ ಕಾರಣವೇನು?:

ಸ್ಥಳೀಯವಾಗಿ ಅಪರಾಧ ಎಸಗಿ ತಮ್ಮ ಊರಾದ ನೇಪಾಳ ಮತ್ತು ಇನ್ನಿತರ ಸ್ಥಳಗಳಿಗೆ ಹೋಗಿ ತಲೆಮರೆಸಿಕೊಂಡರೆ ಸುಲಭವಾಗಿ ಪೊಲೀಸರ ಕೈಗೆ ಸಿಕ್ಕಿ ಬೀಳುವುದಿಲ್ಲ ಎಂಬ ಮನೋಭಾವದಿಂದ ಆರೋಪಿಗಳು ನಗರದಲ್ಲಿ ಅಪರಾಧ ಕೃತ್ಯ ಎಸಗುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರಿಗೂ ತಲೆನೋವು:

ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳನ್ನು ಎಸಗಿ ನೇಪಾಳ, ಬಿಹಾರ, ಅಸ್ಸಾಂ ಸೇರಿ ಇನ್ನಿತರ ರಾಜ್ಯಗಳಲ್ಲಿ ಆರೋಪಿಗಳು ಗುಡ್ಡಗಾಡು ಪ್ರದೇಶಗಳಲ್ಲಿ ತಲೆಮರೆಸಿಕೊಳ್ಳುತ್ತಾರೆ. ಅಂಥವರನ್ನು ಪತ್ತೆ ಹಚ್ಚುವುದು ಇಲ್ಲಿನ ಪೊಲೀಸರಿಗೆ ಸವಾಲಿನ ಕೆಲಸ. ಆ ದೇಶದ ಪೊಲೀಸರು ನಮ್ಮ ರಾಜ್ಯದ ಪೊಲೀಸರಿಗೆ ಸಹಕಾರ ನೀಡುವುದಿಲ್ಲ. ಪೊಲೀಸರು ತಿಂಗಳುಗಟ್ಟಲೇ ಮನೆ ಮಠ ಬಿಟ್ಟು ಆರೋಪಿಗಳ ಬೆನ್ನು ಬೀಳುತ್ತಾರೆ. ಅನ್ಯರಾಷ್ಟ್ರವಾದ ನೇಪಾಳದಂತಹ ದೇಶಗಳಲ್ಲಿ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಆರೋಪಿಗಳನ್ನು ನಗರಕ್ಕೆ ಕರೆತಂದು ಶಿಕ್ಷೆ ಕೊಡಿಸುವುದು ಪೊಲೀಸರಿಗೆ ಕ್ಲಿಷ್ಟಕರ ಹಾಗೂ ತಲೆನೋವಿನ ಕೆಲಸ.

ನೇಪಾಳ ಮೂಲದವರನ್ನು ಮನೆಗೆಲಸಕ್ಕೆ ಅಥವಾ ಭದ್ರತೆಗೆ ನೇಮಿಸಿಕೊಳ್ಳುವ ಮುನ್ನ ಕಡ್ಡಾಯವಾಗಿ ಪೊಲೀಸ್ ವೆರಿಫಿಕೇಶನ್ ಮಾಡಿಸಬೇಕು. ಅವರ ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಅಥವಾ ನೇಪಾಳದ ನಾಗರಿಕ ದಾಖಲೆಗಳ ನೈಜತೆ ಪರಿಶೀಲಿಸಬೇಕೆಂದು ಪೊಲೀಸರು ಸೂಚಿಸಿದ್ದರು. ಕೆಲ ಮಾಲೀಕರು ಅವರ ಹಿನ್ನಲೆ ಪರಿಶೀಲನೆ ನಡೆಸದೆ ಮನೆ ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದಾರೆ.

ಅನ್ಯ ರಾಜ್ಯದವರ ಅಂಕಿ-ಅಂಶಗಳು ಲಭ್ಯವಿಲ್ಲ:

