ಕುಕನೂರು: ರೈತರಿಗೆ ಬರ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಬರ ವೀಕ್ಷಣೆಗೆ ಮುಂದಾಗಿದೆ ಎಂದು ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ರಾಜೂರು ಗ್ರಾಮದಲ್ಲಿ ಬರ ವೀಕ್ಷಣೆ ಪ್ರಯುಕ್ತ ಹೆಸರು ಬೆಳೆಯ ಜಮೀನಿಗೆ ತೆರಳಿ ಬರ ವೀಕ್ಷಿಸಿದ ಅವರು, ಕಕ ಭಾಗದಲ್ಲಿ ಹತ್ತು ವರ್ಷಕ್ಕೆ 8 ವರ್ಷ ಬರ ಬರುತ್ತದೆ. ರಾಜಸ್ಥಾನ ಬಿಟ್ಟರೆ ಅತ್ಯಂತ ಒಣ ಪ್ರದೇಶ ಈ ಭಾಗ ಆಗಿದೆ. ರಾಜ್ಯದ 31ಜಿಲ್ಲೆಯಲ್ಲೂ ಎಲ್ಲ ತಾಲೂಕಿನಲ್ಲಿ ಸಿಎಂ ಡಿಕೆಶಿ ಸೂಚನೆಯಂತೆ ನೂತನ ಸಚಿವರು ಬರ ವೀಕ್ಷಣೆಗೆ ಮುಂದಾಗಿದ್ದಾರೆ. ಮಳೆ ಕೊರತೆ ಇದೆ. ಬಿತ್ತಿದ ಬೆಳೆ ಫಸಲು ಕೊಡುವ ಹಂತದಲ್ಲಿ ಸಹ ಇಲ್ಲ.ರೈತರು ತುಂಬಿರುವ ಫಸಲ್ ಭಿಮಾ ಯೋಜನೆಯಲ್ಲಿ ವಿಮೆ ಮಂಜೂರಾತಿಗೆ ಸಹ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಪ್ರಧಾನ್ ಮಂತ್ರಿ ಫಸಲ್ ಭಿಮಾ ಯೋಜನೆಯಲ್ಲಿ ಅರ್ಧ ವಿಮಾ ಹಣ ರಾಜ್ಯ,ಇನ್ನರ್ಧ ಕೇಂದ್ರ ಸರ್ಕಾರ ಭರಿಸುತ್ತದೆ ಎಂದರು.ಕಾಂಗ್ರೆಸ್ ಸರ್ಕಾರ ಜನರಿಗೆ ಗ್ಯಾರಂಟಿ ಯೋಜನೆ ನೀಡಿದೆ, ಅದರ ಜತೆಗೆ ರೈತರಿಗೆ ಬರ ಪರಿಹಾರ ಸಹ ನೀಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಜಿಲ್ಲಾಧಿಕಾರಿ ಸುರೇಶ ಬಿ ಇಟ್ನಾಳ ಮಾತನಾಡಿ, ಜಿಲ್ಲೆಯಲ್ಲಿ 1.56 ಲಕ್ಷ ಜನ ಬೆಳೆ ವಿಮೆ ತುಂಬಿದ್ದಾರೆ.ಮಿಡ್ಲ ಸಿಸನ್ ಅಡ್ವಾನ್ಸ್ ಹಂತದಲ್ಲಿ ಬೆಳೆ ವಿಮೆ ಮಂಜೂರು ಮಾಡಿಸಲಾಗುವದು. ಮೊದಲ ಹಂತದಲ್ಲಿ ಜಿಲ್ಲೆಯಲ್ಲಿ 25 ಸಾವಿರ ರೈತರಿಗೆ 19 ಕೋಟಿ ಹಣ ಬಿಡುಗಡೆ ಆಗುವುದು. ವಿಬ್ ಜಿ ರಾಮ್ ಜಿ ಯೋಜನೆಯಲ್ಲಿ ಸಹ ಗುಳೆ ತಡೆಗಟ್ಟುವ ಹಂತದಲ್ಲಿ ಜನರಿಗೆ ಕೆಲಸ ನೀಡಲಾಗುತ್ತಿದೆ ಎಂದರು.ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನರಾಜ್, ಜಂಟಿ ಕೃಷಿ ನಿರ್ದೇಶಕ ಕೃಷ್ಣಮೂರ್ತಿ, ಜಿಪಂ ಸಿಇಒ ವರ್ಣೀತ್ ನೇಗಿ, ಎಸ್ಪಿ ಡಾ.ರಾಮ್ ಎಲ್ ಅರಸಿದ್ದಿ, ತಹಸೀಲ್ದಾರ್ ಬಸವರಾಜ ಬೆಣ್ಣೆ ಶಿರೂರು, ತಾಪಂ ಇಒ ಬೆಟದಪ್ಪ ಮಾಳೆಕೊಪ್ಪ, ಜಿಲ್ಲಾ ಗ್ಯಾರಂಟಿ ಯೋಜನೆಯ ಸಮಿತಿಯ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಕೃಷಿ ಇಲಾಖೆ ಅಧಿಕಾರಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿದ್ದರು.
