ಬೆಂಗಳೂರು : ಇರಾನ್ ಜತೆಗೆ ಇಸ್ರೇಲ್‌ ಹಾಗೂ ಅಮೆರಿಕ ನಡೆಸುತ್ತಿರುವ ಯುದ್ಧದ ಪರಿಣಾಮ ಸಿಲಿಂಡರ್ ಸಮಸ್ಯೆ ಹೆಚ್ಚಾಗಿದ್ದು, ಇದೀಗ ಗ್ಯಾಸ್‌ ಕೊರತೆ ಕಾರಣ ಬೆಳಗಾವಿಯ ಜಿಲ್ಲೆಯ 60ಕ್ಕೂ ಅಧಿಕ ಕೈಗಾರಿಕೆಗಳು ಬಂದ್‌ ಆಗುವ ಹಂತಕ್ಕೆ ತಲುಪಿವೆ. ಅಲ್ಲದೇ, ತಯಾರಾದ ವಸ್ತುಗಳನ್ನು ರಫ್ತು ಮಾಡಲಾಗದೇ ಉದ್ಯಮಿಗಳ ಪರದಾಡುತ್ತಿದ್ದಾರೆ.

ಮಧ್ಯಪ್ರಾಚ್ಯದಲ್ಲಿನ ಯುದ್ಧದ ಬಿಸಿ ಬೆಳಗಾವಿ ಕೈಗಾರಿಕೆ ವಲಯಕ್ಕೂ ತಟ್ಟುತ್ತಿದ್ದು, ಕಮರ್ಷಿಯಲ್ ಸಿಲಿಂಡರ್ ಕೊರತೆ ಉಂಟಾಗಿದೆ. ಮುಂದಿನ ಒಂದು ವಾರವೂ ಇದೇ ಪರಿಸ್ಥಿತಿ ಮುಂದುವರಿದರೆ ಗ್ಯಾಸ್‌ ಮೇಲೆಯೇ ಅವಲಂಬನೆಯಾದ ಬೆಳಗಾವಿ ಜಿಲ್ಲೆಯ 60ಕ್ಕೂ ಅಧಿಕ ಕೈಗಾರಿಕೆಗಳು ಕಾರ್ಯಾಚರಣೆ ನಿಲ್ಲಿಸುವ ಸಾಧ್ಯತೆ ಇದ್ದು, ಕಾರ್ಮಿಕರಿಗೆ ಸಂಕಷ್ಟ ತಂದೊಡ್ಡಬಹುದು ಎಂಬ ಆತಂಕ ಎದುರಾಗಿದೆ.

ಕಾಳ ಸಂತೆಯಲ್ಲಿ ಮಾರಾಟ ಯತ್ನ: 105 ಸಿಲಿಂಡರ್ ಜಪ್ತಿ

ಬೀದರ್ ಜಿಲ್ಲೆಯ ಜನವಾಡಾ ಪೊಲೀಸ್ ಠಾಣಾ ವ್ಯಾಪ್ತಿಯ ಹೊಲದಲ್ಲಿ ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಂಗ್ರಹಿಸಿದ್ದ 105 ಗ್ಯಾಸ್ ಸಿಲೆಂಡರ್‌ಗಳನ್ನು ಪೊಲೀಸರು ಜಪ್ತಿ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಎಸ್‌ಪಿ ಪ್ರದೀಪ ಗುಂಟಿ ನಿರ್ದೇಶನದಂತೆ ಪೊಲೀಸ್‌ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ₹18.55 ಲಕ್ಷ ಮೌಲ್ಯದ ಗ್ಯಾಸ್ ಸಿಲೆಂಡರ್ ಮತ್ತು ಎರಡೂ ವಾಹನ ಜಪ್ತಿ ಮಾಡಿಕೊಂಡು ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.


ನಗರದ ಮಚ್ಚೆ ಪ್ರದೇಶದಲ್ಲಿರುವ ಆಕಾಶ ಫಾರ್ಮಿಂಗ್ ಟೆಕ್ನಾಲಜಿ ಒಡೆತನದ ಕಂಪನಿಗೆ ಗ್ಯಾಸ್‌ ಟ್ರಬಲ್ ಎದುರಾಗಿದ್ದು, ಕಂಪನಿ ತಯಾರಿಸುತ್ತಿದ್ದ 110 ವಸ್ತುಗಳ ಉತ್ಪಾದನೆ ಕುಂಠಿತವಾಗಿದೆ. ಗ್ಯಾಸ್‌ ಇಲ್ಲದೆ, ಕೋಟಿಂಗ್ ಸಮಸ್ಯೆ ಆಗುತ್ತಿದೆ. ಅಲ್ಲದೇ ಗ್ಯಾಸ್ ಕಟ್ಟಿಂಗ್, ಪೌಡರ್, ಪವರ್‌ ಕೋಟಿಂಗ್, ಕಲರ್ ಕೋಟಿಂಗ್ ಮಾಡುವುದಕ್ಕೆ ಗ್ಯಾಸ್ ಬಳಕೆ ಮಾಡುತ್ತಿತ್ತು. ಆದರೀಗ ಎಲ್ಪಿಜಿ ಗ್ಯಾಸ್‌ ಕೂಡ ಲಭ್ಯವಾಗುತ್ತಿಲ್ಲ. ಕಾರ್ಖಾನೆ ಮಾಲೀಕರಿಗೆ ನೂರಾರು ಕೋಟಿ ರುಪಾಯಿ ನಷ್ಟ ಉಂಟಾಗಿದ್ದು, ಇದರಿಂದಾಗಿ ನೂರಾರು ಕಾರ್ಮಿಕರಿಗೂ ತೊಂದರೆ ಆಗುತ್ತಿದೆ ಎಂದು ಉದ್ಯಮಿದಾರರು ಅಳಲು ತೊಡಿಕೊಂಡಿದ್ದಾರೆ.

ಮಧ್ಯಪ್ರಾಚ್ಯ ಯುದ್ಧದ ಬಿಸಿ ಕೈಗಾರಿಕೆಗಳಿಗೂ ತಟ್ಟಿದೆ. ಇನ್ನೊಂದು ವಾರವೂ ಇದೇ ಪರಿಸ್ಥಿತಿ ಮುಂದುವರಿದರೆ ಬೆಳಗಾವಿಯ ಬಹುತೇಕ ಕೈಗಾರಿಕೆಗಳು ಬಂದ್ ಆಗುವ ಸಾಧ್ಯತೆ ಇದೆ. ತಕ್ಷಣವೇ ಗ್ಯಾಸ್ ಪೂರೈಕೆ ಸರಿಪಡಿಸದಿದ್ದರೆ ಪರಿಸ್ಥಿತಿ ನಿಯಂತ್ರಣ ತಪ್ಪಲಿದೆ.

- ಪ್ರಭಾಕರ ನಾಗರಮುನೋಳಿ, ಅಧ್ಯಕ್ಷರು, ಬೆಳಗಾವಿ ವಾಣಿಜ್ಯೋದ್ಯಮಿಗಳ ಸಂಘ

ಹೋಟೆಲ್‌ನಲ್ಲಿ ಗೃಹ ಬಳಕೆ ಸಿಲಿಂಡರ್

ಕೊಪ್ಪಳ ಜಿಲ್ಲೆಯ ಕೆಲವು ಹೋಟೆಲ್ ಮಾಲೀಕರು ಗೃಹ ಬಳಕೆ ಸಿಲಿಂಡರ್ ಬಳಕೆ ಮಾಡುತ್ತಿದ್ದು, ಆಹಾರ ಇಲಾಖೆ ಅಧಿಕಾರಿಗಳು 6 ಹೋಟೆಲ್‌ಗಳ ಮೇಲೆ ದಾಳಿ ನಡೆಸಿ 12 ಸಿಲಿಂಡರ್ ವಶಪಡಿಸಿಕೊಂಡು ಮಾಲೀಕರಿಗೆ ಎಚ್ಚರಿಕೆ ನೀಡಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ, ಕೊಪ್ಪಳ ತಾಲೂಕಿನ ಹಿರೆಸಿಂದೋಗಿ ಶಾಲೆಯಲ್ಲಿ ಬಿಸಿಯೂಟ ತಯಾರಿಸಲು ಸ್ವತಃ ಬಿಸಿಯೂಟ ಯೋಜನೆ ಅಧಿಕಾರಿ ಗ್ಯಾಸ್ ಎಜೆನ್ಸಿಗೆ ಭೇಟಿ ನೀಡಿ 4 ದಿನಕ್ಕೆ ಆಗುವಷ್ಟು ಗ್ಯಾಸ್‌ ಪಡೆದಿದ್ದಾರೆ.

ಪುನೀತ್ ಜನ್ಮದಿನಕ್ಕೆ ಸೌದೆ ಒಲೆಯಲ್ಲಿ ಬಿರಿಯಾನಿ ತಯಾರಿ

ಕರ್ನಾಟಕ ರತ್ನ ಪುನೀತ್ ರಾಜ್​ಕುಮಾರ್ ಅವರ 51ನೇ ಹುಟ್ಟು ಹಬ್ಬದ ಪ್ರಯುಕ್ತ ಶಿವಮೊಗ್ಗದಲ್ಲಿ ಅಭಿಮಾನಿಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ವಾಣಿಜ್ಯ ಸಿಲಿಂಡರ್ ಲಭ್ಯವಾಗದ ಕಾರಣಕ್ಕೆ ಸೌದೆ ಒಲೆಯಲ್ಲಿ ಅಡುಗೆ ತಯಾರಿಸಲಾಯಿತು.

ಅತ್ಯಂತ ಸಡಗರ ಸಂಭ್ರಮದಿಂದ ಅಪ್ಪು ಜನ್ಮದಿನ ಆಚರಿಸಿದ ಅಭಿಮಾನಿಗಳು ನಗರದ ದುರ್ಗಿಗುಡಿಯ ಮಲ್ಲಿಕಾರ್ಜುನ ಚಿತ್ರಮಂದಿರದ ಮುಂಭಾಗ ಸೌದೆ ಒಲೆಯಲ್ಲಿ ವೆಜ್​ ಧಮ್ ಬಿರಿಯಾನಿ ಮಾಡಿದರು. ಸೋಮವಾರ ರಾತ್ರಿವರೆಗೂ ಸಿಲಿಂಡರ್ ಸಿಗುತ್ತದೆ ಎಂಬ ಭರವಸೆಯಲ್ಲಿದ್ದೆವು. ಆದರೆ, ಮಂಗಳವಾರ ಬೆಳಗ್ಗೆ ಗ್ಯಾಸ್‌ ಏಜೆನ್ಸಿಗೆ ಹೋದಾಗ ಸಿಲಿಂಡರ್ ಇಲ್ಲ ಎಂದರು. ಆ ಬಳಿಕ ಸೌದೆ ತಂದು ಅಡುಗೆ ಮಾಡಲಾಯಿತು ಎಂದು ಆಯೋಜಕರು ಹೇಳಿದ್ದಾರೆ.