ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸಿದ ಈ ಬಾರಿಯ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಈ ಕಾರಣಕ್ಕೆ ಕೇಂದ್ರ ಸರ್ಕಾರ ಇಡೀ ಪರೀಕ್ಷೆ ರದ್ದು ಮಾಡಿ ಮರು ಪರೀಕ್ಷೆಗೆ ಆದೇಶಿಸಿರುವುದು 23 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ಶಿಕ್ಷಣ ಪ್ರವೇಶ ಆಕಾಂಕ್ಷಿಗಳಲ್ಲಿ ಆಕ್ರೋಶ ಸೃಷ್ಟಿಸಿದೆ.
ಡಾ.ಶರಣ ಪ್ರಕಾಶ ಪಾಟೀಲ, ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ
ಲಿಂಗರಾಜು ಕೋರಾ
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸಿದ ಈ ಬಾರಿಯ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಈ ಕಾರಣಕ್ಕೆ ಕೇಂದ್ರ ಸರ್ಕಾರ ಇಡೀ ಪರೀಕ್ಷೆ ರದ್ದು ಮಾಡಿ ಮರು ಪರೀಕ್ಷೆಗೆ ಆದೇಶಿಸಿರುವುದು 23 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ಶಿಕ್ಷಣ ಪ್ರವೇಶ ಆಕಾಂಕ್ಷಿಗಳಲ್ಲಿ ಆಕ್ರೋಶ ಸೃಷ್ಟಿಸಿದೆ. ಇಡೀ ಪ್ರಕರಣ ಸಂಬಂಧ ಕಾಂಗ್ರೆಸ್ ಸೇರಿ ದೇಶದ ವಿವಿಧ ರಾಜಕೀಯ ಪಕ್ಷಗಳು ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವೈಫಲ್ಯ ಎಂದು ಆರೋಪಿಸಿವೆ. ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸುವ ಜೊತೆಗೆ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಡೆ ಮಾತ್ರ ಮರು ಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿ ಪ್ರತಿಭಟನೆಯನ್ನೂ ನಡೆಸಿವೆ. ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ವೈದ್ಯಕೀಯ ಕೋರ್ಸು ಸೀಟುಗಳ ಪ್ರವೇಶ ಪರೀಕ್ಷೆ ನಡೆಸುವ ಅವಕಾಶವನ್ನು ರಾಜ್ಯಗಳಿಗೇ ಬಿಟ್ಟುಕೊಡಬೇಕೆಂಬ ಕೂಗು ಎದ್ದಿದೆ. ಈ ಬಗ್ಗೆ ರಾಜ್ಯ ಸರ್ಕಾರದ ನಿಲುವೇನು? ಕೇಂದ್ರ ಸರ್ಕಾರಕ್ಕೆ ರಾಜ್ಯದ ಆಗ್ರಹ, ಸಲಹೆ, ಅಭಿಪ್ರಾಯಗಳೇನು ಎನ್ನುವ ಬಗ್ಗೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಅವರು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿ ಮಾತನಾಡಿದ್ದಾರೆ.
*ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಮರು ಪರೀಕ್ಷೆ ಕುರಿತು ನಿಮ್ಮ ಅಭಿಪ್ರಾಯ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕೇಂದ್ರ ಸರ್ಕಾರದ ಬೇಜವಾಬ್ದಾರಿಯ ಪರಮಾವಧಿ. ದೊಡ್ಡ ಪ್ರಮಾಣದಲ್ಲಿ ಬಿಜೆಪಿ ನಾಯಕರು ಈ ಹಗರಣದಲ್ಲಿ ಭಾಗಿಯಾಗಿರುವುದರಿಂದ ಕಳೆದ ಐದು ವರ್ಷಗಳಲ್ಲಿ ನೀಟ್ ಪರೀಕ್ಷೆಯಲ್ಲಿನ ಗೊಂದಲ ನಿವಾರಿಸದೆ ಕೇಂದ್ರ ಸರ್ಕಾರದ ಮೂಲಕ ಇದನ್ನು ಒಂದು ರೀತಿ ಬಂಡವಾಳವಾಗಿ ಅಥವಾ ಎಟಿಎಂ ಆಗಿ ಬಳಕೆ ಮಾಡಿಕೊಂಡಿದ್ದಾರೆ. ವೈದ್ಯಕೀಯ ಸೀಟುಗಳ ಮಾರಾಟದ ದೊಡ್ಡ ಹುನ್ನಾರ ಇದು.