ಬಿತ್ತನೆ ಮಾಡಿದ ಖರ್ಚು ಸಹ ಬಾರದ ಸ್ಥಿತಿ : ರೈತ ವರ್ಗಕ್ಕೆ ಬಿತ್ತನೆ ಮಾಡಿದ ಖರ್ಚು ಸಹ ಬಾರದ ಸ್ಥಿತಿ ಬರಗಾಲದಿಂದ ಉಲ್ಬಣವಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲೂಕಿನ ರಾಜೂರು ಗ್ರಾಮದಲ್ಲಿ ಬರ ವೀಕ್ಷಣೆ ನಂತರ ಮಾತನಾಡಿದ ಅವರು, ಶೀಘ್ರ ಬರ ಘೋಷಣೆ ಮಾಡಿದರೆ ಕೆಲವು ಹೋಬಳಿ ಬರ ಘೋಷಣೆಯಿಂದ ವಂಚಿತವಾಗುತ್ತವೆ. ಬರ ನಿಯಮಾವಳಿಗಳ ಪ್ರಕಾಶ ಬರ ಘೋಷಣೆ ಆಗಬೇಕು. ಕೆಲವು ಸಹ ಹೊಲಕ್ಕೆ ಹೋಗಿ ತಿರುಗಾಡಿ ಬಂದು ಬರ ಘೋಷಣೆ ಮಾಡಿ ಅನ್ನುತ್ತಿದ್ದಾರೆ. ರಾಜ್ಯದಲ್ಲಿ ಬರಗಾಲ ಇದ್ದರೂ ಸಹ ಡ್ಯಾಂ ತುಂಬಿವೆ. ಮಳೆ ಸಹ ಬರ್ತಾ ಇದೆ. ನೂತನ ಮಂತ್ರಿ ಮಂಡಲ ರಚನೆ ನಂತರ ಮಳೆ ಸಹ ಬರ್ತಾ ಇದೆ, ಡ್ಯಾಂಗಳು ತುಂಬುತ್ತಾ ಇವೆ ಎಂದರು.
ಕ್ಯಾಬಿನೆಟದಲ್ಲಿ ಚರ್ಚೆ ಮಾಡುತ್ತೇವೆ: ಸಚಿವ ಶಿವರಾಜ ತಂಗಡಗಿ ಮಾತನಾಡಿ, ತೊಗರಿ, ಹೆಸರು, ಸಜ್ಜೆ ಸೇರಿದಂತೆ ನಾನಾ ಬೆಳೆ ಹಾಳಾಗಿರುವುದನ್ನು ನಾವು ಖುದ್ದು ನೋಡಿದ್ದೇವೆ. ಈ ಬಗ್ಗೆ ಜಿಲ್ಲೆಯಿಂದ ವರದಿ ಕಳಿಸುತ್ತೇವೆ. ಕ್ಯಾಬಿನೆಟನಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ವಾಸ್ತವ ಪರಿಸ್ಥಿತಿ ಅರಿತು ಬರ ಘೋಷಣೆಯ ಬಗ್ಗೆ ಕ್ರಮ ವಹಿಸುತ್ತೇವೆ. ಬಡವರ ಬಗ್ಗೆ ನಮಗೆ ಕಾಳಜಿ ಇದೆ. ಬಡವರಿಗಾಗಿ ಈಗಾಗಲೇ ಹತ್ತಾರು ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದರು.