ಉನ್ನತ ಶಿಕ್ಷಣದ ಸಮಗ್ರ ಅಭಿವೃದ್ಧಿಗಾಗಿ ರಚಿಸಿದ ವಿಶ್ವವಿದ್ಯಾನಿಲಯ ಅನುದಾನ ಆಯೋಗ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಹಾಗೂ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯನ್ನು ಬದಲಿಸುವ ಮಸೂದೆಗೆ ಕೇಂದ್ರ ಸರ್ಕಾರದ ಸಂಪುಟ ಒಪ್ಪಿಗೆ ನೀಡಿರುವುದು ರಾಷ್ಟ್ರದ ಉನ್ನತ ಶಿಕ್ಷಣಕ್ಕೆ ಮಾಡಿದ ಅತ್ಯಂತ ದೊಡ್ಡ ದ್ರೋಹವಾಗಿದೆ.

ರಾಣಿಬೆನ್ನೂರು: ಉನ್ನತ ಶಿಕ್ಷಣದ ಸಮಗ್ರ ಅಭಿವೃದ್ಧಿಗಾಗಿ ರಚಿಸಿದ ವಿಶ್ವವಿದ್ಯಾನಿಲಯ ಅನುದಾನ ಆಯೋಗ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಹಾಗೂ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯನ್ನು ಬದಲಿಸುವ ಮಸೂದೆಗೆ ಕೇಂದ್ರ ಸರ್ಕಾರದ ಸಂಪುಟ ಒಪ್ಪಿಗೆ ನೀಡಿರುವುದು ರಾಷ್ಟ್ರದ ಉನ್ನತ ಶಿಕ್ಷಣಕ್ಕೆ ಮಾಡಿದ ಅತ್ಯಂತ ದೊಡ್ಡ ದ್ರೋಹವಾಗಿದೆ ಎಂದು ಕೆಪಿಸಿಸಿ ಶಿಕ್ಷಕರು ಹಾಗೂ ಪದವೀಧರರ ಘಟಕದ ನಿಕಟಪೂರ್ವ ರಾಜ್ಯಾಧ್ಯಕ್ಷ ಡಾ. ಆರ್.ಎಂ.ಕುಬೇರಪ್ಪ ಖಂಡಿಸಿದ್ದಾರೆ.ಈ ಕುರಿತು ಅವರು ಪತ್ರಿಕೆಗೆ ನೀಡಿರುವ ಪ್ರಕಟಣೆಯಲ್ಲಿ, ವಿಶ್ವವಿದ್ಯಾಲಯ ಅನುದಾನ ಆಯೋಗವು ದಿವಂಗತ ಪ್ರಧಾನಿಗಳಾದ ಇಂದಿರಾಗಾಂಧಿ ಹಾಗೂ ಡಾ. ಮನಮೋಹನಸಿಂಗ್ ಕನಸಿನ ಕೂಸಾಗಿದ್ದು ದೇಶದ ಉನ್ನತ ಶಿಕ್ಷಣಕ್ಕೆ ಬಹುದೊಡ್ಡ ದಿಕ್ಸೂಚಿಯಾಗಿ ಕೆಲಸ ಮಾಡುತ್ತಿದ್ದವು. ಒಂದೊಂದು ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ಒಂದೊಂದು ಕಾಲೇಜಿಗೂ 3ರಿಂದ 4 ಕೋಟಿಯಷ್ಟು ಅನುದಾನ ದೊರೆಯುತ್ತಿತ್ತು. ಇದರಿಂದ ಪ್ರತಿಯೊಂದು ಪದವಿ ಕಾಲೇಜಿಗೂ ಎಲ್ಲ ರೀತಿಯ ಮೂಲ ಭೂತ ಸೌಕರ‍್ಯಗಳು ದೊರೆಯುತ್ತಿದ್ದವು. ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ಈ ಹನ್ನೆರಡು ವರ್ಷಗಳಲ್ಲಿ ದೇಶದ ಯಾವ ಕಾಲೇಜಿಗೂ ಹನ್ನೆರಡು ರುಪಾಯಿ ಕೂಡಾ ಸಿಗುತ್ತಿಲ್ಲ. ಇದು ಈ ದೇಶದ ಪ್ರಧಾನ ಮಂತ್ರಿಗಳ ವಿಕಸಿತ ಭಾರತ. ಈ ನಾಡಿನ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿರುವ ಬುದ್ಧಿ ಜೀವಿಗಳು, ಪ್ರಜ್ಞಾವಂತರು, ಕೇಂದ್ರ ಸರ್ಕಾರದ ಇಂತಹ ತೀರ್ಮಾನಗಳನ್ನು ಖಂಡಿಸಬೇಕು. ಕಾಂಗ್ರೆಸ್ ಸರ್ಕಾರ ಸದುದ್ದೇಶ ಹಾಗೂ ದೇಶದ ಅಭಿವೃದ್ಧಿದೃಷ್ಠಿಯಿಂದ ಸ್ಥಾಪಿಸಿದ ರಾಷ್ಟ್ರದ ಅತ್ಯುನ್ನತ ಸಂಸ್ಥೆಗಳನ್ನು ರಾಜಕೀಯಕಾರಣಕ್ಕಾಗಿ ಮುಚ್ಚುವುದರಿಂದ ದೇಶ ಬಹುದೊಡ್ಡ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಪ್ರಧಾನ ಮಂತ್ರಿ ಮೋದಿ ಹಾಗೂ ಅವರ ರಾಜಕೀಯ ಪಟಾಲಂಗಳು ಅರ್ಥಮಾಡಿಕೊಳ್ಳಬೇಕು. ಅಭಿವೃದ್ದಿ ಸಂಸ್ಥೆಗಳಿಗಿರುವ ಹೆಸರು, ರಸ್ತೆ ಮತ್ತು ಸರ್ಕರದ ಸಂಸ್ಥೆಗಳಿಗೆ ಇಟ್ಟಿರುವ ಹೆಸರು ಬದಲಾವಣೆ ಮಾಡುವುದೇ ಮೋದಿಗೆ ವಿಕಸಿತ ಭಾರತವಾಗಿದೆ. ಈ ದೇಶದ ಚಿಂತಕರು ಹಾಗೂ ಬುದ್ಧಿ ಜೀವಿಗಳು ಇದನ್ನು ನೋಡಿಕೊಂಡು ಕೈಕಟ್ಟಿ ಕುಳಿತರೆ, ಮುಂದೆ ಈ ದೇಶದ ಗತಿ ಏನಾಗಬಹುದು ಎಂಬುದನ್ನು ನಾವೆಲ್ಲಾ ಯೋಚಿಸಬೇಕಾಗಿದೆ ಎಂದು ಕುಬೇರಪ್ಪ ತಿಳಿಸಿದ್ದಾರೆ.