*ವೈದ್ಯಕೀಯ ಶಿಕ್ಷಣ ಸಚಿವರಾಗಿ ಇದಕ್ಕೆ ಏನು ಪರಿಹಾರ ಸೂಚಿಸಬಹುದು?
ಕರ್ನಾಟಕ ಸೇರಿ ದೇಶಾದ್ಯಂತ 23 ಲಕ್ಷ ಮಕ್ಕಳು ನೀಟ್ ಪರೀಕ್ಷೆ ಬರೆದಿದ್ದರು. ಕೇಂದ್ರ ಸರ್ಕಾರ ಪಾರದರ್ಶಕವಾಗಿ ಪರೀಕ್ಷೆ ನಡೆಸುವಲ್ಲಿ ವಿಫಲವಾಗಿ ದೇಶದ ಯುವಜನರ ಭವಿಷ್ಯದ ಜತೆ ಚೆಲ್ಲಾಟ ಆಡಿದೆ. ಅವರ ಕೈಯಲ್ಲಿ ನೀಟ್ ನಡೆಸಲಾಗುತ್ತಿಲ್ಲ. ಹಾಗಾಗಿ ಈ ಹಿಂದೆ ಇದ್ದಂತೆ ವೈದ್ಯಕೀಯ ಶಿಕ್ಷಣದ ಸೀಟುಗಳಿಗೆ ಪ್ರವೇಶ ಪರೀಕ್ಷೆ ನಡೆಸುವ ಅಧಿಕಾರವನ್ನು ಆಯಾ ರಾಜ್ಯ ಸರ್ಕಾರಗಳಿಗೇ ವಹಿಸಬೇಕು. ನಮ್ಮ ರಾಜ್ಯದಲ್ಲಿ ವೈದ್ಯಕೀಯ ಕೋರ್ಸುಗಳನ್ನು ಬಿಟ್ಟು ಎಂಜಿನಿಯರಿಂಗ್ ಸೇರಿ ಅನೇಕ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ದಶಕಗಳ ಕಾಲದಿಂದ ಯಶಸ್ವಿಯಾಗಿ ಯಾವುದೇ ಲೋಪಗಳಿಲ್ಲದಂತೆ ಪರೀಕ್ಷೆ ನಡೆಸಿಕೊಂಡು ಬರಲಾಗುತ್ತಿದೆ. ಎಲ್ಲ ರಾಜ್ಯಗಳಿಗೂ ಪಾರದರ್ಶಕವಾಗಿ ಪರೀಕ್ಷೆ ನಡೆಸುವ ಶಕ್ತಿ ಇದೆ.
* ಈ ಬಗ್ಗೆ ರಾಜ್ಯ ಸರ್ಕಾರದಿಂದ ಪತ್ರವೇನಾದರೂ ಬರೆದಿದ್ದೀರಾ?
ಕೇಂದ್ರ ಸರ್ಕಾರ ಕಳೆದ ಐದು ವರ್ಷದಿಂದ ಸರಿಯಾಗಿ ನೀಟ್ ಪರೀಕ್ಷೆ ನಡೆಸುತ್ತಿಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿ 28 ಗೊಂದಲ, ಸಮಸ್ಯೆಗಳಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಲೇ ಇದ್ದಾರೆ. ಇದನ್ನು ಮನಗಂಡು ಈ ಹಿಂದೆಯೇ ರಾಜ್ಯ ವಿಧಾನಸಭೆ, ವಿಧಾನಪರಿಷತ್‌ನಲ್ಲಿ ಈ ಬಗ್ಗೆ ಒಮ್ಮತದ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದೇವೆ. ಹಾಗಾಗಿ ಆಯಾ ರಾಜ್ಯಗಳಿಗೇ ವೈದ್ಯಕೀಯ ಕೋರ್ಸುಗಳ ಸೀಟುಗಳಿಗೂ ಪ್ರವೇಶ ಪರೀಕ್ಷೆ ನಡೆಸಲು ಅವಕಾಶ ನೀಡಬೇಕೆಂದು ಈಗಲೂ ಹೋರಾಟ ನಡೆಸಿ ಆಗ್ರಹಿಸಿದ್ದೇವೆ. ಆದರೆ, ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
* ಕರ್ನಾಟಕವನ್ನು ವೈದ್ಯಕೀಯ ಶಿಕ್ಷಣದ ಹಬ್ ಆಗಿಸುವ ಕಾರ್ಯಕ್ರಮಗಳೇನು?
ಇಡೀ ದೇಶದಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಈಗಾಗಲೇ ನಾವು ನಂ.1 ಸ್ಥಾನದಲ್ಲಿದ್ದೇವೆ. ಗರಿಷ್ಠ ಪ್ರಮಾಣದ ವೈದ್ಯಕೀಯ ಸೀಟುಗಳು ಇರುವುದು ನಮ್ಮ ರಾಜ್ಯದಲ್ಲೇ. 13,090ಕ್ಕಿಂತ ಹೆಚ್ಚು ಸೀಟಿಗೆ ಪ್ರತೀ ವರ್ಷ ದಾಖಲಾತಿ ನೀಡುತ್ತಿದ್ದೇವೆ. ಕಳೆದ ಎರಡು ವರ್ಷಗಳಲ್ಲಿ ಪದವಿ, ಸ್ನಾತಕೋತ್ತರ ಪದವಿಯಲ್ಲಿ ಹೆಚ್ಚುವರಿಯಾಗಿ ರಾಜ್ಯಕ್ಕೆ ತಲಾ 1000 ವೈದ್ಯಕೀಯ ಸೀಟುಗಳು ಲಭ್ಯವಾಗಿವೆ. ಜೊತೆಗೆ 190 ಕೋಟಿ ರು. ಅನುದಾನವನ್ನೂ ನೀಡುತ್ತಿದ್ದಾರೆ. ವೈದ್ಯಕೀಯ ಶಿಕ್ಷಣದಲ್ಲಿ ಎಐ, ರೋಬೋಟಿಕ್ಸ್ ಅಳವಡಿಕೆ ಸೇರಿ ನಮ್ಮ ವಿದ್ಯಾರ್ಥಿಗಳಿಗೆ ಭವಿಷ್ಯದ ಕೌಶಲ್ಯ ತರಬೇತಿ ನೀಡುವ ಸಲುವಾಗಿ ಮೈಸೂರು, ಕಲಬುರಗಿ ಮತ್ತು ಕೊಪ್ಪಳದ ಇಳಕಲ್‌ನಲ್ಲಿ ಪ್ರತ್ಯೇಕ ಸೆಂಟರ್ ಆಫ್ ಎಕ್ಸಲೆನ್ಸ್ ಆರಂಭಿಸುತ್ತಿದ್ದೇವೆ.
* ಈ ವರ್ಷ ಎಷ್ಟು ಹೊಸ ವೈದ್ಯಕೀಯ ಕಾಲೇಜುಗಳು ಆರಂಭವಾಗಬಹುದು?
ರಾಮನಗರ, ಕನಕಪುರ ಮತ್ತು ಬಾಗಲಕೋಟೆಯಲ್ಲಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಈ ವರ್ಷ ಆರಂಭಿಸಲು ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೂರೂ ಕಡೆ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಟೆಂಡರ್ ಕರೆದಾಗಿದೆ.
* ಆರ್‌ಜಿಯುಎಚ್‌ಎಸ್ ಹೊಸ ಕ್ಯಾಂಪಸ್‌ಗೆ ಸ್ಥಳಾಂತರ ಯಾವಾಗ?
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಗೆ ರಾಮನಗರದಲ್ಲಿ ಹೊಸ ಕ್ಯಾಂಪಸ್ ನಿರ್ಮಾಣ ಆಗುತ್ತಿದೆ. ಮುಂದಿನ ಆರು ತಿಂಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಬಳಿಕ ಕ್ಯಾಂಪಸ್ ಸ್ಥಳಾಂತರ ಕಾರ್ಯ ಆರಂಭವಾಗಲಿದೆ.
*ಕಾಕ್ರೋಚ್ ಜನತಾ ಪಾರ್ಟಿ ಅಭಿಯಾನ ದೇಶದೆಲ್ಲೆಡೆ ಜೋರಾಗಿದೆಯಲ್ವಾ?