ದೇಶದ ಯಾವುದೇ ರಾಜ್ಯಗಳಿಂದ ಬಂದ ವಲಸಿಗರು, ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರೂ ಈ ಹಿಂದೆ ಐಪಿಸಿ ಸೆಕ್ಷನ್‌ ಅಡಿ ಇದೀಗ ಬಿಎನ್‌ಎಸ್‌ ಅಡಿ ಸಾಮಾನ್ಯ ಅಪರಾಧಗಳಂತೆ ಪರಿಗಣಿಸಲಾಗುತ್ತದೆ. ಆರೋಪಿಗಳು ಸ್ಥಳೀಯ ಅಥವಾ ಅನ್ಯ ರಾಜ್ಯದ ಗುರುತುಗಳ ಬಗ್ಗೆ ಪ್ರತ್ಯೇಕ ಅಂಕಿ-ಅಂಶಗಳಾಗಿ ರಾಜ್ಯ ಅಪರಾಧ ದಾಖಲಾತಿ ವಿಭಾಗ/ಬ್ಯೂರೋ (ಎಸ್‌ಸಿಆರ್‌ಬಿ) ಅಥವಾ ಎನ್‌ಸಿಆರ್‌ಬಿ ಕೋಸ್ಟ್‌ಗಳಲ್ಲಿ ಪ್ರಕಟಿಸುವುದಿಲ್ಲ. ಹೀಗಾಗಿ ಅನ್ಯ ರಾಜ್ಯದ ವಲಸಿಗರು ಭಾಗಿಯಾಗಿರುವ ಯಾವುದೇ ಅಪರಾಧ ಕೃತ್ಯಗಳ ಅಂಕಿ-ಅಂಶ ಲಭ್ಯವಿರುವುದಿಲ್ಲ. ಆದರೆ ಅನ್ಯರಾಷ್ಟ್ರಗಳ ವಲಸಿಗರ ಅಪರಾಧಗಳ ಅಂಕಿ-ಅಂಶ ಲಭ್ಯವಿದೆ.

365 ಮಂದಿ ವಿದೇಶಿಗರು ಅಪರಾಧ ಪ್ರಕರಣಗಳಲ್ಲಿ ಭಾಗಿ:

ಬೆಂಗಳೂರು ನಗರ ಜಿಲ್ಲೆಯಲ್ಲಿ ವೀಸಾ ಅವಧಿ ಇರುವ 5,304 ವಿದೇಶಿಯರು ಹಾಗೂ ವೀಸಾ ಅವಧಿ ಮೀರಿದ್ದರೂ ಅಕ್ರಮವಾಗಿ 446 ವಿದೇಶಿಯರು ನೆಲೆಸಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಕಳೆದ 3 ವರ್ಷದಲ್ಲಿ ಒಟ್ಟು 911 ಜನ ಅಕ್ರಮ ವಲಸಿಗರನ್ನು ಪತ್ತೆಹಚ್ಚಲಾಗಿದೆ. ಇದರಲ್ಲಿ 365 ಜನ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದು ಪೊಲೀಸರ ಅಂಕಿ ಅಂಶದಿಂದ ಬೆಳಕಿಗೆ ಬಂದಿದೆ. ಅಕ್ರಮ ವಿದೇಶಿಗರನ್ನು ಪತ್ತೆ ಹಚ್ಚಿ ಗಡಿಪಾರು ಮಾಡುವುದು ದೀರ್ಘ ಕಾಲದ ಪ್ರಕ್ರಿಯೆಯಾಗಿದೆ. ಇದು ಕೂಡ ಪೊಲೀಸರಿಗೆ ಸವಾಲಿನ ಕೆಲಸವಾಗಿದೆ.

ವಲಸಿಗರಿಂದ ನಗರದಲ್ಲಿ ನಡೆದ

ಪ್ರಮುಖ ಅಪರಾಧ ಪ್ರಕರಣಗಳು

ಒಡಿಶಾ ಮೂಲದ ಆರೋಪಿ ಮುಕ್ತಿ ರಂಜನ್‌ ವೈಯಾಲಿ ಕಾವಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 2024 ರ ಸೆ.8 ರಂದು ಮಹಾಲಕ್ಷ್ಮಿ(29) ಎಂಬ ಯುವತಿಯನ್ನು ಕೊಲೆಗೈದು, ಆಕೆಯ ಮೃತದೇಹ ತುಂಡು ತಂಡು ಮಾಡಿ ಫ್ರಿಡ್ಜ್‌ನಲ್ಲಿ ತುಂಬಿದ್ದ ಪ್ರಕರಣ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

- ಮಧ್ಯಪ್ರದೇಶ ಮೂಲದ ಆರೋಪಿ ಅಭಿಷೇಕ್‌ ಕೋರಮಂಗಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 2024 ರ ಜು.23 ರಂದು ಮಹಿಳಾ ಪಿ.ಜಿ ನುಗ್ಗಿ ಬಿಹಾರ ಮೂಲದ ಕೃತಿ ಕುಮಾರಿ (24) ಕೊಲೆ ಮಾಡಿದ್ದ.

- ತಮಿಳುನಾಡಿನ ಸೇಲಂ ಮೂಲದ ಬಾಲಮುರುಗನ್‌ ಎಂಬಾತ 2025 ರ ಡಿ.23 ರಂದು ಮಾಗಡಿ ರಸ್ತೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕೌಟುಂಬಿಕ ಕಲಹದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಪತ್ನಿ ಭುವನೇಶ್ವರಿಯನ್ನು ನಡುರಸ್ತೆಯಲ್ಲೇ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಪತಿಯೇ ಕೊಲೆಗೈದಿದ್ದ.

