ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆ.19 ಮತ್ತು 21ರಂದು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು ₹29.75 ಕೋಟಿ ರು.ಮೌಲ್ಯದ ಗಾಂಜಾ ಹಾಗೂ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 8 ಮಂದಿಯನ್ನು ಬಂಧಿಸಿದ್ದಾರೆ.

-ಬ್ಯಾಗ್, ಒಳ ಉಡುಪು, ದೇಹದಲ್ಲಿ ಅಡಗಿಸಿಟ್ಟು ಚಿನ್ನ ಸಾಗಣೆ

-ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ । ಡ್ರಗ್ಸ್‌ ಪಡ್ಲರ್ಸ್‌ ಅರೆಸ್ಟ್‌

ಕನ್ನಡಪ್ರಭ ವಾರ್ತೆ ದೇವನಹಳ್ಳಿ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆ.19 ಮತ್ತು 21ರಂದು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು ₹29.75 ಕೋಟಿ ರು.ಮೌಲ್ಯದ ಗಾಂಜಾ ಹಾಗೂ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 8 ಮಂದಿಯನ್ನು ಬಂಧಿಸಿದ್ದಾರೆ.

ಸೆ.21ರಂದು ವಿಯೆಟ್ನಾಂನಿಂದ ಬಂದ ಪ್ರಯಾಣಿಕನೊಬ್ಬನ ಕ್ಯಾಬಿನ್ ಬ್ಯಾಗಲ್ಲಿ 70 ಲಕ್ಷ ರು.ಮೌಲ್ಯದ 2 ಕೆ.ಜಿ.ಹೈಡ್ರೋಪೊನಿಕ್ ಗಾಂಜಾ ಪತ್ತೆಯಾಗಿದೆ. ಅದೇ ದಿನ ಕೌಲಾಲಂಪುರದಿಂದ ಬಂದ ಮತ್ತೊಬ್ಬ ಪ್ರಯಾಣಿಕನಿಂದ ₹81.47 ಲಕ್ಷ ಮೌಲ್ಯದ 559.4 ಗ್ರಾಂ ಚಿನ್ನವನ್ನು ಬ್ಯಾಗ್, ಒಳ ಉಡುಪು ಹಾಗೂ ದೇಹದಲ್ಲಿ ಅಡಗಿಸಿಕೊಂಡು ಸಾಗಿಸುತ್ತಿದ್ದುದು ಪತ್ತೆಯಾಗಿದೆ. ಸೆ.19ರಂದು ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕನೊಬ್ಬನಿಂದ ₹5.35 ಕೋಟಿ ಮೌಲ್ಯದ 15.3 ಕೆ.ಜಿ.ಹೈಡ್ರೋಪೊನಿಕ್ ಗಾಂಜಾ ಜಪ್ತಿ ಮಾಡಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಬ್ಯಾಂಕಾಕ್‌ನಿಂದ ಬಂದ ಇಬ್ಬರು ಪ್ರಯಾಣಿಕರಿಂದ ₹9.38 ಕೋಟಿ ಮೌಲ್ಯದ 26.8 ಕೆ.ಜಿ.ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದೇ ದಿನ ಬ್ಯಾಂಕಾಕ್‌ನಿಂದ ಬಂದ ಮತ್ತಿಬ್ಬರು ಪ್ರಯಾಣಿಕರಿಂದ ₹12.57 ಕೋಟಿ ಮೌಲ್ಯದ 36 ಕೆ.ಜಿ. ಹೈಡ್ರೋಪೊನಿಕ್ ಗಾಂಜಾ ಹಾಗೂ ಅಬುಧಾಬಿಯಿಂದ ಬಂದ ಪ್ರಯಾಣಿಕನೊಬ್ಬನಿಂದ ₹93.78 ಲಕ್ಷ ಮೌಲ್ಯದ 642 ಗ್ರಾಂ ಚಿನ್ನದ ಆಭರಣಗಳನ್ನು ಜಪ್ತಿ ಮಾಡಲಾಗಿದೆ.

2 ದಿನಗಳ ಕಾರ್ಯಾಚರಣೆಯಲ್ಲಿ ಒಟ್ಟು 80.1 ಕೆ.ಜಿ. ಗಾಂಜಾ, 1.20 ಕೆ.ಜಿ. ಚಿನ್ನ ಜಪ್ತಿಯಾಗಿದೆ. ಗಾಂಜಾ ಪ್ರಕರಣಗಳಲ್ಲಿ ಆರು ಮಂದಿ ಹಾಗೂ ಚಿನ್ನ ಸಾಗಾಟದ ಪ್ರಕರಣಗಳಲ್ಲಿ ಇಬ್ಬರನ್ನು ಬಂಧಿಸಿ, ಎನ್‌ಡಿಪಿಎಸ್‌ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ.

----

ಬ್ಯಾಂಕಾಕ್‌ ಪ್ರಜೆಗಳಿಂದ ₹3.49 ಕೋಟಿ ಡ್ರಗ್ಸ್‌ ಜಪ್ತಿ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಕಸ್ಟಮ್ಸ್ ಕಾರ್ಯಾಚರಣೆ ಮುಂದುವರಿದಿದ್ದು, ಈಗ ಮತ್ತೆ 3.49 ಕೋಟಿ ರು.ಮೌಲ್ಯದ ಹೈಡ್ರೋ ಗಾಂಜಾ ಕಸ್ಟಮ್ಸ್ ಜಪ್ತಿ ಮಾಡಿದೆ. ವಿದೇಶದಿಂದ ನಾಡಿಗೆ ಡ್ರಗ್ಸ್ ಕಳ್ಳ ಸಾಗಾಣಿಕೆಗೆ ಬಗ್ಗೆ ಖಚಿತ ಮಾಹಿತಿ ಪಡೆದು ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಕೆಐಎಗೆ ಬ್ಯಾಕಾಂಕ್‌ನಿಂದ ಸೋಮವಾರ ಬಂದಿಳಿದ ಪ್ರವಾಸಿಗನನ್ನು ಬಂಧಿಸಿದ ಅಧಿಕಾರಿಗಳು, ಆತನ ಬಳಿ 2.10 ಕೋಟಿ ರು.ಮೌಲ್ಯದ 6 ಕೆಜಿ ಹೈಡ್ರೋ ಗಾಂಜಾ ಜಪ್ತಿ ಮಾಡಿದ್ದಾರೆ. ಇನ್ನೊಂದು ದಾಳಿಯಲ್ಲಿ ಮತ್ತೊಬ್ಬ ಬ್ಯಾಂಕಾಕ್‌ ಪ್ರವಾಸಿಗ ಕಸ್ಟಮ್ಸ್ ಬಲೆಗೆ ಬಿದ್ದಿದ್ದಾನೆ. ಈತನಿಂದ 1.39 ಕೋಟಿ ರು.ಬೆಲೆಯ 3.97 ಕೆಜಿ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.