ಕೇಂದ್ರ ಸರ್ಕಾರದ ಆಡಳಿತ ವೈಫಲ್ಯ ವಿರುದ್ಧದ ಜನಾಕ್ರೋಶ ಕಾಕ್ರೋಚ್ ಜನತಾ ಪಾರ್ಟಿ ಮೂಲಕ ಹೊರಬರುತ್ತಿದೆ. ಕೇವಲ ನಾಲ್ಕೇ ದಿನದಲ್ಲಿ 1.90 ಕೋಟಿಗೂ ಹೆಚ್ಚು ಜನ ಅಭಿಯಾನ ಬೆಂಬಲಿಸಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ನೀಟ್ ರದ್ದು, ದೇಶದಲ್ಲಿ ತಲೆದೋರಿರುವ ದೊಡ್ಡಮಟ್ಟದ ನಿರುದ್ಯೋಗ ಸಮಸ್ಯೆ, ಪೆಟ್ರೋಲ್, ಡೀಸೆಲ್ ಸೇರಿ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಇವೆಲ್ಲವೂ ಇದಕ್ಕೆ ಕಾರಣ. ಪ್ರತೀ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರದ ಅವಧಿಯಲ್ಲಿ ಇದೀಗ ಕಳೆದ 50 ವರ್ಷಗಳಲ್ಲೇ ಗರಿಷ್ಠ ಪ್ರಮಾಣದ ನಿರುದ್ಯೋಗ ದೇಶದಲ್ಲಿ ತಲೆದೋರಿದೆ. ಆದರೆ, ರಾಷ್ಟ್ರೀಯ ನಿರುದ್ಯೋಗ ಪ್ರಮಾಣಕ್ಕೆ ಹೋಲಿಸಿದರೆ ಕರ್ನಾಟಕ ಉತ್ತಮ ಸ್ಥಿತಿಯಲ್ಲಿದೆ. ಕೇಂದ್ರ ಸರ್ಕಾರದ ಬಂಡವಾಳ ಶಾಹಿಗಳ ಪರವಾದ ನೀತಿಗಳು, ಆಡಳಿತ ವೈಫಲ್ಯಗಳಿಂದ ರೋಸಿಹೋಗಿರುವ ಜನ ಈಗ ಅದರ ವಿರುದ್ಧ ಸಿಡಿದೇಳುವ ಕಾಲ ಬಂದಿದೆ.
* ಪ್ರಧಾನಿ ಮೋದಿ ದೇಶಕ್ಕೆ ಮತ್ತೆ ಬಡತನದ ಬರಬಹುದು ಎಂದಿದ್ದಾರೆ?
ಅವರ ಈ ಹೇಳಿಕೆ ದೇಶದ ವ್ಯವಸ್ಥೆಯ ಅವಹೇಳನಕಾರಿ ಹೆಜ್ಜೆ. ದೇಶದ ಪ್ರಧಾನಿ ಹುದ್ದೆಯಲ್ಲಿರುವಂತಹ ಜವಾಬ್ದಾರಿಯುತ ನಾಯಕ ದೇಶಕ್ಕೆ ಎಂತಹುದೇ ಸಂದರ್ಭ, ಸನ್ನಿವೇಶ ಎದುರಾದರೂ ಅದನ್ನು ಸಮರ್ಥವಾಗಿ ನಿಭಾಯಿಸಲು ನಮ್ಮಲ್ಲಿರುವ ಶಕ್ತಿ, ಸಾಮರ್ಥ್ಯ, ಸುಧಾರಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಕಾರಾತ್ಮವಾಗಿ ಮಾತನಾಡಬೇಕು. ಅದನ್ನು ಬಿಟ್ಟು ಮತ್ತೆ ಬಡತನಕ್ಕೆ ಹೋಗುತ್ತಿದ್ದೇವೆ ಎಂದರೆ ಅದು ಅವರ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುತ್ತದೆ
* ರಾಜ್ಯ ಸರ್ಕಾರದ ಸಾಧನಾ ಸಮಾವೇಶವನ್ನು ಬಿಜೆಪಿಯವರು ಟೀಕಿಸುತ್ತಿದ್ದಾರೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ನಾವು ನುಡಿದಂತೆ ನಡೆಯುತ್ತಿದ್ದೇವೆ. ಪಂಚ ಗ್ಯಾರಂಟಿಗಳ ಯಶಸ್ವಿ ಅನುಷ್ಠಾನದ ಜೊತೆಗೆ ಇನ್ನೂ ಹಲವು ಜನ ಕಲ್ಯಾಣ ಕಾರ್ಯಕ್ರಮಗಳನ್ನು ನೀಡಿದ್ದೇವೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳೂ ಆಗುತ್ತಿದೆ. ಜನರಿಗೆ ಕೊಟ್ಟ ಮಾತು ಉಳಿಸಿಕೊಂಡು ನಡೆಯುತ್ತಿರುವುದರಿಂದ ಸಾಧನಾ ಸಮಾವೇಶ ಮಾಡಿದ್ದೇವೆ. ಅನೇಕ ವರ್ಷಗಳಿಂದ ಬಾಕಿ ಇದ್ದ ರೈತರ ಜಮೀನಿನ 1.5 ಲಕ್ಷ ಪೋಡಿ ಪ್ರಕರಣ, ಪೌತಿಖಾತೆ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ಸಾವಿರಾರು ಜನರಿಗೆ ನಮ್ಮ ಸರ್ಕಾರದಿಂದ ನೀಡಿದ ನಿವೇಶನಗಳಿಗೆ ಹಕ್ಕುಪತ್ರ ನೀಡಿದ್ದೇವೆ. ಸಾಲ ಸೌಲಭ್ಯಗಳ ಚೆಕ್ ವಿತರಣೆ ಮಾಡಿದ್ದೇವೆ. ದೊಡ್ಡ ಮಟ್ಟದಲ್ಲಿ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳನ್ನು ನೀಡಿದ್ದರಿಂದ ಗಿನ್ನಿಸ್ ದಾಖಲೆಯೂ ಆಗಿದೆ.