- ತಮಿಳುನಾಡಿನ ಚೆನ್ನೈ ಮೂಲದ ಆರೋಪಿಗಳಾದ ಶ್ವೇತಾ ಮತ್ತು ಕೆನೆತ್‌ ಕೆ.ಆರ್‌.ಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಳೆದ ಜೂ.22 ರಂದು ಪ್ರಿಯಕರನೊಂದಿಗೆ ಸೇರಿ ತಂದೆ-ತಾಯಿ, ತಂಗಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ

- ಅಸ್ಸಾಂ ಮೂಲದ ಆರೋಪಿಗಳಾದ ಬುರಹ್ಹಾನ್‌ ಅಹ್ಮದ್ ಬರ್ಭುಯ್ಯ, ಜಾಹಿದ್‌ವುಲ್ ಹುಸೇನ್, ಸಾಜಿದುಲ್ ಲಶ್ಕರ್, ಕಳೆದ ಅ.21ರಂದು ಪುಲಕೇಶಿನಗರ ಠಾಣಾ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಟಾರ್ಚ್‌ ಬ್ಯಾಟರಿಯಲ್ಲಿ ಅಳವಡಿಸಿದ್ದ ಸುಧಾರಿತ ಕಚ್ಚಾ ಬಾಂಬ್ ಇಟ್ಟು (ಐಇಡಿ) ಸ್ಫೋಟಿಸಿದ್ದ.

- ಮಾರತ್ತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಯಮಲೂರಿನ ಉದ್ಯಮಿಯೊಬ್ಬರ ನಿವಾಸದಲ್ಲಿ ಮನೆ ಕೆಲಸಕ್ಕೆ ಸೇರಿದ್ದ ದಿನೇಶ್ (32) ಮತ್ತು ಕಮಲಾ (25) ಎಂಬ ನೇಪಾಳಿ ದಂಪತಿ, ಕೇವಲ 20 ದಿನಗಳಲ್ಲಿ ಇಡೀ ಕುಟುಂಬ ಭೂಮಿ ಪೂಜೆಗೆ ಹೊರಗಡೆ ಹೋದಾಗ ಸಿಸಿ ಕ್ಯಾಮೆರಾ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಕನ್ನ ಹಾಕಿದ್ದರು. ಮನೆಯಲ್ಲಿದ್ದ 11.5 ಕೆಜಿ ಚಿನ್ನ ಮತ್ತು ವಜ್ರಾಭರಣ, 5 ಕೆಜಿ ಬೆಳ್ಳಿ ಹಾಗೂ 11.5 ಲಕ್ಷ ನಗದು ಸೇರಿ 18 ಕೋಟಿ ರು. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ಬೆಂಗಳೂರಿಗೆ ನೇಪಾಳಿಗಳು ಮತ್ತು ಇರಾನಿ ಗ್ಯಾಂಗ್‌ ಸೇರಿ ಇತರೆ ಹೊರ ರಾಜ್ಯದವರೇ ಅತಿದೊಡ್ಡ ಅಪಾಯ. ಇವರು ಸರಗಳವು, ಮನೆಗಳ್ಳತನ, ದ್ವಿಚಕ್ರ ವಾಹನಗಳ್ಳತನ ಮತ್ತು ದರೋಡೆಯಂಥ ಅಪರಾಧ ಕೃತ್ಯ ಎಸಗಿ ಕಾಡುಗಳಲ್ಲಿ ಬೆಟ್ಟಗುಟ್ಟ ಪ್ರದೇಶಗಳಲ್ಲಿ ತಲೆಮರೆಸಿಕೊಳ್ಳುತ್ತಾರೆ. ನಮ್ಮ ರಾಜ್ಯದ ಪೊಲೀಸರಿಗೆ ಅಲ್ಲಿನ ಪೊಲೀಸರು ಸಹಕಾರ ನೀಡುವುದಿಲ್ಲ. ಹೀಗಾಗಿ ಇಂಥವರನ್ನು ಕೆಲಸಕ್ಕೆ ನೇಮಿಸಿಕೊಳ್ಳುವಾಗ ಕಡ್ಡಾಯವಾಗಿ ಪೊಲೀಸ್ ವೆರಿಫಿಕೇಶನ್ ಮಾಡಿಸಬೇಕು.

-ಡಾ.ರಾಜಪ್ಪ, ನಿವೃತ್ತ ಡಿಐಜಿ