* ಆದರೆ, ಬಿಜೆಪಿಯವರು ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ ಎನ್ನುತ್ತಿದ್ದಾರೆ?
ಹಿಂದೆ ಬಿಜೆಪಿ ಆಡಳಿತದಲ್ಲಿ ಬಂಡವಾಳ ವೆಚ್ಚಕ್ಕೆ 55 ಸಾವಿರ ಕೋಟಿ ರು. ನೀಡುತ್ತಿದ್ದರು, ಆದರೆ, ನಮ್ಮ ಸರ್ಕಾರದಲ್ಲಿ 70 ಸಾವಿರ ಕೋಟಿ ರು.ಗಳನ್ನು ನೀಡುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿ ಎನ್ನುತ್ತಿದ್ದ ಬಿಜೆಪಿಯವರು ಈಗ ನಮ್ಮ ಯೋಜನೆಗಳನ್ನು ಬೇರೆ ರಾಜ್ಯಗಳ ಚುನಾವಣೆ ವೇಳೆ ಕಾಪಿ ಮಾಡಿದರು. ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿ ಆಗಿಲ್ಲ, ಸುಸ್ಥಿತಿಯಲ್ಲಿದೆ. ಗ್ಯಾರಂಟಿಗಳಿಂದ ರಾಜ್ಯದ ಸಾಮಾನ್ಯ ಜನರ ತಲಾ ಆದಾಯ ಇಡೀ ದೇಶದಲ್ಲೇ ನಂ.1ಗೆ ತಲುಪಿದೆ.
* ವೈದ್ಯಕೀಯ ಕಾಲೇಜುಗಳಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಇದೆಯಂತೆ?
ಒಳಮೀಸಲಾತಿ ನಿಗದಿಯಾಗಿದೆ, ಎಸ್ಸಿ ಒಳಮೀಸಲಾತಿ ಪ್ರಮಾಣ ರೋಸ್ಟರ್ ಬಿಂದು ಸಹಿತ ಜಾರಿಯಾಗಿದೆ. ಹಾಗಾಗಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ನಿರ್ದೇಶನ ನೀಡಿದ್ದೇನೆ.
* ಯುವನಿಧಿ ಯೋಜನೆಗೆ ಈ ವರ್ಷ ಎಷ್ಟು ಜನ ಅರ್ಜಿ ಹಾಕಿದ್ದಾರೆ?
ಇದು ನಿರಂತರ ಪ್ರಕ್ರಿಯೆ. ಈವರೆಗೆ 4.15 ಲಕ್ಷ ಜನ ನೋಂದಣಿ ಆಗಿದ್ದಾರೆ. ಇದರಲ್ಲಿ 3.39 ಲಕ್ಷ ಜನರಿಗೆ ಮಾಸಿಕ ನಿರುದ್ಯೋಗ ಭತ್ಯೆ ಕೊಡುತ್ತಿದ್ದೇವೆ. ಬಜೆಟ್‌ನಲ್ಲಿ ಈ ಬಾರಿ ಈ ಯೋಜನೆಗೆ 600 ಕೊಟಿ ರು. ನೀಡಿದ್ದಾರೆ. ಯುವನಿಧಿ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಕೊಡಿಸುವ ಭರವಸೆ ನೀಡಿದರೂ ದೊಡ್ಡ ಪ್ರಮಾಣದಲ್ಲಿ ಕೌಶಲ್ಯ ತರಬೇತಿಗೆ ಬರುತ್ತಿಲ್ಲ.

